ಕನಸಾಗಿಯೇ ಉಳಿದ ಗುಲ್ಬರ್ಗ ರೈಲ್ವೆ ವಿಭಾಗ

7

ಕನಸಾಗಿಯೇ ಉಳಿದ ಗುಲ್ಬರ್ಗ ರೈಲ್ವೆ ವಿಭಾಗ

Published:
Updated:

ಗುಲ್ಬರ್ಗ: ರೈಲ್ವೆ ಸುಧಾರಣೆಗೆ ನೇಮಿಸಿದ್ದ ಸರೀನ್ ಆಯೋಗ, ಗುಲ್ಬರ್ಗದಲ್ಲಿ ಪ್ರತ್ಯೇಕ ರೈಲ್ವೆ ವಿಭಾಗ ಆರಂಭಿಸುವಂತೆ ಶಿಫಾರಸು ಮಾಡಿ ಮೂರು ದಶಕ ಕಳೆದಿದೆ. ಸಮಿತಿಯ ಬಹಳಷ್ಟು ಶಿಫಾರಸುಗಳು ಜಾರಿಯಾಗಿದ್ದರೂ ಗುಲ್ಬರ್ಗ ಮಂದಿಗೆ ರೈಲ್ವೆ ವಿಭಾಗ ಕನಸಾಗಿಯೇ ಉಳಿದಿದೆ. ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ವಲಯ ಸ್ಥಾಪನೆಯಾದಾಗ ಗುಲ್ಬರ್ಗ ಮತ್ತು ಮಂಗಳೂರಿನಲ್ಲಿ ಹೊಸ ರೈಲ್ವೆ ವಿಭಾಗ ಆರಂಭಿಸಿ, ನೈಋತ್ಯ ರೈಲ್ವೆಗೆ ಸೇರಿಸಬೇಕು ಎಂಬ ಆಗ್ರಹ ಪ್ರಬಲವಾಗಿ ಕೇಳಿಬಂದಿತ್ತು.ಆದರೆ ಸರೀನ್ ಆಯೋಗ 1984ರಲ್ಲೇ ಈ ಶಿಫಾರಸು ಮಾಡಿತ್ತು. ನೆರೆಯ ಮಹಾರಾಷ್ಟ್ರದಲ್ಲಿ ಎಂಟು ಹಾಗೂ ಆಂಧ್ರದಲ್ಲಿ ಆರು ರೈಲ್ವೆ ವಿಭಾಗಗಳಿವೆ. ಆದರೆ ಕರ್ನಾಟಕದಲ್ಲಿ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನಲ್ಲಷ್ಟೇ ರೈಲ್ವೆ ವಿಭಾಗಗಳಿವೆ. ಆದ್ದರಿಂದ ನಮ್ಮ ರಾಜ್ಯದ ಶೇಕಡ 40ರಷ್ಟು ಆದಾಯ ನೆರೆರಾಜ್ಯದ ರೈಲ್ವೆ ವಿಭಾಗಗಳ ಪಾಲಾಗುತ್ತಿದೆ. ಹೈದಬಾರಾದ್ ಕರ್ನಾಟಕ ಪ್ರದೇಶದ ರೈಲ್ವೆ ಯೋಜನೆಗಳು ಕುಂಟುತ್ತಾ ಸಾಗಿರುವುದೂ ಇದೇ ಕಾರಣಕ್ಕೆ. ನೆರೆಯ ಜಿಲ್ಲೆಗಳಿಗೆ ರೈಲಿನಲ್ಲಿ ಹೋಗಬೇಕಿದ್ದರೂ ಮಹಾರಾಷ್ಟ್ರ ಅಥವಾ ಆಂಧ್ರದ ಮೂಲಕ ಹೋಗಬೇಕಾದ ಪರಿಸ್ಥಿತಿ. ಸೋಲಾಪುರದ ಜನತೆಗೆ ರಾಜಧಾನಿ ಮುಂಬೈಗೆ ಹೋಗಬೇಕಾದರೆ ದಿನಕ್ಕೆ 12 ಎಕ್ಸ್‌ಪ್ರೆಸ್ ರೈಲುಗಳಿದ್ದರೆ, ಗುಲ್ಬರ್ಗ ಭಾಗದ ಜನ ರಾಜಧಾನಿ ತಲುಪಬೇಕಾದರೆ ಕೇವಲ ನಾಲ್ಕು ರೈಲುಗಳನ್ನು ಅವಲಂಬಿಸಬೇಕಾಗುತ್ತದೆ.ಅಷ್ಟೇ ಅಲ್ಲದೆ ಈ ಭಾಗದಿಂದ ಮುಂಬೈ ಕರ್ನಾಟಕ ಅಥವಾ ಮಧ್ಯ ಕರ್ನಾಟಕವನ್ನು ನೇರವಾಗಿ ಸಂಪರ್ಕಿಸುವ ರೈಲ್ವೆ ಮಾರ್ಗಗಳಿಲ್ಲ. ರಾಜ್ಯದ ರೈಲ್ವೆ ಆದಾಯ ನೆರೆರಾಜ್ಯಗಳ ಪಾಲಾಗುವುದನ್ನು ತಪ್ಪಿಸಲು ಮತ್ತು ಈ ಭಾಗದ ರೈಲ್ವೆಯೋಜನೆಗಳು ತ್ವರಿತವಾಗಿ ಪೂರ್ಣಗೊಂಡು ಹಿಂದುಳಿದ ಭಾಗಕ್ಕೆ ಹೆಚ್ಚಿನ ರೈಲುಸೌಲಭ್ಯ ದೊರಕಲು ಹೊಸ ವಿಭಾಗಗಳ ಸ್ಥಾಪನೆ ಅನಿವಾರ್ಯ ಎನ್ನುವುದು ಈ ಭಾಗದ ಜನತೆಯ ಒಕ್ಕೊರಲ ಅಭಿಪ್ರಾಯ. “ಜತೆಗೆ ರೈಲ್ವೆ ವಿಭಾಗ ರಚನೆಯಾದರೆ ಸುಮಾರು ಐದು ಸಾವಿರ ಉದ್ಯೋಗಾವಕಾಶ ಸೃಷ್ಟಿಯಾಗುವ ಜತೆಗೆ ಅಚ್ಚು ಮತ್ತು ಗಾಲಿ, ಇತರ ಬಿಡಿಭಾಗಗಳು, ಏರ್‌ಬ್ರೇಕ್, ಎಲೆಕ್ಟ್ರಿಕಲ್ ಉಪಕರಣ, ಬ್ಯಾಟರಿ ಚಾರ್ಜರ್, ಫ್ಯಾನ್ ಮತ್ತಿತರ ಉತ್ಪನ್ನಗಳನ್ನು ತಯಾರಿಸುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಬೆಳವಣಿಗೆಗೂ ಇದು ಅನುಕೂಲವಾಗಲಿದೆ” ಎನ್ನುತ್ತಾರೆ ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಎಚ್‌ಕೆಸಿಸಿಐ) ಕಾರ್ಯದರ್ಶಿ ಸೋಮಶೇಖರ ಜಿ.ಟೆಂಗಳಿ.ಉದಯಶಂಕರ ಭಟ್

“1.91 ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣದ ಕರ್ನಾಟಕದಲ್ಲಿ ಕೇವಲ 3172 ಕಿ.ಮೀ ರೈಲ್ವೆ ಜಾಲವಿದ್ದರೆ, ಕೇವಲ 1.30 ಚದರ ಕಿ.ಮೀ ವಿಸ್ತೀರ್ಣದ ತಮಿಳುನಾಡಿನಲ್ಲಿ 4181 ಕಿಲೋಮೀಟರ್ ರೈಲುಮಾರ್ಗವಿದೆ. ಆದರೆ ನಮ್ಮ ರಾಜ್ಯದ ರೈಲ್ವೆ ಜಾಲದಿಂದ ಸಂಗ್ರಹವಾಗುವ ಹಣ ನೆರೆಯ ರಾಜ್ಯಗಳ ರೈಲ್ವೆ ಅಭಿವೃದ್ಧಿಗೆ ವಿನಿಯೋಗವಾಗುತ್ತದೆ” ಎಂದು  ಎಚ್‌ಕೆಸಿಸಿಐ ಅಧ್ಯಕ್ಷ ಗೋಪಾಲಕೃಷ್ಣ ವಿ.ರಘೋಜಿ ಅಭಿಪ್ರಾಯಪಡುತ್ತಾರೆ.ಸರೀನ್ ಸಮಿತಿ ವರದಿ ಪ್ರಕಾರ, “140 ಕಿಲೋಮೀಟರ್ ಉದ್ದದ ವಾಡಿ- ಗುಲ್ಬರ್ಗ- ಹೂಟಗಿ ಮಾರ್ಗ, ಹೂಟಗಿ- ವಿಜಾಪುರ (100 ಕಿ.ಮೀ), ವಾಡಿ- ಯಾದಗಿರಿ- ರಾಯಚೂರು- ಮಂತ್ರಾಲಯಮ್ ರೋಡ್ (135 ಕಿ.ಮೀ), ವಾಡಿ-ಸೇಡಂ0 ವಿಕಾರಾಬಾದ್ (115), ವಿಕಾರಾಬಾದ್- ಬೀದರ್- ಹುಮನಾಬಾದ್- ಗುಲ್ಬರ್ಗ (268) ಮತ್ತು ಬೀದರ್ ಹುಮನಾಬಾದ್- ಗುಲ್ಬರ್ಗ (120) ರೈಲುಮಾರ್ಗಗಳ ವ್ಯಾಪ್ತಿಯನ್ನು ಒಳಗೊಳ್ಳುವ ರೈಲ್ವೆ ವಿಭಾಗ ಸ್ಥಾಪಿಸಿ, ಗುಲ್ಬರ್ಗವನ್ನು ಕೇಂದ್ರ ಕಚೇರಿ ಮಾಡಬೇಕು”ಹೊಸ ವಿಭಾಗ ಆಗ್ರಾ, ಗುಂಟೂರು, ರಾಂಚಿ, ಪುಣೆ, ಮುಂಬೈ ಮತ್ತು ಹೈದ್ರಾಬಾದ್ ವಿಭಾಗಕ್ಕಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಹೊಂದುತ್ತದೆ. ಉದಾಹರಣೆಗೆ ಕೇವಲ 427 ಕಿ.ಮೀ. ರೈಲುಮಾರ್ಗ ಹೊಂದಿರುವ ಮುಂಬೈ, 483 ಕಿ.ಮೀ. ರೈಲುಮಾರ್ಗದ ವ್ಯಾಪ್ತಿ ಹೊಂದಿರುವ ರಾಂಚಿ, 510 ಕಿ.ಮೀ. ವ್ಯಾಪ್ತಿಯ ಪುಣೆ ಮತ್ತಿತರ ನಗರಗಳು ರೈಲ್ವೆ ವಿಭಾಗ ದಕ್ಕಿಸಿಕೊಂಡಿವೆ.ಇದರ ಜತೆಗೆ ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ರಚಿಸಿದ್ದ ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಬೀದರ್- ಗುಲ್ಬರ್ಗ, ಬೆಳಗಾವಿ- ಬಾಗಲಕೋಟೆ- ಗುಲ್ಬರ್ಗ, ಹುಬ್ಬಳ್ಳಿ- ಗುಂತಕಲ್- ಗುಲ್ಬರ್ಗ, ಗದಗ- ಯಲಬುರ್ಗ, ಕುಷ್ಟಗಿ- ಗಂಗಾವತಿ- ಸಿಂಧನೂರು ಮತ್ತು ಮಾನ್ವಿ ಮೂಲಕ ರಾಯಚೂರು ಸಂಪರ್ಕಿಸುವ ನೇರ ರೈಲು ಮಾರ್ಗಗಳ ಸಂಪರ್ಕಕ್ಕೂ ಒತ್ತು ನೀಡಲಾಗಿದೆ.ಹಿಂದುಳಿದ ಪ್ರದೇಶವಾದ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯ ವೇಗ ಹೆಚ್ಚಬೇಕಾದರೆ ರೈಲ್ವೆ ಜಾಲ ವಿಸ್ತರಣೆಯಾಗಬೇಕು. ಆದರೆ ಗುಲ್ಬರ್ಗ ಜಿಲ್ಲೆ ಕೇಂದ್ರ ರೈಲ್ವೆ ವ್ಯಾಪ್ತಿಗೆ ಹಾಗೂ ರಾಯಚೂರು ಜಿಲ್ಲೆ ದಕ್ಷಿಣ ಕೇಂದ್ರ ರೈಲ್ವೆ ವ್ಯಾಪ್ತಿಗೆ ಬರುವುದರಿಂದ ನಿರೀಕ್ಷಿತ ವೇಗದಲ್ಲಿ ರೈಲ್ವೆ ಅಭಿವೃದ್ಧಿಯಾಗುತ್ತಿಲ್ಲ. ಈ ಭಾಗಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಗುಲ್ಬರ್ಗ ವಿಭಾಗ ಸ್ಥಾಪನೆಯೊಂದೇ ಪರಿಹಾರ ಎಂದು ಎಚ್‌ಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಅಭಿಪ್ರಾಯಪಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry