ಕನಸಾಗಿಯೇ ಉಳಿದ `ವಿಶ್ವದರ್ಜೆ'

7

ಕನಸಾಗಿಯೇ ಉಳಿದ `ವಿಶ್ವದರ್ಜೆ'

Published:
Updated:
ಕನಸಾಗಿಯೇ ಉಳಿದ `ವಿಶ್ವದರ್ಜೆ'

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿನ ಬೆಂಗಳೂರು ನಗರ ಮತ್ತು ಬೈಯ್ಯಪ್ಪನಹಳ್ಳಿ ಹಾಗೂ ಕರಾವಳಿಯ ಮಂಗಳೂರು ನಗರ ರೈಲ್ವೆ ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸಬೇಕು ಎನ್ನುವ ಯೋಜನೆ ಇನ್ನೂ ಕಾರ್ಯರೂಪಕ್ಕೆ ಇಳಿದಿಲ್ಲ.2009- 10ನೇ ಸಾಲಿನ ರೈಲ್ವೆ ಬಜೆಟ್‌ನಲ್ಲಿ ದೇಶದ 50 ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ವಿಶ್ವದರ್ಜೆಗೆ ಏರಿಸಲಾಗುವುದು ಎಂದು ಅಂದಿನ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಪ್ರಕಟಿಸಿದ್ದರು. ಈ ಪಟ್ಟಿಯಲ್ಲಿ ರಾಜ್ಯದ ಈ ಮೂರು ಪ್ರಮುಖ ರೈಲ್ವೆ ನಿಲ್ದಾಣಗಳ ಹೆಸರೂ ಸೇರಿತ್ತು.ಮಂಗಳೂರು ರೈಲ್ವೆ ನಿಲ್ದಾಣದ ವಿಷಯದಲ್ಲಿ ಸ್ವಲ್ಪ ಪ್ರಗತಿ ಆಗಿದೆ. ಅದನ್ನು ಯಾವ ರೀತಿ ಅಭಿವೃದ್ಧಿಪಡಿಸಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸಿ, ವರದಿ ನೀಡಲು ಬೆಲ್ಜಿಯಂ ಮೂಲದ ಸಂಸ್ಥೆಯೊಂದನ್ನು ದಕ್ಷಿಣ ರೈಲ್ವೆ ಗುರುತಿಸಿದೆ. ಆದರೆ, ಅದು ಕೂಡ ಅಧ್ಯಯನದ ಹಂತದಲ್ಲೇ ಇದೆ.ಉಳಿದಂತೆ ನೈರುತ್ಯ ರೈಲ್ವೆಗೆ ಸೇರಿರುವ ಬೆಂಗಳೂರು ನಗರ ಮತ್ತು ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು ಎನ್ನುವುದು ಇನ್ನೂ ಕಾಗದದ ಮೇಲೇ ಉಳಿದುಕೊಂಡಿದೆ. ರೈಲ್ವೆ ಮಂಡಳಿಯಿಂದ ಈ ಯೋಜನೆಗಳಿಗೆ ಮಂಜೂರಾತಿ ಕೂಡ ಸಿಕ್ಕಿಲ್ಲ. ಹೀಗಾಗಿ ಈ ಭಾಗದ ಜನರಿಗೆ ನಿರಾಶೆಯಾಗಿದೆ.ಉದ್ದೇಶ ಏನಾಗಿತ್ತು?

