ಕನ್ನಡದಲ್ಲೇ ಪರೀಕ್ಷೆ ಬರೆದ ಛಲಗಾರ

7

ಕನ್ನಡದಲ್ಲೇ ಪರೀಕ್ಷೆ ಬರೆದ ಛಲಗಾರ

Published:
Updated:
ಕನ್ನಡದಲ್ಲೇ ಪರೀಕ್ಷೆ ಬರೆದ ಛಲಗಾರ

 ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾದ ರಾಜ್ಯದ ಪ್ರತಿಭೆ

ಬೆಂಗಳೂರು: `ದೂರದ ಊರುಗಳ ತರಬೇತಿ ಸಂಸ್ಥೆಗಳನ್ನು ನಂಬಿದರಷ್ಟೇ ನಾಗರಿಕ ಸೇವಾ ಪರೀಕ್ಷೆ ಪಾಸು ಮಾಡಬಹುದೆಂಬ ವಾದವನ್ನು ತಿರಸ್ಕರಿಸಿದೆ. ಪುಸ್ತಕವನ್ನೇ ನಂಬಿದೆ. ನನ್ನ ನಂಬಿಕೆಯಂತೆಯೇ ಪರೀಕ್ಷೆಗೆ ತಯಾರಾದೆ. ಸಂಪೂರ್ಣವಾಗಿ ಕನ್ನಡದಲ್ಲೇ ಪರೀಕ್ಷೆ ಬರೆದೆ. ಕೊನೆಗೂ ನಂಬಿಕೆ ಹುಸಿಯಾಗಲಿಲ್ಲ~- ಇದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2011ನೇ ಸಾಲಿನ ಭಾರತೀಯ ನಾಗರಿಕ ಸೇವಾ ಪರೀಕ್ಷೆಯನ್ನು ಸಂಪೂರ್ಣವಾಗಿ ಕನ್ನಡದಲ್ಲೇ ಎದುರಿಸಿ 152ನೇ ರ‌್ಯಾಂಕ್ ಪಡೆದಿರುವ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಸಾಸಲು ಗ್ರಾಮದ ಎಸ್.ಎಂ.ವಿಜಯಕುಮಾರ್ ಅವರ ವಿಶ್ವಾಸದ ನುಡಿಗಳು.ತಂದೆ ಮಹದೇವಪ್ಪ ಅನಕ್ಷರಸ್ಥರು. ತಾಯಿ ಶರಾವತಿ ಏಳನೇ ತರಗತಿವರೆಗೆ ಓದಿದ್ದರು. ಕೃಷಿಯಿಂದ ಸಂಸಾರದ ವೆಚ್ಚ ಸರಿದೂಗುವಷ್ಟು ಆದಾಯ ಬಾರದ ಕಾರಣದಿಂದ ತಂದೆ ಹೋಟೆಲ್ ಆರಂಭಿಸಿದರು. ಅದರಿಂದಲೇ ದುಡಿದು ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸಿದರು. ಸ್ನಾತಕೋತ್ತರ ಪದವಿ ಪೂರೈಸಿದ ಹಿರಿಯ ಪುತ್ರ ಪ್ರಸನ್ನಕುಮಾರ್, ಹೊಳಲ್ಕೆರೆ ತಾಲ್ಲೂಕಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಬಿಇ ಮೆಕ್ಯಾನಿಕಲ್ ಪದವೀಧರರಾದ 26ರ ಹರೆಯದ ವಿಜಯಕುಮಾರ್ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನಲ್ಲಿ ಉಪ ನೋಂದಣಿ ಅಧಿಕಾರಿ. ಈಗ ಐಪಿಎಸ್ ಅಧಿಕಾರಿಯಾಗುವ ಹಾದಿಯಲ್ಲಿದ್ದಾರೆ.ಸ್ವಗ್ರಾಮದ ಸಮೀಪದ ಕಿಕ್ಕೇರಿಯಲ್ಲಿ ಪ್ರಾಥಮಿಕ ಶಿಕ್ಷಣ. ಶಿವಾರಗುಡ್ಡದ ನವೋದಯ ವಿದ್ಯಾಲಯದಲ್ಲಿ ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ. ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪೂರೈಸಿದ ವಿಜಯಕುಮಾರ್, ನಂತರ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. 2008ರಲ್ಲಿ ಪರೀಕ್ಷೆ ಎದುರಿಸಿದರೂ ಸಂದರ್ಶನದ ಹಂತ ತಲುಪಿರಲಿಲ್ಲ. 2010ರಲ್ಲಿ ಸಂದರ್ಶನದಲ್ಲಿ ಒಂದು ಅಂಕದಿಂದ ಅನುತ್ತೀರ್ಣರಾದರು. ಮೂರನೇ ಪ್ರಯತ್ನದಲ್ಲಿ 152ನೇ ರ‌್ಯಾಂಕ್ ಪಡೆಯುವಲ್ಲಿ ಸಫಲರಾಗಿದ್ದಾರೆ.`ನಾನು ಚಿಕ್ಕಂದಿನಿಂದಲೂ ಸಾಹಿತ್ಯ ಓದಿಕೊಂಡು ಬೆಳೆದವನು. ಓದು ನನ್ನ ಬದುಕು ರೂಪಿಸುತ್ತದೆ ಎಂಬ ನಂಬಿಕೆ ನನ್ನದು. ಪಿ.ಲಂಕೇಶರ ಸಾಹಿತ್ಯವನ್ನು ಹೆಚ್ಚು ಓದಿದ್ದೆ. ಪದವಿ ನಂತರ ನಿರಂತರವಾಗಿ ಓದಿನಲ್ಲಿ ತೊಡಗಿಸಿಕೊಂಡೆ. ಉಪ ನೋಂದಣಿ ಅಧಿಕಾರಿಯಾದರೂ ಓದು ಬಿಡಲಿಲ್ಲ. 2011ರ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ಮತ್ತು ರಾಜ್ಯಶಾಸ್ತ್ರವನ್ನು ಐಚ್ಛಿಕ ವಿಷಯಗಳಾಗಿ ಆಯ್ಕೆ ಮಾಡಿಕೊಂಡಿದ್ದೆ. ದೀರ್ಘ ಓದಿನ ಪರಿಣಾಮವಾಗಿ ನಾನು ಹೆಚ್ಚಿನ ಅಂಕ ಪಡೆಯಲು ಸಾಧ್ಯ          ವಾಯಿತು~ ಎಂದು ವಿಜಯಕುಮಾರ್  ತಿಳಿಸಿದರು.`ನಾಗರಿಕ ಸೇವಾ ಪರೀಕ್ಷೆ ಪಾಸು ಮಾಡಲು ದೆಹಲಿಗೆ ಹೋಗಿ ದೊಡ್ಡ ತರಬೇತಿ ಸಂಸ್ಥೆಗಳಲ್ಲೇ ತಯಾರಿ ಮಾಡಬೇಕೆಂಬ ನಂಬಿಕೆ ಇದೆ. ಅದನ್ನು ಹುಸಿ ಮಾಡುವುದೇ ನನ್ನ ಮೊದಲ ಗುರಿ ಆಗಿತ್ತು. ಅದಕ್ಕಾಗಿಯೇ ಯಾವ ತರಬೇತಿ ಕೇಂದ್ರಕ್ಕೂ ಹೋಗಲಿಲ್ಲ. ಕುಳಿತು ಓದಿದೆ. ಐಚ್ಛಿಕ ವಿಷಯಗಳ ಪರೀಕ್ಷೆಯನ್ನು ಸಂಪೂರ್ಣವಾಗಿ ಕನ್ನಡದಲ್ಲೇ ಎದುರಿಸಿದೆ. ರಾಜ್ಯದ ಯಾವುದೋ ಮೂಲೆ ಕುಗ್ರಾಮದಲ್ಲಿ ಕುಳಿತು ಗುಡಿಸಲಿನಲ್ಲಿ ಓದಿದರೂ ಕನ್ನಡದಲ್ಲೇ ನಾಗರಿಕ ಸೇವಾ ಪರೀಕ್ಷೆ ಪಾಸು ಮಾಡಬಹುದು ಎಂಬ ನಂಬಿಕೆ ನಮ್ಮ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಈ ಕಾರಣ ಕೂಡ ನಾನು ಅಸುಸರಿಸಿದ ಮಾರ್ಗದ ಹಿಂದಿತ್ತು~ ಎಂದರು.`ದಿನಪತ್ರಿಕೆ ಓದುವುದು ಕೂಡ ಪರೀಕ್ಷಾ ತಯಾರಿಯ ಭಾಗ. ಚಿಕ್ಕಂದಿನಿಂದಲೂ `ಪ್ರಜಾವಾಣಿ~ ಓದುತ್ತಿದ್ದೇನೆ. ಪರೀಕ್ಷಾ ತಯಾರಿಗೆ ಇದರಿಂದ ಬಹಳ ನೆರವಾಯಿತು. ಕನ್ನಡದಲ್ಲಿ ಜ್ಞಾನ ಸೃಷ್ಟಿಸಿ, ಅದರ ಮೂಲಕವೇ ಕೊಡುಗೆ ನೀಡಬೇಕೆಂಬ ಭಾಷಾತಜ್ಞ ಡಾ.ಕೆ.ವಿ.ನಾರಾಯಣ ಅವರ ಸಿದ್ಧಾಂತದೆಡೆಗೆ ಒಲವು ಹೊಂದಿದವನು. ಅದು ಕಾರ್ಯಸಾಧ್ಯ ಆಗಬೇಕು~ ಎನ್ನುತ್ತಾರೆ ವಿಜಯಕುಮಾರ್.152ನೇ ರ‌್ಯಾಂಕ್‌ನೊಂದಿಗೆ ಐಪಿಎಸ್ ಅಧಿಕಾರಿಯಾಗುವ ಅವಕಾಶ ಇದ್ದರೂ, ಅಷ್ಟಕ್ಕೇ ಅವರಿಗೆ ತೃಪ್ತಿ ಇದ್ದಂತಿಲ್ಲ. ಈ ಬಾರಿ ಕರ್ತವ್ಯಕ್ಕೆ ಸೇರಿದ ಬಳಿಕ ಮತ್ತೆ ಪರೀಕ್ಷೆ ಎದುರಿಸಿ ಉತ್ತಮ ರ‌್ಯಾಂಕ್‌ನೊಂದಿಗೆ ಐಎಎಸ್ ಅಧಿಕಾರಿ ಆಗಬೇಕು ಎಂಬ ಹಂಬಲದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry