ಸೋಮವಾರ, ಮೇ 10, 2021
26 °C

ಕನ್ನಡದಲ್ಲಿ ಕಾಮಿಡಿ ವ್ಯಾನರಿ...

- ಡಿ.ಎಂ.ಕುರ್ಕೆ ಪ್ರಶಾಂತ,ಚಿತ್ರ: ಕೆ.ಎನ್. ನಾಗೇಶ್ ಕುಮಾರ್ Updated:

ಅಕ್ಷರ ಗಾತ್ರ : | |

ಕನ್ನಡದಲ್ಲಿ ಕಾಮಿಡಿ ವ್ಯಾನರಿ...

ಕನ್ನಡಕ್ಕೆ ವಿದೇಶಿ ಚಿತ್ರರಂಗದ ಮತ್ತೊಂದು ಪಾತ್ರ ಪರಿಚಯ ನಟಿ ವ್ಯಾನರಿ. ಪೆರು ಮೂಲದ ಈ ನಟಿ `ಪೋರ' ಚಿತ್ರದ ಕಥಾ ನಾಯಕಿ. ಮೊಳದುದ್ದದ ಕಡುಕಪ್ಪು ಕೂದಲು, ಬಾಯಿ ಬಿಚ್ಚದೆಯೇ ಕೆನ್ನೆಯುಬ್ಬಿಸುವ ನಗು, ಮೈಯ ಕೆಂಬಣ್ಣ ಈಕೆ ನಮ್ಮ ನೆಲದ ಮಗಳೇ ಎನ್ನುವ ಭಾವ ಮೂಡಿಸುತ್ತದೆ.ಅಮೆರಿಕ ಚಿತ್ರರಂಗದಲ್ಲಿ ಸಣ್ಣ ಹೆಜ್ಜೆಯೂರಿರುವ ಈ ಪೋರಿಗೆ ಕಾಮಿಡಿ ಪಾತ್ರಗಳೆಂದರೆ ಅಚ್ಚುಮೆಚ್ಚು. ನಮ್ಮ ನೆಲದ ಹುಡುಗಿಯಂತೆ ಕಾಣುವ ಕೆಂಬಣ್ಣದ ಈ ಚೆಲುವೆಯದ್ದು ನೀಳಕಾಯ. ಅತ್ತಲಿಂದ ಇತ್ತ ಪಿಳಿ ಪಿಳಿ ಚಲಿಸುವ ಕಣ್ಣಿನ ಭಾಷೆ, ಮಾತು ಮಾತಿಗೂ ಉಬ್ಬುವ ಕೆನ್ನೆ, ಹಾಸ್ಯ ನಟನೆಗೆ ತಕ್ಕಂತೆಯೇ ನುಲಿಯುವ ಮೈಮಾಟ ಈಕೆ ಕಾಮಿಡಿ ಪಾತ್ರಕ್ಕೆ ಸೂಕ್ತ ಎನ್ನುವ ಷರಾ ಬರೆಯಬಹುದು.ವ್ಯಾನರಿಯ ಚಿತ್ರಯಾನ ಆರಂಭವಾಗಿದ್ದೂ ಕಾಮಿಡಿ ಚಿತ್ರ `ಗೋಸ್' ಮೂಲಕ. ಮೂರು ಕಿರುಚಿತ್ರಗಳಲ್ಲಿ ನಟಿಸಿರುವ ವ್ಯಾನರಿ, ಅಲ್ಲಿಯೂ ಆಯ್ದುಕೊಂಡಿದ್ದು ಕಾಮಿಡಿ ಪಾತ್ರ.ನ್ಯೂಯಾರ್ಕ್‌ನ ಹಂಟರ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದಿರುವ ಅವರು ಕಾಲೇಜು ದಿನಗಳಲ್ಲಿಯೇ ರಂಗಪ್ರವೇಶ ಮಾಡಿದವರು. ನಾಟಕಗಳಲ್ಲೂ ಬಣ್ಣ ಹಚ್ಚಿದ್ದಾರೆ. ಆ ನಾಟಕಗಳಲ್ಲೂ ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದ್ದು ಕಾಮಿಡಿ ಪಾತ್ರಗಳನ್ನೇ. ಪೆರು ಮೂಲದ ಅಪ್ಪ, ಇಟಾಲಿಯನ್ ಮೂಲದ ಅಮ್ಮನ ಕುಡಿಯಾದ ವ್ಯಾನರಿಗೆ ಬಹುಭಾಷಾ ನಟಿಯಾಗುವ ತವಕ. ಭಾಷೆ ತುಸು ತೊಡಕಾದರೂ ಎಲ್ಲ ಭಾಷೆಗಳಲ್ಲಿಯೂ ನಟಿಸುವ ವಿಶ್ವಾಸ ವ್ಯಕ್ತಪಡಿಸುತ್ತಾರೆ.`ಹಿಂದಿ ಚಿತ್ರಗಳನ್ನು ವೀಕ್ಷಿಸುತ್ತೇನೆ. ಭಾರತೀಯ ನಟರಲ್ಲಿ ಶಾರುಖ್‌ಖಾನ್ ಅಚ್ಚುಮೆಚ್ಚು' ಎನ್ನುವ ಅವರು ಶಾರುಖ್ ಸಿನಿಮಾಗಳನ್ನು ನೋಡುತ್ತಾರಂತೆ. ಶಾರುಖ್ ಅಭಿನಯ ಇಷ್ಟವಂತೆ. `ಪೋರ' ಚಿತ್ರದ ಪ್ರಮುಖ ಪಾತ್ರಧಾರಿ ಗಿರೀಶ್ ಕಾರ್ನಾಡರ ಬಗ್ಗೆ ಸ್ವಲ್ಪ ತಿಳಿದುಕೊಂಡಿರುವ ಅವರಿಗೆ ಕಾರ್ನಾಡರ ಜತೆಗಿನ ನಟನೆ ಹೆಮ್ಮೆ ಮತ್ತು ಖುಷಿ ತಂದಿದೆಯಂತೆ. ಮುಕ್ತ ಮನಸ್ಸಿನ ಪಾತ್ರಗಳನ್ನು ಇಷ್ಟಪಡುವ ವ್ಯಾನರಿಗೆ ಕಾಮಿಡಿ ಪಾತ್ರಗಳು  ಮನಸ್ಸನ್ನು ಉಲ್ಲಾಸವಾಗಿಡುತ್ತದೆಯಂತೆ. ವ್ಯಾನರಿಗೆ ಸಣ್ಣ ಕಥೆಗಳನ್ನು ಓದುವ ಮತ್ತು ಬರೆಯುವ ಹವ್ಯಾಸವಿದೆಯಂತೆ. ಸಾಹಿತ್ಯವನ್ನು ಅಲ್ಪಸ್ವಲ್ಪ ಓದಿಕೊಂಡಿದ್ದಾರಂತೆ. ಸಂಗೀತ ಕೇಳುವುದು ತಮ್ಮ ಮೆಚ್ಚಿನ ಹವ್ಯಾಸ ಎಂದು ಆಲಾಪಿಸುತ್ತಾರೆ. ಅಮೆರಿಕ ಚಿತ್ರರಂಗದಲ್ಲಿ ಚಿಗುರುವ ಆಸೆ ಇದ್ದರೂ ಅವರಿಗೆ ಇಷ್ಟವಾದದ್ದು ಫ್ರೆಂಚ್ ಚಲನಚಿತ್ರಗಳು. ಫ್ರೆಂಚ್ ಚಲನಚಿತ್ರಗಳನ್ನು ನೋಡುತ್ತಲೇ ಬೆಳೆದೆ ಎನ್ನುವ ಅವರು ಫ್ರೆಂಚ್ ಭಾಷೆಯ ಯಾವ ಚಿತ್ರಗಳನ್ನೂ ಮಿಸ್ ಮಾಡಿಕೊಳ್ಳುವುದಿಲ್ಲವಂತೆ. ಅವಕಾಶ ಸಿಕ್ಕರೆ ಅಲ್ಲಿಯೂ ರಂಗ ಪ್ರವೇಶಕ್ಕೆ ಸಿದ್ಧರಾಗಿರುವ ಅವರು  ಫ್ರೆಂಚ್ ಚಿತ್ರಗಳು ತಮ್ಮ ನಟನಾ ಕೌಶಲದ ಬೆಳವಣಿಗೆಗೆ ಮೂಲವಾದದ್ದನ್ನು ನೆನಪಿಸಿಕೊಳ್ಳುತ್ತಾರೆ. ಮೈ ಸಿರಿ ಸೊರಗದಂತೆ ಕಾಯ್ದುಕೊಳ್ಳಲು ಹೆಚ್ಚೇನು ಕಸರತ್ತು ಮಾಡುವುದಿಲ್ಲ.ನಿಯಮಿತವಾಗಿ ಆರೋಗ್ಯಯುತ ಆಹಾರ ಸೇವಿಸುವುದೇ ಸೌಂದರ್ಯದ ಗುಟ್ಟು ಎನ್ನುವ ವ್ಯಾನರಿ ಬೆಳಿಗ್ಗೆ ಕೆಲ ಸಮಯ ಜಿಮ್‌ನಲ್ಲಿ ದೇಹ ದಂಡಿಸುತ್ತಾರಂತೆ.`ಪೋರ' ಚಿತ್ರೀಕರಣದ ವೇಳೆ ಸ್ವಲ್ವ ಕನ್ನಡ ಕಲಿತಿರುವ ಈ `ಪೋರಿ' ತಡವರಿಸಿ ತಡವರಿಸಿ ಕನ್ನಡದ ನಾಲ್ಕಾರು ಪದಗಳನ್ನು ಬಾಯಿಂದ ತುಳುಕಿಸಿ ನಗುತ್ತಾರೆ. ಕಳೆದ ಕೆಲದಿನಗಳಿಂದ ಬೆಂಗಳೂರಿನಲ್ಲಿ ಇದ್ದೇನೆ. ಚಿತ್ರೀಕರಣಕ್ಕಾಗಿ ವಿವಿಧ ಸ್ಥಳಗಳಿಗೆ ತೆರಳುವುದು ವಿಶಿಷ್ಟ ಅನುಭವ ಎಂದು ವಿವರಿಸುತ್ತಾರೆ. ತಡೆ ಇಲ್ಲದೆ ಸಾಗುವ ಅವರ ಇಂಗ್ಲಿಷ್ ಮಾತು ಕೇಳಿದರೆ ಚಿತ್ರದಲ್ಲಿ ಕನ್ನಡ ಹೇಗೆ ಉಲಿದಿದ್ದಾರೆ ಎನ್ನುವುದನ್ನು ತೆರೆಯ ಮೇಲೆಯೇ ನೋಡಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.