ಸೋಮವಾರ, ಮೇ 17, 2021
25 °C
`ಇನ್ಫಿ' ಮೂರ್ತಿ 2ನೇ ಇನಿಂಗ್ಸ್

ಕನಸುಗಾರನ ಪುನರಾಗಮನ

ವಿವಿಧ ಮೂಲಗಳಿಂದ Updated:

ಅಕ್ಷರ ಗಾತ್ರ : | |

ನಾಗವಾರ ರಾಮರಾವ್ ನಾರಾಯಣಮೂರ್ತಿ (ಎನ್.ಆರ್.ಮೂರ್ತಿ) ಮತ್ತೆ `ಇನ್ಫೊಸಿಸ್'ನ ಚುಕ್ಕಾಣಿ ಹಿಡಿದಿದ್ದಾರೆ.  ನಿವೃತ್ತಿಯ ಬಳಿಕ ಮತ್ತೆ ತಮ್ಮದೇ ಕಂಪೆನಿಯ ಅಧ್ಯಕ್ಷರಾಗಿ ಅವರು ಮರು ನೇಮಕಗೊಂಡಿರುವುದು ದೇಶದ ಕಾರ್ಪೊರೇಟ್ ಇತಿಹಾಸದಲ್ಲೇ ಅಪರೂಪದ ಬೆಳವಣಿಗೆ.67 ವರ್ಷದ ಹೊಸ್ತಿಲಲ್ಲಿರುವ ಮೂರ್ತಿ ನಿರ್ದೇಶಕ ಮಂಡಳಿ ಕೋರಿಕೆ ಮೇರೆಗೆ `ಇನ್ಫೊಸಿಸ್'ಗೆ ಗತವೈಭವದ ದಿನಗಳನ್ನು ಮರಳಿ ತರುವ ಗುರುತರ ಜವಾಬ್ದಾರಿಯನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಕನಸಿನ ಸಂಸ್ಥೆಯನ್ನು ಮರಳಿ `ಎರಡನೇ ಸ್ಥಾನ'ಕ್ಕೆ ತರುವ ಮಹತ್ವದ ಹೊಣೆಗೆ ಹೆಗಲು ಕೊಟ್ಟಿದ್ದಾರೆ.  ಎರಡು ವರ್ಷಗಳ ಹಿಂದಷ್ಟೇ ಅಂದರೆ  2011ರ ಫೆಬ್ರುವರಿಯಲ್ಲಿ  `ಇನ್ಪೊಸಿಸ್'ನ ಆಡಳಿತ ಮಂಡಳಿಯ ಅಧ್ಯಕ್ಷ ಹುದ್ದೆಗೆ ಬ್ಯಾಂಕಿಂಗ್ ಪರಿಣತ ಕೆ.ವಿ.ಕಾಮತ್ ಅವರ ಹೆಸರು ಪ್ರಕಟಿಸಿದಾಗ, `ಇದು ಕಂಪೆನಿಯ ಹೊಸ ತಲೆಮಾರಿನ ಅಧ್ಯಾಯವೊಂದರ ಆರಂಭ' ಎಂದೇ ನಾರಾಯಣ ಮೂರ್ತಿ ಬಣ್ಣಿಸಿದ್ದರು.`ಕಾಮತ್, ಕ್ರಿಸ್(ಎಸ್. ಗೋಪಾಲಕೃಷ್ಣನ್) ಮತ್ತು ಶಿಬು (ಎಸ್.ಡಿ.ಶಿಬುಲಾಲ್) ಅವರದ್ದು ಸೂಕ್ತ ತಂಡವಾಗಿದೆ. ಇನ್ಫೊಸಿಸ್ ಪ್ರಗತಿಯ ಉತ್ತುಂಗಕ್ಕೆ ಏರಲಿದೆ' ಎಂದು ಮೂರ್ತಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.ಆದರೆ, ಅವರ ನಿರೀಕ್ಷೆ ಈಗ ಹುಸಿಯಾಗಿದೆ. ಕೆ.ವಿ.ಕಾಮತ್ ಅವರ ಆಡಳಿತಾವಧಿಯಲ್ಲಿ ಕಂಪೆನಿಯ ಷೇರು ಮೌಲ್ಯ ಶೇ 15ರಷ್ಟು ಕುಸಿತ ಕಂಡಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ವರಮಾನ ಕುಸಿತ, ಕರಗುತ್ತಿರುವ ಮಾರುಕಟ್ಟೆ ಮೌಲ್ಯ, ಕಳೆಗುಂದಿದ ಪ್ರತಿಷ್ಠೆ ಇತ್ಯಾದಿ ಅಂಶಗಳು ಹೂಡಿಕೆದಾರರ ತೀವ್ರ ಕಳವಳಕ್ಕೆ, ಅಸಮಾಧಾನಕ್ಕೆ ಕಾರಣವಾಗಿವೆ. ಮೂರ್ತಿ ಅವರ ಮರು ನೇಮಕಕ್ಕೆ ಇದುವೇ ಪ್ರಮುಖ ಕಾರಣ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.  ಮುಖ್ಯವಾಗಿ ಕಳೆದ ಎರಡು ವರ್ಷಗಳಲ್ಲಿ ಕಂಪೆನಿಗೆ ಸಾಫ್ಟ್‌ವೇರ್ ರಫ್ತಿನಿಂದ ಉತ್ತರ ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗಳಿಂದ ಬರುತ್ತಿದ್ದ ವರಮಾನದಲ್ಲಿ ಭಾರಿ ಕುಸಿತವಾಗಿದೆ. ಈ ವಲಯದ ಬೃಹತ್ ಕಂಪೆನಿಗಳು ವೆಚ್ಚ ಕಡಿತ ಉದ್ದೇಶದಿಂದ ಇನ್ಫೊಸಿಸ್‌ನ ಪ್ರತಿಸ್ಪರ್ಧಿ ಕಂಪೆನಿಗಳಾದ ವಿಪ್ರೊ, ಟಿಸಿಎಸ್ ಮತ್ತು ಎಚ್‌ಸಿಎಲ್‌ಗೆ ಹೊರಗುತ್ತಿಗೆ ಯೋಜನೆಗಳನ್ನು ವಹಿಸುತ್ತಿವೆ.  ಇನ್ನೊಂದೆಡೆ ದೇಶದ ಸಾಫ್ಟ್‌ವೇರ್ ರಫ್ತು ವಹಿವಾಟಿನಲ್ಲಿ ಮೂರನೇ ಸ್ಥಾನದಲ್ಲಿದ್ದ `ಕಾಗ್ನಿಜೆಂಟ್' ಕಂಪೆನಿ ಇನ್ಫೊಸಿಸ್ ಸಂಸ್ಥೆಯನ್ನು ಹಿಂದಕ್ಕೆ ದೂಡಿ  ಎರಡನೇ ಸ್ಥಾನಕ್ಕೇರಿದೆ.ಇದೇ ವೇಳೆ, ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಮೊದಲ ಸ್ಥಾನದಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಉತ್ತರ ಅಮೆರಿಕ ಮತ್ತು ಆಫ್ರಿಕಾ ಖಂಡದ ಹೊಸ ಗ್ರಾಹಕರುಗಳನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ಸು ಕಾಣುತ್ತಿದೆ. ಇನ್ನೊಂದೆಡೆ ಕ್ಲೌಡ್ ಕಂಪ್ಯೂಟಿಂಗ್ ಮಾರುಕಟ್ಟೆಯ ವಿಸ್ತರಣೆ ಮೂಲಕ ಟಿ.ಕೆ.ಕುರಿಯನ್ ಅವರ ನೇತೃತ್ವದ `ವಿಪ್ರೊ' ತಂಡ ಯುರೋಪ್ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಇತರೆ ಮಾರುಕಟ್ಟೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಮುಖ್ಯವಾಗಿ ಹೊರಗುತ್ತಿಗೆ (ಬಿಪಿಒ) ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ(ಐ.ಟಿ.ಇಎಸ್) ವಲಯದಲ್ಲಿ ಇನ್ಫೊಸಿಸ್ ನಿರಂತರ ವೈಫಲ್ಯ ಕಾಣುತ್ತಿದೆ. 2012-13ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪೆನಿ ದೇಶೀಯ ಮಾರುಕಟ್ಟೆಯಿಂದ ಕೇವಲ ಶೇ 2.1ರಷ್ಟು ಮಾತ್ರ ವರಮಾನ ಗಳಿಸಿದೆ. ಇದರಿಂದ ಒಂದೇ ದಿನದಲ್ಲಿ ಷೇರು ಮೌಲ್ಯ ಶೇ 24ರಷ್ಟು ಕುಸಿದು ಹೂಡಿಕೆದಾರರ ಸಂಪತ್ತು  ರೂ37,511 ಕೋಟಿಯಷ್ಟು ನಷ್ಟವಾಗಿತ್ತು.`ಇನ್ಫೊಸಿಸ್' ಪ್ರಸಕ್ತ ಹಣಕಾಸು ವರ್ಷದಲ್ಲಿನ ವರಮಾನ ಗಳಿಕೆಯಲ್ಲಿ ಶೇ 6ರಿಂದ 10ರಷ್ಟು ಅಲ್ಪ ಪ್ರಮಾಣದ ಹೆಚ್ಚಳವನ್ನೇ ಅಂದಾಜು ಮಾಡಿದೆ.   ಆದರೆ, ಇದು ಸಾಫ್ಟ್‌ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಅಂದಾಜು ಮಾಡಿರುವ ಐ.ಟಿ ಉದ್ಯಮದ ಸರಾಸರಿ ಪ್ರಗತಿ(ಶೇ 12- 14)ಗಿಂತಲೂ ಬಹಳ ಕಡಿಮೆ ಇದೆ. ಈ ಅಂಶವೂ ಕಂಪೆನಿಯ ಹೂಡಿಕೆದಾರರ ಕಳವಳಕ್ಕೆ ಕಾರಣವಾಗಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿಯೇ ನಾರಾಯಣ ಮೂರ್ತಿ ಅವರ ಪುನರಾಗಮನವಾಗಿರುವುದು ಗಮನಾರ್ಹ. `ಸದ್ಯದ ಸವಾಲಿನ ಸಂದರ್ಭದಲ್ಲಿ ಕಂಪೆನಿಯನ್ನು ಮುನ್ನಡೆಸಬಲ್ಲ, ಪ್ರಗತಿಯತ್ತ ಕೊಂಡೊಯ್ಯಬಲ್ಲ ಸೂಕ್ತ ಸಾರಥಿಯ ಅಗತ್ಯವಿದೆ. ಸುದೀರ್ಘ ವೃತ್ತಿ ಅನುಭವ ಮತ್ತು ಸಮರ್ಥ ನಾಯಕತ್ವ ಗುಣಗಳಿರುವ ನಾರಾಯಣ ಮೂರ್ತಿ ಅವರನ್ನು ಮರು ನೇಮಕ ಮಾಡಿಕೊಳ್ಳುವಂತೆ ಹೂಡಿಕೆದಾರರಿಂದ ವಿಶೇಷವಾಗಿ, ದೊಡ್ಡ ಮತ್ತು ಸಣ್ಣ ಹೂಡಿಕೆದಾರರಿಂದ ಒತ್ತಡ ಹೆಚ್ಚಿತ್ತು. ಈ  ಹಿನ್ನೆಲೆಯಲ್ಲಿಯೇ ನಿರ್ದೇಶಕ ಮಂಡಳಿ ಸೂಕ್ತ ನಿರ್ಧಾರ ಕೈಗೊಂಡಿದೆ' ಎಂದು ಕೆ.ವಿ.ಕಾಮತ್ ಹೇಳಿದ್ದಾರೆ.ಮರು ಆಯ್ಕೆ ಸಲುವಾಗಿ ಇನ್ಫೋಸಿಸ್ ಮಂಡಳಿ, ಕಂಪೆನಿಯ ನಿಯಮಗಳಿಗೆ ತಿದ್ದುಪಡಿ ಮಾಡಿದೆ. ಅಧ್ಯಕ್ಷ ಹುದ್ದೆಯ ಗರಿಷ್ಠ ವಯೋಮಿತಿಯನ್ನು 75 ವರ್ಷಕ್ಕೆ ಏರಿಸಿದೆ. ಎರಡನೆಯದಾಗಿ ಸ್ವತಂತ್ರ ನಿರ್ದೇಶಕರ ನಿವೃತ್ತಿ ವಯಸ್ಸನ್ನು 70 ವರ್ಷದವರೆಗೆ ವಿಸ್ತರಿಸಿದೆ. ಈ ಹಿಂದೆ ಕಾರ್ಯನಿರ್ವಾಹಕ ಅಧ್ಯಕ್ಷರ ನಿವೃತ್ತಿ ವಯಸ್ಸು 60 ವರ್ಷವಾಗಿತ್ತು.`ಇದು ಅಚ್ಚರಿ ಮತ್ತು ಅನಿರೀಕ್ಷಿತ ಕರೆ. ಕನಸಲ್ಲೂ ಇದನ್ನು ಯೋಚಿಸಿರಲಿಲ್ಲ. ಆದರೆ, ಇನ್ಫೊಸಿಸ್ ನನ್ನ ಎರಡನೆಯ ಮಗು. ಹೀಗಾಗಿ ನನ್ನ ಎಲ್ಲ ಯೋಜನೆಗಳನ್ನು ಬದಿಗಿರಿಸಿ ಈ ಸವಾಲನ್ನು ಸ್ವೀಕರಿಸಿದ್ದೇನೆ. ಎರಡನೇ ಇನಿಂಗ್ಸ್ ಮೂಲಕ ಸಂಸ್ಥೆಯ ಮೌಲ್ಯವರ್ಧನೆಗೆ ಶ್ರಮಿಸುತ್ತೇನೆ. ವೆಚ್ಚ ಕಡಿತ ಮೂಲಕ ಸುಧಾರಣೆಗೆ ಶ್ರಮಿಸುವೆ' ಎಂದು ನಾರಾಯಣ ಮೂರ್ತಿ ಭರವಸೆ ಮಾತು ಹೇಳಿದ್ದಾರೆ.ಸಂಸ್ಥೆಯನ್ನು ಮತ್ತೆ ಹಿಂದಿನ ಪ್ರಗತಿಯ ಪಥಕ್ಕೆ ಕರೆದೊಯ್ಯಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಶಿಬುಲಾಲ್ ಮತ್ತು ಗೋಪಾಕೃಷ್ಣನ್ ನೇತೃತ್ವದಲ್ಲಿ ಹೊಸ ತಂಡ ಕಟ್ಟಲು ಅವರು ನಿರ್ದೇಶಕ ಮಂಡಳಿಯ ಅನುಮತಿ ಕೋರಿದ್ದಾರೆ.  ಎರಡನೇ ಇನ್ನಿಂಗ್ಸ್‌ನ ಹೊಸ ಜವಾಬ್ದಾರಿಯಲ್ಲಿ ತಂದೆ ಯಶಸ್ವಿಯಾಗಲಿ ಎಂಬ ಉದ್ದೇಶದಿಂದ ಅವರಿಗೆ ಕಾರ್ಯನಿರ್ವಾಹಕ ಸಹಾಯಕರಾಗಿ ಪುತ್ರ ರೋಹನ್ ನೇಮಕಗೊಂಡಿದ್ದಾರೆ.`ನನ್ನ ಮಗ ರೋಹನ್‌ಗೆ ಕಂಪೆನಿಯಲ್ಲಿ ಯಾವುದೇ ನಾಯಕತ್ವದ ಪಾತ್ರ ಇಲ್ಲ. ಸದ್ಯ ಆತ ನನ್ನ ಕಾರ್ಯನಿರ್ವಾಹಕ ಸಹಾಯಕ ಮಾತ್ರ' ಎಂದು ಮೂರ್ತಿ ಸ್ಪಷ್ಟಪಡಿಸಿದ್ದಾರೆ.  ಅಲ್ಲದೆ, ಇಬ್ಬರೂ ತಮ್ಮ ಕೆಲಸಕ್ಕೆ ಸಾಂಕೇತಿಕವಾಗಿ ವಾರ್ಷಿಕ ರೂ1 ವೇತನ ಪಡೆಯಲಿದ್ದಾರೆ. ಮತ್ತೊಮ್ಮೆ ಸಂಸ್ಥೆಯ ಕಾರ್ಯನಿರ್ವಾಹಕ ಜವಾಬ್ದಾರಿ ನಿರ್ವಹಿಸಬೇಕಾಗಿ ಬಂದಿರುವುದು ತಮ್ಮ ಎರಡನೆಯ ಇನಿಂಗ್ಸ್ ಎಂದು ಮೂರ್ತಿ ಹೇಳಿಕೊಂಡಿದ್ದಾರೆ. `ಆ ಇನ್ನಿಂಗ್ಸ್ ಹೇಗಿರುತ್ತದೆಯೋ?' ಎಂಬ ಕುತೂಹಲ ಇನ್ಫೊಸಿಸ್ ಸಿಬ್ಬಂದಿಗಳಿಂದ ಆರಂಭಿಸಿ ಹೂಡಿಕೆದಾರರು ಮತ್ತು ಷೇರುಪೇಟೆ ಹಾಗೂ ಪ್ರತಿಸ್ಪರ್ಧಿ ಕಂಪೆನಿಗಳು ಎಲ್ಲರದ್ದೂ ಆಗಿದೆ.ರೂ10 ಸಾವಿರ ಬಂಡವಾಳ

1981ರಲ್ಲಿ ನಂದನ್ ನಿಲೇಕಣಿ, ಎನ್ ಎಸ್.ರಾಘವನ್, ಎಸ್.ಗೋಪಾಲಕೃಷ್ಣನ್, ಎಸ್.ಡಿ.ಶಿಬುಲಾಲ್, ಕೆ. ದಿನೇಶ್ ಹಾಗೂ ಅಶೋಕ ಅರೋರ ಅವರೊಂದಿಗೆ ಸೇರಿ ನಾರಾಯಣಮೂರ್ತಿ ಅವರು ಕೇವಲ  ರೂ 10 ಸಾವಿರ ಆರಂಭಿಕ ಬಂಡವಾಳದೊಂದಿಗೆ ಇನ್ಫೊಸಿಸ್ ಕಂಪೆನಿ ಸ್ಥಾಪಿಸಿದ್ದರು. ಈಗ ಈ ಬೃಹತ್ ಕಂಪೆನಿಯಲ್ಲಿ 1.56 ಲಕ್ಷ ಉದ್ಯೋಗಿಗಳಿದ್ದಾರೆ.ದೇಶದಲ್ಲಿ 9 ತಂತ್ರಾಂಶ ಅಭಿವೃದ್ಧಿ ಕೇಂದ್ರಗಳಿವೆ. ಅಮೆರಿಕ, ಚೀನಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಕೆನಡಾ, ಜಪಾನ್ ಸೇರಿದಂತೆ ಪ್ರಪಂಚದಾದ್ಯಂತ 29 ಕಚೇರಿಗಳನ್ನು `ಇನ್ಫೊಸಿಸ್' ನೆಲೆಗೊಳಿಸಿದೆ. 30ಕ್ಕೂ ಹೆಚ್ಚು ದೇಶಗಳಿಗೆ ವಾಣಿಜ್ಯ ವ್ಯವಹಾರ, ತಾಂತ್ರಿಕ, ಯಾಂತ್ರಿಕ, ಹೊರಗುತ್ತಿಗೆ ಸೇವೆಗಳನ್ನು ಒದಗಿಸುತ್ತಿದೆ.  ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ), ಅಬುದಾಭಿ ಇನ್ವೆಸ್ಟ್‌ಮೆಂಟ್ ಅಥಾರಿಟಿ ಮತ್ತು ಸಿಂಗಾಪುರ ಸರ್ಕಾರ `ಇನ್ಫೊಸಿಸ್'ನಲ್ಲಿ ಗರಿಷ್ಠ ಷೇರು ಪಾಲು ಹೊಂದಿವೆ. ಮೂರ್ತಿ ಮರು ನೇಮಕಕ್ಕೆ ಈ ಸಂಸ್ಥೆಗಳೇ ನಿರ್ದೇಶಕ ಮಂಡಳಿ ಮೇಲೆ ಒತ್ತಡ ಹೇರಿದ್ದವು.2006ರಿಂದ 2011ರವರೆಗೆ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆ ನಿಭಾಯಿಸಿದ ಮೂರ್ತಿ, 2011ರ    ಆಗಸ್ಟ್‌ನಲ್ಲಿ `ಇನ್ಫೊಸಿಸ್'ನಿಂದ ನಿವೃತ್ತರಾಗಿದ್ದರು ಮತ್ತು  ವಿಶ್ರಾಂತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

                    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.