ಕನಸು ಕಂಡವಳೇ ಅಲ್ಲ...

7

ಕನಸು ಕಂಡವಳೇ ಅಲ್ಲ...

Published:
Updated:
ಕನಸು ಕಂಡವಳೇ ಅಲ್ಲ...

ಮನಸು ಮನಸುಗಳ ಹಬ್ಬ ಎಂದು ಹೇಳಿಕೊಳ್ಳುತ್ತಿರುವ `ಸಂಕ್ರಾಂತಿ~ ಚಿತ್ರದ ನಾಯಕಿ ರೂಪಶ್ರೀ. ಈಗಾಗಲೇ `ಶಂಭೋ ಶಂಕರ~, `ರಾಮೇಗೌಡ ವರ್ಸಸ್ ಕೃಷ್ಣಾರೆಡ್ಡಿ~, `ಪುತ್ರ~, `ಹರೇರಾಮ ಹರೇಕೃಷ್ಣ~ ಚಿತ್ರಗಳ ಮೂಲಕ ಕನ್ನಡಿಗರಿಗೆ ಪರಿಚಿತರು. `ಸಂಕ್ರಾಂತಿ~ಯಲ್ಲಿ ಜಗ್ಗೇಶ್ ಪುತ್ರ ಗುರುರಾಜ್ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. `ನಿನ್ನು ಚೇರಾಲನಿ~ ರೂಪಶ್ರೀ ಅಭಿನಯಿಸಿರುವ ತೆಲುಗು ಚಿತ್ರ. ಅನೇಕ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿರುವ ಇವರು `ಸಿಸಿಎಲ್~ ಪಂದ್ಯಾವಳಿಯ ನಿರೂಪಕಿಯಾಗಿಯೂ ಗಮನ ಸೆಳೆದವರು. ರೂಪಶ್ರೀ ಚಿತ್ರ ಬದುಕು ಇಲ್ಲಿದೆ.

 

ಸಂಕ್ರಾಂತಿಯಲ್ಲಿ ನಿಮ್ಮದು ಎಂತಹ ಪಾತ್ರ?

ಶೇ 30ರಷ್ಟು ಗ್ಲಾಮರ್ ಹಾಗೂ ಶೇ 70ರಷ್ಟು ಭಾವುಕ ಪಾತ್ರ! ಅದೊಂದು ಹೋಮ್ಲಿ ಪಾತ್ರ. ಈ ಮೊದಲಿನ ಚಿತ್ರಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೆ. ಇದರಲ್ಲಿ ಅಭಿನಯಕ್ಕೆ ಹೆಚ್ಚು ಅವಕಾಶವಿದೆ. ನಾಚಿಕೆ ಪಡೋದು, ಅಳೋದು ಇಂಥ ಸನ್ನಿವೇಶಗಳೇ ಹೆಚ್ಚು ಇವೆ. ಇಂತಹದ್ದೊಂದು ಪಾತ್ರಕ್ಕೆ ಕಾಯುತ್ತಿದ್ದೆ.

 

ಓದುಗರಿಗಾಗಿ ನಿಮ್ಮ ಲಿಬಿಯಾ ಕತೆ ಹೇಳಿ...

ಹ್ಹ ಹ್ಹ. ನಾನು ಹುಟ್ಟಿದ್ದು ಬೆಂಗಳೂರಿನಲ್ಲೇ. ಅಪ್ಪ ವೃತ್ತಿಯಲ್ಲಿ ವೈದ್ಯರು. ಅವರಿಗೆ ಲಿಬಿಯಾದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ಹೀಗಾಗಿ ಇಡೀ ಕುಟುಂಬ ಲಿಬಿಯಾಕ್ಕೆ ಪಯಣ ಬೆಳೆಸಿದವು. ನಾವು ವಾಪಸ್ ತಾಯ್ನಾಡಿಗೆ ಬರಲು ಗಡಾಫಿ ಕಾರಣ! ನಾವಿದ್ದ ಮನೆಗೆ ಕೇವಲ 50 ಮೀಟರ್ ದೂರದಲ್ಲಿ ಬಾಂಬ್ ದಾಳಿ ನಡೆಯಿತು. ಇನ್ನು ಅಲ್ಲಿ ಬದುಕುವುದು ಸಾಧ್ಯವಿಲ್ಲ ಎಂದು ಅರಿವಾದಾಗ ಅಪ್ಪ ಕುಟುಂಬ ಸಹಿತ ವಾಪಸ್ ಬಂದರು. ಪದವಿ ಓದಿದ್ದು ಜ್ಯೋತಿ ನಿವಾಸ್ ಕಾಲೇಜಿನಲ್ಲಿ. ಓದುತ್ತಿರುವಾಗಲೇ ಭರತನಾಟ್ಯವನ್ನೂ ಕಲಿತೆ. ಇದು ನನಗೆ ತುಂಬಾ ಸಹಕಾರಿಯಾಯಿತು.

ಸಿನಿಮಾ ಕ್ಷೇತ್ರಕ್ಕೆ ಬಂದದ್ದು ಹೇಗೆ?

ಅದೊಂದು ಆಕಸ್ಮಿಕ. ಸಿನಿಮಾಗೆ ಬರುವವರೆಗೂ ನನಗೆ ಗೊತ್ತಿದ್ದು ಬೆರಳೆಣಿಕೆಯ ನಟ ನಟಿಯರಷ್ಟೇ. ಮನಃಶಾಸ್ತ್ರಜ್ಞೆಯಾಗಬೇಕೆಂಬುದು ಬಹು ಹಿಂದಿನಿಂದಲೂ ಇದ್ದ ಕನಸು. ಮನೆಯಲ್ಲಿ ಡಾಕ್ಟರ್ ಆಗಬೇಕೆಂಬ ಒತ್ತಾಯವಿತ್ತು. ಆದರೆ ರಕ್ತ ಮಾಂಸ ಕಂಡರೆ ಭಯ. ಹಾಗಾಗಿ ವೈದ್ಯೆಯಾಗಲಿಲ್ಲ. ಮನಃಶಾಸ್ತ್ರದ ಕುರಿತು ಪದವಿ ವ್ಯಾಸಂಗ ಮಾಡುತ್ತಿದ್ದೆ. ಆಗ ಸಾಕ್ಷ್ಯಚಿತ್ರವೊಂದರಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ಅಲ್ಲಿಂದ ಸಿನಿಮಾಕ್ಕೆ ಕಾಲಿಟ್ಟೆ. `ನಿನ್ನುಸಿರೇ ನನ್ನುಸಿರು~ ನನ್ನ ಮೊದಲ ಚಿತ್ರ. ದುರದೃಷ್ಟವಶಾತ್ ಅದು ತೆರೆ ಕಾಣಲಿಲ್ಲ.

ಈಗ ನಿಮ್ಮ ಕೈಯಲ್ಲಿರುವ ಚಿತ್ರಗಳು?

ಸಸ್ಪೆನ್ಸ್ ಥ್ರಿಲ್ಲರ್ `ನಿಗೂಢ~, ರವಿಶಂಕರ್ ಅವರ `ಭಗವಂತ ಕೈ ಕೊಟ್ಟ~, ಮಂಜು ಮಸ್ಕಲ್‌ಮಟ್ಟಿ ಅವರ `ಡಂಗೂರ~. ತುಳು ಚಿತ್ರವೊಂದರಲ್ಲಿ ಅಭಿನಯಿಸುವ ಅವಕಾಶ ದೊರೆತಿದೆ. ಅದು ಮಲೇಷ್ಯಾದಲ್ಲಿ ಚಿತ್ರೀಕರಣವಾಗಲಿದೆ.

ಎಂಥ ಪಾತ್ರಗಳನ್ನು ಇಷ್ಟಪಡುತ್ತೀರಿ?

ಸಲೀಸಾಗಿ ಅಭಿನಯಿಸುವಂತಹ ಪಾತ್ರಗಳು ಬೇಡವೇ ಬೇಡ. ನಾಯಕನೇ ಪ್ರಧಾನವಾಗಿರುವ, ಬರೀ ಹಾಡುಗಳಿಗಷ್ಟೇ ನಾಯಕಿ ಸೀಮಿತವಾಗಿರುವ ಪಾತ್ರಗಳನ್ನು ಇಷ್ಟಪಡಲಾರೆ. ಐದೇ ನಿಮಿಷದ ಪಾತ್ರವಿದ್ದರೂ ಅದು ಜನರ ಮನಸ್ಸಿನಲ್ಲಿ ಉಳಿಯುವಂತಾಗಬೇಕು. `ಹರೇರಾಮ ಹರೇಕೃಷ್ಣ~ ಚಿತ್ರದಲ್ಲಿ ನನ್ನದು ನೆಗೆಟೀವ್ ಪಾತ್ರ. ನಾಯಕಿಗಿಂತಲೂ ಹೆಚ್ಚಾಗಿ ಜನ ನನ್ನನ್ನು ಗುರುತಿಸಿದರು. ಲಕ್ಷ್ಮಿ, ಮಂಜುಳಾ, ಕಲ್ಪನಾ ನನ್ನ ಅಚ್ಚುಮೆಚ್ಚಿನ ಕಲಾವಿದೆಯರು. ಬಜಾರಿ, ಹುಚ್ಚಿ ಪಾತ್ರಗಳನ್ನು ಬಯಸುತ್ತೇನೆ. ಅಂತಹ ಪಾತ್ರಗಳಿಗಾಗಿ ಉಚಿತವಾಗಿ ಬೇಕಾದರೂ ಅಭಿನಯಿಸುತ್ತೇನೆ.

ಭವಿಷ್ಯದ ನಿರ್ಧಾರಗಳು...

ನಾನು ಕನಸುಗಳನ್ನು ಕಂಡವಳೇ ಅಲ್ಲ. ಹೀಗಾಗಬೇಕು ಹಾಗಾಗಬೇಕು ಅಂದುಕೊಂಡವಳಲ್ಲ. ಇದು ನನ್ನ ಸ್ವಂತ ಬದುಕಿಗೂ ಬಣ್ಣದ ಬದುಕಿಗೂ ಅನ್ವಯಿಸುತ್ತದೆ. ನಾಳೆಯ ಬಗ್ಗೆ ಯೋಚಿಸಬಾರದು ಅಂದುಕೊಂಡಿದ್ದೇನೆ. ಅತಿಯಾಸೆ ಅಂತೂ ಇಲ್ಲವೇ ಇಲ್ಲ. ಓದಿನ ವಿಷಯಕ್ಕೆ ಬಂದರೆ ಸ್ನಾತಕೋತ್ತರ ಪದವಿ ಪಡೆಯಬೇಕು ಎಂಬ ಆಸೆ ಇದೆ.

ಬೇರೆ ಭಾಷೆಗಳಲ್ಲಿ ಇನ್ನಷ್ಟು ಅಭಿನಯಿಸುವ ಅವಕಾಶ ಬಂದರೆ?

ನನಗೆ ಹೋಂಸಿಕ್‌ನೆಸ್ ಬಹಳ ಇದೆ. ಅಪ್ಪ ಅಮ್ಮನನ್ನು ಬಿಟ್ಟು ಇರಲಾರೆ. ದೂರದ ಊರುಗಳಲ್ಲಿ ನೆಲೆಸಿ ಅಲ್ಲಿ ಏಗಲಾರೆ ಅನ್ನಿಸುತ್ತದೆ. ಸದ್ಯಕ್ಕೆ ಕನ್ನಡ ಚಿತ್ರರಂಗವೇ ಎಲ್ಲವೂ ಆಗಿದೆ.ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ನಟಿಯರು ಬಹಳಷ್ಟು ಕಾಲ ನೆಲೆಯೂರುತ್ತಿಲ್ಲ. ಇದಕ್ಕೆ ಕಾರಣವೇನು?

ಬಹುಶಃ ಹಣಕ್ಕಾಗಿ ಅಭಿನಯಿಸುವವರ ಸಂಖ್ಯೆ ಹೆಚ್ಚು ಇರುವುದರಿಂದ ಇಂತಹ ಸಂದರ್ಭಗಳು ಸೃಷ್ಟಿಯಾಗುತ್ತಿವೆ. ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಯೋಚಿಸಲಾರರು. ತೆರೆ ಮೇಲೆ ಒಮ್ಮೆ ಕಾಣಿಸಿಕೊಂಡರೆ ಸಾಕು ಎನ್ನುವ ಮನೋಭಾವವೇ ಅನೇಕರಲ್ಲಿದೆ. ಚಿತ್ರೋದ್ಯಮದ ಅಸಹಕಾರವೂ ಕಾರಣವಿರಬಹುದು.

ಬಿಡುವಿನ ವೇಳೆಯಲ್ಲಿ ಏನು ಮಾಡುತ್ತೀರಿ?

ಚಿತ್ರಕಲೆ ನನಗೆ ಇಷ್ಟವಾದ ಮಾಧ್ಯಮ. ಮನೆಯಲ್ಲಿ ತರಹೇವಾರಿ ಪೇಂಟಿಂಗ್‌ಗಳನ್ನು ಮಾಡುತ್ತೇನೆ. ಅಡುಗೆಯಲ್ಲೂ ಮುಂದು. ಸಸ್ಯಾಹಾರಿ ಮಾಂಸಾಹಾರಿ ಯಾವುದೇ ಅಡುಗೆ ಮಾಡುವುದರಲ್ಲೂ ಎತ್ತಿದ ಕೈ. ಸಿನಿಮಾಗಳನ್ನು ಹೆಚ್ಚು ನೋಡುತ್ತೇನೆ. ವಿಮರ್ಶೆಗಳನ್ನು ಓದಿ ಸಿನಿಮಾ ನೋಡುವುದು ನನ್ನ ಅಭ್ಯಾಸ.

ರಿಯಾಲಿಟಿ ಶೋಗಳಲ್ಲಿ ನಿಮ್ಮ ಅನುಭವ ಹೇಗಿತ್ತು?

ನಟನೆ ಎಂದರೆ ಕೇವಲ ಚಿತ್ರರಂಗದ ನಟನೆ ಎಂದು ಬಯಸಿದವಳು ನಾನಲ್ಲ. ಹೀಗಾಗಿ ಬೇರೆ ಬೇರೆ ಅವಕಾಶಗಳತ್ತಲೂ ಕೈ ಚಾಚಿದೆ. ಈಟಿವಿಯ `ಹಾಕು ಹೆಜ್ಜೆ ಹಾಕು~ ಶೋನಲ್ಲಿ ಭಾಗವಹಿಸಿದೆ. ಅದೇ ವಾಹಿನಿಯ `ನಮ್ಮೂರ ಯುವರಾಣಿ~ ಕಾರ್ಯಕ್ರಮದಲ್ಲೂ ಭಾಗವಹಿಸಿದೆ. ಸುವರ್ಣ ಟಿವಿಯ ನೃತ್ಯ ಕಾರ್ಯಕ್ರಮವೊಂದರಲ್ಲಿ ತೀರ್ಪುಗಾರಳಾಗಿ ಭಾಗವಹಿಸಿದೆ. ಇವೆಲ್ಲವೂ ನನ್ನ ಅಭಿನಯದ ಬಯಕೆಗೆ ಇಂಬು ನೀಡಿವೆ.

`ಸಿಸಿಎಲ್~ ಪಂದ್ಯಾವಳಿಯ ಬಗ್ಗೆ ಕೊಂಚ ಹೇಳಿ.

ಕರ್ನಾಟಕ ಬುಲ್ಡೋಜರ್ಸ್‌ ತಂಡಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಸಿಸಿಎಲ್‌ನಲ್ಲಿ ನಿರೂಪಕಿಯಾಗಿ ಭಾಗವಹಿಸಿದೆ. ಈ ಬಗ್ಗೆ ನನ್ನ ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ದಿನಕ್ಕೆ ನೂರಾರು ಅನಿಸಿಕೆ ಅಭಿಪ್ರಾಯಗಳು ಬರುತ್ತಿವೆ. ನನ್ನ ನಟನೆಗೆ ಸಿಕ್ಕಿದ್ದಕ್ಕಿಂತಲೂ ಹೆಚ್ಚು ಜನಪ್ರಿಯತೆ ಇದರಿಂದ ದೊರೆತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry