ಮಂಗಳವಾರ, ನವೆಂಬರ್ 19, 2019
22 °C

ಕನ್ನಡದ ಅಭಿವೃದ್ಧಿಗೆ ಹಲವು ಕಂಟಕ: ಅರವಿಂದ ಚೊಕ್ಕಾಡಿ

Published:
Updated:

ಹಾಸನ:ಕನ್ನಡದ ಅಭಿವೃದ್ಧಿಗೆ ಹಲವು ಕಂಟಕಗಳಿವೆ. ಸರ್ಕಾರ ಅನುಸರಿಸುತ್ತಿರುವ ಶಿಕ್ಷಕರ ಆಯ್ಕೆ ಪ್ರಕ್ರಿಯೆಯೂ ಅವುಗಳಲ್ಲಿ ಒಂದು ಎಂದು ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು.ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ನಡೆದ `ಕನ್ನಡ ಭಾಷಾ ಬೆಳವಣಿಗೆಯ ಸವಾಲುಗಳು' ವಿಷಯದ ಕುರಿತ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.`ಶಿಕ್ಷಕರನ್ನು ಆಯ್ಕೆ ಮಾಡುವ ರಾಜ್ಯ ಸರ್ಕಾರದ ನಿಯಮಾವಳಿ ಅವೈಜ್ಞಾನಿಕವಾಗಿದೆ. ಇದರಿಂದಾಗಿ ಉತ್ತಮ ಕನ್ನಡ ಶಿಕ್ಷಕರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಪರೋಕ್ಷವಾಗಿ ಇದು ಸರ್ಕಾರಿ ಶಾಲೆಗಳಲ್ಲೇ ಕನ್ನಡ ಭಾಷೆಯನ್ನು ಹೊಸಕಿ ಹಾಕುವ ಕಾರ್ಯ ಮಾಡುತ್ತಿದೆ. ಮಾತೃ ಭಾಷೆಯನ್ನು ಸಾಮಾಜಿಕ ನೆಲಗಟ್ಟಿನಲ್ಲಿ ಸ್ಪಷ್ಟ ಪಡಿಸಬೇಕು. ಮಕ್ಕಳಿಗೆ ಅನುಭವದ ಮೂಲಕ ಮಾತೃ ಭಾಷೆಯನ್ನು ಕಲಿಸುವ ಪ್ರಯತ್ನ ಆಗಬೇಕು. ಭಾಷಾ ಕೌಶಲ್ಯ, ಭಾಷೆಯ ಪರಂಪರೆಯ ಬಗ್ಗೆ ತಿಳಿಸಿಕೊಡುವ ಪ್ರಯತ್ನಗಳು ಆಗಬೇಕು' ಎಂದರು.ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಲೇಖಕ ಜಿ.ಎನ್. ಮೋಹನ್ `ಜಾಗತೀಕರಣ ಎಂಬ ಹೆಬ್ಬಾವು ಕನ್ನಡ ಭಾಷೆಯನ್ನು ನುಂಗಿ ಹಾಕುತ್ತಿದೆ. ಭಾಷೆಯನ್ನು ಜಾಗತೀಕರಣ ಒಡೆದು ಹಾಕುತ್ತಿದೆ. ಹೆಚ್ಚು ಆತಂಕದ ವಿಚಾರವೆಂದರೆ ಕನ್ನಡಿಗರ ಮನಸ್ಸಿನೊಳಗೆ ಇರುವ ಸಂವೇದನೆ, ಭಾಷೆಯ ಬಗೆಗಿನ ಪ್ರೀತಿ ಕಡಿಮೆಯಾಗುತ್ತಿದೆ' ಎಂದು ವಿಷಾದ ವ್ಯಕ್ತಪಡಿಸಿದರು.ಹೊಸ ತಂತ್ರಜ್ಞಾನ ನಡುವೆ ಕನ್ನಡ ಭಾಷೆಯ ಬೆಳವಣಿಗೆ ಕುಂಠಿತವಾಗುತ್ತಿದೆ. ಗೂಗಲ್ ಸಂಸ್ಥೆ ಕನ್ನಡ ಭಾಷೆಯನ್ನು ಕಟ್ಟುವ ಕೆಲಸ ಮಾಡು ತ್ತಿರುವುದು ಶ್ಲಾಘನೀಯ. ಮಾಧ್ಯಮಗಳು ಸಹ ನಗರ ಕೇಂದ್ರಿತವಾಗುತ್ತಿರುವುದರಿಂದ ಭಾಷೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಮಾಧ್ಯಮಗಳು ನಗರ ಪ್ರದೇಶದ ಜನರಿಗೆ ಬೇಕಾದ ಭಾಷೆ ಬಳಸಲು ಆರಂಭಿಸಿವೆ' ಎಂದರು.ಕವಯಿತ್ರಿ ಸುಶೀಲಾ ಸೋಮಶೇಖರ ಆಶಯ ನುಡಿಗಳನ್ನಾಡಿದರು. ಕ.ರಾ.ಮು.ವಿ.ಯ ಡಾ. ವಿಜಯ ಕುಮಾರ್ ಅವರೆಕಾಡು ವಿಷಯ ಮಂಡಿಸಿದರು ಹಾಗೂ ಡಾ. ಕೆ.ಸಿ. ಮರಿಯಪ್ಪ, ತ್ಯಾವಳ್ಳಿ ಪರಮೇಶ್, ಅನಸೂಯ ಗೊರೂರು ಸಂವಾದದಲ್ಲಿ ಪಾಲ್ಗೊಂಡರು.ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿದ ಸಮ್ಮೇಳನ:

ನಂತರ ನಡೆದ ಗೋಷ್ಠಿ ಜಿಲ್ಲೆಯ ಸಮಸ್ಯೆಗಳನ್ನು ಅನಾವರಣಗೊಳಿಸಿತು. `ಹಾಸನ ಜಿಲ್ಲೆಯ ಪ್ರಚಲಿತ ಸಮಸ್ಯೆಗಳು' ಕುರಿತ ಗೋಷ್ಠಿಯಲ್ಲಿ ಪ್ರಗತಿಪರ ಕೃಷಿಕ ಅರಕಲಗೂಡು ಮಧುಸೂದನ್ ರೈತರ ಸಮಸ್ಯೆಗಳನ್ನು ಬಿಚ್ಚಿಟ್ಟರು. `ಹಾಸನದಲ್ಲಿ ಯಾವ ಬೆಳೆಯನ್ನಾದರೂ ಬೆಳೆಯಬಹುದು. ಕೃಷಿಯಲ್ಲಿ ವೈವಿಧ್ಯವಿದೆ. ಸಂಪನ್ಮೂಲಗಳಿಂದ ಸಂಪದ್ಭರಿತವಾಗಿರುವ ಜಿಲ್ಲೆಯಲ್ಲಿ ಸಮಸ್ಯೆಗಳೂ ಸಮೃದ್ಧವಾಗಿವೆ' ಎಂದರು.ಮೂರು ನದಿ, ಎರಡು ಅಣೆಕಟ್ಟೆಗಳಿವೆ. ಜಿಲ್ಲೆಯ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಇದೆ. ಯಾವ ಬೆಳೆಯನ್ನಾದರೂಬೆಳೆಯಬಹುದು, ಆದರೆ ಮಾರುಕಟ್ಟೆ ಇಲ್ಲ. ರೈತರು ಬೆಳೆದ ಕೃಷಿ ಪದಾರ್ಥಗಳ ಮೌಲ್ಯವರ್ಧನೆಗೆ ಕೈಗಾರಿಕೆಗಳು ಇಲ್ಲ.  ಕೃಷಿ ಮಾರುಕಟ್ಟೆ ವ್ಯವಸ್ಥೆ ಮಾಡದಿದ್ದರೂ ಪ್ರತಿ ಹಳ್ಳಿಯಲ್ಲಿ ಎಂ.ಎಸ್.ಐ.ಎಲ್. ಮೂಲಕ ಮದ್ಯದ ವಿತರಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂದರು.ಚಲನಚಿತ್ರ ನಿರ್ದೇಶಕ ಹಾಗೂ ಪರಿಸರವಾದಿ ಕೇಸರಿ ಹರವೂ ಪಶ್ಚಿಮ ಘಟ್ಟ ಮತ್ತು ಅಲ್ಲಿಯ ಜೀವ ವೈವಿಧ್ಯದ ಬಗ್ಗೆ ಮಾತನಾಡಿದರು.

ಸಾಹಿತಿ ಹಾಡ್ಲಹಳ್ಳಿ ನಾಗರಾಜ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು, ಸಾಹಿತಿ ಶೈಲಜ, ಸಮ್ಮೇಳ ನಾಧ್ಯಕ್ಷ ಡಾ. ಎಂ.ಎಸ್. ಶೇಖರ್, ಪರಿಸರವಾದಿ ಕಿಶೋರ್ ಕುಮಾರ್, ದಿವ್ಯ ಬಾಲಾಜಿ ಹಾಗೂ ಮಹೇಶ್ ಬೇಲೂರು ಹಾಜರಿದ್ದರು.

ಪ್ರತಿಕ್ರಿಯಿಸಿ (+)