ಶುಕ್ರವಾರ, ಫೆಬ್ರವರಿ 26, 2021
26 °C

ಕನಸುಗಾರ ಕಲಾಂ ನಾಟಕ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಸುಗಾರ ಕಲಾಂ ನಾಟಕ ಪ್ರದರ್ಶನ

ರಾಮೇಶ್ವರದ ಬೀದಿಗಳಲ್ಲಿ ಪೇಪರ್ ಮಾರುತ್ತಿದ್ದ ಬಾಲಕ ಎ.ಪಿ.ಜೆ ಅಬ್ದುಲ್ ಕಲಾಂ, ಭವಿಷ್ಯದ ಭವ್ಯ ಕನಸುಗಳನ್ನು ಪ್ರೇರಣೆಯಾಗಿಸಿಕೊಂಡು ಎದುರಾಗುವ ವಿಷಮ ಪರಿಸ್ಥಿತಿಗಳಿಗೆ ಎದೆಗುಂದದೆ ಸಾಧಕನಾಗಿ ದೇಶ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿ ಖ್ಯಾತ ವಿಜ್ಞಾನಿ ಎಂಬ ಹೆಗ್ಗಳಿಕೆ ಪಾತ್ರರಾಗಿ, ರಾಷ್ಟ್ರದ ಉನ್ನತ ಹುದ್ದೆ ರಾಷ್ಟ್ರಪತಿ ಸ್ಥಾನ ಅಲಂಕರಿಸಿ ಯಶೋಗಾಥೆ ಮೆರೆದ ಕತೆ ಇಡೀ ವಿಶ್ವವನ್ನೇ ಬೆರಗುಗೊಳಿಸುತ್ತದೆ. ಇಂತಹ ದೊಡ್ಡ ದೊಡ್ಡ ಕನಸುಗಳನ್ನು ಇಟ್ಟುಕೊಂಡು ದೊಡ್ಡದಾಗಿ ಬೆಳೆದವರ ಕತೆ ಮಕ್ಕಳನ್ನು ಪ್ರೇರೇಪಿಸುತ್ತವೆ. ಇದೇ ಕತೆ ನಾಟಕವಾಗಿ, ಅದನ್ನು ಮಕ್ಕಳೇ ಅಭಿನಯಿಸಿದರೆ ಅದೆಷ್ಟು ಚೆಂದ?ಹೌದು ಮಕ್ಕಳೇ ಅಭಿನಯಿಸಿದ `ಕನಸುಗಾರ ಕಲಾಂ~ ನಾಟಕವು ನೋಡುಗರಲ್ಲಿ ಬೆರಗು ಮೂಡಿಸುವಲ್ಲಿ ಯಶಸ್ವಿಯಾಗಿದೆ.  ಬಸವೇಶ್ವರ ಜಯಂತಿ ಅಂಗವಾಗಿ ತಾಲ್ಲೂಕು ಆಡಳಿತದ ಮನವಿ ಮೇರೆಗೆ ಇಲ್ಲಿನ ಸಾಮರ್ಥ್ಯ ಸೌಧದ ಆವರಣವನ್ನೆ ವೇದಿಕೆಯನ್ನಾಗಿ ಮಾರ್ಪಾಟು ಮಾಡಿ  ಸುಮಾರು ಒಂದೂವರೆ ತಾಸು ದಾವಣಗೆರೆ ವಿದ್ಯಾಸಾಗರ ಶಾಲೆಯ ಮಕ್ಕಳು ಅಭಿನಯಿಸಿದ `ಕನಸುಗಾರ ಕಲಾಂ~ ನಾಟಕದ ಪ್ರತಿಯೊಂದು ದೃಶ್ಯವೂ ನೋಡುಗರ ಮನಸೂರೆಗೊಂಡಿತು.  ಭಾರತದ ಕ್ಷಿಪಣಿ ಮನುಷ್ಯ ಎಂದು ಕರೆಯಲ್ಪಡುವ ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನಡೆದುಕೊಂಡು ಬಂದ ಜೀವನ ಮತ್ತು ಸಾಧನೆಗಳನ್ನೊಳಗೊಂಡ ಈ ನಾಟಕದಲ್ಲಿ ಕಲಾಂ ಅವರ ಭೌತಿಕ ಜೀವನದ ಕುರಿತ ವಿವರಣೆಗಿಂತ ಅವರ ಮಾನಸಿಕ, ಆಧ್ಯಾತ್ಮಿಕ ಜೀವನದ ಮೇಲೆ ಬೆಳಕು ಚೆಲ್ಲುವ ಘಟನೆಗಳ ಹೃದಯಸ್ಪರ್ಶಿ ದೃಶ್ಯಗಳನ್ನು ಹದವಾಗಿ ಹೆಣೆಯಲಾಗಿದೆ. ಜೊತೆಗೆ ತಮ್ಮ ಸಾಧನೆಯ ಕಾರಣೀಕರ್ತರನ್ನು ಸದಾ ನೆನೆಯುವ ಕಲಾಂ ಅವರ ಸರಳತೆ  ಮತ್ತು ಸದಾಕಾಲ ರಾಷ್ಟ್ರಪ್ರೇಮದಿಂದ ತುಂಬಿ ತುಳುಕುವ ವಿಶಾಲ ಹೃದಯದ ಭಾವನೆಗಳನ್ನು ಸುಂದರವಾಗಿ ನಾಟಕದಲ್ಲಿ ಅಭಿವ್ಯಕ್ತಗೊಳಿಸಲಾಗಿದೆ. ಇವೆಲ್ಲ ಕಾರಣಕ್ಕಾಗಿ ನಾಟಕದ ಮುಕ್ತಾಯದ ಕ್ಷಣದಲ್ಲಿ ಕಲಾಂ ನಮ್ಮಳಗಿನಿಂದ ಬೇರೆ ತರಹದ ರೂಪ ಪಡೆದು ಮಹಾನ್ ವ್ಯಕ್ತಿತ್ವವಾಗಿ ಕಂಗೊಳಿಸುತ್ತಾರೆ.   ಮೊದಲ ಬಾರಿ ಕಲಾಂ ರೈಲು ಪ್ರಯಾಣ ಕೈಗೊಂಡಾಗ ಕಿಟಕಿಯಿಂದಾಚೆಗೆ ಕಾಣುವ ಭಾರತದ ರಮಣೀಯ ಭೂ ಪ್ರದೇಶಗಳು ಕಲಾವಿದನ ಕುಂಚದಿಂದ ರಚಿಸಲ್ಪಟ್ಟ ಸುಂದರ ಚಿತ್ರಪಟಗಳಂತೆ ಗೋಚರಿಸುವುದು, ಹೃಶಿಕೇಶದ ಶಿವಾನಂದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬುದ್ಧನ ದರ್ಶನವಾಗುವುದು,  ಪ್ರೊ. ವಿಕ್ರಂ ಸಾರಾಭಾಯಿ ಅವರಲ್ಲಿರುವ ದೇಶಭಕ್ತಿ, ಮಹಾತ್ಮಾ ಗಾಂಧಿ ಜೀವನದ ಆದರ್ಶಗಳು... ಹೀಗೆ ಇಲ್ಲಿ ಕಲಾಂ ಅವರ ಮಾನಸಿಕ ಪ್ರಪಂಚದ ಅನಾವರಣವಿದೆ. ರಾಮೇಶ್ವರದ ಬೀದಿಯಲ್ಲಿನ ಸಾಮಾನ್ಯ ಬಾಲಕ ಖ್ಯಾತ ವಿಜ್ಞಾನಿ, ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಆಗಿ ಸಾಗಿ ಬಂದ ಅವರ ಜೀವನ ನಿಶ್ಚಿತವಾಗಿಯೂ ಮಕ್ಕಳಲ್ಲಿ ದೊಡ್ಡ ಕನಸನ್ನು ಕಾಣಲು ಕಲಿಸುತ್ತದೆ. ಮತ್ತು ಅದನ್ನು ಹಂತ ಹಂತವಾಗಿ ನನಸು ಮಾಡಿಕೊಳ್ಳುವ ಪ್ರೋತ್ಸಾಹ ನೀಡುತ್ತದೆ ಎನ್ನುವ ದೃಷ್ಠಿಕೋನದಿಂದ ಸಿದ್ಧಗೊಂಡಿರುವ `ಕನಸುಗಾರ ಕಲಾಂ~ ನಾಟಕ ಪ್ರದರ್ಶನ ಎಲ್ಲರ ಮೆಚ್ಚುಗೆ ಪಡೆಯಿತು.ರಂಗದ ಮೇಲೆ ರಾಕೆಟ್

ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಪ್ರದರ್ಶಿತಗೊಂಡ ಈ ನಾಟಕ ಬಾಲ ಪ್ರತಿಭೆಗಳ ಶ್ರೇಷ್ಠ ಅಭಿನಯಕ್ಕೆ ಹಿಡಿದ ಕೈಗನ್ನಡಿಯಂತಿತ್ತು. ನಾಟಕ ಶಿಕ್ಷಕ ಎಸ್.ಎಲ್. ಸಂತೋಷ ನಾಟಕ ನಿರ್ದೇಶಿಸಿ ಮಕ್ಕಳನ್ನು ಸಿದ್ಧಗೊಳಿಸಿದ ಶ್ರಮ, ಪ್ರದರ್ಶನದ ಅಂತ್ಯದವರೆಗೂ ಪ್ರತಿ ಹಂತದಲ್ಲಿ ಸ್ಪಷ್ಟವಾಗಿ ಕಂಡು ಬರುವಂತಿತ್ತು.ದೃಶ್ಯದಿಂದ ದೃಶ್ಯಕ್ಕೆ ಪೋಷಾಕು ಬದಲಿಸಿ ಪರಿಕರಗಳ ಸಮೇತ ಮಕ್ಕಳು ಸಿದ್ಧಗೊಳ್ಳುತ್ತಿದ್ದ ಚಾಕಚಕ್ಯತೆ, ಅಭಿನಯದಲ್ಲಿನ ತಲ್ಲೆನತೆ, ಸಂಭಾಷಣೆಯ ಸ್ಪಷ್ಟತೆ ಇವೆಲ್ಲವು ಬಾಲಪ್ರತಿಭೆಗಳ ಪ್ರಬುದ್ಧತೆಯ ಅನಾವರಣವಾಗಿತ್ತು. ಸಂದರ್ಭಕ್ಕೆ ತಕ್ಕಂತೆ ಬಿಳಿ ಪರದೆಯ ಮೇಲೆ ಮೂಡಿ ಬರುತ್ತಿದ್ದ ಬಾಹ್ಯಾಕಾಶ ಕ್ಷೇತ್ರದಲ್ಲಿನ ಭಾರತದ ರಾಕೆಟ್ ಉಡಾವಣೆಯ ಸಾಧನೆಯ ದೃಶ್ಯಾವಳಿಗಳನ್ನು ಬಳಸಿಕೊಂಡು ವಿದ್ಯಮಾನಗಳ ವಿವರಣೆ ನೀಡಲಾಗುವ ವ್ಯವಸ್ಥೆ ಮತ್ತು ಬೆಳಕು, ಹಿನ್ನೆಲೆ ಸಂಗೀತ ನೋಡುಗರನ್ನು ಅಂತರಿಕ್ಷದಲ್ಲಿ ತೇಲಿಸಿದ ಅನುಭವ ನೀಡಿತು.ಹೊಸ ಆಟ ತೋರಿಸ್ತೀವಿ...


ನಾಟಕ ಪ್ರದರ್ಶನಕ್ಕೂ ಮುನ್ನ ಕಲಾತ್ಮಕ ಯೋಗಾಸನದ ವಿವಿಧ ಭಂಗಿಗಳ ಮುಖಾಂತರ ರೂಪಕಗಳನ್ನು ಬಾಲ ಕಲಾವಿದರು ತೋರ್ಪಡಿಸಿದರು. ಕಳೆದ ನಾಲ್ಕು ವರ್ಷಗಳಿಂದ ತರಬೇತಿ ಪಡೆದ 27 ವಿದ್ಯಾರ್ಥಿಗಳ ತಂಡ ರಚಿಸಿಕೊಂಡು ಶಿಕ್ಷಕ ಎಸ್.ಎಲ್.ಸಂತೋಷ ನೇತೃತ್ವದಲ್ಲಿ ನಾಡಿನಾದ್ಯಂತ `ಮಕ್ಕಳ ತಿರುಗಾಟ-ಹೊಸ ಆಟ ತೋರಿಸ್ತಿವಿ~ ಎಂಬ ಶೀರ್ಷಿಕೆಯಡಿಯಲ್ಲಿ ಪ್ರತಿಭೆಗಳ ಉತ್ಕೃಷ್ಟ ಪ್ರದರ್ಶನ ನೀಡುತ್ತಿದ್ದಾರೆ.ಶೈಕ್ಷಣಿಕ ಉದ್ದೇಶದೊಂದಿಗೆ ಕಳೆದ 10 ವರ್ಷಗಳಿಂದ ಪಠ್ಯಪೂರಕ ಚಟುವಟಿಕೆಗೆ ಮುಂದಾಗುವ ಮೂಲಕ ವರ್ಷಪೂರ್ತಿ ಸಂಗೀತ, ಯೋಗಾಸನ, ಯಕ್ಷಗಾನ, ಕರಕುಶಲ, ಚಿತ್ರಕಲೆ, ನಾಟಕ, ನೃತ್ಯ ಮುಂತಾದ ವಿಷಯಗಳ ತರಗತಿಗಳನ್ನು ಪರಿಣಿತ ಶಿಕ್ಷಕರನ್ನು ನೇಮಿಸಿಕೊಂಡು ಶ್ರದ್ಧೆಯಿಂದ ನಡೆಸಿಕೊಂಡು ಬಂದಿರುವ ದಾವಣಗೆರೆಯ ವಿದ್ಯಾಸಾಗರ ಶಾಲೆಯ ಮಕ್ಕಳು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ, ದಕ್ಷಿಣ ಭಾರತ ಮಟ್ಟದ ವಿಜ್ಞಾನ ನಾಟಕ, ಅಂತರಾಷ್ಟ್ರೀಯ ಮಟ್ಟದ ಯೋಗಾಸನ, ರಾಜ್ಯ ಮಟ್ಟದ ಮಕ್ಕಳ ನಾಟಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.ನಾಲ್ಕು ವರ್ಷಗಳಿಂದೀಚೆಗೆ `ಬಣ್ಣದ ಹೆಜ್ಜೆ~ ಎಂಬ ಮಕ್ಕಳ ತಿರುಗಾಟದ ಯೋಜನೆ ರೂಪಿಸಿಕೊಂಡು ರಾಜ್ಯದೆಲ್ಲೆಡೆ ನಾಟಕ ಪ್ರದರ್ಶನ ನೀಡುತ್ತಿರುವ ಚಿಣ್ಣರ ಮುಗ್ಧ ಅಭಿನಯ ಸಹೃದಯರಿಂದ ಸೈ ಎನ್ನಿಸಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.