ಕನ್ನಂಬಾಡಿ ಅಣೆಕಟ್ಟು ನಿರ್ಮಾತೃ ಎಂ.ವಿ. ಅಲ್ಲ

ಬುಧವಾರ, ಜೂಲೈ 24, 2019
22 °C

ಕನ್ನಂಬಾಡಿ ಅಣೆಕಟ್ಟು ನಿರ್ಮಾತೃ ಎಂ.ವಿ. ಅಲ್ಲ

Published:
Updated:

ಕುಷ್ಟಗಿ: `ಮೀಸಲಾತಿ ಕಲ್ಪಿಸದೇ ಸಾಮಾಜಿಕ ನ್ಯಾಯ ನೀಡಲು ಸಾಧ್ಯವಿಲ್ಲ ಎಂದು ಮೊಟ್ಟಮೊದಲ ಬಾರಿಗೆ ಮೀಸಲಾತಿಯನ್ನು ಪ್ರತಿಪಾದಿಸಿದವರು ಮೈಸೂರಿನ ನಾಲ್ಮಡಿ ಕೃಷ್ಣರಾಜರು~ ಎಂದು ರಾಜ್ಯ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ರಾಮಯ್ಯ ಹೇಳಿದರು.ರಾಜ್ಯ ಕಸಾಪ ವತಿಯಿಂದ ಈಚೆಗೆ ಇಲ್ಲಿ ನಡೆದ `ಕನ್ನಡ ಸಂಶೋಧನಾ ಕಮ್ಮಟ~ ಉದ್ಘಾಟಿಸಿ ಮಾತನಾಡಿದ ಅವರು, ಪ್ರಭುತ್ವಕ್ಕೆ ವಿರುದ್ಧವಾಗಿ ಪ್ರಜಾಪ್ರಭುತ್ವವನ್ನು ಬೆಳೆಸಿದಂಥ ವ್ಯಕ್ತಿ `ತಿರುಚುವಿಕೆ~ಯಿಂದಾಗಿ ಚರಿತ್ರೆಯಲ್ಲಿ ಕಳೆದುಹೋಗಿರುವುದು ದೊಡ್ಡ ದುರಂತ, ಅಷ್ಟೇ ಅಲ್ಲ ಅವರ ಜನ್ಮಶತಮಾನೋತ್ಸವವೂ ಸರ್ಕಾರದ ಗಮನಕ್ಕೆ ಬರಲಿಲ್ಲ ಎಂದು ವಿಷಾದಿಸಿದರು.ವಿಶ್ವೇಶ್ವರಯ್ಯನವರು ಪ್ರತಿಭೆಗೆ ಮಾತ್ರ ಅವಕಾಶವೆಂದು ಮೀಸಲಾತಿ ವಿರೋಧಿಸಿದರೆ, `ಮೀಸಲಾತಿ ಸಾಮಾಜಿಕ ನ್ಯಾಯದ ತಳಹದಿ~ ಎಂದೆ ನಾಲ್ಮಡಿ ಕೃಷ್ಞರಾಜರು ಪ್ರತಿಪಾದಿಸಿರು. ಆದರೆ ಮಾಧ್ಯಮಗಳು ಕೆಲವರ ಹಿಡಿತದಲ್ಲಿದ್ದುದರಿಂದ ಚರಿತ್ರೆಯಯಲ್ಲಿ ನಾಲ್ಮಡಿ ಕೃಷ್ಣರಾಜರು ಹೇಳ ಹೆಸರಿಲ್ಲದಂತಾದರು ಎಂದರು.`ಕನ್ನಂಬಾಡಿ ಅಣೆಕಟ್ಟು ನಿರ್ಮಿಸಿದವರು ಸರ್.ಎಂ. ವಿಶ್ವೇಶ್ವರಯ್ಯ ಎಂದೇ ಹೇಳಿಕೊಂಡು ಬಂದಿದ್ದೇವೆ. ಆದರೆ ನಿರ್ಮಾಣದ ಪರಿಕಲ್ಪನೆ ಸರ್.ಎಂ.ವಿ ಅವರದ್ದಲ್ಲ ಎಂದ ಸಿದ್ರಾಮಯ್ಯ, ಮೈಸೂರು ಸಂಸ್ಥಾನ ಬರದಿಂದ ನರಳುತ್ತಿದ್ದರೂ ಪಕ್ಕದಲ್ಲಿ ವ್ಯರ್ಥವಾಗಿ ಹರಿಯುತ್ತಿದ್ದ ಕಾವೇರಿ ನದಿ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

 

ಆ ಸಂದರ್ಭದಲ್ಲಿ ಲಂಡನ್‌ನಿಂದ ಆಗಮಿಸಿದ್ದ ನಾಲ್ಮಡಿ ಕೃಷ್ಣರಾಜರ ಸಹೋದರನ ದೂರದೃಷ್ಟಿಯ ಫಲದಿಂದ ಕನ್ನಂಬಾಡಿ ನಿರ್ಮಾಣವಾಯಿತು. ಬಾಂಬೆ ಪ್ರಾಂತ್ಯದಲ್ಲಿ ಎಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯ ಅವರನ್ನು ಕರೆಯಿಸಿ ನಂತರ ಅವರಿಗೆ ನಿರ್ಮಾಣದ ಹೊಣೆ ವಹಿಸಲಾಯಿತು ಎಂಬುದು ಚರಿತ್ರೆಯ ಪುಟದಲ್ಲಿ ದಾಖಲಾಗಲಿಲ್ಲ~ ಎಂದರು.ಸತ್ಯಾನ್ವೇಷಣೆ ಮಾಡಲು ಹೊರಟ ಸಂಶೋಧಕರಿಗೆ ಸತ್ಯ ಹೇಳಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದ ಸಿದ್ರಾಮಯ್ಯ, ಒಂದು ಸಂದರ್ಭದಲ್ಲಿ ಟಿಪ್ಪುಸುಲ್ತಾನ ಕನ್ನಡದ ದ್ರೋಹಿ, ಪ್ರೇಮಿ ಎಂಬುದರ ಜಿಜ್ಞಾಸೆಯಲ್ಲಿ ಹೆಸರಾಂತ ಸಂಶೋಧಕ ಕಲ್ಬುರ್ಗಿಯಂಥವರೇ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿದರು. ಆದರೆ ಜನಪದದಲ್ಲಿ ಮಾತ್ರ ಜನವಿರೋಧಿಯಾದವನ್ನು ಸ್ಮರಿಸುವುದಿಲ್ಲ ಜನಮುಖಿಯಾದವನನ್ನು ಮರೆಯುವುದಿಲ್ಲ ಎಂಬ ಅಂಶ ಗಮನಾರ್ಹ ಎಂದರು.ದೊಡ್ಡವರು ಬರೆದರು ಎಂದಾಕ್ಷಣ ಎಲ್ಲವನ್ನೂ ಒಪ್ಪಿಕೊಳ್ಳುವ ಮನೋಧರ್ಮದಿಂದ ಸಂಶೋಧಕರು ಹೊರಬಂದು ಚರಿತ್ರೆಯನ್ನು ಪ್ರಶ್ನಿಸುವ ಮೂಲಕ ಸಂಶೋಧನೆಗೆ ಹೊಸ ಆಯಾಮ ನೀಡಬೇಕಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry