ಭಾನುವಾರ, ಡಿಸೆಂಬರ್ 15, 2019
21 °C

ಕನಸು ಮೂಡಿ ಲಿಂಗವಾಗಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಸು ಮೂಡಿ ಲಿಂಗವಾಗಿ...

ಪುಟಾಣಿ ಲಿಂಗ, ತೊಟ್ಟಿಲು, ಕುಂಕುಮದ ಬಟ್ಟಲು, ಪೆನ್ ಇಡಲು ಇರುವ ಚಿಕ್ಕ ಡಬ್ಬ. ಕೈಯಲ್ಲಿ ಹಿಡಿದು ನೋಡಿದರೆ ಒಂದಕ್ಕಿಂತ ಒಂದು  ಚೆಂದ. ಇಷ್ಟು ಸಣ್ಣದಾಗಿ ಇವನ್ನೆಲ್ಲಾ ಬಿದಿರಿನಿಂದ ರೂಪಿಸುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ `ಕಠಿಣ ಪ್ರಯತ್ನ~ ಎಂದು ಹೆಮ್ಮೆಯಿಂದ ಉತ್ತರಿಸುತ್ತಾರೆ ಶ್ರೀನಿವಾಸ್.ನಾನು ಕೆಎಸ್‌ಎಫ್‌ಸಿ(ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ) ಯಲ್ಲಿ ಉದ್ಯೋಗಿಯಾಗಿದ್ದೆ. ಸ್ವಯಂ ನಿವೃತ್ತಿಯಾದ ಬಳಿಕ ಕುಲ ಕಸುಬಾದ ಈ ಕುಸುರಿ ಕೆಲಸಕ್ಕೆ ಕೈ ಹಾಕಿ ಎರಡು ವರ್ಷವಾಯಿತು. ನಿವೃತ್ತಿಯ ನಂತರ ಪ್ರವೃತ್ತಿಗೇ ಮಹತ್ವ ನೀಡಿದೆ. ಈಗ ಲಿಮ್ಕಾ ದಾಖಲೆಯ ಕನಸನ್ನು ಕಾಣುತ್ತಿದ್ದೇನೆ..ಸಣ್ಣ ಕುಸುರಿ ಕೆಲಸ ಮಾಡುವುದು ತಪಸ್ಸಿನಷ್ಟೇ ಕಠಿಣ. ಧ್ಯಾನದಂತೆ ಇದನ್ನು ಮಾಡಿದೆ. ಕೆಲವು ಸಲ ವಿಫಲನಾದೆ. ಆದರೆ ಇದು ಮುಂದುವರಿಯುವ ಉತ್ಸಾಹ, ಛಲ ನೀಡುತ್ತಿತ್ತು. ಇದಾಗದು ಎಂದು ಹಿಂಜರಿಯುವಂತೆ ಮಾಡಲಿಲ್ಲ. ಹಾಗಾಗಿಯೇ ಇದೂ ತಪಸ್ಸಾಧನೆಯ ಶಕ್ತಿಯನ್ನೇ ನೀಡಿತು. ಬಿದಿರನ್ನು ಎಳೆ ಎಳೆಯಾಗಿ ಬಿಡಿಸಿ, ಕೂದಲಿನೆಳೆಗಿಂತ ಕೊಂಚ ದಪ್ಪವಾಗುವಂತೆ ಮಾಡಿ ಅವನ್ನೇ ಹೆಣೆಯಲು ಆರಂಭಿಸಿದೆ. ಒಂದು ಶಿವಲಿಂಗ ಪೂರ್ಣಗೊಳಿಸಲು ಎರಡು ವಾರ ಬೇಕು. ಆದರೆ ಪೂರ್ಣಗೊಂಡಾಗ ನೀಡುವ ಖುಷಿ ಮಾತ್ರ ಅವರ್ಣನೀಯ.ಬೆಳಗಾವಿಯಿಂದ ಬಿದಿರು ತರಿಸುವ ಇವರು ಒಂದು ಬಿದಿರಿನಿಂದ ಚಿಕ್ಕಪುಟ್ಟ ಲಿಂಗ, ತೊಟ್ಟಿಲು, ಹೀಗೆ ಅನೇಕ ಅಲಂಕಾರಿಕ ವಸ್ತುಗಳನ್ನು ಮಾಡುತ್ತಾರೆ. ಯಾವುದೇ ರೀತಿಯ ರಾಸಾಯನಿಕ ಬಣ್ಣ ಉಪಯೋಗಿಸುತ್ತಿಲ್ಲ. ಸ್ವಾಭಾವಿಕ ಬಣ್ಣ ಬಳಸಿಯೇ ತಯಾರು ಮಾಡುತ್ತಿದ್ದಾರೆ. ಅವರ ಈ ಕೆಲಸಕ್ಕೆ ಹೆಂಡತಿ- ಮಕ್ಕಳ ಸಹಕಾರವೂ ಇದೆ.ಶ್ರೀನಿವಾಸ್ ಅರಳಿಸುತ್ತಿರುವ ವಸ್ತುಗಳೆಲ್ಲಾ ಅಲಂಕಾರಿಕ. ಅವನ್ನು ಶೋಕೇಸ್‌ನಲ್ಲಿಟ್ಟರೆ ಸುಂದರವಾಗಿ ಕಾಣಿಸುತ್ತವೆ. ಇಷ್ಟು ಚಿಕ್ಕ ಅಲಂಕಾರಿಕ ವಸ್ತುಗಳನ್ನು  ರೂಪಿಸುವ ಮೂಲಕ ಲಿಮ್ಕಾ ದಾಖಲೆ ನಿರ್ಮಿಸುವುದು ಅವರ ಕನಸು. 

ಪ್ರತಿಕ್ರಿಯಿಸಿ (+)