ಕನ್ನಡಕ್ಕೆ ಕಾಯಕಲ್ಪ: ಜಿ.ವೆಂ ಕಹಳೆ

7

ಕನ್ನಡಕ್ಕೆ ಕಾಯಕಲ್ಪ: ಜಿ.ವೆಂ ಕಹಳೆ

Published:
Updated:

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ (ಬೆಂಗಳೂರು): ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕನ್ನಡ ಬೋಧನೆಗೆ ಅರ್ಹರಾದ ಶಿಕ್ಷಕರನ್ನು ಪ್ರತಿ ವರ್ಷ ಕನಿಷ್ಠ ಒಂದು ಸಾವಿರ ಮಂದಿಯಂತೆ ಸಿದ್ಧಗೊಳಿಸಬೇಕು ಎಂದು ಎಪ್ಪತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಗಂಜಾಂ ವೆಂಕಟಸುಬ್ಬಯ್ಯ ಅವರು ಶುಕ್ರವಾರ ಇಲ್ಲಿ ಸರ್ಕಾರಕ್ಕೆ ಸಲಹೆ ಮಾಡಿದರು.ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಭಾಷಣ ಮಾಡಿದ 98ರ ಪ್ರಾಯದ ಹಿರಿಯ ನಿಘಂಟು ತಜ್ಞ ಜಿ.ವಿ. ಅವರು ಕನ್ನಡಪರ ಚಿಂತನೆಯನ್ನು ಮಂಡಿಸಿದರು.ಜಾಗತೀಕರಣದಿಂದಾಗಿ ಕನ್ನಡ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಹಿನ್ನೆಲೆಯಲ್ಲಿ ಕನ್ನಡದ ರಕ್ಷಣೆ ಮತ್ತು ಬೆಳವಣಿಗೆಗಾಗಿ ಸರ್ಕಾರದ ಜತೆಯಲ್ಲಿ ಪರಿಷತ್ತು ಮತ್ತು ಕನ್ನಡಿಗರು ಕೈಗೊಳ್ಳಬೇಕಾದ ಹತ್ತು ಹಲವು ಭಾಷಿಕ ಪರಿಹಾರ ಕ್ರಮಗಳನ್ನು ಸೂಚಿಸಿದರು.‘ಸ್ವಂತ ಭಾಷೆಯ ರಕ್ಷಣೆಗೆ ಚೀನಾದವರು ಅಮೆರಿಕದಲ್ಲಿ ಅನುಸರಿಸುತ್ತಿರುವ ಮಾದರಿ ಹಾಗೂ ತಮಿಳುನಾಡಿನ ಎಲ್ಲ ಶಾಲೆಗಳಲ್ಲಿ ಎಲ್ಲ ಭಾಷೆಯ ಮಕ್ಕಳಿಗೆ ಪ್ರಥಮ ಭಾಷೆಯಾಗಿ ತಮಿಳು ಕಲಿಕೆಯನ್ನು ಜಾರಿಗೊಳಿಸಿರುವ ರೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡ ಕಲಿಕೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.‘ಕನ್ನಡ ಭಾಷೆ ಈಗ ನಿಜವಾಗಿ ಕಷ್ಟಕ್ಕೆ ಸಿಕ್ಕಿದೆ. ಅದರ ಮೇಲೆ ಇಂಗ್ಲಿಷಿನಂಥ ಕೊಲೆಗಡುಕ ಭಾಷೆಯ ಕಣ್ಣು ಬಿದ್ದಿದೆ. ಜಾಗತೀಕರಣದ ಪರಿಣಾಮವಾಗಿ ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳಲ್ಲಿಯೂ ಇಂಗ್ಲಿಷ್ ನುಗ್ಗುತ್ತಾ ಇದೆ. ನಮ್ಮ ಶಿಕ್ಷಣ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಪರದೇಶಗಳ ಬೋಧನ ಪದ್ಧತಿಗಳನ್ನು ಆಮದು ಮಾಡುತ್ತಾ ಸ್ವಂತಿಕೆಯನ್ನು ಶಿಕ್ಷಕರು ಕಳೆದುಕೊಳ್ಳುತ್ತಿದ್ದಾರೆ. ಶಿಕ್ಷಣದಲ್ಲಿ ಕನ್ನಡವನ್ನು ಉಳಿಸಿಕೊಳ್ಳಲಾರದೆ ಹೋದರೆ ಅಪಾಯ ತಪ್ಪಿದ್ದಲ್ಲ. ಇದನ್ನು ಎಷ್ಟು ಒತ್ತಿ ಹೇಳಿದರೂ ಸಾಲದಾಗಿದೆ’ ಎಂದು ಅವರು ಹೇಳಿದರು.‘ಇಂಗ್ಲಿಷ್‌ನ ಆಕ್ರಮಣದಿಂದ ನಗರ ಪ್ರದೇಶಗಳಲ್ಲಿ ಕನ್ನಡದ ಪ್ರಯೋಗ ಕಡಿಮೆಯಾಗುತ್ತಾ ಇದೆ. ಈ ಸ್ಥಿತಿಯನ್ನು ಒಂದು ಜನಾಂದೋಳನದ ಮೂಲಕ ಬದಲಾವಣೆ ಮಾಡಬೇಕು. ಇಲ್ಲದಿದ್ದರೆ ಕನ್ನಡವು ಎರಡನೆಯ ಸ್ಥಾನಕ್ಕೆ ಹೋಗುವ ಅಪಾಯವಿದೆ. ಇಂಗ್ಲಿಷ್ ಭಾಷೆಯೇ ಪ್ರಧಾನವಾಗಿ ಬೆಳೆಯುತ್ತಿರುವ ಎಲ್ಲ ದೇಶಗಳಲ್ಲಿಯೂ ಈ ಹೆದರಿಕೆ ಇದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.‘ಕನ್ನಡವು ಸಾಯುತ್ತದೆ ಎಂಬ ಮಾತನ್ನು ಯಾರೂ ಆಡಬಾರದು. ಭಾಷಾಶಾಸ್ತ್ರಿಗಳು ತಯಾರು ಮಾಡಿರುವ ಅಂಕಿ ಅಂಶಗಳಲ್ಲಿ ಪ್ರಪಂಚದ ಪ್ರಾಚೀನ ಪ್ರಸಿದ್ಧ ಸಮೃದ್ಧ ಭಾಷೆಗಳ ಪಟ್ಟಿಯೊಂದು ಇದೆ. ಅಂಥ ಆರು ಸಾವಿರ ಭಾಷೆಗಳ ಪಟ್ಟಿಯಲ್ಲಿ ಕನ್ನಡವು ಮೊದಲ ಮೂವತ್ತು ಭಾಷೆಗಳಲ್ಲಿ ಒಂದಾಗಿದೆ. ಅದು ಸಾಯುವ ಭಾಷೆಯಲ್ಲ. ಚಂದ್ರ ಸೂರ್ಯರಿರುವ ತನಕ ಬಾಳುವ ಬೆಳೆಯುವ ಭಾಷೆ’ ಎಂದು ಅವರು ಅಭಿಮಾನದಿಂದ ನುಡಿದರು.‘ಕನ್ನಡ ಸಾಯುವುದಿಲ್ಲ ಎಂಬುದು ನಿಜ. ಆದರೆ ಕರ್ನಾಟಕದಲ್ಲಿ ಅದು ತನ್ನ ಪ್ರಥಮ ಸ್ಥಾನವನ್ನು ಎಂದೂ ಕಳೆದುಕೊಳ್ಳಬಾರದು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಅದನ್ನು ಸ್ಥಿರವಾಗಿ ಉಳಿಸಬೇಕು. ಕನ್ನಡ ನಾಡಿನ ಎಲ್ಲರೂ ಈ ಸ್ಥಿತಿಯನ್ನು ತೀವ್ರವಾಗಿ ಗಮನಿಸಬೇಕು. ಪತ್ರಿಕಾಕರ್ತರು, ಸಮೂಹ ಮಾಧ್ಯಮಗಳು ಮುಖ್ಯವಾಗಿ ಸಿನಿಮಾ ಲೋಕ ಇದನ್ನು ತಮ್ಮ ಕರ್ತವ್ಯಗಳಲ್ಲಿ ಒಂದಾಗಿ ಪರಿಗಣಿಸಬೇಕು.ಕನ್ನಡದ ಎಲ್ಲ ಸಂಘ ಸಂಸ್ಥೆಗಳೂ ಒಟ್ಟಾಗಿ ಕಾರ್ಯವನ್ನು ನಿರ್ವಹಿಸಬೇಕು. ನನ್ನ ಮಾತನ್ನು ಎಚ್ಚರಿಕೆಯ ಗಂಟೆ ಎಂದು ಭಾವಿಸಬೇಕಾಗಿ ವಿನಂತಿ’ ಎಂದು ಅವರು ಕೋರಿದರು.‘ಸರ್ಕಾರದ ಎಲ್ಲ ಕಚೇರಿಗಳಲ್ಲಿಯೂ ಕನ್ನಡದಲ್ಲೇ ವ್ಯವಹರಿಸಬೇಕು. ಇದನ್ನು ಪಾಲಿಸದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದ ಅವರು, ‘ರಾಜ್ಯದಲ್ಲಿ ನೆಲೆಸಿರುವ ಪರಭಾಷಿಕ ಉದ್ಯೋಗಿಗಳು ಕನ್ನಡವನ್ನು ಉತ್ಸಾಹದಿಂದ ಕಲಿಯುವಂತೆ ಆಯಾ ಉದ್ಯಮಿಗಳು ಮುತುವರ್ಜಿ ವಹಿಸಬೇಕು’ ಎಂದು ಕರೆ ನೀಡಿದರು.ನುಡಿ ಹಬ್ಬದಲ್ಲಿ ಶೋಷಿತ ವರ್ಗದವರ ಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸಮ್ಮೇಳನಾಧ್ಯಕ್ಷರು, ‘ಮಲ ಹೊರುವ (ಭಂಗಿ) ಪದ್ಧತಿ ನಿಷೇಧವಾಗಿ ನಲವತ್ತು ವರ್ಷ ಕಳೆದರೂ ಆ ಆದೇಶ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ. ಭಂಗಿ ಪದ್ಧತಿ ನಿಲ್ಲಿಸಬೇಕೆಂದು ಒತ್ತಾಯಿಸಿ ಸವಣೂರಿನಲ್ಲಿ ಅತಿ ಶೋಷಿತವರ್ಗದವರು ಇತ್ತೀಚೆಗೆ ತಮ್ಮ ತಲೆಯ ಮೇಲೆ ಮಾನವ ಮಲವನ್ನು ಸುರಿದುಕೊಂಡು ಪ್ರತಿಭಟನೆ ನಡೆಸಿದರು. ಇಂಥ ಅತಿ ಅಮಾನವೀಯವಾದ ಪದ್ಧತಿಯನ್ನು ನಿಲ್ಲಿಸುವ ಒಂದು ಕಾರ್ಯವನ್ನು ಯಾವ ಪಕ್ಷ ಮಾಡಿದ್ದರೂ ಅದರ ಕೀರ್ತಿ ಆಕಾಶಕ್ಕೇರುತ್ತಿತ್ತು’ ಎಂದು ಮಾರ್ಮಿಕವಾಗಿ ಹೇಳಿದರು.‘ಈಗ ಕರ್ನಾಟಕವು ಭಾರತದಲ್ಲಿಯೇ ಅತ್ಯಂತ ಭ್ರಷ್ಟವಾದ ರಾಜ್ಯ ಎಂಬ ಹೆಸರನ್ನು ಸಂಪಾದಿಸಿಬಿಟ್ಟಿದೆ’ ಎಂದು ವಿಷಾದಿಸಿದ ಅವರು, ‘ಹಲವು ಶಾಸಕರ ಮಾತಿನಲ್ಲಿ, ನಡೆಯಲ್ಲಿ, ವ್ಯವಹಾರದಲ್ಲಿ ಯಾವುದರಲ್ಲಿಯೂ ಗಾಂಭೀರ್ಯವಾಗಲಿ, ಸುಸಂಸ್ಕೃತಿಯಾಗಲಿ ಕಾಣಬರುತ್ತಿಲ್ಲ. ಪ್ರಜಾ ವರ್ಗದ ನೆಮ್ಮದಿ ಕೆಟ್ಟಿದೆ. ಗೊಂದಲದಿಂದ ಸಮಾಧಾನ ನಾಶವಾಗಿದೆ. ಪ್ರಜೆಗಳಲ್ಲಿ ನಾವೇಕೆ ಇಂಥ ಅಸಮರ್ಥರನ್ನು ಶಾಸಕರನ್ನಾಗಿ ಮಾಡಿದೆವು ಎಂದು ತಮ್ಮನ್ನೂ ಎಲ್ಲ ಪಕ್ಷಗಳನ್ನೂ ನಿಂದಿಸುತ್ತಾ ಇದ್ದಾರೆ. ಪ್ರಜೆಗಳನ್ನು ಕಾಪಾಡುವವರೇ ಕಾದಾಡಿದರೆ ಎಂಥ ವಿಪರ್ಯಾಸ’ ಎಂದು ಖೇದ ವ್ಯಕ್ತಪಡಿಸಿದರು.‘ರೈತರಿಗಾಗಿ ಜಾರಿಗೆ ತಂದಿರುವ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮಾದರಿಯಲ್ಲಿ ಸಾಹಿತಿಗಳಿಗೂ ಮತ್ತು ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ವಿಮೆಯ ಒಂದು ಯೋಜನೆಯನ್ನು ರೂಪಿಸಬೇಕು. ಪ್ರಾದೇಶಿಕ ವಿಶಿಷ್ಟ ನುಡಿಗಟ್ಟುಗಳನ್ನು ಜೀವಂತವಾಗಿಡುವ ಚಿಕ್ಕ ಪುಟ್ಟ ಪತ್ರಿಕೆಗಳಿಗೆ ಜಾಹೀರಾತು ಬೆಂಬಲ ನೀಡಬೇಕು’ ಎಂದು ಅವರು ಸಲಹೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry