ಮಂಗಳವಾರ, ಏಪ್ರಿಲ್ 20, 2021
24 °C

ಕನಸಾಗಿಯೇ ಉಳಿದ ಕಾಯಂ ಪೀಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಇಲ್ಲಿನ ಹೈಕೋರ್ಟ್ ಸಂಚಾರಿ ಪೀಠ ಆರಂಭವಾಗಿ ಇಂದಿಗೆ (ಜುಲೈ 4) ನಾಲ್ಕು ವರ್ಷಗಳು ತುಂಬಿವೆ. ವಕೀಲರ ಸತತ ಹೋರಾಟದ ಫಲಶ್ರುತಿಯಾಗಿ ಆರಂಭವಾದ ಸಂಚಾರಿ ಪೀಠವು ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದು, ವ್ಯಾಜ್ಯಗಳ ಸಂಖ್ಯೆಯೂ ಜಾಸ್ತಿಯಾಗುತ್ತಿರುವುದರಿಂದ ಕಾಯಂ ಪೀಠ ಅಗತ್ಯವಿದೆ ಎಂಬ ಈ ಭಾಗದ ವಕೀಲರ ಬೇಡಿಕೆ ಇನ್ನೂ ಈಡೇರಿಲ್ಲ.ಪೀಠ ಆರಂಭವಾದ ಹೊತ್ತಿನಲ್ಲೇ ಸುಮಾರು 21,000 ಪ್ರಕರಣಗಳು ದಾಖಲಾಗಿದ್ದವು. ಇದೀಗ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದ್ದು ಸುಮಾರು 60,000 ಪ್ರಕರಣಗಳು ದಾಖಲಾಗಿವೆ. ಆದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗಳು, ಮೇಲ್ಮನವಿ ಪ್ರಾಧಿಕಾರಗಳು, ಹಸಿರು ಪೀಠಗಳು ಬೆಂಗಳೂರಿನಲ್ಲೇ ಇವೆ. ಧಾರವಾಡ ಪೀಠವನ್ನು ಕಾಯಂಗೊಳಿಸಿದರೆ ಇಲ್ಲಿಯೂ ಪಿಐಎಲ್, ಅರಣ್ಯ, ಗಣಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಳನ್ನೂ ನಡೆಸಬಹುದಾಗಿದೆ ಎನ್ನುತ್ತಾರೆ ಇಲ್ಲಿಯ ಹಿರಿಯ ವಕೀಲ ಬಸವಪ್ರಭು ಹೊಸಕೇರಿ.  `ಕಾಯಂ ಪೀಠ ಬೇಕು ಎಂಬುದು ನಮ್ಮ ಬೇಡಿಕೆ. ಆದರೆ ಸಾಕಷ್ಟು ಪ್ರಕರಣಗಳು ಧಾರವಾಡ ಹಾಗೂ ಗುಲ್ಬರ್ಗ ಸಂಚಾರಿ ಪೀಠದಲ್ಲಿ ದಾಖಲಾಗುವುದಿಲ್ಲ ಎಂದು ಎನ್.ಪಿ.ಅಮೃತೇಶ ಎಂಬುವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಲೇವಾರಿಯಾದ ಬಳಿಕ ನಾವು ಮತ್ತೆ ಪ್ರಸ್ತಾವ ಸಲ್ಲಿಸುತ್ತೇವೆ~ ಎಂದು ವಕೀಲರ ಸಂಘದ ಅಧ್ಯಕ್ಷ ಆರ್.ಡಿ.ದೇಸಾಯಿ ಹೇಳುತ್ತಾರೆ.ಹೈಕೋರ್ಟ್‌ನ ಮೂಲ ಪೀಠದೊಂದಿಗೆ ಕಾಯಂ ಪೀಠ ಹಲವು ರಾಜ್ಯಗಳಲ್ಲಿದೆ. ರಾಜಸ್ತಾನದ ಜೈಪುರ, ಜೋಧಪುರ, ಉತ್ತರ ಪ್ರದೇಶದ ಅಲಹಾಬಾದ್, ಲಖನೌ, ಮಧ್ಯಪ್ರದೇಶದ ಭೋಪಾಲ್, ಇಂದೋರ್, ಕೇರಳದ ತಿರುವನಂತಪುರ, ಕೊಚ್ಚಿ, ತಮಿಳುನಾಡಿನ ಚೆನ್ನೈ, ಮದುರೆಯಲ್ಲಿ ಕಾಯಂ ಪೀಠಗಳಿವೆ. ಆದ್ದರಿಂದ ಧಾರವಾಡಕ್ಕೂ ಕಾಯಂ ಪೀಠ ಬೇಕು ಎಂಬುದು ವಕೀಲರ ಬೇಡಿಕೆ.2009ರಲ್ಲಿ ಧಾರವಾಡಕ್ಕೆ ಆಗಮಿಸಿದ್ದ ಅಂದಿನ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ, `ಧಾರವಾಡಕ್ಕೆ ಕಾಯಂ ಪೀಠ ರಚಿಸುವ ಪ್ರಸ್ತಾವ ಕಳಿಸಿದ 24 ಗಂಟೆಗಳಲ್ಲಿ ಅನುಮೋದನೆ ನೀಡುತ್ತೇನೆ` ಎಂದು ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.