ಮಂಗಳವಾರ, ಅಕ್ಟೋಬರ್ 22, 2019
26 °C

ಕನ್ನಡದಲ್ಲಿ ನಗರ ಸಾಹಿತ್ಯವೇ ಬಂದಿಲ್ಲ

Published:
Updated:
ಕನ್ನಡದಲ್ಲಿ ನಗರ ಸಾಹಿತ್ಯವೇ ಬಂದಿಲ್ಲ

ಗುಲ್ಬರ್ಗ: ಧಾರವಾಡದ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿನಿಯರನ್ನು ವಾರೆಗಣ್ಣಿನಿಂದ ನೋಡುವುದೆ ನಮ್ಮ ದಿನಚರಿಯಾಗಿತ್ತು. ನಂತರ ಎಂ.ಎ ಮಾಡುವುದಕ್ಕಾಗಿ ಬಾಂಬೆಗೆ ತೆರಳಿದೆ. ವಿದ್ಯಾಭ್ಯಾಸದ ಹಿಂದಿನ ಯಾವ ಪರೀಕ್ಷೆಗಳಲ್ಲೂ ಸೋಲು ಕಂಡರಿಯದ ನಾನು ಆಗ ಅರ್ಧಕ್ಕೆ ಎಂ.ಎ. ನಿಲ್ಲಿಸಬೇಕಾಗಿ ಬಂತು. ಅಣ್ಣ ಬಾಲಚಂದ್ರ ಆಗ ವಾರಣಾಸಿಯಲ್ಲಿರುತ್ತಿದ್ದರು. ಹೀಗೆ ಒಂದೊಂದಾಗಿ ತಮ್ಮ ಜೀವನದ ಘಟನೆಗಳನ್ನು ಸಹೃದಯರ ಎದುರಿಗೆ ಓದಿದವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ ಕಾರ್ನಾಡ.ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಲೇಖಕರೊಂದಿಗೆ ಸಂವಾದ (ಮೀಟ್ ದ ಆಥರ್) ಕಾರ್ಯಕ್ರಮದಲ್ಲಿ ತಾವು ಬರೆದ `ಆಡಾಡತ ಆಯುಷ್ಯ~ ಆತ್ಮ ಕತೆಗಳ ಪ್ರಮುಖ ಪುಟಗಳನ್ನು ಓದಿದರು.ಜೀವನದ ಅಭದ್ರ ಸ್ಥಿತಿಯಲ್ಲಿ ನನಗೂ ಹೇಳದೆ, ಕೇಳದೆ ಹುಟ್ಟಿಕೊಂಡದ್ದು ಯಯಾತಿ ನಾಟಕ. ಕವಿಯಾಗಬೇಕೆಂಬ ಹಂಬಲವುಳ್ಳ ನಾನು ನಾಟಕಕಾರನಾಗಿ ಗುರುತಿಸಿಕೊಂಡದ್ದು ನಿರಾಶೆ ಎನಿಸಿತು. ಮುಂದಿನ ವಿದ್ಯಾಭ್ಯಾಸಕ್ಕೆಂದು ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಸೇರಿದಾಗ ಹಾಸ್ಟೆಲ್ ಊಟ ಸಾಕಾಗುತ್ತಿರಲಿಲ್ಲ. ಮಧ್ಯರಾತ್ರಿ ಹೊರಗೆ ಹೋಗಿ ಊಟ ಮಾಡುತ್ತಿದ್ದೆವು.ಆಕ್ಸ್‌ಫರ್ಡಿನಲ್ಲಿ ವಿದ್ಯಾರ್ಥಿಗಳ ಸಂಜೆಯ ಪಾರ್ಟಿಗಳಲ್ಲೆಲ್ಲ ತರುಣ-ತರುಣಿಯರ ಆಗಮನ, ಮೊದಲು ಮಾತುಕತೆ, ಪರಿಚಯ, ಕುಡಿತ, ಬೆಳಕಿನಲ್ಲೇ ನರ್ತನದಿಂದ ಆರಂಭವಾದರೂ, ಕೆಲ ಸಮಯದಲ್ಲೇ ದೀಪಗಳು ಒಂದೊಂದಾಗಿ ಆರಿ ಹೋಗಲಾರಂಭಿಸಿ, ದೇಹಗಳು ಒಂದಕ್ಕೊಂದು ಅಂಟಿಕೊಳ್ಳಲಾರಂಭಿಸುತ್ತಿದ್ದವು. ನರ್ತನದ ಹಾಲಿನಲ್ಲಿ, ಸುತ್ತಮುತ್ತಲಿನ ಕೋಣೆಗಳಲ್ಲಿ ದಟ್ಟ ಕತ್ತಲಾಗಲಿಕ್ಕೆ ಹೆಚ್ಚು ಹೊತ್ತು ಹಿಡಿಯುತ್ತಿರಲಿಲ್ಲ. ನಾನು ಮಾತ್ರ ಇದನ್ನೆಲ್ಲ ನೋಡುತ್ತ, ಅಲುಗಾಡದೆ ವೈನ್ ಕುಡಿಯುತ್ತ ಕುರ್ಚಿಗಂಟಿಕೊಂಡು ಸೆಟೆದುಕೊಂಡು ಕುಳಿತಿರುತ್ತಿದ್ದೆ.ಒಂದು ಇಡಿಯ ವರ್ಷ ಈ ತರಹದ ಆತ್ಮಯಾತನೆಯಲ್ಲಿ ಕಳೆದು ಕೊನೆಗೊಂದು ಪಾರ್ಟಿಯಲ್ಲಿ ನನ್ನ ಬಳಿ ಕುಳಿತಿರುವ ಹುಡುಗಿಗೆ, `ನಿನ್ನನ್ನು ಚುಂಬಿಸಬಹುದೇನು? ಎಂದು ಕೇಳಿದೆ. ಆಕೆ ಹೂಂ ಎಂದಳು. ಅವಳನ್ನು ಮುತ್ತಿಟ್ಟು `ನಾನು ಚುಂಬಿಸಿದ ಮೊದಲನೆಯ ಹುಡುಗಿ ನೀನೇ~ ಎಂದಾಗ, ಆಕೆ ಸಹಜವಾಗಿ `ಇಲ್ಲಿ ಅದಕ್ಕೆ ಯಾರೂ ಮಹತ್ವ ಕೊಡುವುದಿಲ್ಲ~ ಎಂದಳು. ಮುಂದೆ 40 ವರ್ಷಗಳ ನಂತರ ಆಕೆ ಸಿಕ್ಕಳು.ಹೀಗೆ ತಮ್ಮ ಓದಿನ ಉದ್ದಕ್ಕೂ ಮನೋಹರ ಗ್ರಂಥ ಮಾಲಾದ ಪ್ರೇರಣೆ, ಪ್ರೋತ್ಸಾಹ ಅದರೊಂದಿಗಿನ ನಂಟನ್ನು ವಿವರಿಸುತ್ತ ಹೋದರು. ಓದಿನುದ್ದಕ್ಕೂ ಅವರ ಬಾಲ್ಯ, ಯೌವನ, ಓದು, ಬರಹ, ಸುತ್ತಾಟ, ಸ್ನೇಹಗಳನ್ನು ನೆನಪಿಸುತ್ತ ಆಡಾಡತ 73ರ ಆಯುಷ್ಯ ಕಳೆದ ಕಾರ್ನಾಡರ ಬದುಕಿನ ಅನೇಕ ಸಂಗತಿಗಳನ್ನು ಸಹೃದಯರು ಮೈಯೆಲ್ಲ ಕಿವಿಯಾಗಿ ಕೇಳುತ್ತ ಕುಳಿತಿದ್ದರು. ಆಡಾಡತ ಆಯುಷ್ಯದ ಆಯ್ದ ಪುಟಗಳನ್ನು ಓದಿ ಕಾರ್ನಡರು ಕುಳಿತುಕೊಳ್ಳಬೇಕೆನ್ನುವಷ್ಟರಲ್ಲೇ ಅದ್ಯಾರೋ ನಿಮ್ಮ ಆತ್ಮಕತೆಗಳ ಅರ್ಪಣೆಯನ್ನೊಮ್ಮೆ ಓದಿ ಎಂದು ಆಗ್ರಹಿಸಿದರು.`ಇವೆಲ್ಲವುಗಳ ಅಸ್ತಿತ್ವಕ್ಕೆ ಕಾರಣೀಭೂತಳಾದ ಆ ಡಾ. ಮಧುಮಾಲತಿ ಗುಣೆಯ ನೆನಪಿಗೆ ಈ ಆತ್ಮಕತೆಗಳನ್ನು ಅರ್ಪಿಸಿದ್ದೇನೆ~ ಎಂದು ಅದನ್ನು ಓದಿ ಹೇಳಿದ್ದು ಮಾತ್ರ ತುಂಬಾ ಮಾರ್ಮಿಕವಾಗಿತ್ತು.ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಪಠಾಣ ಅಧ್ಯಕ್ಷತೆ ವಹಿಸಿದ್ದರು. ಸಮ ಕುಲಪತಿ ಪ್ರೊ. ಎಸ್. ಚಂದ್ರಶೇಖರ, ಸ್ಕೂಲ್ ಆಫ್ ಹ್ಯೂಮನಿಟೀಸ್ ಮತ್ತು ಲ್ಯಾಂಗ್ವೇಜ್‌ನ ಡೀನರಾದ ಎನ್. ನಾಗರಾಜ,  ಇದ್ದರು. ರೇಣುಕ ಎಲ್. ನಾಯಕ ಕಾರ್ಯಕ್ರಮ ನಿರೂಪಿಸಿದರು. ಡಾ. ಬಸವರಾಜ ಡೋಣೂರ ಪರಿಚಯಿಸಿದರು. ಅಪ್ಪಗೆರೆ ಸೋಮಶೇಖರ ವಂದಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)