ಸಿರಿವಂತ ದೇಶಗಳಲ್ಲಿ ರೈಲ್ವೆ ನಿಲ್ದಾಣ ಅಂದರೆ ಅದು ಪ್ರಯಾಣಿಕರು ರೈಲು ಹತ್ತಿ- ಇಳಿಯುವ ತಾಣ ಅಷ್ಟೇ ಆಗಿರುವುದಿಲ್ಲ. ಅಲ್ಲಿ ಎಲ್ಲ ರೀತಿಯ ನಾಗರಿಕ ಸೌಲಭ್ಯಗಳ ಜತೆ ಶಾಪಿಂಗ್ ಮಾಲ್‌ಗಳನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ. ಅದೇ ಮಾದರಿಯಲ್ಲಿ ದೇಶದ ಹಲವು ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವುದು ರೈಲ್ವೆ ಮಂಡಳಿಯ ಚಿಂತನೆ. ಈ ಕುರಿತು 2006ರಿಂದಲೇ ಚರ್ಚೆಗಳು ನಡೆದು, 2009ರಲ್ಲಿ ಅದಕ್ಕೆ ಒಂದು ರೂಪ ನೀಡಲಾಯಿತು. ಅದರ ಪ್ರತಿಫಲವೇ ಈ ಘೋಷಣೆ.ಬಹುತೇಕ ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲೂ ರೈಲ್ವೆಗೆ ಸೇರಿದ ಬೆಲೆಬಾಳುವ ಜಾಗ ಇದೆ. ಇಂತಹ ಕಡೆ ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿ, ಶಾಪಿಂಗ್ ಮಾಲ್‌ಗೆ ವ್ಯವಸ್ಥೆ ಮಾಡುವುದು, ಫುಡ್ ಕೋರ್ಟ್‌ಗಳನ್ನು ನಿರ್ಮಿಸುವುದು, ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ... ಹೀಗೆ ಎಲ್ಲ ರೀತಿಯ ಸೌಲಭ್ಯಗಳು ಒಂದೇ ಸೂರಿನಡಿ ಸಿಗುವ ಹಾಗೆ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ನೀಲನಕ್ಷೆ ತಯಾರಿಸಲಾಗಿತ್ತು. ಇದರಂತೆ ದೆಹಲಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಸುಮಾರು ರೂ 1,500 ಕೋಟಿ ಬೇಕಾಗುತ್ತದೆ ಎಂದೂ ತಜ್ಞರು ಅಂದಾಜು ಮಾಡಿದರು.ಈ ಮೊತ್ತದ ಅಂದಾಜು ನೋಡಿದ ನಂತರ ರೈಲ್ವೆ ಮಂಡಳಿ, ವಿಶ್ವದರ್ಜೆಯ ಯೋಜನೆ ದುಬಾರಿ ಎನ್ನುವ ತೀರ್ಮಾನಕ್ಕೆ ಬಂದಿದೆ. ಹೀಗಾಗಿ ಈ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು.ಆಧುನಿಕ ಸೌಲಭ್ಯಕ್ಕೆ ಆದ್ಯತೆ: ವಿಶ್ವದರ್ಜೆಯ ರೈಲ್ವೆ ಯೋಜನೆಗಾಗಿ ಕಾಯುವುದಕ್ಕಿಂತ ಈಗಿರುವ ವ್ಯವಸ್ಥೆಯಲ್ಲೇ ರೈಲ್ವೆ ನಿಲ್ದಾಣಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವುದು ಉತ್ತಮ ಎನ್ನುವ ತೀರ್ಮಾನಕ್ಕೆ ನೈರುತ್ಯ ರೈಲ್ವೆ ಬಂದಿದೆ.ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅನಿಲ್‌ಕುಮಾರ್ ಅಗರವಾಲ್ ಅವರ ಪ್ರಕಾರ `ವಿಶ್ವದರ್ಜೆಯ ರೈಲ್ವೆ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹಾಗಂತ ನಾವು ರೈಲ್ವೆ ನಿಲ್ದಾಣಗಳ ಆಧುನೀಕರಣ ಯೋಜನೆಯನ್ನು ಕೈಬಿಟ್ಟಿಲ್ಲ. ವಿಶ್ವದರ್ಜೆಯಲ್ಲಿ ಏನೆಲ್ಲ ಸೌಲಭ್ಯಗಳು ಸಿಗುತ್ತವೋ ಅವುಗಳನ್ನು ಇರುವ ಸಂಪನ್ಮೂಲಗಳಲ್ಲೇ ತಕ್ಕಮಟ್ಟಿಗೆ ಒದಗಿಸಲು ಪ್ರಯತ್ನ ನಡೆದಿದೆ. ಬೆಂಗಳೂರು ರೈಲ್ವೆ ನಿಲ್ದಾಣ ಮೊದಲಿಗಿಂತಲೂ ಈಗ ಉತ್ತಮವಾಗಿದೆ' ಎಂದು ವಿವರಿಸುತ್ತಾರೆ.ಪ್ಲಾಟ್‌ಫಾರಂ 1 ಮತ್ತು 6ರಲ್ಲಿ ಎಸ್ಕಲೇಟರ್ಸ್‌ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಮೂರು ತಿಂಗಳಲ್ಲಿ ಇದು ಸಾರ್ವಜನಿಕರ ಅನುಕೂಲಕ್ಕೆ ಲಭ್ಯ. ಪ್ಲಾಟ್‌ಫಾರಂ 8ರಲ್ಲಿ ಫುಡ್‌ಕೋರ್ಟ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಹವಾನಿಯಂತ್ರಿತ ಮತ್ತು ಸಾಮಾನ್ಯ ದರ್ಜೆಯ ವಿಶ್ರಾಂತಿ ಕೋಣೆ, ಮಲಗುವ ಪಡಸಾಲೆ (ಡಾರ್ಮಿಟರಿ), ಹಿರಿಯ ನಾಗರಿಕರು ಮತ್ತು ಅಂಗವಿಕಲರ ಸಲುವಾಗಿ ಬ್ಯಾಟರಿಚಾಲಿತ ಕಿರುವಾಹನ, ಉಚಿತ ತುರ್ತು ವೈದ್ಯಕೀಯ ಸೌಲಭ್ಯ, ಹಣ್ಣಿನ ಅಂಗಡಿ...ಹೀಗೆ ಸಾಧ್ಯವಾದಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.ರೈಲು ನಿಲುಗಡೆ ವೇಳೆ ಶೌಚಾಲಯ ಬಳಸುವುದರಿಂದ ನಿಲ್ದಾಣದಲ್ಲಿ ಗಲೀಜು ಹೆಚ್ಚಾಗುತ್ತದೆ. ಅದನ್ನು ತ್ವರಿತವಾಗಿ ಸ್ವಚ್ಛಗೊಳಿಸಲು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದು, ಇದರಿಂದ ಸ್ವಲ್ಪಮಟ್ಟಿಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗಿದೆ. ದುರ್ನಾತ ಕಡಿಮೆ ಆಗಿದೆ ಎನ್ನುತ್ತಾರೆ ಸ್ವಚ್ಛತೆಯ ಉಸ್ತುವಾರಿ ಹೊತ್ತಿರುವ ರೈಲ್ವೆ ಅಧಿಕಾರಿಗಳು.ಇದು ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣದ ಪ್ರಗತಿಯಾದರೆ, ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಹೊಸದಾಗಿ ಕೋಚ್ ಟರ್ಮಿನಲ್ ನಿರ್ಮಿಸಿದ್ದು ಬಿಟ್ಟರೆ, ಹೇಳಿಕೊಳ್ಳುವಂತಹ ಆಧುನೀಕರಣದ ಕಾಮಗಾರಿಗಳು ನಡೆಯುತ್ತಿಲ್ಲ. ನಿಲ್ದಾಣ ಸಮೀಪ `ನಮ್ಮ ಮೆಟ್ರೊ' ಕಾಮಗಾರಿ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry