ಬುಧವಾರ, ನವೆಂಬರ್ 20, 2019
24 °C

ಕನಸು ಕದಿಯುವ ಯಂತ್ರ

Published:
Updated:

ಪಕ್ಕದಲ್ಲಿ ಹೆಂಡತಿ ಮಲಗಿರುವಾಗ ಸುಂದರ ಲಲನೆಯರ ಕನಸುಗಳನ್ನು ಕಾಣುತ್ತಾ ನಿದ್ದೆ ಮಾಡುವ ಗಂಡಂದಿರಿಗೆ ಹೊಸ ಗಂಡಾಂತರ ಕಾದಿದೆ!

ಕನಸುಗಳನ್ನು ಓದಬಲ್ಲ ಯಂತ್ರವೊಂದನ್ನು ಇದೇ ಮೊದಲ ಬಾರಿಗೆ ಆವಿಷ್ಕರಿಸಿರುವುದಾಗಿ ಜಪಾನ್‌ನ ವಿಜ್ಞಾನಿಗಳು ಉದ್ಘೋಷಿಸಿದ್ದಾರೆ!

ಹೌದು, ಜಗತ್ತಿನಲ್ಲಿ ಮೊದಲ ಬಾರಿಗೆ ಕನಸಗಳನ್ನು ಅರ್ಥೈಸಿಕೊಂಡು ಹೇಳಬಲ್ಲ ಯಂತ್ರ ಇದಾಗಿದೆ. ಕನಸುಗಳಲ್ಲಿ ಕಾಣುವ ವಸ್ತುಗಳನ್ನು ನಿಖರವಾಗಿ ಇದು ಗುರುತಿಸಬಲ್ಲುದಾಗಿದೆ.functional magnetic resonance imaging (FMRI)  ಎಂದು ಕರೆಯಲಾಗುವ ಈ ವಿಶಿಷ್ಟ ಯಂತ್ರವು ಮನುಷ್ಯರ ಮಿದುಳಿನಲ್ಲಿ ಉಂಟಾಗುವ ಯೋಚನೆಗಳನ್ನೂ ಓದಬಲ್ಲದು. ಮುಖ್ಯವಾಗಿ ನಿದ್ದೆಯಲ್ಲಿ ಕಾಣುವ ವಸ್ತುಗಳ ಬಿಂಬಗಳನ್ನು ಮೂಡಿಸಬಲ್ಲದು.ಜಪಾನಿನ `ಕ್ಯೂಟೊ'ದ ಅತ್ಯಾಧುನಿಕ ದೂರಸಂಪರ್ಕ ಸಂಶೋಧನಾ ಕೇಂದ್ರದ ನರಮಂಡಲ ಶಾಸ್ತ್ರ ವಿಭಾಗದ ವಿಜ್ಞಾನಿ ಯೂಕಿಯಾಸು ಕಮಿತ್ಯಾನಿ ಅವರ ನೇತೃತ್ವದಲ್ಲಿ ಈ `ಕನಸು-ನನಸು' ಯಂತ್ರವನ್ನು ರೂಪಿಸಲಾಗಿದೆ. ಈಗಾಗಲೇ ಮೂವರ ಮಿದುಳಿನ ಮೇಲೆ ಪ್ರಯೋಗಿಸಿ ಯಶಸ್ವಿ ಫಲಿತಾಂಶವನ್ನೂ ಈ ತಂಡ ಪಡೆದುಕೊಂಡಿದೆ.`ಈ ಯಂತ್ರವು ಜನರು ಕನಸಿನಲ್ಲಿ ಕಾಣುವ ಚಾಕ್ಷುಕ ದೃಶ್ಯಾವಳಿಗಳನ್ನು ಸಾಮಾನ್ಯ ಭಾಷೆಗೆ ಪರಿವರ್ತಿಸುತ್ತದೆ. ಆದರೆ, ಈ ಯಂತ್ರದ ಪ್ರಯೋಗವಿನ್ನೂ ಪ್ರಾಥಮಿಕ ಹಂತದಲ್ಲಿದೆ' ಎಂದು ಇದರ ಆವಿಷ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಯೂಕಿಯಾಸು ಕಮಿತ್ಯಾನಿ ಹೇಳುತ್ತಾರೆ.ಕಾರ್ಯ ನಿರ್ವಹಣೆ ಪರಿ

ಪ್ರಯೋಗಕ್ಕೆ ಆಯ್ದುಕೊಳ್ಳಲಾದ ಮೂವರು ವ್ಯಕ್ತಿಗಳನ್ನೂ ಮತ್ತೆ ಮತ್ತೆ ಈ ಯಂತ್ರದೊಳಗೆ ಕುಳ್ಳಿರಿಸಿ ನಿದ್ರಿಸಲು ಹೇಳಲಾಯಿತು. ಆಗ ಇವರ ಮಿದುಳಿನ ರಕ್ತ ಸಂಚಾರದಲ್ಲಿ ಆಗುವ ಬದಲಾವಣೆಗಳನ್ನು ಗ್ರಹಿಸಿದ ಈ ಯಂತ್ರ ಅವರ ಕನಸಿನಲ್ಲಿ ಕಾಣಬರುವ ವಸ್ತುಗಳನ್ನು ಅರ್ಥ ಮಾಡಿಕೊಂಡು ವಿವರಿಸಿತು. ವ್ಯಕ್ತಿಗಳನ್ನು ನಿದ್ರೆಯಿಂದೆಬ್ಬಿಸಿ ಪ್ರಶ್ನಿಸಿದಾಗ ಅವರು ಕನಸಿನಲ್ಲಿ ಕಂಡಿದ್ದಕ್ಕೂ, ಯಂತ್ರ ತೋರಿಸಿದ ಚಿತ್ರಗಳಿಗೂ ಸ್ಪಷ್ಟವಾದ ಹೋಲಿಕೆಗಳಿದ್ದವು. ಮೊದಲ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಯಿತು ಎಂದು ವಿಜ್ಞಾನಿಗಳು ಹಿರಿಹಿರಿ ಹಿಗ್ಗಿದರು.`ಕನಸುಗಳನ್ನು ಕದಿಯುವ' ಕೆಲಸ ಇದುವರೆಗೂ ಪ್ರೇಮಿಗಳಿಗಷ್ಟೇ ಸಾಧ್ಯವಾಗಿತ್ತು ಎಂದು ಕವಿಗಳು  ಕಲ್ಪಿಸಿಕೊಂಡು ಸುಂದರವಾಗಿ ಕವಿತೆಗಳ ಮೂಲಕ ಹೇಳುತ್ತಿದ್ದರು.ಈ ಕನಸುಗಳನ್ನು ಕದಿಯುವ ಕೆಲಸ ವಾಸ್ತವಕ್ಕಿಳಿದಂತಾಗಿದೆ. ಕನಸು ಅರ್ಥೈಸುವ ಯಂತ್ರದ ಮೂಲಕ ಹೊಸ ಮಾರ್ಗವೊಂದು ದೊರೆತಂತಾಗಿದೆ.

ಆದರೆ ಸುಂದರಿಯರ ಜತೆ ಲಲ್ಲಗರೆಯುತ್ತಿರುವಂತೆ ಹಗಲುಗನಸು ಕಾಣುತ್ತಾ ಕನಸಿನಲ್ಲೇ ಸುಖಿಸುತ್ತಿದ್ದ ಪುರುಷರು ಇನ್ನು ಫಜೀತಿಗೊಳಗಾಗುವ ದಿನಗಳು ದೂರವಿಲ್ಲ. ಆಗಂತೂ ಅಂತ ಪೋಲಿ ಕನಸುಗಾರರು ಪತ್ನಿಯರಿಂದ ಪೆಟ್ಟು ತಿನ್ನುವುದು, ಬದಲಾಗಿ ಕನಸು ಕದಿಯುವ ಯಂತ್ರ ಕಂಡುಹಿಡಿದ ವಿಜ್ಞಾನಿಗಳಿಗೆ ಶಾಪ ಹಾಕುವುದು ಮಾಮೂಲಾಗಲಿದೆ!ಕನಸು ಅಧ್ಯಯನದ ಇತಿಹಾಸ

ಕನಸುಗಳ ಬಗೆಗೆ ಅಧ್ಯಯನ ಮಾಡುವ ಮನುಷ್ಯನ ಹಂಬಲ ಬಲು ಪುರಾತನವಾದದ್ದು. ಪ್ರಾಚೀನ ಕಾಲದಲ್ಲೇ ಪ್ರತಿ ಕನಸಿಗೂ ಒಂದೊಂದು ಅರ್ಥವನ್ನು ನಮ್ಮ ಹಿರಿಯರು ಕಲ್ಪಿಸಿದ್ದರು. ಆದರೆ 19ನೇ ಶತಮಾನದ ಕೊನೆಯ ಹೊತ್ತಿಗೆ ಮನಶಾಸ್ತ್ರದಲ್ಲೇ ಬಹು ದೊಡ್ಡ ಕ್ರಾಂತಿ ಮಾಡಿದ್ದ ಸಿಗ್ಮಂಡ್ ಫ್ರಾಯ್ಡ, ಕನಸುಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡುವುದಕ್ಕೆ ಬುನಾದಿ ಹಾಕಿಕೊಟ್ಟಿದ್ದರು.ಕನಸುಗಳನ್ನು ವಿಶ್ಲೇಷಿಸುವುದರ ಮೂಲಕ ಅನೇಕ ಮನೋವ್ಯಾಧಿಗಳನ್ನು ಗುಣಪಡಿಸಬಹುದು ಎಂದು ಸಾರಿದ್ದರು. 1970ರ ನಂತರವಂತೂ ಕನಸುಗಳಿಗೆ ಸಂಬಂಧಿಸಿದಂತೆ ವಿವಿಧ ವಾದಗಳು ಹುಟ್ಟಿಕೊಂಡವು. ಇದೀಗ ಕನಸುಗಳನ್ನು ಓದಬಲ್ಲ ಉಪಕರಣವೊಂದು ರೂಪುಗೊಂಡಿದೆ. ಇದು ಮನಃಶಾಸ್ತ್ರೀಯ ಹಿನ್ನೆಲೆಯಲ್ಲಿ ಭಾರಿ ಮಹತ್ವ ಪಡೆಯಲಿರುವುದಂತು ದಿಟ.

ಪ್ರತಿಕ್ರಿಯಿಸಿ (+)