ಭಾನುವಾರ, ಅಕ್ಟೋಬರ್ 20, 2019
27 °C

ಕನವರಿಕೆಯ ಹಿಂದಿನ ಕದಲಿಕೆಗಳು

Published:
Updated:

ತಾರಸಿ ಮೇಲೆ ಹೊಸ ವರ್ಷದ ಸೂರ್ಯನ ಮೊದಲ ಕಿರಣಗಳ ಬರಮಾಡಿಕೊಳ್ಳಲು ನಿಂತವರ ಕಣ್ಣು ಒಮ್ಮೆ ಬೇಸರದಿಂದ ರೆಪ್ಪೆ ಬಡಿಯಿತು. ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾಗಿದ್ದ ಪಟಾಕಿಗಳ ಕಸದ ರಾಶಿ ಕಂಡ ವನಿತೆಯಿಂದ ಹಿಡಿಶಾಪ.

 

ಇನ್ನೂ ಹೆಚ್ಚು ವೇಗವಾಗಿ ಗುಡಿಸತೊಡಗಿದ್ದು ಆಕೆಗಿದು ಸಂಭ್ರಮದ ದಿನವೇನೂ ಅಲ್ಲ ಎಂಬುದರ ಸಂಕೇತ. ರಾತ್ರಿ ನಕ್ಕಿದ್ದ ಬುರುಗುಲೋಟ ಕೋಣೆಯ ಮೂಲೆಯಲ್ಲಿ ಮಲಗಿರುವುದನ್ನು ಕಂಡ ಅಪ್ಪ ಏನೊಂದೂ ಮಾತನಾಡದೆ ಎತ್ತಿಡುವಾಗಲೂ ಅಂಗಾತ ಮಲಗಿದ ಮಗ ಕನಸಿನಿಂದಾಚೆ ಬಂದಿಲ್ಲ.ರಾತ್ರಿಪಾಳಿ ಮುಗಿಸಿ ಬಂದ ವೈದ್ಯ ಕೈತೊಳೆದು ದಿಂಬಿಗೊರಗಿದಾಗ ರಾತ್ರಿ ಪ್ರಾಯದ ಹುಡುಗನ ಹಣೆಗೆ ಹಾಕಿದ ಹೊಲಿಗೆ ನೆನಪು. ರಸ್ತೆ ವಿಭಜಕಕ್ಕೆ ತಲೆ ಒಡೆದುಕೊಂಡು ಪ್ರಾಣ ಕಳಕೊಂಡ ಇನ್ನೊಂದು ಜೀವದ ನಾಡಿ ನಿಂತದ್ದನ್ನು ಖಾತರಿಪಡಿಸಿದಾಗ ನೀರಾಡಿದ ಕಣ್ಣುಗಳು ಕೆಲವೇ ಗಂಟೆಗಳ ಮುಂಚೆ ಅಂತ್ಯಾಕ್ಷರಿ ಆಡಿದ ಖುಷಿಯ ಕ್ಷಣಗಳಿಗೆ ಸಾಕ್ಷಿಯಾಗಿದ್ದವು.ಹತ್ತಿಪ್ಪತ್ತು ಕುದುರೆಗಳಷ್ಟು ವೇಗವಾಗಿ ನುಗ್ಗುವ ಬೈಕುಗಳ ಮೇಲೆ ನೈಸ್‌ರಸ್ತೆಯಲ್ಲಿ ಕರಾಮತ್ತು, ಕಸರತ್ತು ನಡೆಸಿದ ದಂಡಿನಲ್ಲೂ ಒಬ್ಬ ಗಂಭೀರ ಸ್ವರೂಪದ ಗಾಯಕ್ಕೆ ಒಳಗಾಗಿದ್ದಾನೆ. ಪಕ್ಕದ ಬೀದಿಯ ಹುಡುಗ ಗಾಯಾಳುವಾದ ಸುದ್ದಿ ಕಿವಿಮೇಲೆ ಬಿದ್ದದ್ದೇ ಅಮ್ಮನಿಗೆ ತನ್ನ ಮಗ ರಾತ್ರಿ ಹೋದವನು ಇನ್ನೂ ಬಂದಿಲ್ಲವಲ್ಲ ಎಂಬ ಚಿಂತೆ ಹತ್ತಿಕೊಂಡಿದೆ.ರೆಸಾರ್ಟುಗಳಲ್ಲಿ ಉಂಡೆದ್ದವರು ಉಳಿಸಿಹೋದ ಪಳೆಯುಳಿಕೆಗಳನ್ನು ವಿಲೇವಾರಿ ಮಾಡಿ, ಮೇಜು, ಲಾಂಜುಗಳನ್ನು `ನೀಟು~ ಮಾಡುತ್ತಿರುವವರಿಗೂ ಇದು ಹೊಸವರ್ಷ. ಯಾರೋ ಬೀಳಿಸಿಕೊಂಡು ಹೋದ ಪರ್ಸಿನಲ್ಲಿರುವ ಕಂತೆಕಂತೆ ಕಾರ್ಡುಗಳ ಮಧ್ಯದ ಫೋಟೋಗಳು ಯಾರನ್ನೋ ಎದುರುನೋಡುತ್ತಿರುವಂತಿವೆ. ಆ ಪರ್ಸು ಬಿದ್ದದ್ದು ಯಾಕೆ ಎಂಬ ಜಿಜ್ಞಾಸೆಯಲ್ಲೇ ದುರಂತ ಕಥೆಯೂ ಇದ್ದೀತೆಂಬ ಅನಿಸಿಕೆ. ಆಫೀಸಿನ ವರ್ಷದ ಎಲ್ಲಾ `ಟಾಸ್ಕ್~ಗಳನ್ನು ನಡುರಾತ್ರಿಯೊಳಗೆ ಮುಗಿಸಿ, `ಟಾರ್ಗೆಟ್~ ತಲುಪಿದವನು ಚಿಮ್ಮಿಸಿದ ಶಾಂಪೇನ್ ನೊರೆಯ ಪಸೆ ಒರೆಸುವವನಿಗೂ ಬೇರೆ `ಟಾರ್ಗೆಟ್~ ಇದೆ.ರಾತ್ರಿ ಸಂದ ಟಿಪ್ಸ್‌ಗಳನ್ನೆಲ್ಲಾ ಒಟ್ಟುಮಾಡಿಕೊಂಡವನು ಮನೆಯಲ್ಲಿ ಹಬ್ಬದಡುಗೆ ಮಾಡಿಸಿ, ಹೆಂಡತಿಯ ಜೊತೆ ಹೊಸವರ್ಷದ ಹಗಲನ್ನಾದರೂ ಸುಖವಾಗಿ ಕಳೆಯಲು ಸಜ್ಜಾಗುತ್ತಿದ್ದಾನೆ. ನಡುರಾತ್ರಿ ಕೊನೆ ಕಂತಿನ ಮದ್ಯದ ಗ್ಲಾಸುಗಳನ್ನು ತೊಳೆದಿಟ್ಟ ಹುಡುಗ ಜೋಡಿಸಿದ ಟೇಬಲ್‌ನ ಮೇಲೆ ಮುದುರಿ ಮಲಗಿದ್ದಾನೆ.ಮಾಲೀಕನಿಗೆ ಕೂಡ ಅವನನ್ನು ಭಾನುವಾರ ಬೇಗ ಎಬ್ಬಿಸಲು ಮನಸ್ಸಾಗುತ್ತಿಲ್ಲ. ಗಲ್ಲದ ಸದ್ದು ಕೇಳಿಯೇ ಎಚ್ಚರ ಮಾಡಿಕೊಳ್ಳುವ ಹುಡುಗ ಮತ್ತೆ ಮೇಜುಗಳ ಅಣಿಪಡಿಸಲು ಸನ್ನದ್ಧ.ವಿಂಡ್ಸರ್ ಮ್ಯಾನರ್ ಸೇತುವೆ ಮೇಲೆ ಒಂಟಿಹಕ್ಕಿ. ಕಬ್ಬನ್‌ಪಾರ್ಕ್‌ನ ಗಿಡ-ಮರ ಸವರಿದ ಮಂಜಿನ ಹನಿಗಳಲ್ಲಿ ಹೊಸ ದರ್ಶನ. ಮಾರುಕಟ್ಟೆಯಲ್ಲಿ ಹೂಮೊಳ ಅಳೆಯುವಾಕೆಗೆ ವ್ಯಾಪಾರ ಡಲ್ಲು ಎಂಬ ಬೇಸರ. ಯಶವಂತಪುರದ ಸಂತೆಗೆ ಕಳೆದ ವಾರದಷ್ಟು ಜನರಿಲ್ಲ.

ಮೋಡಕವಿದ ವಾತಾವರಣದಲ್ಲಿ ಮಲಗಿದವರನ್ನು ಎಬ್ಬಿಸಲಾಗದ ಸೂರ್ಯನ ನಗು.ಗೋಡೆಗೆ ಹೊಸ ಕ್ಯಾಲೆಂಡರ್ ನೇತುಹಾಕುವ ಹೆಣ್ಣುಮಗಳಿಗೆ ಈ ವರ್ಷ ಮನೆಗೆ ಏನೇನಾಗಬೇಕೆಂಬ ಭರವಸೆಯ ಲೆಕ್ಕಾಚಾರ. ನವೀಕರಣಗೊಂಡ ಹಳೆಯ ಪ್ರೇಮಿಗಳ ನಂಟು. ಜ್ಯೋತಿಷಿಗಳಿಗಾಗಿ ಕಾಯುವ ಕೋಣೆಯಲ್ಲಿ ಜನಸಂದಣಿ. ರಾತ್ರಿಯಿಡೀ ಯಾರ‌್ಯಾರ ಗಾಯಗಳಿಗೋ ಮುಲಾಮು ಹಚ್ಚಿದ ನರ್ಸ್ ಮನೆಯಲ್ಲಿ ಬೇಯುತ್ತಿರುವ ಅಡುಗೆ.ಮೊಬೈಲ್ ಕಂಪೆನಿಗಳ ಅಧಿಕಾರಿಗಳ ನಡುವೆ ಎಸ್ಸೆಮ್ಮೆಸ್‌ಗಳಿಂದ ಬಂದ ಲಾಭ ಕುರಿತ ಚರ್ಚೆ. ರಿಯಾಯಿತಿ ಬೋರ್ಡುಗಳನ್ನು ಒರೆಸುವ ಅಂಗಡಿಯವನಿಗೆ ವ್ಯಾಪಾರದ ಅದೇ ನಿರೀಕ್ಷೆ. ಎದುರಾದವರಿಗೆಲ್ಲಾ ಶುಭಾಶಯಗಳ ಸುರಿಮಳೆ. ಕೆಲವರ ಕೈಯಲ್ಲಿ ಉಡುಗೊರೆ.

ಖುಷಿಪಟ್ಟವರು, ಕಳೆದುಕೊಂಡವರು, ನೊಂದವರು, ಕಳೆದುಹೋದವರು, ಇಡೀ ವರ್ಷದ ಬದುಕಿನ ಎಲ್ಲಾ ಘಟನೆಗಳನ್ನು ಪೋಸ್ಟ್ ಮಾರ್ಟಂ ಮಾಡಿದವರು, ಅಂತ್ಯಾಕ್ಷರಿ ಆಡಿದವರು, ಇಸ್ಪೀಟು ಎಲೆಗಳನ್ನು ಜೋಡಿಸಿ ಜೇಬು ಹಗುರ ಮಾಡಿಕೊಂಡವರು, ನೃತ್ಯದ ರಸದೌತಣ ನೀಡಿದ ಬೆಡಗಿಯರು, ನೋಟುಗಳ ಮಳೆ ಸುರಿಸಿ ನಕ್ಕವರು, ಅಪ್ಪನ ಬರುವಿಕೆಗೆ ಕಾದವರು, ಮಗಳ ಬಾಯ್‌ಫ್ರೆಂಡ್ ಪತ್ತೆಯಲ್ಲಿ ಯಶಸ್ವಿಯಾದವರು, ಮಗನ ಸಹವಾಸ ದೋಷ ಕಂಡುಹಿಡಿದವರು- ಎಲ್ಲರಿಂದಲೂ ಹೊಸ ವರ್ಷ ಬಗೆಬಗೆಯ ಉಸಿರು ಹೊರಬಂದಿತು.ಭಾನುವಾರದ ಮುಂಜಾನೆಯ ಚೆಲ್ಲಾಪಿಲ್ಲಿ ಚಿತ್ರಗಳಲ್ಲಿ ಕಂಡಿದ್ದು ನಿಜವಾದ ಬೆಂಗಳೂರಿನ ನಾಡಿಮಿಡಿತವೇ? ಇದ್ದರೂ ಇರಬಹುದು.

Post Comments (+)