ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ: ಸಲಹೆ

7

ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ: ಸಲಹೆ

Published:
Updated:
ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ: ಸಲಹೆ

ಬೆಂಗಳೂರು: `ಪ್ರಸ್ತುತ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳು ಆರೋಗ್ಯದ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಕಾಯಿಲೆಗಳ ಬಗ್ಗೆ ಅರಿವಿಲ್ಲದೇ ಇರುವವರಿಗೆ ಕನಿಷ್ಠ ಜ್ಞಾನ ನೀಡಲು ವೈದ್ಯಕೀಯ ಸಾಹಿತ್ಯ ಸಹಕರಿಸುತ್ತಿದೆ~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಅಭಿಪ್ರಾಯಪಟ್ಟರು.ಕನ್ನಡ ಪುಸ್ತಕ ಪ್ರಾಧಿಕಾರವು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೈದ್ಯಕೀಯ ಸಾಹಿತ್ಯ ಮಾಲೆ ಹಾಗೂ ಬ್ರೈಲ್ ಲಿಪಿಯ ಕೃತಿಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.`ರಾಜ್ಯದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಶ್ರೀಮಂತವಾಗಿದೆ. ವೈದ್ಯಕೀಯ ಸಾಹಿತ್ಯವನ್ನು ಆಕರ್ಷಕವಾಗಿ ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಲೇಖಕರು ಇನ್ನಷ್ಟು ಪ್ರಯತ್ನ ನಡೆಸಬೇಕು~ ಎಂದು ಸಲಹೆ ನೀಡಿದರು.`ಕನ್ನಡದ ಶ್ರೇಷ್ಠ ಕೃತಿಗಳನ್ನು ಅಂಧರಿಗೆ ತಲುಪಿಸುವಲ್ಲಿ ಪ್ರಾಧಿಕಾರ ವಿಶಿಷ್ಟ ಪ್ರಯತ್ನ ನಡೆಸುತ್ತಿದ್ದು ,ಇದು ಹೀಗೆ ಮುಂದುವರೆಯಲಿ~ ಎಂದು ಆಶಿಸಿದರು.ವಿಮರ್ಶಕ ಡಾ.ನಟರಾಜ್ ಹುಳಿಯಾರ್ ಮಾತನಾಡಿ, `ಕನ್ನಡದ ಭಾಷೆಯ ಬಗ್ಗೆ ಮಾತನಾಡುವ ಸಾಹಿತಿಗಳು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಪಟ್ಟ ಪಠ್ಯಪುಸ್ತಕಗಳನ್ನು ಕನ್ನಡದಲ್ಲಿ ನೀಡುವ ಬಗ್ಗೆ ಚಿಂತಿಸದೇ ಇರುವುದು ವಿಷಾದನೀಯ~ ಎಂದು ಹೇಳಿದರು.`ಪುಸ್ತಕಗಳಿಂದ ಜ್ಞಾನಾರ್ಜನೆ ಮಾತ್ರವಲ್ಲ ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯವಜನತೆಯ ಚಿತ್ತ ಪುಸ್ತಕಗಳ ಕಡೆಗೆ ಹರಿಯಬೇಕು~ ಎಂದು ಅವರು ಹೇಳಿದರು.

ಕನ್ನಡದ ಶ್ರೇಷ್ಠ ಕೃತಿಗಳಾದ `ರತ್ನನ ಪದಗಳು~, `ನಮ್ಮ ಊರಿನ ರಸಿಕರು~ `ತಟ್ಟು ಚಪ್ಪಾಳೆ ಪುಟ್ಟ ಮಗು~ `ಸಂಕ್ರಾಂತಿ~ ` ನನ್ನ ಗೋಪಾಲ~ ಸೇರಿದಂತೆ ಒಟ್ಟು 25 ಬ್ರೈಲ್ ಲಿಪಿಯ ಕೃತಿಗಳು, ಡಾ.ಬಿ.ಟಿ.ರುದ್ರೇಶ್ ಅವರ `ಬಡವರ ಬಾದಾಮಿ ಹೋಮಿಯೋಪತಿ~, ಡಾ.ಅ.ಶ್ರೀಧರ್ ಅವರ `ಮನಸ್ಸು ಮತ್ತು ಆರೋಗ್ಯ~ ಸೇರಿದಂತೆ ವೈದ್ಯಕೀಯಕ್ಕೆ ಸಂಬಂಧಪಟ್ಟಂತೆ 30ಕ್ಕೂ ಹೆಚ್ಚು ಕೃತಿಗಳನ್ನು ಬಿಡುಗಡೆ ಮಾಡಲಾಯಿತು.ಕನ್ನಡ  ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಡಾ.ಮನು ಬಳಿಗಾರ್, ವೈದ್ಯಕೀಯ ಸಾಹಿತ್ಯ ಮಾಲೆಯ ಸಂಪಾದಕ ಡಾ.ಸಿ.ಆರ್.ಚಂದ್ರಶೇಖರ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, ಆಡಳಿತಾಧಿಕಾರಿ ಬಿ.ಎಚ್.ಮಲ್ಲಿಕಾರ್ಜುನ ಹಾಗೂ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry