ಕನ್ನಡದ ಕೆಲಸ ಮರೆಯಿತೇ ಸಾಹಿತ್ಯ ಪರಿಷತ್ತು?

7

ಕನ್ನಡದ ಕೆಲಸ ಮರೆಯಿತೇ ಸಾಹಿತ್ಯ ಪರಿಷತ್ತು?

Published:
Updated:

ಚಿಕ್ಕಬಳ್ಳಾಪುರ: `ವರ್ಷಕ್ಕೊಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿ ಸುಮ್ಮನಾಗಿಬಿಡುವ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡದ ಕಾರ್ಯಗಳನ್ನು ಮರೆತಿವೆ. ಕನ್ನಡಪರ ಚಟುವಟಿಕೆ ಅಥವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಸಕ್ತಿ ತೋರುತ್ತಿಲ್ಲ'

-ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿ ಬಗ್ಗೆ  ಜಿಲ್ಲೆಯ ಸಾಹಿತ್ಯಾಸಕ್ತರು ಮತ್ತು ಯುವಜನರು ಅಸಮಾಧಾನ ವ್ಯಕ್ತಪಡಿಸುವ ಬಗೆ ಇದು

.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ' ಚಂದ್ರು ಅಥವಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಜಿಲ್ಲೆಗೆ ಆಗಮಿಸಿದಾಗ ಚುರುಕಗೊಂಡಂತೆ ತೋರುವ ಪರಿಷತ್ತಿನ ಪದಾಧಿಕಾರಿಗಳು ಮತ್ತೆ ಜಾಗೃತರಾಗುವುದು ಮತ್ತೊಂದು ಕನ್ನಡ ಸಮ್ಮೇಳನದಲ್ಲಿ ಎಂಬ ಟೀಕೆ ಹಲವರಿಂದ ಕೇಳಿಬಂದಿದೆ. ಚಿಕ್ಕಬಳ್ಳಾಪುರ ಗಡಿ ಜಿಲ್ಲೆಯೆಂದು ಗುರುತಿಸಿಕೊಂಡರೂ ಕನ್ನಡ ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಇಲ್ಲವೇ ಕನ್ನಡಪರ ಸಂಘಟನೆಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿಲ್ಲ ಎಂದು ಸಹ ಅವರು ಬೇಸರ ವ್ಯಕ್ತಪಡಿಸುತ್ತಾರೆ.ನೆರೆಯ ಕೋಲಾರ ಜಿಲ್ಲೆಯ ಯಾವುದೇ ತಾಲ್ಲೂಕಿಗೆ ಭೇಟಿ ನೀಡಿದರೂ ಅಲ್ಲಿ ಒಂದಿಲ್ಲೊಂದು ಸಾಹಿತ್ಯ ಕಾರ್ಯಕ್ರಮ ನಡೆಯುತ್ತಿರುತ್ತದೆ. ಅಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನವರು, ಕನ್ನಡಪರ ಸಂಘಟನೆ, ರಂಗಭೂಮಿ ಕಲಾವಿದರು, ಸಾಹಿತಿಗಳು ಮತ್ತು ಕವಿಗಳು ಒಂದೆಡೆ ಸೇರಿ ಪುಟ್ಟದಾದ ಸಾಹಿತ್ಯ ಕಾರ್ಯಕ್ರಮವನ್ನಾದರೂ ಆಯೋಜಿಸುತ್ತಾರೆ.ಆದರೆ, ನಮ್ಮ ಜಿಲ್ಲೆಯಲ್ಲಿ ವರ್ಷಕ್ಕೊಂದು ಸಮ್ಮೇಳನ ಆಯೋಜಿಸುವುದೇ ದೊಡ್ಡ ಸವಾಲು ಎಂಬಂತೆ ಪರಿಷತ್‌ನವರು ಹೇಳುತ್ತಾರೆ. ಹೀಗಾಗಿ ಇಲ್ಲಿ ಪ್ರತಿಭಾವಂತ ಯುವಜನರಿದ್ದರೂ ಸಾಹಿತ್ಯದಲ್ಲಿ ಬೆಳೆಯಲು ಅಥವಾ ಬೆಳಕಿಗೆ ಬರಲು ಅವಕಾಶವೇ ಸಿಗುತ್ತಿಲ್ಲ ಎಂದು ಕಾಲೇಜು ವಿದ್ಯಾರ್ಥಿನಿ ಕೆ.ವಿನುತಾ ಬೇಸರ ವ್ಯಕ್ತಪಡಿಸಿದರು.ಜಿಲ್ಲೆಯ ಯಾವುದಾದರೂ ತಾಲ್ಲೂಕಿನಲ್ಲಿ ಹೊಸ ಪುಸ್ತಕ ಬಿಡುಗಡೆಯಾದರೆ ಅದೇ ದೊಡ್ಡ ಸಂಭ್ರಮ. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಸಾಹಿತಿಗಳನ್ನು, ಬರಹಗಾರರನ್ನು ನೋಡುವ ಮತ್ತು ಪರಿಚಯ ಮಾಡಿಕೊಳ್ಳುವ ಅವಕಾಶ ದೊರೆಯುತ್ತದೆ.ಜೊತೆಗೆ ವಿವಿಧ ಪ್ರಕಾಶನ ಸಂಸ್ಥೆಗಳು ಪ್ರದರ್ಶಿಸುವ ಪುಸ್ತಕಗಳನ್ನು ಖರೀದಿಸಬಹುದು. ಸಾಹಿತ್ಯದ ಗುಂಗಿನಲ್ಲಿ ಆ ಇಡೀ ದಿನ ಕಳೆಯಬಹುದು. ಆದರೆ ಇಲ್ಲಿ ಪರಿಷತ್‌ನಿಂದ, ಕನ್ನಡಪರ ಸಂಘಟನೆಗಳಿಂದ ಇಂತಹ ಕಾರ್ಯಕ್ರಮ ನಡೆಯುವುದೇ ಅಪರೂಪ ಎಂದರು.ಕನ್ನಡ ಸಮ್ಮೇಳನ ಆಯೋಜಿಸುವುದಷ್ಟೇ ಸಾಹಿತ್ಯ ಪರಿಷತ್ ಕರ್ತವ್ಯವಲ್ಲ. ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸುವುದು, ಖಾಸಗಿ ಪ್ರಕಾಶನ ಸಂಸ್ಥೆ ಸಹಯೋಗದಲ್ಲಿ ಹೊಸ ಪುಸ್ತಕ ಪ್ರಕಟಿಸುವುದು ಅಥವಾ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುವುದು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನಿಂದ ಇಲ್ಲವೇ ಸ್ಥಳೀಯ ಮಟ್ಟದಲ್ಲಿ ನಿಧಿ ಸಂಗ್ರಹಣೆ ಮಾಡುವ ಮೂಲಕ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಾಹಿತಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಇದುವರೆಗೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ನಗರದ ಜೂನಿಯರ್ ಕಾಲೇಜಿನ ರಂಗಮಂದಿರದ ಪುಟ್ಟ ಕೋಣೆಯನ್ನೇ ಕಚೇರಿ ಮಾಡಿಕೊಂಡಿದೆ.ಸ್ವಂತ ಕಟ್ಟಡಕ್ಕಾಗಿ ಜಿಲ್ಲಾಡಳಿತ ಅಥವಾ ಸರ್ಕಾರಕ್ಕೆ ಒತ್ತಾಯ ಮಾಡಬೇಕು. ತಾಲ್ಲೂಕು ಮಟ್ಟದಲ್ಲೂ ಕಚೇರಿ ಸ್ಥಾಪನೆಗೆ ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು..

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry