ಬುಧವಾರ, ನವೆಂಬರ್ 20, 2019
21 °C

`ಕನ್ನಡಕ್ಕೆ ಸ್ವಂತಿಕೆಯ ಮೀಮಾಂಸೆ ಬೇಕು'

Published:
Updated:

ಮೈಸೂರು: ಕನ್ನಡ ಸಾಹಿತ್ಯ ಇಲ್ಲಿಯ ಜನಜೀವನದ ಸುಖ-ಸಂಕಟಗಳನ್ನು ಕುರಿತು ಕಟ್ಟಿದ ಬರಹ. ಅದನ್ನು ಕನ್ನಡದ ಕಣ್ಣೋಟಗಳಿಂದಲೇ ಅರ್ಥೈಸಿಕೊಳ್ಳಬೇಕಾಗಿದೆ. ಇದಕ್ಕೆ ಸಂಸ್ಕೃತದ ಕನ್ನಡಕ ಅವಶ್ಯವಿಲ್ಲ ಎಂದು ಬೆಳ್ತಂಗಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಜಯಪ್ರಕಾಶ ಶೆಟ್ಟಿ ಅಭಿಪ್ರಾಯಪಟ್ಟರು.ಹುಣಸೂರು ತಾಲ್ಲೂಕಿನ ಬಿಳಿಕೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಈಚೆಗೆ ಕನ್ನಡ ವಿಭಾಗದ `ಅನುಭವ ಮಂಟಪ' ವೇದಿಕೆ ವತಿಯಿಂದ ನಡೆದ `ಕನ್ನಡ ಸಾಹಿತ್ಯ ಪ್ರಗತಿಪರ ಹೆಜ್ಜೆಗಳು' ಎಂಬ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ಸಾಹಿತ್ಯಕ್ಕೆ ಕನ್ನಡದ್ದೇ ಆದ ಮೀಮಾಂಸೆ ನಿರ್ಮಿಸುವ ಜವಾಬ್ದಾರಿ ಹೊಸ ತಲೆಮಾರಿನ ಮೇಲಿದೆ. ಸಾಹಿತ್ಯ ಆರೋಗ್ಯಕರ ಮನಸ್ಸನ್ನು ಸೃಷ್ಟಿಸುವ ಮಾಧ್ಯಮ. ಇದು ನಮ್ಮ ಸುತ್ತಲಿನ ಪರಿಸರವನ್ನು ಎಚ್ಚರಿಕೆಯಿಂದ ನೋಡುವಂತೆ ಪ್ರೇರೇಪಿಸುವ ಕಲಾತ್ಮಕ ಕಿಟಕಿಯಾಗಿದೆ ಎಂದು ಅವರು ಹೇಳಿದರು.ಇತಿಹಾಸ ಪಠ್ಯಗಳ ವಿಜೃಂಭಿತ ಗತಕಥನಗಳಲ್ಲಿ ತಳವರ್ಗಗಳ ಸ್ಮೃತಿಗಳೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು ತರಗತಿಗಳನ್ನು ಸಾಂಸ್ಕೃತಿಕ ರಾಜಕಾರಣದ ತಾಣವಾಗಿಸಿ, ವಿದ್ಯಾರ್ಥಿ ಸಮುದಾಯಕ್ಕೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ಬಗ್ಗೆ ಅರಿವು ಮೂಡಿಸುವುದು ಅಧ್ಯಾಪಕರ ಹೊಣೆಗಾರಿಕೆ ಎಂದರು.ಪ್ರಭಾರ ಪ್ರಾಂಶುಪಾಲರಾದ ಸರಸ್ವತಿ ಎಂ. ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ವೆಂಕಟಮ್ಮ, ಧನಲಕ್ಷ್ಮಿ ಎಚ್.ಎಸ್., ಗುಣಶ್ರೀ, ಗುಲೇ ಆರೀಫಾ, ಮಂಜುಳಾದೇವಿ, ಪಶುಪತಿ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಗಣೇಶ್, ಡಿ.ಅಂಬಿಕಾ ಯೋಗಾವತಿ ಇದ್ದರು.

ಪ್ರತಿಕ್ರಿಯಿಸಿ (+)