ಬುಧವಾರ, ನವೆಂಬರ್ 20, 2019
20 °C

ಕನ್ನಂಬಾಡಿ ಕಟ್ಟೆ ಕಟ್ಟಿದವರ ಮೇಲಿರಲಿ ಕರುಣೆ

Published:
Updated:

ಒಂದು ಕಾಲದಲ್ಲಿ ಮನೆ-ಮಠ, ಆಸ್ತಿ-ಪಾಸ್ತಿ, ಊರುಗಳನ್ನು ತೊರೆದು ಕನ್ನಂಬಾಡಿ ಕಟ್ಟೆ ಕಟ್ಟಲು ಬಂದು ಅಲ್ಲಿಯೇ ನೆಲೆ ನಿಂತವರ ಬದುಕೀಗ ಗಾಳಿಗೊಡ್ಡಿದ ದೀಪದಂತೆ ತಲ್ಲಣಗೊಂಡಿದೆ. (ಮೇ  26ರ ಪ್ರವಾ ವರದಿ ಕೆಆರ್‌ಎಸ್‌ನ ಸರ್ಕಾರಿ ಜಾಗದ ಅತಿಕ್ರಮಣದ ಬಗ್ಗೆ ಸರ್ವೆ ಕಾರ್ಯ ನಡೆಯುತ್ತಿದೆ.) ಕೆ.ಆರ್.ಎಸ್. ಸುತ್ತಮುತ್ತಲಿನ ಸರ್ವೆ ನಂ. 175, 194, 195, 198, 291 ಗಳಲ್ಲಿ ಸುಮಾರು 500 ಎಕರೆಗಳಷ್ಟು ಸರ್ಕಾರದ ಆಸ್ತಿ ಅತಿಕ್ರಮಣವಾಗಿದ್ದು ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ತೆರವುಗೊಳಿಸಲು ಸರ್ವೆಕಾರ್ಯ ನಡೆಯುತ್ತಿದೆಯೆಂದು ಸ್ವತಃ ಶ್ರೀರಂಗಪಟ್ಟಣ ತಾಲ್ಲೂಕು ತಹಶೀಲ್ದಾರ್ ಮತ್ತು ಪಾಂಡವಪುರ ಉಪವಿಭಾಗಾಧಿಕಾರಿಗಳು ಹೇಳಿರುತ್ತಾರೆ. ಆದರೆ ಇಲ್ಲಿ ಗಂಭೀರವಾಗಿ ಗಮನಿಸಬೇಕಾದ ಕೆಲವೊಂದು ಅಂಶಗಳಿವೆ. 1911 ರಲ್ಲಿ ಇಂದಿನ  `ಕನ್ನಂಬಾಡಿ ಕಟ್ಟೆ~ ಪ್ರಾರಂಭಿಕ ಕೆಲಸ ಕಾರ್ಯಗಳು ಆರಂಭಗೊಂಡಾಗ ಈ ಕಟ್ಟೆಯನ್ನು ಕಲ್ಲಿನಿಂದಲೇ ಕಟ್ಟಬೇಕಾದ್ದರಿಂದ ಸರ್ ಎಂ.ವಿ. ವಿಶ್ವೇಶ್ವರಯ್ಯನವರ ಸಲಹೆ ಮೇರೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ತಮಿಳುನಾಡು ಮತ್ತು ಆಂಧ್ರಪ್ರದೇಶದ (ಬೋವಿ ಮತ್ತು ಮಾದಿಗ) ಜನಾಂಗಕ್ಕೆ ಸೇರಿದ ಶ್ರಮಜೀವಿಗಳ ವರ್ಗವನ್ನು ಕಲ್ಲು ಹೊಡೆಯುವ ಮತ್ತು ಕಟ್ಟೆ ಕಟ್ಟುವ ಉದ್ದೇಶದಿಂದ ಕರೆತರುತ್ತಾರೆ. ಬಂದವರು ಆಸರೆಗಾಗಿ ನಿರ್ಜನ ಪ್ರದೇಶವಾಗಿದ್ದ ಕೆ.ಆರ್.ಎಸ್.ನಲ್ಲಿ ಗುಡಿಸಲು ಕಟ್ಟಿಕೊಂಡು ತಮ್ಮ ಮಕ್ಕಳನ್ನು ಸಾಕಿಕೊಂಡು, ಹೊಟ್ಟೆಪಾಡಿಗಾಗಿ ಬೆವರು ಬಸಿದು ಕನ್ನಂಬಾಡಿ ಕಟ್ಟೆಯ ಕಾರ್ಯಕ್ಕೆ  ತಮ್ಮನ್ನು ತಾವು ಅರ್ಪಿಸಿಕೊಂಡು ಅನೇಕಾನೇಕ ಸಮಸ್ಯೆ, ಸಾವು-ನೋವುಗಳ ನಡುವೆ ಅಣೆ ಕಟ್ಟೆಯನ್ನು ನಿರ್ಮಾಣ ಮಾಡಿದರು.ಬರಡಾದ ಭೂಮಿಯಲ್ಲಿ ಕಾವೇರಿ ಮೈದುಂಬಿ ಹರಿದು ಹೊಲಗದ್ದೆ ತೋಟಗಳು ಕಂಗೊಳಿಸಲು ಕಾರಣಕರ್ತರಾದ ದಲಿತರ ಬಾಳೀಗ ದೀಪದ ಬುಡದಲ್ಲಿ ಕತ್ತಲಾಗಿದಂತಾಗಿದೆ. ತೆರವು ಕಾರ್ಯಾಚರಣೆ ಆರಂಭಗೊಂಡರೆ ಸಾವಿರಾರು ಮಂದಿ ಬಡವರು ಸೂರು ಕಳೆದುಕೊಳ್ಳುವ ಅಪಾಯವಿದೆ. ಈ ನಿಟ್ಟಿನಲ್ಲಿ ಸಮಾಜ ಮತ್ತು ಸರ್ಕಾರ ಮಾನವೀಯತೆ ದೃಷ್ಟಿಯಿಂದ ಮೇಲೆ ತಿಳಿಸಿರುವ ಸರ್ವೆ ನಂಬರುಗಳ ಪೈಕಿ ಒಂದು ವೇಳೆ ಈ ಬಡಬಗ್ಗರ ಮನೆಗಳು ಬಂದರೆ ದಯಮಾಡಿ ಅಣೆಕಟ್ಟೆ ಕಟ್ಟಿದ ಸಾವಿರಾರು ಕುಟುಂಬಗಳು ಬೀದಿಪಾಲಾಗುವುದನ್ನು ತಪ್ಪಿಸಬೇಕಿದೆ. ಐದಾರು ದಶಕಗಳಿಂದ ಈ ಮಣ್ಣಿನ ವಾಸನೆಗೆ ಅಂಟಿಕೊಂಡಿರುವ ಜೀವಗಳಿಗೆ ಸ್ಪಂದಿಸಬೇಕಾಗಿದೆ.

ಪ್ರತಿಕ್ರಿಯಿಸಿ (+)