ಕನ್ನಡದಲ್ಲಿ ವೈದ್ಯಕೀಯ ವಿಜ್ಞಾನ ಹೊತ್ತಿಗೆ

7

ಕನ್ನಡದಲ್ಲಿ ವೈದ್ಯಕೀಯ ವಿಜ್ಞಾನ ಹೊತ್ತಿಗೆ

Published:
Updated:

ಬೆಂಗಳೂರು: ಕನ್ನಡದ ಮೂಲಕ ವಿಜ್ಞಾನ, ತಂತ್ರಜ್ಞಾನದಂತಹ ವಿವಿಧ ಜ್ಞಾನಶಾಖೆಗಳಲ್ಲಿರುವ ಮಾಹಿತಿಯನ್ನು ಓದಲು ಸಾಕಷ್ಟು ಪುಸ್ತಕಗಳಿಲ್ಲ ಎಂಬ ಕೊರಗು ಬಹುಕಾಲದಿಂದ ಕನ್ನಡಿಗರನ್ನು ಕಾಡುತ್ತಲೇ ಇದೆ. ಈ ಕೊರತೆಯನ್ನು ತುಂಬುವ ನಿಟ್ಟಿನಲ್ಲಿ ‘ಕನ್ನಡ ಪುಸ್ತಕ ಪ್ರಾಧಿಕಾರ’ ಒಂದಡಿ ಮುಂದಿಟ್ಟಿದೆ.ವೈದ್ಯಕೀಯ ವಿಜ್ಞಾನವನ್ನು ಕನ್ನಡದಲ್ಲಿ ತಿಳಿಸುವ 25 ಪುಸ್ತಕಗಳು ಇದೇ 15ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿವೆ. ವೈದ್ಯಕೀಯ ಸಾಹಿತ್ಯ ಮಾಲೆಯ ಇನ್ನೂ 25 ಪುಸ್ತಕಗಳು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿವೆ.ಈ ಯೋಜನೆಯ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಅವರು, ‘ಕಥೆ, ಕಾವ್ಯ, ಕಾದಂಬರಿಯ ವಿಷಯದಲ್ಲಿ ಕನ್ನಡ ಭಾಷೆಯ ಶ್ರೀಮಂತಿಕೆಯ ಬಗ್ಗೆ ಎರಡು ಮಾತಿಲ್ಲ. ಆದರೆ ವಿಜ್ಞಾನ, ತಂತ್ರಜ್ಞಾನ ಕುರಿತ ಸಾಹಿತ್ಯ ಕನ್ನಡದಲ್ಲಿ ಇಲ್ಲಿಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ.ವೈದ್ಯಕೀಯ ವಿಜ್ಞಾನ ಕುರಿತ ಪುಸ್ತಕಗಳೂ ಕನ್ನಡದಲ್ಲಿ ಹೆಚ್ಚಿಲ್ಲ’ ಎಂದು ಹೇಳಿದರು.ವೈದ್ಯ ಲೇಖಕರ ಪುಸ್ತಕಗಳು: ‘ಮನಸ್ಸು, ಮಿದುಳು ಮತ್ತು ನರಮಂಡಲ ಆರೋಗ್ಯ’ (ಲೇ: ಡಾ.ಸಿ.ಆರ್. ಚಂದ್ರಶೇಖರ್), ಗರ್ಭಕೋಶದ ಕಾಯಿಲೆಗಳಿಗೆ ಚಿಕಿತ್ಸೆ (ಎಚ್. ಗಿರಿಜಮ್ಮ), ಹೃದಯ ನಮ್ಮ ಅಮೂಲ್ಯ ಆಸ್ತಿ (ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ)... ಹೀಗೆ ವೈದ್ಯಕೀಯ ವಿಜ್ಞಾನದ ಬಗ್ಗೆ 25 ಪುಸ್ತಕಗಳು ಮೊದಲ ಹಂತದಲ್ಲಿ ಬಿಡುಗಡೆಯಾಗಲಿವೆ.‘ವೈದ್ಯಕೀಯ ವಿಜ್ಞಾನದ ಬಗ್ಗೆ ತಜ್ಞರು ಬರೆದ ಪುಸ್ತಕಗಳನ್ನು ಕನ್ನಡದಲ್ಲಿ ತರಬೇಕು ಎಂಬುದು ಒಂದು ವರ್ಷದಷ್ಟು ಹಳೆಯ ಕನಸು. ವೈದ್ಯರೇ ಇರುವ ಆರು ಮಂದಿಯ ಸಂಪಾದಕೀಯ ಮಂಡಳಿ ಈ ಕೃತಿಗಳ ಹೊಣೆ ಹೊತ್ತಿದೆ ಎಂದು ಸಿದ್ದಲಿಂಗಯ್ಯ ಹೇಳಿದರು.ಪುಸ್ತಕ ಲಭ್ಯತೆ: ‘ಆಯಾ ಕ್ಷೇತ್ರದ ತಜ್ಞರಿಂದ ವೈದ್ಯಕೀಯ ಸಾಹಿತ್ಯವನ್ನು ಕನ್ನಡದಲ್ಲಿ ಇಷ್ಟು ವಿಸ್ತೃತವಾಗಿ ಸರ್ಕಾರಿ ಸಂಸ್ಥೆಯೊಂದು ತರುತ್ತಿರುವುದು ಇದೇ ಮೊದಲು’ ಎಂದ ಸಿದ್ದಲಿಂಗಯ್ಯ ಅವರು, ‘ಬಿಡುಗಡೆಯಾದ ಪುಸ್ತಕಗಳು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುವುದು’ ಎಂದರು.ಪುಸ್ತಕ ಪ್ರಾಧಿಕಾರ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಒಟ್ಟು 18 ಪುಸ್ತಕ ಮಳಿಗೆಗಳನ್ನು ಹೊಂದಿದೆ, ಅಲ್ಲಿಯೂ ಈ ಪುಸ್ತಕಗಳು ಲಭ್ಯವಾಗಲಿವೆ. ಕಾಸರಗೋಡು, ಮುಂಬೈನಲ್ಲೂ ಪುಸ್ತಕ ಲಭಿಸಲಿದೆ ಎಂದರು. ಪ್ರತಿ ಪುಸ್ತಕದ ಬೆಲೆ 50 ರೂಪಾಯಿ.‘ಹೇಳತೇನ ಕೇಳ...’

ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರ ಸಮಗ್ರ ನಾಟಕಗಳನ್ನು ಶೀಘ್ರದಲ್ಲಿಯೇ ಪುಸ್ತಕ ಪ್ರಾಧಿಕಾರದ ವತಿಯಿಂದ ಪ್ರಕಟಿಸಲಾಗುವುದು ಎಂದು ಸಿದ್ದಲಿಂಗಯ್ಯ ಅವರು ಹೇಳಿದರು.ಇದಲ್ಲದೆ, ಡಾ. ಸದಾನಂದ ಪೆರ್ಲ ಅವರ ‘ಕಾಸರಗೋಡಿನ ಕನ್ನಡ ಹೋರಾಟ’ ಕೃತಿ, ದಿವಂಗತ ಆರ್.ವಿ. ಭಂಡಾರಿ ಅವರ ಮಕ್ಕಳ ನಾಟಕಗಳು, ಎಚ್.ಎಸ್. ಶಿವಪ್ರಕಾಶ್ ಅವರ ಸಮಗ್ರ ನಾಟಕಗಳು, ಶ್ರೀನಿವಾಸ ಹಾವನೂರು ಅವರ ‘ಹೊಸಗನ್ನಡದ ಅರುಣೋದಯ’ ಕೃತಿಯನ್ನೂ ಮುಂದಿನ ದಿನಗಳಲ್ಲಿ ಹೊರತರಲಾಗುವುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry