ಕನ್ನಡಕ್ಕೆ ಕೊಟ್ಟ ಹಣ ಬಳಸದ ವಿ.ವಿಗಳು

7

ಕನ್ನಡಕ್ಕೆ ಕೊಟ್ಟ ಹಣ ಬಳಸದ ವಿ.ವಿಗಳು

Published:
Updated:

ಬೆಂಗಳೂರು: `ಕನ್ನಡದ ಕೆಲಸ ಮಾಡಲು ರಾಜ್ಯದ 11 ವಿಶ್ವವಿದ್ಯಾಲಯಗಳಿಗೆ ರಾಜ್ಯ ಸರ್ಕಾರ ತಲಾ ಎರಡು ಕೋಟಿ ರೂಪಾಯಿ ಅನುದಾನ ಬಿಡುಗಡೆಯ ಭರವಸೆ ನೀಡಿದ್ದು, ಮೊದಲ ಹಂತದಲ್ಲಿ ತಲಾ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಆದರೆ ಯಾವ ವಿ.ವಿ.ಯೂ ಆ ಹಣವನ್ನು ಪೂರ್ಣ ಖರ್ಚು ಮಾಡಿಲ್ಲ~ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದರು.ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಅನುಪಮಾ ಪ್ರಶಸ್ತಿ ಪ್ರದಾನ ಹಾಗೂ ದತ್ತಿ ನಿಧಿ ಬಹುಮಾನಗಳ ವಿತರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.`ಕನ್ನಡನಾಡಿನ ನೆಲ, ಜಲ, ಸಂಸ್ಕೃತಿ ರಕ್ಷಣೆ ಕಾರ್ಯಕ್ಕೆ ಅನುದಾನದ ಕೊರತೆ ಆಗಿಲ್ಲ. ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕನ್ನಡ ಭಾಷೆ ಬೆಳೆಸುವವರಿಗೆ ಸರ್ಕಾರ ನಿರಂತರವಾಗಿ ನೆರವು ನೀಡುತ್ತಿದೆ. ಲೇಖಕಿಯರ ಸಂಘಕ್ಕೂ ಹೆಚ್ಚಿನ ಅನುದಾನ ನೀಡಲಾಗುವುದು~ ಎಂದು ಅವರು ಭರವಸೆ ನೀಡಿದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, `ಕನ್ನಡ ಸಾಹಿತ್ಯ ಪರಿಷತ್‌ನ ನೂರು ವರ್ಷದ ಇತಿಹಾಸದಲ್ಲಿ ಈ ವರೆಗೆ ಮಹಿಳೆಯರು ಅಧ್ಯಕ್ಷರಾಗದಿರುವುದು ವಿಷಾದನೀಯ. ಕನ್ನಡದಲ್ಲಿ ಸಾಕಷ್ಟು ಉತ್ತಮ ಮಹಿಳಾ ಲೇಖಕಿಯರಿದ್ದರೂ ಈ ವರೆಗೆ ಯಾರಿಗೂ ಜ್ಞಾನಪೀಠ ಪ್ರಶಸ್ತಿ ಸಿಕ್ಕಿಲ್ಲ~ ಎಂದು ವಿಷಾದಿಸಿದರು.`ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕವನ, ಕಥೆಗಳನ್ನು ಬರೆಯುತ್ತಿದ್ದಾರೆ. ಅವರ ಬರಹಗಳ ಸಂಕಲನ ಮಾಡಿದರೆ ಪುರುಷರ ಬರಹಗಳಿಗಿಂತ ಜಾಸ್ತಿ ಆಗುತ್ತದೆ~ ಎಂದು ಅವರು ಅಭಿಪ್ರಾಯಪಟ್ಟರು.ಅನುಪಮಾ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಲೇಖಕಿ ಡಾ.ಬಿ.ಎನ್. ಸುಮಿತ್ರಾಬಾಯಿ ಮಾತನಾಡಿ, `ಪ್ರಶಸ್ತಿ ಸಾಧಕರಿಗೆ ಇನ್ನಷ್ಟು ಕೆಲಸ ಮಾಡಲು ಅಂತರಂಗಕ್ಕೆ ಸೂಚನೆ ನೀಡುತ್ತದೆ~ ಎಂದರು. ವಿಮರ್ಶಕಿ ಡಾ.ಎಂ.ಎಸ್. ಆಶಾದೇವಿ ಅಭಿನಂದನಾ ಭಾಷಣ ಮಾಡಿ, `ಸ್ತ್ರೀವಾದ ಬದುಕಿನ ಕ್ರಮ ಎಂಬುದನ್ನು ಸುಮಿತ್ರಾಬಾಯಿ ಬರಹಗಳಲ್ಲಿ ಮತ್ತೆ ಮತ್ತೆ ಕಾಣಬಹುದು~ ಎಂದರು.ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಧ್ಯಕ್ಷತೆ ವಹಿಸಿದ್ದರು. ಅನುಪಮಾ ಪ್ರಶಸ್ತಿ ರೂ 10 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಇದೇ ಸಂದರ್ಭದಲ್ಲಿ ದತ್ತಿ ಬಹುಮಾನಗಳನ್ನು ಪ್ರದಾನ ಮಾಡಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry