ಶುಕ್ರವಾರ, ಮಾರ್ಚ್ 5, 2021
27 °C

ಕನಿಷ್ಠ ವೇತನ: ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಿಷ್ಠ ವೇತನ: ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಧರಣಿ

ಬೆಂಗಳೂರು: ಸರ್ಕಾರ ನಿಗದಿಪಡಿಸಿರುವ ಪ್ರಮಾಣದಲ್ಲಿ ಕನಿಷ್ಠ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆ ಪೌರ ಕಾರ್ಮಿಕರ ಸಂಘದ ಸದಸ್ಯರು ನಗರದಲ್ಲಿ ಶುಕ್ರವಾರ ಸಾಂಕೇತಿಕ ಧರಣಿ ನಡೆಸಿದರು.ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಧರಣಿ ಮಾಡಿದ ಸಂಘದ ಸದಸ್ಯರು, `ಪೌರ ಕಾರ್ಮಿಕರಿಗೆ ಮಾಸಿಕ 7,300 ರೂಪಾಯಿ ವೇತನ ನೀಡಬೇಕೆಂದು ಸರ್ಕಾರ 2011ರ ಫೆಬ್ರುವರಿಯಲ್ಲೇ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪಾಲಿಸದ ತ್ಯಾಜ್ಯ ವಿಲೇವಾರಿ ಕಾಮಗಾರಿಯ ಗುತ್ತಿಗೆದಾರರು, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಪೌರ ಕಾರ್ಮಿಕರನ್ನು ಶೋಷಿಸುತ್ತಿದ್ದಾರೆ~ ಎಂದು ದೂರಿದರು.`ನಗರದಲ್ಲಿ ಸುಮಾರು 13 ಸಾವಿರ ಗುತ್ತಿಗೆ ಪೌರ ಕಾರ್ಮಿಕರಿದ್ದು, ಇವರಿಗೆ ಮಾಸಿಕ 2,300 ರೂಪಾಯಿ ವೇತನ ನೀಡಲಾಗುತ್ತಿದೆ. ಪ್ರತಿ ತಿಂಗಳ ಏಳನೇ ತಾರೀಖಿನೊಳಗೆ ವೇತನ ನೀಡಬೇಕೆಂಬ ನಿಯಮವಿದ್ದರೂ ತಿಂಗಳ ಕೊನೆಯಲ್ಲಿ ಎರಡು ಕಂತುಗಳಲ್ಲಿ ವೇತನ ಪಾವತಿಸಲಾಗುತ್ತಿದೆ. ವೇತನ ಕಡಿಮೆ ಇರುವುದರಿಂದ ಮತ್ತು ಸಕಾಲಕ್ಕೆ ಪಾವತಿಯಾಗದಿರುವುದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ~ ಎಂದು ಸಂಘದ ಅಧ್ಯಕ್ಷ ಎಸ್.ಬಾಲನ್ ಹೇಳಿದರು.ಘನ ತ್ಯಾಜ್ಯ ಮಾರಾಟದಿಂದ ಪಾಲಿಕೆಗೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ಆದರೆ, ಕಾರ್ಮಿಕರಿಗೆ ಕಡಿಮೆ ವೇತನ ನೀಡಲಾಗುತ್ತಿದೆ. ಕಾರ್ಮಿಕರು ಅನಾರೋಗ್ಯದಿಂದ ಬಳಲುತ್ತಿದ್ದರೂ ಅವರಿಗೆ ರಜೆ ನೀಡುತ್ತಿಲ್ಲ. ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದರೂ, ಗೈರು ಹಾಜರು ಎಂದು ಗುತ್ತಿಗೆದಾರರು ಸುಳ್ಳು ಮಾಹಿತಿ ನೀಡಿ ವೇತನದಲ್ಲಿ ವಂಚನೆ ಮಾಡುತ್ತಿದ್ದಾರೆ ಎಂದರು.ಪೌರಾಡಳಿತ ಕಾಯ್ದೆ ಪ್ರಕಾರ ಪೌರ ಕಾರ್ಮಿಕರಿಗೆ ಶೂ, ಕೈಗವುಸು, ಸೋಪು, ಪೊರಕೆ, ಸಮವಸ್ತ್ರ ನೀಡಬೇಕು, ಆದರೆ ಈ ಪರಿಕರಗಳನ್ನು ನೀಡುತ್ತಿಲ್ಲ. ಇದರಿಂದ ಕಾರ್ಯ ನಿರ್ವಹಣೆಗೆ ತೊಂದರೆಯಾಗುತ್ತಿದ್ದು, ಕಾರ್ಮಿಕರು ಚರ್ಮ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇಡೀ ನಗರವನ್ನು ಶುಚಿಗೊಳಿಸುವ ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ನಾಗರಿಕ ಸಮಾಜವು ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದರು.ಮಾಜಿ ಸಚಿವೆ ಪ್ರೊ.ಬಿ.ಟಿ.ಲಲಿತಾನಾಯಕ್, `ಪೌರ ಕಾರ್ಮಿಕರ ವಿಷಯದಲ್ಲಿ ಸರ್ಕಾರ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡುವ ಸರ್ಕಾರ, ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ~ ಎಂದರು.`ಪೌರ ಕಾರ್ಮಿಕರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಅವರ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಈ ಶೋಷಿತ ವರ್ಗದ ಹಿತ ಕಾಯುವಲ್ಲಿ ವಿಫಲವಾಗಿರುವ ಸರ್ಕಾರಕ್ಕೆ, ಶೋಷಿತರ ಏಳಿಗೆಗೆ ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸುವ ನೈತಿಕ ಹಕ್ಕಿಲ್ಲ~ ಎಂದು ಚಿಂತಕ ಡಾ.ಸಿ.ಎಸ್.ದ್ವಾರಕನಾಥ್ ಹೇಳಿದರು.ಧರಣಿನಿರತರನ್ನು ಭೇಟಿ ಮಾಡಿದ ಪಾಲಿಕೆ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ, `ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಸರ್ಕಾರದ ಆದೇಶದಂತೆ ಕಾರ್ಮಿಕರಿಗೆ ಮಾಸಿಕ 7,300 ರೂಪಾಯಿ ವೇತನ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಗುತ್ತಿಗೆದಾರರಿಂದ ಕಾರ್ಮಿಕರ ಮೇಲೆ ನಡೆಯುತ್ತಿರುವ ಶೋಷಣೆ ತಪ್ಪಿಸಲು ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಕಾರ್ಮಿಕರಿಗೆ ಪಾಲಿಕೆಯಿಂದಲೇ ವೇತನ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ~ ಎಂದು ಭರವಸೆ ನೀಡಿದರು.ಪೌರ ಕಾರ್ಮಿಕರ ಸಮಸ್ಯೆಗಳ ಕುರಿತು ಪ್ರಜಾತಾಂತ್ರಿಕ ಜನರ ವೇದಿಕೆಯು ಹೊರತಂದಿರುವ `ಕಸವಾಗಿರುವ ಕಸ ಗುಡಿಸುವವರ ಬದುಕು~ ಕಿರು ಹೊತ್ತಿಗೆಯನ್ನು ಚಿಂತಕ ಜಿ.ರಾಮಕೃಷ್ಣ ಅವರು ಧರಣಿಯಲ್ಲಿ ಬಿಡುಗಡೆ ಮಾಡಿದರು.ಪ್ರತಿಕ್ರಿಯೆಗಳು: `ಗಂಡ ಮತ್ತು ನಾನು ಸುಮಾರು 15 ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇವೆ. ಇಬ್ಬರೂ ದುಡಿದರೂ ವೇತನ ಕಡಿಮೆ ಇರುವುದರಿಂದ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ. ಮಕ್ಕಳನ್ನು ಓದಿಸಲು ಸಹ ಸಾಧ್ಯವಾಗುತ್ತಿಲ್ಲ. ಮನೆ ಬಾಡಿಗೆ ಕಟ್ಟಲು ಹಣ ಇಲ್ಲದಿರುವುದರಿಂದ ಸುಮನಹಳ್ಳಿ ಸಮೀಪ ಗುಡಿಸಲು ಹಾಕಿಕೊಂಡು ವಾಸವಾಗಿದ್ದೇವೆ~ಅಂಜನಮ್ಮ, ಪೌರ ಕಾರ್ಮಿಕರು`ಪಾಲಿಕೆ ಅಧಿಕಾರಿಗಳು, ಸದಸ್ಯರು ಹಾಗೂ ಗುತ್ತಿಗೆದಾರರು ರಕ್ತಪೀಪಾಸುಗಳಂತೆ ವರ್ತಿಸುತ್ತಿದ್ದಾರೆ. ಅವರ ವಿರುದ್ಧ ಧ್ವನಿ ಎತ್ತಿದರೆ ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕುತ್ತಾರೆ. ಅನಾರೋಗ್ಯದಿಂದ ನರಳುತ್ತಿದ್ದರೂ ರಜೆ ನೀಡದ ಗುತ್ತಿಗೆದಾರರು, ನಮ್ಮನ್ನು ಪಶುಗಳಂತೆ ನಡೆಸಿಕೊಳ್ಳುತ್ತಿದ್ದಾರೆ~

ಇಮ್ಯಾನ್ಯುಯಲ್, ಪೌರ ಕಾರ್ಮಿಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.