ಕನಸಿಗೆ ರೆಕ್ಕೆ ಮೂಡಿಸಿದ ಏರೋ ಷೋ

ಮಂಗಳವಾರ, ಜೂಲೈ 16, 2019
24 °C

ಕನಸಿಗೆ ರೆಕ್ಕೆ ಮೂಡಿಸಿದ ಏರೋ ಷೋ

Published:
Updated:

ಮೈಸೂರು: ಮಕ್ಕಳು ತಾವೇ ತಯಾರಿಸಿದ ವಿಮಾನ, ಹೆಲಿಕಾಪ್ಟರ್‌ಗಳನ್ನು ಉಸಿರು ಬಿಗಿ ಹಿಡಿದು ಆತಂಕದಿಂದಲೇ ಗಾಳಿಗೆ ಹಾರಿ ಬಿಟ್ಟರು. ನಂತರ ಅವು ಬಾನಂಗಳದಲ್ಲಿ ಯಶಸ್ವಿಯಾಗಿ ಹಾರಾಡುವ ಮೂಲಕ ಮಕ್ಕಳ ಕನಸಿಗೆ ರೆಕ್ಕೆ ಮೂಡಿಸಿ, ಉಲ್ಲಾಸದ ಅಲೆಯಲ್ಲಿ ತೇಲುವಂತೆ ಮಾಡಿದವು.-ಹೀಗೆ ಸಂತೋಷ ಸಂಭ್ರಮದಲ್ಲಿ ಮಕ್ಕಳು ಕುಣಿದು ಕುಪ್ಪಳಿಸಿದ್ದು ಭಾನುವಾರ ಬೆಳಿಗ್ಗೆ ನಗರದ ಮಹಾಜನ ಕಾಲೇಜು ಮೈದಾನದಲ್ಲಿ.ಹೌದು, ರೋಟರಿ ಮೈಸೂರು ಸಂಸ್ಥೆ ವತಿಯಿಂದ ಏರೋ ಷೋ ಮತ್ತು ಏರೋ ಮಾಡೆಲಿಂಗ್ ಪ್ರದರ್ಶನವನ್ನು  ಏರ್ಪಡಿಸ ಲಾಗಿತ್ತು. ನಗರದ ವಿವಿಧ ಶಾಲಾ  ಕಾಲೇಜು ವಿದ್ಯಾರ್ಥಿಗಳು ಸೂಕ್ತ ತರಬೇತಿ ಪಡೆದು ತಾವೇ ತಯಾರಿಸಿದ ವಿವಿಧ ನಮೂನೆಯ ವಿಮಾನದ ಮಾದರಿಗಳನ್ನು ಪ್ರದರ್ಶಿಸಿದರು. ಮಾದರಿ ಪ್ರದರ್ಶಿಸುವ ಜೊತೆಗೆ ಅವುಗಳ ಬಗ್ಗೆ ಸೂಕ್ತ ಮಾಹಿತಿ ನೀಡಿದರು.ನಂತರ ಏರೋ ಷೋ ಸಹ ನಡೆಯಿತು. ಗಾಳಿಯಲ್ಲಿ ಏರೋ ಮಾಡೆಲ್‌ಗಳು ಎತ್ತರಕ್ಕೆ ಹಾರುತ್ತಿದ್ದಂತೆ ಮಕ್ಕಳ ಕಲರವವೂ ಮುಗಿಲುಮುಟ್ಟುತ್ತಿತ್ತು. ಮಕ್ಕಳು ಕೈಯಲ್ಲಿ ಕಂಟ್ರೋಲರ್ ಹಿಡಿದು ವಿಮಾನ ಮಾದರಿಗಳನ್ನು ನಿಯಂತ್ರಿಸುತ್ತಾ ಎಡಕ್ಕೆ, ಬಲಕ್ಕೆ ತಿರುಗಿಸುತ್ತಾ, ಬಾಗಿಸುತ್ತಾ ಮೈದಾನದ ತುಂಬ  ಓಡಾಡುತ್ತಾ ಹರ್ಷೋದ್ಗಾರ ಮಾಡಿದರು. ಈ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿತು.ಏರೋ ಷೋಗೆ ಚಾಲನೆ ನೀಡಿ ಮಾತನಾಡಿದ ವಿಂಗ್ ಕಮಾಂಡರ್ ನಂಜನ್ ಸರವಣನ್, ನಾವು ಯಾರೋ ತಯಾರಿಸಿದ ಫೈಟರ್ ಪ್ಲೇನ್ ಸೇರಿದಂತೆ ಅನೇಕ  ವಿಮಾನಗಳಲ್ಲಿ ಪ್ರಯಾಣ ಮಾಡಿದ್ದೇವೆ. ಆದರೆ ಇಲ್ಲಿ ಮಕ್ಕಳೇ ತಯಾರಿಸಿದ ವಿಮಾನದ ಮಾದರಿಗಳನ್ನು  ಸ್ವತಃ ಅವರೇ ಹಾರಾಟ ನಡೆಸುತ್ತಿರುವುದು ವಿಶೇಷವಾಗಿದೆ. ಇಂತಹ ಅಪೂರ್ವ ಅವಕಾಶ ಎಲ್ಲರಿಗೂ ದೊರಕುವುದಿಲ್ಲ. ಕಾರಣ ಇದು ಹೆಚ್ಚು ವೆಚ್ಚದಾಯಕವಾಗಿದೆ. ಆದರೆ ರೋಟರಿ ಮೈಸೂರು ನೆರವು  ನೀಡಿ, ಮಕ್ಕಳ ಕನಸುಗಳಿಗೆ ಬಣ್ಣ ತುಂಬಿ ಅವರ ಸೃಜನಶೀಲತೆ, ಕೌಶಲಕ್ಕೆ ಸೂಕ್ತ ವೇದಿಕೆ ಒದಗಿಸಿರುವುದು ಶ್ಲಾಘನೀಯ ಎಂದರು.ರೋಟರಿ ಮೈಸೂರು ಅಧ್ಯಕ್ಷ ಕೆ.ಜಿ.ವೆಂಕಟರಾಮನ್, ಕಾರ್ಯದರ್ಶಿ ಎಂ.ಸಿ.ಎಸ್.ಮನೋಹರ್, ಎನ್‌ಸಿಸಿ ಏರ್‌ವಿಂಗ್ ನಿವೃತ್ತ ಅಧಿಕಾರಿ ಪ್ರಸನ್ನಕುಮಾರ್, ವಾಸು ಅಗರಬತ್ತಿ ಮಾಲೀಕ ಆರ್.ಗುರು ಇತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry