ಶುಕ್ರವಾರ, ಡಿಸೆಂಬರ್ 6, 2019
26 °C

ಕನ್ನಡದ ನಾಳೆಗಳು: ಕನ್ನಡ ಕಟ್ಟುವ ಕರ್ತವ್ಯ

Published:
Updated:
ಕನ್ನಡದ ನಾಳೆಗಳು: ಕನ್ನಡ ಕಟ್ಟುವ ಕರ್ತವ್ಯ

ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ ಹಾಗೂ ದಟ್ಟವಾದ ಪ್ರೀತಿಯನ್ನು ಹೃದಯದಲ್ಲಿ ತುಂಬಿಕೊಳ್ಳುತ್ತ, ಎರಡೂವರೆ ಸಾವಿರ ವರ್ಷಗಳಿಂದ ಕನ್ನಡ ಅನೇಕ ಸವಾಲುಗಳನ್ನು ಸ್ವೀಕರಿಸುತ್ತಾ ಬಂದಿದೆ. ಸಂಸ್ಕೃತ- ಪ್ರಾಕೃತ, ಅರೆಬಿಕ್- ಪರ್ಷಿಯನ್ ಅಥವಾ ನೆರೆರಾಜ್ಯಗಳ ಭಾಷೆಗಳಾಗಬಹುದು, ಆಧುನಿಕ ಕನ್ನಡದ ಸಂದರ್ಭದಲ್ಲಿ ಇಂಗ್ಲಿಷ್ ಹಾಗೂ ಇತರೆ ಭಾಷೆಗಳಾಗಬಹುದು, ಬೇರೆ ಬೇರೆ ಭಾಷೆಗಳ ಆಕ್ರಮಣಗಳಾದರೂ ಆಗಾಗ ಅಂದಂದಿನ ಆ ಭಾಷೆಗಳ ಸತ್ವವನ್ನು ಹೀರಿ ಕನ್ನಡ ಸಮೃದ್ಧವಾಗಿ ಬೆಳೆದಿದೆಯೇ ಹೊರತು ಸೊರಗಿರಲಿಲ್ಲ.ಆದರೆ ಇಂದು ಬೇರೆ ಭಾಷೆಗಳು, ಅದರಲ್ಲಿಯೂ ಇಂಗ್ಲಿಷ್ ಕನ್ನಡಿಗರನ್ನು ಹೆಚ್ಚು ತಲ್ಲಣಗೊಳಿಸಿದೆ. ಈ ಭಾಷೆಯನ್ನು ಹೀರಿದ ಕನ್ನಡ ಕಣ್ಮರೆಯಾಗುತ್ತಿದೆಯೇನೋ ಎನ್ನುವ ಭೀತಿ ಕನ್ನಡಿಗರನ್ನು ಕಾಡುತ್ತಿದೆ. ಈ ಆತಂಕವನ್ನು ಮೀರಲು ಇರುವ ಎರಡು ಮುಖ್ಯ ಅಂಶ ಎಂದರೆ- ಪ್ರಾಥಮಿಕ ಹಂತದ ತರಗತಿಯಿಂದಲೇ ಕನ್ನಡ ಮಾಧ್ಯಮ ಹಾಗೂ ಪ್ರಮುಖ ಇಂಗ್ಲಿಷ್ ಮಾಧ್ಯಮ ತರಗತಿಗಳಲ್ಲಿಯೂ ಕನ್ನಡವನ್ನು ಒಂದು ಕಲಿಕೆಯ ಭಾಷೆಯಾಗಿ ಕಡ್ಡಾಯಗೊಳಿಸುವುದು ಹಾಗೂ ಕನ್ನಡಿಗರು ಸಾಧ್ಯವಾದ ಕಡೆಯಲ್ಲೆಲ್ಲಾ ಕನ್ನಡ ಭಾಷೆಯನ್ನು ನಿರಂತರವಾಗಿ ಬಳಸುವುದು.ಕನ್ನಡ ಉಳಿದು ಬೆಳೆಯುವುದೇ ