ಮಂಗಳವಾರ, ನವೆಂಬರ್ 19, 2019
23 °C

ಕನಸು ನನಸುಗಳ ನಡುವೆ...

Published:
Updated:
ಕನಸು ನನಸುಗಳ ನಡುವೆ...

ಅಂದು ಸಂಜೆಯೂ ತುಸು `ಕ್ರೇಜಿ'ಯಾಗಿತ್ತು. ಅಷ್ಟು ದಿನ ಬಿಸಿ ಹಬೆಯಂಥ ಗಾಳಿ ಉಗುಳುತ್ತಿದ್ದ ವಾತಾವರಣ ತುಸು ತಣ್ಣಗಾಗಿತ್ತು. ಸದಾ ಗಿಜಿಗುಡುತ್ತಿದ್ದ ಗರುಡಾಮಾಲ್‌ನ ಶಾಪಿಂಗ್ ಅಂಗಡಿಗಳು ಗಿರಾಕಿಗಳಿಲ್ಲದೆ ಭಣ ಭಣ. ಜನರಿದ್ದರೂ ಇಲ್ಲದ ಪರಿಸ್ಥಿತಿ. ಶಾಪಿಂಗ್‌ಗೆಂದು ಬಂದವರು ಅಂಗಡಿಗಳತ್ತ ಹೋಗದೆ ಕಿಕ್ಕಿರಿದು ತುಂಬಿದ್ದ ಜನಸಂದಣಿಯ ನಡುವೆ ಮುಖ ತೂರಿಸಿ ಕೇಕೆ ಹಾಕಿ ಸಂಭ್ರಮಿಸುತ್ತಿದ್ದರು. ಕಾರಣ ಹೆಚ್ಚೂಕಡಿಮೆ ಕನ್ನಡ ಚಿತ್ರರಂಗವೇ ಅಲ್ಲಿತ್ತು. ಹಳೆಯ-ಹೊಸ ತಲೆಮಾರಿನ ತಾರೆಯರನ್ನು ಕಣ್ತುಂಬಿಕೊಂಡು ಮೊಬೈಲ್‌ಫೋನ್‌ನಲ್ಲಿ ಸೆರೆಹಿಡಿಯುವ ಉತ್ಸಾಹ ಅಲ್ಲಿ ನೆರೆದಿದ್ದವರದಾದರೆ, ನಡುವೆ `ಕ್ರೇಜಿಲೋಕ'ವೇ ಸೃಷ್ಟಿಯಾಗಿತ್ತು.ಎಲ್ಲವೂ ವಿಭಿನ್ನವಾಗಿರಬೇಕೆಂದು ಬಯಸುವವರು ವಿ. ರವಿಚಂದ್ರನ್. ಅಂತೆಯೇ `ಕ್ರೇಜಿಸ್ಟಾರ್' ಚಿತ್ರದ ಹಾಡುಗಳ ಆಡಿಯೊ ಬಿಡುಗಡೆ ಸಮಾರಂಭವೂ ವಿಶಿಷ್ಟವಾಗಿತ್ತು. ಅಂದು ಅವರ ತಂದೆ ದಿ. ವೀರಸ್ವಾಮಿ ಜನ್ಮದಿನ ಸಹ. ಅವರ ಸ್ಮರಣೆಯ ಜೊತೆಜೊತೆಯಲಿ `ಕ್ರೇಜಿಸ್ಟಾರ್'ನ ಆಡಿಯೊ ಬಿಡುಗಡೆ ಮತ್ತು `ಮಂಜಿನ ಹನಿ' ಚಿತ್ರದ ಪ್ರಚಾರವೂ ಸಾಗಿತ್ತು.ಗರುಡಾಮಾಲ್‌ನ ಮೂರು ಮಹಡಿಗಳು ಸಿನಿ ಅಭಿಮಾನಿಗಳಿಂದ ಭರ್ತಿಯಾಗಿದ್ದವು. ಹಂಸಲೇಖ, ಯೋಗರಾಜ್‌ಭಟ್, ಧ್ರುವ ಸರ್ಜಾ, ಯಶ್, ಯೋಗೀಶ್, ಗಣೇಶ್, ಸುದೀಪ್, ರಮೇಶ್ ಅರವಿಂದ್, ಸೂರಿ, ಶಿವರಾಜ್‌ಕುಮಾರ್, ಹರಿಕೃಷ್ಣ ಹೀಗೆ ಖ್ಯಾತನಾಮರೊಟ್ಟಗೆ ಹಳೆ ತಲೆಮಾರಿನ ಭಗವಾನ್, ಗಂಗಪ್ಪ, ಕೆ.ಎಸ್‌ಎಲ್‌ಸ್ವಾಮಿ, ಸಿದ್ದಲಿಂಗಯ್ಯ, ಜಯಮಾಲ ಮುಂತಾದ ಘಟಾನುಘಟಿಗಳ ಉಪಸ್ಥಿತಿಯಲ್ಲಿ ಸಮಾರಂಭ ಕಳೆಕಟ್ಟಿತ್ತು.ವೀರಸ್ವಾಮಿಯವರೊಂದಿಗಿನ ಒಡನಾಟದ ನೆನಪುಗಳಿಗೆ ಅದು ವೇದಿಕೆ. ಕೆಎಸ್‌ಎಲ್ ಸ್ವಾಮಿ, ಭಗವಾನ್, ಗಂಗಪ್ಪ ಮೊದಲಾದವರು ಹಳೆಯ ದಿನಗಳಿಗೆ ಕ್ಷಣಕಾಲ ಮರಳಿದರು. `ಮ್ಯೂಜಿಶಿಯನ್ ಆಗಬೇಕಿದ್ದ ರವಿಚಂದ್ರನ್, ಮ್ಯಾಜಿಶಿಯನ್ ಆಗಿದ್ದಾನೆ' ಎಂಬ ಮೆಚ್ಚುಗೆ ಮಾತು ಕೆಎಸ್‌ಎಲ್ ಸ್ವಾಮಿ ಅವರದು.ಮಣ್ಣುರಸ್ತೆಯಲ್ಲಿ ನಡೆಯುತ್ತಿದ್ದವನನ್ನು ಟಾರ್ ರಸ್ತೆಯಲ್ಲಿ ರಾಯಲ್ ಆಗಿ ನಡೆಯುವಂತೆ ಮಾಡಿದ್ದು ರವಿಚಂದ್ರನ್ ಎಂದ ಚಿತ್ರಸಾಹಿತಿ ಹಂಸಲೇಖ, ಅವರನ್ನು `ಕನಸುಗಳ ತಿಂಡಿ ಪೋತ' ಎಂದು ಬಣ್ಣಿಸಿದರು.ರವಿಚಂದ್ರನ್ ಅವರ ಸಹಾಯಕರಾಗಿ ಕೆಲಸ ಮಾಡಿದ್ದವರು ನಿರ್ದೇಶಕ ಯೋಗರಾಜ್ ಭಟ್. ಈಗಲೂ ನನ್ನನ್ನು ನೋಡಿದ ಕೂಡಲೇ ತಲೆಯ ಮೇಲೆ ಹೊಡೆದು ಕೆಲಸ ಹೇಳುತ್ತಾರೇನೋ ಎಂಬ ಭಯ ಎಂದು ನಕ್ಕರು ಅವರು.ಇಷ್ಟು ದೊಡ್ಡ ಕೂಡು ಕುಟುಂಬ ಹೊಂದಿರುವ ಅದೃಷ್ಟವಂತ ನಾನೊಬ್ಬನೇ ಎಂಬ ಹೆಮ್ಮೆಯ ಮಾತು ರವಿಚಂದ್ರನ್ ಅವರದು. ಸಂಭ್ರಮದ ಜೊತೆಗೆ ಎಂಟು ವರ್ಷಗಳಾದರೂ `ಮಂಜಿನಹನಿ' ಸಿನಿಮಾ ಹೊರತರಲು ಸಾಧ್ಯವಾಗಿಲ್ಲ ಎಂಬ ಬೇಸರವೂ ಅವರಲ್ಲಿತ್ತು.`ಅದು ನನ್ನ ನಿಜವಾದ ಕನಸು. ಹೃದಯ ಕಲಕುವ ಚಿತ್ರವದು. ಚಿತ್ರರಂಗವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯುವ ಚಿತ್ರ `ಮಂಜಿನಹನಿ' ಎಂಬ ಆತ್ಮವಿಶ್ವಾಸವೂ ಅವರ ಮಾತಿನಲ್ಲಿ ಬೆರೆತಿತ್ತು.ಹೊರಗೆ ಕತ್ತಲು ಕವಿದಿದ್ದರೂ ತಾರೆಯರ ಸನಿಹದಲ್ಲಿ ಬೆಳಕು ಕಾಣುತ್ತಿದ್ದ ಅಭಿಮಾನಿಗಳು ಕಾರ್ಯಕ್ರಮ ಮುಗಿದೊಡನೆ ತಮ್ಮ ನೆಚ್ಚಿನ ತಾರೆಯೊಟ್ಟಿಗೆ ಛಾಯಾಚಿತ್ರ ತೆಗೆಸಿಕೊಳ್ಳಲು ಮುಗಿಬಿದ್ದರು.

ಪ್ರತಿಕ್ರಿಯಿಸಿ (+)