ಕನಸಿನ ಸಾಕಾರಕ್ಕೆ ಇದೋ ಕೈಪಿಡಿ

7

ಕನಸಿನ ಸಾಕಾರಕ್ಕೆ ಇದೋ ಕೈಪಿಡಿ

Published:
Updated:

ಸುಮಾರು ಎಂಟು ವರ್ಷಗಳ ಹಿಂದಿನ ಮಾತು. ದುಬೈನಲ್ಲಿದ್ದ ನನ್ನ ಸ್ನೇಹಿತನ ಮಗ ರಾಹುಲ್‌ಗೆ ಮಾರ್ಗದರ್ಶನ ಮಾಡುತ್ತಿದ್ದೆ. ಆಗೊಮ್ಮೆ, `ನೀನು ಮುಂದೆ ಏನಾಗಬೇಕೆಂದಿದ್ದೀ? ಎಂದು ಕೇಳಿದೆ. ಆತ `ಏರೋನಾಟಿಕಲ್ ಎಂಜಿನಿಯರ್ ಆಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಸೇರುವುದೇ ನನ್ನ ಕನಸು~ ಎಂದಾಗ ನಿಜಕ್ಕೂ ಆಶ್ಚರ್ಯವಾಯಿತು.



ಏಕೆಂದರೆ ರಾಹುಲ್‌ಗೆ ಆಗ ಕೇವಲ ಎಂಟು ವರ್ಷ! ಈಗ ರಾಹುಲ್ ತಂದೆ ತಾಯಿಯೊಡನೆ ಕೆನಡಾ ನಿವಾಸಿ. ಅಲ್ಲಿನ ಪ್ರತಿಷ್ಠಿತ ಏರೋನಾಟಿಕಲ್ ಎಂಜಿನಿಯರಿಂಗ್ ಕಾಲೇಜು ಸೇರಲು ಎಲ್ಲ ತಯಾರಿ ಮಾಡುತ್ತಿದ್ದಾನೆ. ಇಂತಹ ನಿಖರವಾದ ಗುರಿ ಮತ್ತು ಪ್ರಬಲವಾದ ನಂಬಿಕೆಯ ಜೊತೆಗೆ, ಹೆತ್ತವರ ಸಂಪೂರ್ಣ ಬೆಂಬಲವೂ ಇರುವುದರಿಂದ ಆತ ತನ್ನ ಗುರಿ ಮುಟ್ಟುವುದರಲ್ಲಿ ಯಾವ ಸಂಶಯವೂ ನನಗಿಲ್ಲ.



ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಹೇಳುತ್ತಿದ್ದ `ಜ್ಞಾನಕ್ಕಿಂತ ಕಲ್ಪನಾ ಶಕ್ತಿಯೇ ಮುಖ್ಯ~ ಎಂಬ ಮಾತು ಜ್ಞಾಪಕಕ್ಕೆ ಬರುತ್ತದೆ. ಅವರು `ನಾನು ನನ್ನ ಜೀವಿತ ಅವಧಿಯಲ್ಲಿ ಕೇವಲ ಶೇ 25ರಷ್ಟು ಬೌದ್ಧಿಕ ಸಾಮರ್ಥ್ಯ ಬಳಸಿರಬಹುದು~ ಎನ್ನುತ್ತಿದ್ದರು. ಅದಕ್ಕಾಗಿಯೇ ಹೇಳುವುದು ಮಾನವನ ಚೈತನ್ಯಕ್ಕೆ, ಬುದ್ಧಿಶಕ್ತಿಗೆ ಮಿತಿಯಿಲ್ಲ.

 

ಇಲ್ಲದ ಆ ಮಿತಿಯನ್ನು ನಮ್ಮ ಸೀಮಿತ ಆಲೋಚನೆಗಳಿಂದ, ನಕಾರಾತ್ಮಕ ಚಿಂತನೆಗಳಿಂದ ನಾವೇ ಸ್ವತಃ ನಿರ್ಮಿಸಿಕೊಳ್ಳುತ್ತೇವೆ. ಇದನ್ನು ತಡೆಯಲು ನಮ್ಮ ಕನಸುಗಳು ಮಹತ್ವಾಕಾಂಕ್ಷೆಯಾಗಿ ಬದಲಾಗಬೇಕು. ಆ ನಿಟ್ಟಿನಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಕಾರ್ಯಗಳನ್ನು ಮಾಡಲು ನಮ್ಮ ಶಕ್ತಿ, ಸಾಮರ್ಥ್ಯದಲ್ಲಿ ಪ್ರಬಲವಾದ ನಂಬಿಕೆ ಇರಬೇಕು. ಈ ನಂಬಿಕೆಯೇ ನಮ್ಮ ಕನಸುಗಳನ್ನು ಸಾಕಾರಗೊಳಿಸಲು ಅತ್ಯವಶ್ಯವಾದ ಪ್ರೇರಣೆ.

ಕನಸು ಸಾಕಾರ ಹೇಗೆ?

ಕನಸುಗಳನ್ನು ಸಾಕಾರಗೊಳಿಸಲು ನಾವು ಸಕಾರಾತ್ಮಕವಾದ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ನಿರ್ದಿಷ್ಟವಾದ ಗುರಿಯತ್ತ ಸಾಗಲು ನಿತ್ಯವೂ ಪರಿಶ್ರಮ ಪಡಬೇಕು. ಇಂತಹ ಸತತವಾದ ಪರಿಶ್ರಮಕ್ಕೆ ಪ್ರೇರಣೆಯೇ ಅಗತ್ಯವಾದ ಪ್ರಚೋದನೆ. ಉದಾಹರಣೆಗೆ ಬೋನಸ್, ಕಮಿಷನ್, ಹೊಗಳಿಕೆ, ಪ್ರಶಂಸೆ,  ಶ್ಲಾಘನೆಗಳೆಲ್ಲವೂ ನಮ್ಮನ್ನು ಪ್ರೇರೇಪಿಸುವ ಸಾಧನಗಳು.



ಆದರೆ, ಬಾಹ್ಯ ಪ್ರಪಂಚದ ಈ ಪ್ರೇರಣೆಯ ಸಾಧನಗಳು ತಾತ್ಕಾಲಿಕ. ನಿಮ್ಮ ಹೆತ್ತವರು, ಅಧ್ಯಾಪಕರು ಮತ್ತು ಸ್ನೇಹಿತರು ನಿಮ್ಮ ಏಳಿಗೆಯಲ್ಲಿ ಸಹಜವಾದ ಆಸಕ್ತಿಯುಳ್ಳವರು. ಆದರೆ ಈ ಆಸಕ್ತಿ ಪ್ರೇರಣೆಯಾಗಿ ಪರಿವರ್ತನೆಗೊಂಡರೂ, ಸದಾಕಾಲ ನಿಮ್ಮನ್ನು ಉತ್ತೇಜಿಸಿ, ಪ್ರಚೋದಿಸುವ ಸಾಧ್ಯತೆಗಳು ಕಡಿಮೆ.



ಮನೋವಿಜ್ಞಾನಿಗಳ ಅಭಿಪ್ರಾಯದಂತೆ ಆಂತರಿಕ ಪ್ರೇರಣೆ ಹೆಚ್ಚು ಪರಿಣಾಮಕಾರಿ ಮತ್ತು ಶಾಶ್ವತ. ಏಕೆಂದರೆ, ಅದು ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಮ್ಮನ್ನು ಅಪೇಕ್ಷಣೀಯ ಮತ್ತು ಸಕಾರಾತ್ಮಕ ಕಾರ್ಯಗಳಲ್ಲಿ ತೊಡಗಿಸಿ, ಗುರಿಯತ್ತ ಮುನ್ನಡೆಸಿಕೊಂಡು ಹೋಗುತ್ತದೆ. ವೃತ್ತಿಜೀವನವನ್ನು ರೂಪಿಸಲು ಇಂತಹ ಸ್ವ-ಪ್ರೇರಣೆ ಅತ್ಯವಶ್ಯಕ.



ಪ್ರೇರಣೆ ಪಡೆಯುವುದು ಹೇಗೆ?

ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಹಂಬಲ ಎಲ್ಲರಿಗೂ ಇರುವುದು ಸಾಮಾನ್ಯ. ಆದರೆ ಅದನ್ನು ಸಿದ್ಧಿಸಿಕೊಳ್ಳುವುದು ಹೇಗೆ? ನೀವು ಯಶಸ್ಸಿನ ಕನಸು ಕಾಣುವ ಮುಂಚೆ, ಕಲಿಯುತ್ತಿರುವ ವಿದ್ಯೆಗೂ, ನಿಮ್ಮಲ್ಲಿರುವ ಇತರ ಕೌಶಲಗಳಿಗೂ ಸರಿಹೊಂದುವ, ನಿಮ್ಮ ಇಷ್ಟ, ಅಭಿರುಚಿಗೆ ಸ್ಪಂದಿಸುವ ವೃತ್ತಿಯನ್ನು ಗುರುತಿಸಬೇಕು.



ಇದು ಬಹು  ರಾಷ್ಟ್ರೀಯ ಸಂಸ್ಥೆಯ ಉದ್ಯೋಗ ಇರಬಹುದು; ಮಾಹಿತಿ ತಂತ್ರಜ್ಞಾನದ ಕ್ಷೇತ್ರವಾಗಿರಬಹುದು ಅಥವಾ ಸ್ವಂತ ಉದ್ದಿಮೆ ಸ್ಥಾಪಿಸುವ ಬಯಕೆ ಇರಬಹುದು. ಆದರೆ ಮುಖ್ಯವಾಗಿ ಒಲವಿರುವಂತಹ ವೃತ್ತಿಯನ್ನೇ ನೀವು ಆರಿಸಿಕೊಳ್ಳಬೇಕು. ಏಕೆಂದರೆ, ಒಲವಿಲ್ಲದ ವೃತ್ತಿ ನೀರಸಮಯ. ಅದರಲ್ಲಿ ಯಶಸ್ಸು ಅಸಾಧ್ಯ.



ಇದಾದ ನಂತರ, ವೃತ್ತಿಯ ಯಶಸ್ಸಿಗೆ ಬೇಕಾಗುವ ಪ್ರಮುಖ ಅಂಶಗಳನ್ನು ಗಮನಿಸಿ. ಉದಾಹರಣೆಗೆ, ಮಾಹಿತಿ ತಂತ್ರಜ್ಞಾನ ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಿದೆ. ಈ ಕ್ಷೇತ್ರವನ್ನು ಆರಿಸಿಕೊಳ್ಳುವುದಾದರೆ ಇಲ್ಲಿನ ಯಶಸ್ಸಿಗೆ ಅಗತ್ಯವಾದ ವಿದ್ಯೆ, ಬೌದ್ಧಿಕ ಸಾಮರ್ಥ್ಯ, ಇತರ ಕೌಶಲಗಳನ್ನು ಬೆಳೆಸಿಕೊಳ್ಳಿ.



ಅದೇ ರೀತಿ ಕ್ಯಾಂಪಸ್ ನೇಮಕಾತಿಯಲ್ಲಿನ ಸವಾಲುಗಳನ್ನೂ, ಅವಕಾಶಗಳನ್ನೂ ಗಮನಿಸಿ ಅದಕ್ಕೆ ತಕ್ಕಂತೆ ತಯಾರಾಗಿ. ಇವೆಲ್ಲಕ್ಕಿಂತ ಮಿಗಿಲಾಗಿ ನಿಮ್ಮ ವೈಯಕ್ತಿಕ ಇತಿಮಿತಿಗಳ ಲೆಕ್ಕಾಚಾರದಿಂದ ಈ ಕ್ಷೇತ್ರದಲ್ಲಿ ನಿಮ್ಮ ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳನ್ನು ನಿರ್ಧರಿಸಿ.



ಸುಮಾರು ಹತ್ತು ವರ್ಷಗಳಲ್ಲಿ, ಸಣ್ಣ ಅಥವಾ ಮಧ್ಯಮ ವರ್ಗದ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಮುಖ್ಯಸ್ಥರಾಗಬೇಕೆನ್ನುವ ಧ್ಯೇಯ ನಿಮ್ಮದಾದರೆ, ಈ ಗುರಿಯನ್ನು ಸಾಧಿಸಿದ ಬಳಿಕ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಸಿಗುವ ಲಾಭ, ಪ್ರಯೋಜನ, ಜೀವನ ಶೈಲಿ, ಅಂತಸ್ತು, ಸ್ಥಾನಮಾನಗಳ ಬಗ್ಗೆ ಯೋಚಿಸಿ.

 

ಈ ರೀತಿ, ಯಾವುದೇ ವೃತ್ತಿಯನ್ನು ಅನುಸರಿಸುವುದರಿಂದ ಆಗುವ ವೈಯಕ್ತಿಕ, ಕೌಟುಂಬಿಕ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗಳು ನಿಮ್ಮ ಯಶಸ್ಸಿನ ಅಳತೆಗೋಲುಗಳೇ ಎಂದು ಯೋಚಿಸಿ.



ಸಾಮಾನ್ಯವಾಗಿ ಮೂಲಭೂತ ಅಗತ್ಯಗಳು ಪೂರೈಸುತ್ತಿದ್ದಂತೆ, ಯಶಸ್ಸಿನ ಅಳತೆಗೋಲುಗಳು ಬದಲಾಗುವುದು ಸ್ವಾಭಾವಿಕ. ಆದ್ದರಿಂದ, ವೃತ್ತಿಯ ವಿವಿಧ ಹಂತಗಳನ್ನು ತಲುಪುವಂತೆ ಈ ಅಳತೆಗೋಲುಗಳು ಬದಲಾಗಿ ಮೇಲ್ಮಟ್ಟದ, ಆದರ್ಶದ ಗುರಿಯತ್ತ ನಾವು ಶ್ರಮಿಸಬೇಕು. ಇದೇ ವೃತ್ತಿಪರತೆಯ ಮುಖ್ಯ ಲಕ್ಷಣ.



ಯಶಸ್ಸಿನ ಹಾದಿ ಸುಗಮವಾಗಿಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ವೃತ್ತಿಯಲ್ಲಿ ಬರಬಹುದಾದ ಹಿನ್ನಡೆ, ಅಡಚಣೆ ಮತ್ತು ಸವಾಲುಗಳನ್ನು ಮೊದಲೇ ನಿರೀಕ್ಷಿಸಿದರೆ ಅದರಿಂದಾಗುವ ಆಘಾತಗಳನ್ನು ಸ್ವಲ್ಪ ಮಟ್ಟಿಗಾದರೂ ತಡೆದು ಧೈರ್ಯದಿಂದ ಎದುರಿಸಬಹುದು.



ಬದುಕಿನಲ್ಲಿ ನಾವು ಏನನ್ನು ನೋಡಬಯಸುತ್ತೇವೋ, ಅದೇ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಣುತ್ತದೆ. ಆದ್ದರಿಂದಲೇ, ನೀವು ಸಕಾರಾತ್ಮಕ ದೃಷ್ಟಿಕೋನ ಉಳ್ಳವರಾಗಬೇಕು. ಎಲ್ಲಕ್ಕಿಂತ ಹೆಚ್ಚಿನದಾಗಿ, ನಿಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಇಟ್ಟುಕೊಳ್ಳಬೇಕು.



ಆತ್ಮವಿಶ್ವಾಸವನ್ನು ಕಳೆದುಕೊಂಡರೆ, ನಿಮ್ಮ ಸರ್ವಸ್ವವನ್ನೂ ಕಳೆದುಕೊಂಡಂತೆಯೇ ಎನ್ನುವುದನ್ನು ಮರೆಯದಿರಿ. ಏಕೆಂದರೆ, ಆತ್ಮವಿಶ್ವಾಸದಿಂದ ಧೈರ್ಯ ಉಂಟಾಗುತ್ತದೆ. ಈ ಧೈರ್ಯವೇ ನಿಮ್ಮ ವ್ಯಕ್ತಿತ್ವದ ಆಸ್ತಿ.



ಮನೋವಿಜ್ಞಾನಿಗಳ ಅಭಿಪ್ರಾಯದಂತೆ ಸ್ವ-ಸಲಹೆಗಳಿಂದ (ಆಟೋ ಸಜೆಷನ್) ಪ್ರೇರಣೆಯಾಗುತ್ತದೆ. ಉದಾಹರಣೆಗೆ ನೀವು ವಿದ್ಯಾರ್ಥಿಯಾಗಿದ್ದರೆ `ನಾನು ಶ್ರದ್ಧೆಯಿಂದ ನಿತ್ಯ ಅಭ್ಯಾಸ ಮಾಡಿದರೆ ಈ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಲ್ಲೆ, ನಾನು ಈ ಬಾರಿಯ ಕ್ಯಾಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಬಲ್ಲೆ, ಎಷ್ಟೇ ಕಷ್ಟವಾದರೂ ನನ್ನ ವೃತ್ತಿಯ ಗುರಿಯಿಂದ ವಿಮುಖನಾಗುವುದಿಲ್ಲ~ ಎಂಬಂತಹ ಸ್ವ-ಸಲಹೆಗಳು ಪ್ರಯೋಜನಕಾರಿ.



ಕ್ರೈಸಿಸ್ ಎಂದರೆ ಅವಕಾಶ!

ವಾಸ್ತವವಾಗಿ, ಇಂಗ್ಲಿಷ್‌ನ  ಕ್ರೈಸಿಸ್ (ಬಿಕ್ಕಟ್ಟು) ಶಬ್ದವನ್ನು ಚೀನಿ ಭಾಷೆಯಲ್ಲಿ ಎರಡು ಚಿಹ್ನೆಗಳಿಂದ ಗುರುತಿಸಲಾಗುತ್ತದೆ. ಮೊದಲ ಚಿಹ್ನೆಯಲ್ಲಿ ಅಪಾಯವೆಂದೂ, ಎರಡನೇ ಚಿಹ್ನೆಯಲ್ಲಿ ಅವಕಾಶವೆಂದೂ ಅರ್ಥೈಸಲಾಗುತ್ತದೆ. ಇದರ ವ್ಯಾಖ್ಯಾನ ಏನೆಂದರೆ ವಿಷಮ ಪರಿಸ್ಥಿತಿಗಳು ಮತ್ತು ಸವಾಲುಗಳು ಯಶಸ್ಸಿನ ಸೋಪಾನಗಳು.



ಅದನ್ನು ಅರಿತು ಎದೆಗುಂದದೆ ಧೈರ್ಯದಿಂದ ಮುನ್ನಡೆಯಬೇಕು. ಸಾಧಾರಣ ವ್ಯಕ್ತಿಗಳಿಗೂ, ಸಾಧಕರಿಗೂ ಇರುವ ವ್ಯತ್ಯಾಸವೇ ಅವರಲ್ಲಿನ ಆಂತರಿಕ ಪ್ರೇರಣೆ.

ಪ್ರಸಿದ್ಧ ಇಂಗ್ಲಿಷ್ ಲೇಖಕ ನೆಪೋಲಿಯನ್ ಹಿಲ್ ಕಳೆದ ಶತಮಾನದ 500ಕ್ಕೂ ಹೆಚ್ಚು ಸಾಧಕರನ್ನು ಭೇಟಿ ಮಾಡಿ ಅವರ ಯಶಸ್ಸಿನ ಸೂತ್ರಗಳನ್ನು ಅರಿತು `ಥಿಂಕ್ ಅಂಡ್ ಗ್ರೋ ರಿಚ್~ ಎಂಬ ಅದ್ಭುತ ಪುಸ್ತಕವನ್ನು 1937ರಲ್ಲಿ ಪ್ರಕಟಿಸಿದ್ದರು.

 

ಈವರೆಗೂ ಈ ಪುಸ್ತಕದ ಸುಮಾರು 2 ಕೋಟಿ ಪ್ರತಿಗಳು ಮಾರಾಟವಾಗಿವೆ. ಹಿಲ್ ಅವರ ಪ್ರಕಾರ, ಮತ್ತೆ ಮತ್ತೆ ಚಿಂತನೆ ಮಾಡುವ ಹವ್ಯಾಸ ಮುಖ್ಯ. ಇದರಿಂದ ಗುರಿ, ಯೋಜನೆಗಳು ಸ್ಪಷ್ಟ ರೂಪ ತಳೆಯುತ್ತವೆ.



ಇದೇ ರೀತಿ, ಕೆಲಸಗಳನ್ನು ಮಾಡಬೇಕಾದಾಗ ತಕ್ಷಣವೇ ಮಾಡಿಬಿಡಬೇಕು. ಆಲಸ್ಯದಿಂದ ಮುಂದೂಡುವುದು, ನಾಳೆ ಮಾಡಿದರೂ ಆಗುತ್ತದೆ ಎಂಬ ಮನೋಧರ್ಮ ನಕಾರಾತ್ಮಕ ಮತ್ತು ಅಪಾಯಕಾರಿಯಾದುದು. ಇಂತಹ ಭಾವನೆಗಳನ್ನು ನಿಮ್ಮಳಗಿಂದ ಹೊರ ದೂಡಿ, ಸಕ್ರಿಯವಾಗಿ ಕಾರ್ಯಶೀಲರಾಗಬೇಕು.



ನಿಮ್ಮ ವೃತ್ತಿ ಮತ್ತು ಖಾಸಗಿ ಜೀವನಕ್ಕೊಂದು ಗುರಿಯಿರಲಿ; ಅದನ್ನು ಸಾಧಿಸುವ ಮಾರ್ಗವೂ ಸಮರ್ಪಕವಾಗಿರಲಿ. ಈ ದಿಸೆಯಲ್ಲಿ, ಸ್ವಾಮಿ ವಿವೇಕಾನಂದರ ಈ ಮಾತು ಗಮನಿಸಿ `ಏಳು! ಎದ್ದೇಳು! ನಿನ್ನ ಭವಿಷ್ಯವನ್ನು ರೂಪಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊರು.



ನಿನ್ನ ಉತ್ತರೋತ್ತರ ಶ್ರೇಯಸ್ಸಿಗೆ ಬೇಕಾದ ಎಲ್ಲ ಶಕ್ತಿ, ಸಾಮರ್ಥ್ಯಗಳೂ ನಿನ್ನೊಳಗೇ ಇವೆ. ನೋಡು, ಮನನ ಮಾಡಿಕೋ. ಏಳು, ಎದ್ದೇಳು. ಭವ್ಯ ಭವಿಷ್ಯದ ನಿರ್ಮಾಣಕ್ಕೆ ಇಂದೇ  ಅಡಿ ಇಡು~. 



ನಾವು ನಿನ್ನೆಯದನ್ನು ಬದಲಿಸಲು ಸಾಧ್ಯವಿಲ್ಲ; ಏನು ಮಾಡುವುದಿದ್ದರೂ ಇಂದೇ ಮಾಡಬೇಕು. ನಾಳೆಯತ್ತ ನಾವು ಇಟ್ಟು ಕೊಳ್ಳಬೇಕಾಗಿರುವುದು ಆಶಯವಷ್ಟೇ.     

 -ವಾಲ್ಟ್ ಡಿಸ್ನಿ, ಅಮೆರಿಕದ ಖ್ಯಾತ ಉದ್ಯಮಿ



ಸಾಧಕರ ಕಥೆಗಳನ್ನು ಕೇಳಿ

ಮಹಾತ್ಮ ಗಾಂಧಿಯವರ ಆತ್ಮಕಥೆ ಎಲ್ಲರಿಗೂ ತಿಳಿದಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ತಮ್ಮ ಕನಸನ್ನು ಸಾಕಾರಗೊಳಿಸಲು ಪಟ್ಟ  ಪರಿಶ್ರಮದ ಹಿಂದೆ ಅವರ ಆಂತರಿಕ ಪ್ರೇರಣೆಯೂ ಪ್ರಮುಖ ಕಾರಣವಾಗಿತ್ತು.

 

ಹಾಗೆಯೇ ಸ್ವಾಮಿ ವಿವೇಕಾನಂದರು, ಎ.ಪಿ.ಜೆ. ಅಬ್ದುಲ್ ಕಲಾಂ, ಎನ್.ಆರ್.ನಾರಾಯಣ ಮೂರ್ತಿ, ಬಿಲ್  ಗೇಟ್ಸ್, ಈಚೆಗಷ್ಟೇ ನಿಧನರಾದ ಆ್ಯಪಲ್‌ನ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರಂತಹ ಮಹಾನ್ ಸಾಧಕರ ಕಥೆಗಳು ಕುತೂಹಲಕಾರಿ ಮತ್ತು ಉತ್ತೇಜನಕಾರಿ.



ಹೊರನೋಟಕ್ಕೆ ಗೋಚರಿಸದ ಅವರ ಸಾಧನೆಯ ಹಿಂದಿನ ಒಳಗುಟ್ಟನ್ನು ಅರಿಯಲು ಪ್ರಯತ್ನ ಮಾಡಿ. ಯಶಸ್ಸಿನ ಸೂತ್ರಗಳನ್ನು ಬಿಂಬಿಸುವ ಅನೇಕ ಪುಸ್ತಕಗಳು ಮತ್ತು ಚಲನಚಿತ್ರಗಳು ಈಗ ಮಾರುಕಟ್ಟೆಯಲ್ಲಿವೆ. ಸಾಧಕರ ಸ್ಫೂರ್ತಿದಾಯಕ ಕಥೆಗಳನ್ನು ಕೇಳುವ, ಓದುವ ಮತ್ತು ವಿಡಿಯೊಗಳನ್ನು ನೋಡುವುದರಿಂದ ನಮ್ಮಲ್ಲಿಯೂ ಛಲ ಹುಟ್ಟುತ್ತದೆ.   

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry