ಗುರುವಾರ , ಡಿಸೆಂಬರ್ 12, 2019
17 °C

ಕನ್ನಡಕ್ಕೆ ಶೈಮಕ್ ದಾವರ್

Published:
Updated:
ಕನ್ನಡಕ್ಕೆ ಶೈಮಕ್ ದಾವರ್

ಶೈಮಕ್ ದಾವರ್ ಭಾರತದ ಸಮಕಾಲೀನ ನೃತ್ಯ ಸಂಯೋಜಕರಲ್ಲಿ ದೊಡ್ಡ ಹೆಸರು. ಅವರ ನೃತ್ಯಪಟ್ಟುಗಳಿಗೆ ಸಾರ್ವತ್ರಿಕ ಮನ್ನಣೆಯಿದೆ. ಭಾರತೀಯ ಸಿನಿಮಾರಂಗದಲ್ಲಿ ನೃತ್ಯಕ್ಕೆ ಒಂದು ಹೊಸ ಭಾಷ್ಯ ಬರೆದ ಮೇರು ಕಲಾವಿದ ಎಂಬ ಅಗ್ಗಳಿಕೆಯೂ ಅವರದ್ದು. ದಿಲ್ಲಿ ಹಾಗೂ ಮೆಲ್ಬರ್ನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸನ ಗೀತೆಗೆ ನೃತ್ಯ ಸಂಯೋಜನೆ ಮಾಡಿದ್ದೂ ಅವರೇ. ಟಾಮ್ ಕ್ರೂಸ್ ಅಭಿನಯದ ಹಾಲಿವುಡ್ ಸಿನಿಮಾ `ಮಿಶನ್ ಇಂಪಾಸಿಬಲ್ 4~ಗೆ ನೃತ್ಯ ನಿರ್ದೇಶನ ಮಾಡಿರುವ ಅವರೀಗ ಕನ್ನಡದ `ಪ್ರಸಾದ್~ ಸಿನಿಮಾದಲ್ಲಿ ತಮ್ಮ ನಟನಾ ಕೌಶಲ್ಯ ತೋರಲು ಸಜ್ಜಾಗಿದ್ದಾರೆ. 

ಶ್ರೇಷ್ಠ ನೃತ್ಯ ಸಂಯೋಜಕ ಶೈಮಕ್ ದಾವರ್ ಪ್ರಪ್ರಥಮ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ. ಪ್ರಸಾದ್ ಸಿನಿಮಾದಲ್ಲಿ ಅವರು ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿನಿಮಾದ ಆಡಿಯೊ ಬಿಡುಗಡೆಗೆಂದು ಶೈಮಕ್ ಈಚೆಗೆ ಬೆಂಗಳೂರಿಗೆ ಆಗಮಿಸಿದ್ದರು. ಈ ಸಿನಿಮಾದಲ್ಲಿ ನಟಿಸುವ ಅವಕಾಶ ನನಗೆ ಆಕಸ್ಮಿಕ ರೀತಿಯಲ್ಲಿ ಸಿಕ್ಕಿತು ಎಂದು ಹೇಳುವ ಶೈಮಕ್ ಈ ಮೊದಲೆ ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ನಟಿಸಬೇಕಿತ್ತಂತೆ. `ಶಂಕರ್ ಅವರ ಏಂದಿರನ್ ಮತ್ತು ಮಣಿರತ್ನಂ ಅವರ ಸಿನಿಮಾದಲ್ಲಿ ನಟಿಸಲು ಕರೆಬಂದಿತ್ತು. ಆದರೆ ಈ ಆಹ್ವಾನ ಕಾರಣಾಂತರಗಳಿಂದ ವರ್ಕೌಟ್ ಆಗಲಿಲ್ಲ.  ಪ್ರಸಾದ್ ಚಿತ್ರದ ಕಥೆಯನ್ನು ಕೇಳಿದಾಗ ನನ್ನ ಮೈ ಪುಳಕಗೊಂಡಿತು. ಮನಸ್ಸಿಗೆ ತಟ್ಟನೆ ಇಷ್ಟವಾಯ್ತು. ಹಾಗಾಗಿ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ~ ಎನ್ನುತ್ತಾರೆ ಸೈಮಕ್. 

ದಿಲ್ ತೊ ಪಾಗಲ್ ಹೈ ಸಿನಿಮಾದ ಕೋರಿಯೊಗ್ರಫಿಗಾಗಿ ದಾವಾರ್ 1998ರಲ್ಲಿ ನ್ಯಾಷನಲ್ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡರು. ತಾಲ್, ಬಂಟಿ ಔರ್ ಬಬ್ಲಿ, ಧೂಮ್ 2, ಐ ಸೀ ಯೂ, ತಾರೆ ಜಮೀನ್ ಪರ್, ಯುವರಾಜ್, ರಬ್ ನೆ ಬನಾ ದಿ ಜೋಡಿ ಹಾಗೂ ಅಲ್ಲಾದೀನ್ ಚಿತ್ರಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಅಭಿಷೇಕ್ ಬಚ್ಚನ್ ಅಭಿನಯದ ಗೇಮ್ ಚಿತ್ರಕ್ಕೆ ಕೂಡ ಕೋರಿಯೋಗ್ರಫಿ ಮಾಡಲಿದ್ದಾರೆ.

ಇವರು ಈ ಮೊದಲು ನಟಿಸಿ, ಕೋರಿಯೋಗ್ರಫಿ ಮಾಡಿದ್ದ ಸಿನಿಮಾ ಲಿಟಲ್ ಜಿಜಿಯೊ. ನೃತ್ಯ, ನಟನೆ ಜತೆಗೆ ಶೈಮಕ್ ಎಂಟೈನ್‌ಮೆಂಟ್ ಡಿಸೈನರ್ ಆಗಿ ಕೂಡ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಶೈಮಕ್ ದಾವರ್ ಇನ್‌ಸ್ಟಿಟ್ಯೂಟ್ ಆಫ್ ಫರ್‌ಫಾರ್ಮಿಂಗ್ ಆರ್ಟ್ಸ್ ಇದು ಶೈಮಕ್ ಅವರ ಕನಸಿನ ಕೂಸು. ಆಸಕ್ತರಿಗೆ ಇಲ್ಲಿ ನೃತ್ಯ ಕಲಿಸಲಾಗುತ್ತದೆ. ಮುಂಬೈ, ದೆಹಲಿ, ಚನ್ನೈ, ಪುಣೆ, ಅಹಮದಾಬಾದ್, ಕೋಲ್ಕತ್ತಾ, ಹೈದರಾಬಾದ್, ಲಖನೌ ಹಾಗೂ ಬೆಂಗಳೂರು ಸೇರಿದಂತೆ ಜಗತ್ತಿನ ಹಲವೆಡೆ ಇವರ ಶಾಲೆಗಳಿವೆ. ಈ ಶಾಲೆಯಲ್ಲಿ ನುರಿತ ಶಿಕ್ಷಕರ ದಂಡಿದೆ. ಜಾಸ್, ಹಿಪ್ ಹಾಪ್, ಸಾಲ್ಸಾ, ಬಾಲಿವುಡ್, ಆಫ್ರೊ ಜಾಸ್, ರಾಕ್ ಅಂಡ್ ರೋಲ್, ಕ್ಲಬ್, ರಾಕ್ ಹಾಗೂ ಸಮಕಾಲೀನ ನೃತ್ಯದ ಪಟ್ಟುಗಳನ್ನು ಶಿಕ್ಷಕರು ಕಲಿಸಿಕೊಡುತ್ತಾರೆ.

ಈ ಡ್ಯಾನ್ಸ್ ಕಂಪೆನಿಯಲ್ಲಿ ಶೈಮಕ್ ಮೈನವಿರೇಳಿಸುವಂತಹ ಪ್ರದರ್ಶನ ನೀಡಿದ್ದಾರೆ. ಅದೂ ಅಲ್ಲದೆ `ಶೈಮಕ್ ಸ್ಟೈಲ್~ ಎಂಬ ನೃತ್ಯ ಪ್ರಕಾರವನ್ನೇ ಹುಟ್ಟುಹಾಕಿದ್ದಾರೆ. ಇದು ನೃತ್ಯಪ್ರಿಯರನ್ನು ಮೋಡಿ ಮಾಡಿದೆ. ಶೈಮಕ್ ತಮ್ಮ ಮೊದಲ ಆಲ್ಬಂ `ಮೊಹಬ್ಬತ್ ಕರ್ ಲೆ~ ಹಾಗೂ `ದಿಲ್ ಚಾಹೆ~ ಆಲ್ಬಂಗೆ ಸಂಗೀತ ಕೂಡ ನೀಡಿದ್ದಾರೆ. ನಟ ಶಾಹಿದ್ ಕಪೂರ್, ದಾವರ್ ಡ್ಯಾನ್ಸ್ ಕಂಪೆನಿಯ ಸದಸ್ಯ. ಇವರು ಬಾಲಿವುಡ್‌ನ ಹಲವು ನಟರಿಗೆ ನೃತ್ಯದ ತರಬೇತಿ ನೀಡಿದ್ದಾರೆ. ಬಾಲಿವುಡ್‌ನ ಉದಯೋನ್ಮುಖ ತಾರೆಗಳಾದ ರಸ್ಲಾನ್ ಮುಮ್ತಾಜ್, ಶುಭ್ ಹಾಗೂ ಬಾಲನಟ ದರ್ಶೀಲ್ ಸಫಾರಿ ಅವರೂ ಸಹ ಇವರ ಗರಡಿಯಲ್ಲಿ ಪಳಗುತ್ತಿದ್ದಾರೆ.

ಅಂದಹಾಗೆ, `ಪ್ರಸಾದ್~ ಚಿತ್ರದ ಕಥೆ ಕಿವುಡ ಮತ್ತು ಮೂಕ ಮಕ್ಕಳ ಲೋಕದ ಸುತ್ತ ಹೆಣೆದುಕೊಂಡಿದೆ. ಇಂತಹ ವಿಶೇಷ ಮಕ್ಕಳ ಭಾವವನ್ನು ಗ್ರಹಿಸಲು ನೃತ್ಯ ಪರಿಣಾಮಕಾರಿ ಮಾಧ್ಯಮ. ನನ್ನ ಜೀವನಕ್ಕೂ ಪ್ರಸಾದ್ ಚಿತ್ರದ ಕಥೆಗೂ ಹೆಚ್ಚು ಹೋಲಿಕೆ ಇದೆ. ಹಾಗಾಗಿ ಈ ಕಥೆಯನ್ನು ಕೇಳಿದಾಕ್ಷಣ ಮನಸ್ಸು ಭಾವುಕವಾಯಿತು. ನಾನು ದಕ್ಷಿಣ ಭಾರತೀಯ ಸಿನಿಮಾದಲ್ಲಿ ನಟಿಸುವ ಪ್ರಥಮ ಪ್ರಯತ್ನಕ್ಕೆ ಪ್ರಸಾದ್ ಮುನ್ನುಡಿಯಾಗಿದೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಶೈಮಕ್. 

ಪ್ರಸಾದ್ ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವ ಶೈಮಕ್ ಅವರಿಗೆ ತಮ್ಮ ಚಿತ್ರಗಳು ಪೋಸ್ಟರ್‌ನಲ್ಲಿ ರಾರಾಜಿಸುತ್ತಿರುವುದಕ್ಕೆ ಖುಷಿ ಮತ್ತು ಶಾಕ್ ಎರಡೂ ಆಗಿದೆಯಂತೆ. ಈ ಚಿತ್ರದಲ್ಲಿ ನನ್ನದು ಚಿಕ್ಕ ಪಾತ್ರ. ಅಷ್ಟು ಮಾತ್ರಕ್ಕೆ ಪೋಸ್ಟರ್‌ನಲ್ಲಿ ನನ್ನ ಚಿತ್ರ ರಾರಾಜಿಸುತ್ತಿರುವುದು ಬೆರಗು ಹುಟ್ಟಿಸಿದೆ ಎಂದು ನಗು ಚಿಮ್ಮಿಸುತ್ತಾರೆ.

`ಮಿಶನ್ ಇಂಪಾಸಿಬಲ್ 4~ ಸಿನಿಮಾಕ್ಕೆ ನೃತ್ಯ ಸಂಯೋಜನೆ ಮಾಡಿದ ಅನುಭವ ಹಂಚಿಕೊಂಡ ಶೈಮಕ್‌ಗೆ ಈಗ ಟಾಮ್ ಕ್ರೂಸ್ ನೆಚ್ಚಿನ ಗೆಳೆಯನಂತೆ. `ಮಿಶನ್ ಇಂಪಾಸಿಬಲ್ ಸಿನಿಮಾ ನನಗೆ ಅದ್ಭುತ ವೇದಿಕೆ ಕಲ್ಪಿಸಿಕೊಟ್ಟ ಸಿನಿಮಾ. ಟಾಮ್ ಅತ್ಯುತ್ತಮ ನಟ ಅಷ್ಟೇ ಅಲ್ಲದೆ ನನ್ನ ಒಳ್ಳೆಯ ಗೆಳೆಯ ಕೂಡ. ಟಾಮ್ ಮತ್ತು ಆತನ ತಂಗಿ ಪೌಲಾ ಭಾರತಕ್ಕೆ ಭೇಟಿ ನೀಡಿದ್ದಾಗ ನಾವೆಲ್ಲ ಒಟ್ಟಾಗಿ ಕಳೆದ ಸಮಯ ಅವಿಸ್ಮರಣೀಯ. ಈ ವೇಳೆ ತಾಜ್‌ಮಹಲ್ ನೋಡಿ ಆನಂದಿಸಿದೆವು~ ಎಂದು ಖುಷಿ ಹಂಚಿಕೊಳ್ಳುತ್ತಾರೆ.

ಹಾಲಿವುಡ್‌ನಲ್ಲಿ ಶೈಮಕ್ ಅವರಿಗೀಗ ಅವಕಾಶಗಳು ಕೈಬೀಸಿ ಕರೆಯುತ್ತಿವೆ. ಒಂದು ಹಾಲಿವುಡ್ ಸಿನಿಮಾ ಪ್ರಾಜೆಕ್ಟ್‌ನ ಮಾತುಕತೆ ಕೂಡ ಮುಗಿದಿದೆ. ಹಾಗಾಗಿ ಅವರು ಒಂದು ಕಾಲನ್ನು ಅಲ್ಲಿ, ಒಂದು ಕಾಲನ್ನು ಇಲ್ಲಿ ಇಟ್ಟುಕೊಂಡಿದ್ದಾರೆ. 

ಇಡೀ ಪ್ರಪಂಚ ಶೈಮಕ್ ಅವರನ್ನು ಗುರುತಿಸುವುದು ನೃತ್ಯದಿಂದ. ಕೆಲವು ದಶಕಗಳಿಂದ ನೃತ್ಯದಲ್ಲಿ ತೊಡಗಿಸಿಕೊಂಡಿರುವ ಶೈಮಕ್ ಅವರಿಗೂ ನೃತ್ಯವೆಂದರೆ ಪಂಚಪ್ರಾಣ. `ನನಗೆ ನೃತ್ಯವೆಂದರೆ ಯಾವಾಗಲೂ ಚೈತನ್ಯ ತುಂಬುವ ವಿಚಾರ. ನೃತ್ಯದಿಂದ ನಾನು ಪ್ರತಿದಿನ ಹೊಸತೇನಾದರೂ ಕಲಿಯುತ್ತಲೇ ಇರುತ್ತೇನೆ~ ಎನ್ನುವಾಗ ಅವರಲ್ಲಿ ನೃತ್ಯ ವಿದ್ಯಾರ್ಥಿಯ ಶಿಸ್ತು ಕಾಣುತ್ತದೆ. 

ಪ್ರತಿಕ್ರಿಯಿಸಿ (+)