ಶುಕ್ರವಾರ, ಜೂನ್ 18, 2021
27 °C

ಕನಿಷ್ಠ ವೆಚ್ಚದಲ್ಲಿ ಸಂತಾನ ಸಾಫಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಮಕ್ಕಳಾಗದೇ ಇರುವ ದಂಪತಿಗಳಲ್ಲಿನ ಕಾರಣಗಳನ್ನು ಗುರುತಿಸಿ ಚಿಕಿತ್ಸೆ ಕಲ್ಪಿಸುವುದು, ವೈದ್ಯಕೀಯವಾಗಿ ಗುರುತಿಸ್ಪಟ್ಟ ವಿವಿಧ ಕ್ಲಿಷ್ಟ ಕಾರಣಗಳಿಂದ ಮಕ್ಕಳಾಗದೇ ಇರುವಂಥ ದಂಪತಿಗಳಿಗೆ ಪ್ರಣಾಳ ಶಿಶು ಕೇಂದ್ರದ ಚಿಕಿತ್ಸಾ ಸೌಲಭ್ಯದ ಮೂಲಕ ಸಂತಾನ ಕಲ್ಪಿಸುವ ದಿಶೆಯಲ್ಲಿ ಸಂಕಲ್ಪ ಸಂತಾನ ಸಾಫಲ್ಯ ಮತ್ತು ಪ್ರಣಾಳ ಶಿಶು ಕೇಂದ್ರವು ಕಾರ್ಯನಿರ್ವಹಿಸುತ್ತಿದೆ ಎಂದು ಬಾಲಂಕು ಆಸ್ಪತ್ರೆ ಸಮೂಹ ಸಂಸ್ಥೆಯ ಸಂಕಲ್ಪ ಸಂತಾನ ಸಾಫಲ್ಯ ಮತ್ತು ಪ್ರಣಾಳ ಶಿಶು ಕೇಂದ್ರದ ಮುಖ್ಯಸ್ಥ ಡಾ. ಅಲ್ಲಮಪ್ರಭು ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜೆತನ ನಿವಾರಣೆ ದಿಶೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಸಂಶೋಧನೆಗಳಾಗಿವೆ. ಇಂಥ ಸಂಶೋಧನೆ ಮತ್ತು ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣ ಮೂಲಕ ಸಂಸ್ಥೆಯು ಕಾರ್ಯ ಆರಂಭಿಸಿದೆ.ಹೈದರಾಬಾದ್ ಕರ್ನಾಟಕದಲ್ಲಿ ವಿಶೇಷವಾಗಿ ರಾಯಚೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಣಾಳ ಶಿಶು ಕೇಂದ್ರ ಇದೊಂದೇ ಆಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಆರಂಭಗೊಂಡ ಕೇಂದ್ರವು ನಾಲ್ಕು ತಿಂಗಳ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದೆ ಎಂದು ಹೇಳಿದರು.ಸಂತಾನ ಸಾಫಲ್ಯ ಮತ್ತು ಪ್ರಣಾಳ ಶಿಶು ಕೇಂದ್ರಕ್ಕೆ ಬಂಜೆತನ ನಿವಾರಿಸಿಕೊಂಡು ಸಂತಾನ ಭಾಗ್ಯ ಬಯಸಿ 44 ದಂಪತಿಗಳು ನಾಲ್ಕು ತಿಂಗಳ ಅವಧಿಯಲ್ಲಿ ಭೇಟಿ ನೀಡಿ ಚಿಕಿತ್ಸೆಗೊಳಗಾಗಿದ್ದರು. ಇದರಲ್ಲಿ 24 ದಂಪತಿಗಳಿಗೆ ಸಂತಾನ ಸಾಫಲ್ಯ ಸಾಧ್ಯವಾಗಿದೆ. ಪತ್ನಿಯ ಅಂಡಾಶಯದೊಳಗೆ ಪತಿಯ ವೀರ್ಯಾಣುಗಳನ್ನು ಸೇರ್ಪಡೆ ಮಾಡುವ ವಿಧಾನ(ಐಯುಐ) ಹಾಗೂ ಅಂಡಾಶಯ ಮತ್ತು ವೀರ್ಯಾಣುಗಳನ್ನು  ಪಡೆದು ಪ್ರಣಾಳದಲ್ಲಿ ಸೇರಿಸಿ ಅದರಲ್ಲಿಯೇ ಶಿಶು ಬೆಳೆಸುವಂಥ (ಐವಿಎಫ್) ಚಿಕಿತ್ಸೆ ಮೂಲಕ ಇದು ಸಾಧ್ಯವಾಗಿದೆ ಎಂದು ವಿವರಿಸಿದರು.ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿದಂತೆ ಬೃಹತ್ ಮಹಾನಗರದಲ್ಲಿನ ಪ್ರಣಾಳ ಶಿಶು ಕೇಂದ್ರದಲ್ಲಿ ಈ ರೀತಿಯ ಚಿಕಿತ್ಸೆ ಲಭ್ಯ ಇದೆ. ಇಂಥ ಕೇಂದ್ರಗಳಲ್ಲಿ 100ಕ್ಕೆ ಶೇ 30ರಷ್ಟು ಮಾತ್ರ ಯಶಸ್ಸು. ಶೇ 50ರಷ್ಟು ಯಶಸ್ವಿ ಚಿಕಿತ್ಸೆ ವಿರಳ. ತಾವು ರಾಜ್ಯ ಮತ್ತು ಹೊರ ರಾಜ್ಯದ ಅನೇಕ ಕೇಂದ್ರಗಳಿಗೆ ಭೇಟಿ ನೀಡಿ ಪಡೆದ ಸಂದರ್ಭದಲ್ಲಿ ದೊರಕಿದ ಮಾಹಿತಿ ಇದು ಎಂದು ಹೇಳಿದರು.ಬಂಜೆತನ ನಿವಾರಣೆಗೆ ಚಿಕಿತ್ಸೆ ಕಲ್ಪಿಸಿ ಸಂತಾನ ಸಾಫಲ್ಯ ಕಲ್ಪಿಸುವ ದಿಶೆಯಲ್ಲಿ ನಾಲ್ಕು ತಿಂಗಳ ಹಿಂದೆ  ಈ ಭಾಗದಲ್ಲಿ ಆರಂಭಗೊಂಡ ಸಂಸ್ಥೆಯು ಶೇ 50ರಷ್ಟು ಯಶಸ್ಸು ಕಂಡಿರುವುದು ಕೇಂದ್ರದ ತಜ್ಞ ವೈದ್ಯರ ತಂಡದ ಪ್ರಯತ್ನವೇ ಕಾರಣವಾಗಿದೆ ಎಂದರು.ಒಟ್ಟು 75 ಲಕ್ಷ ಮೊತ್ತದ ಯಂತ್ರೋಪಕರಣಗಳನ್ನು ಸಂಕಲ್ಪ ಸಂತಾನ ಸಾಫಲ್ಯ ಪ್ರಣಾಳ ಶಿಶು ಕೇಂದ್ರವು ಹೊಂದಿದೆ. ನಾಲ್ಕು ತಿಂಗಳಲ್ಲಿ 24 ದಂಪತಿಗಳಿಗೆ ಮಕ್ಕಳಾಗುವ ಭಾಗ್ಯ ದೊರಕಿದೆ. ಈ 24 ದಂಪತಿಗಳಲ್ಲಿ 8 ದಂಪತಿಗಳು ಬೇರೆ ಕಡೆ ಚಿಕಿತ್ಸೆ ಪಡೆದ ಸಂದರ್ಭದಲ್ಲಿ ಮಕ್ಕಳಾಗುವ ಭಾಗ್ಯವಿಲ್ಲ ಎಂದು ಹೇಳಿದ್ದರಂತೆ. ಇಲ್ಲಿ ಚಿಕಿತ್ಸೆ ಪಡೆದ ಬಳಿಕ ಅವರಿಗೂ ಸಂತಾನ ಸಾಫಲ್ಯ ಸಾಧ್ಯವಾಗಿದೆ ಎಂದು ವಿವರಿಸಿದರು.ಮಹಾನಗರಗಳಲ್ಲಿನ ಪ್ರಣಾಳ ಶಿಶುಕೇಂದ್ರದಲ್ಲಿ ಪ್ರಣಾಳ ಶಿಶು ಚಿಕಿತ್ಸೆಗೆ(ಐವಿಎಫ್) ಸುಮಾರು 2 ಲಕ್ಷ ವೆಚ್ಚ ಆಗುತ್ತದೆ. ಆದರೆ ತಮ್ಮ ಕೇಂದ್ರವು 75 ಸಾವಿರದಲ್ಲಿ ಈ ಚಿಕಿತ್ಸೆ ಸೌಲಭ್ಯ ಕಲ್ಪಿಸುತ್ತಿದೆ. ಐಯುಐ ಚಿಕಿತ್ಸೆಗೆ 15ರಿಂದ 20 ಸಾವಿರ ವೆಚ್ಚ ಆಗಲಿದೆ. ಈ ಚಿಕಿತ್ಸೆ ನೀಡುವಲ್ಲಿ ಕೇಂದ್ರವು ಹೆಚ್ಚಿನ ಲಾಭದ ನಿರೀಕ್ಷೆ ಹೊಂದಿಲ್ಲ ಎಂದು ತಿಳಿಸಿದರು.ಬೆಂಗಳೂರು, ಕರ್ನೂಲ್, ರಾಯಚೂರು ಜಿಲ್ಲೆ ಸುತ್ತಮುತ್ತಲಿನ ಭಾಗ, ಆಂಧ್ರಪ್ರದೇಶದ ವಿವಿಧ ಭಾಗದ ದಂಪತಿಗಳು ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದರು.ಬಂಜೆತನ ನಿವಾರಣೆ, ಪ್ರಣಾಳ ಶಿಶು ಕೇಂದ್ರದಲ್ಲಿ ಚಿಕಿತ್ಸಾ ವಿಧಾನದ, ಈ ಕ್ಷೇತ್ರದಲ್ಲಿನ ಸಂಶೋಧನ ಅಧ್ಯಯನ ಕುರಿತು ಆಸ್ಟ್ರೇಲಿಯಾದಲ್ಲಿ ಆಧ್ಯಯನ ಮತ್ತು ತರಬೇತಿ ಪಡೆದಿರುವುದಾಗಿ ಹೇಳಿದರು.ಸಂಕಲ್ಪ ಸಂತಾನ ಸಾಫಲ್ಯ ಮತ್ತು ಪ್ರಣಾಳ ಶಿಶು  ಕೇಂದ್ರ ಸ್ಥಾಪನೆಗೆ ಪ್ರೋತ್ಸಾಹಿಸಿದವರು ಬಾಲಂಕ ಆಸ್ಪತ್ರೆ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಡಾ.ಶ್ರೀಧರ. ಡಾ.ಚಂದ್ರಿಕಾ, ಡಾ.ಅರವಿಂದಾ ಎಸ್ ಬಾಬು, ಅರಿವಳಿಕೆ ತಜ್ಞರಾದ ಡಾ.ಮಲ್ಲಿಕಾರ್ಜುನ  ಪಾಟೀಲ್ ಹಾಗೂ ಆಸ್ಪತ್ರೆ ಸಿಬ್ಬಂದಿ ವರ್ಗದ ಸಹಕಾರದಿಂದ 4 ತಿಂಗಳ ಅವಧಿಯಲ್ಲಿ ಕೇಂದ್ರವು ನಿರೀಕ್ಷೆ ಮೀರಿ ಮಾಡಿದ ಸಾಧನೆಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು. ಡಾ.ವಿ ಶ್ರೀಧರರೆಡ್ಡಿ, ಡಾ.ಚಂದ್ರಿಕಾ, ಡಾ.ಅರವಿಂದಾ ಎಸ್ ಬಾಬು, ಡಾ.ಮಲ್ಲಿಕಾರ್ಜುನ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.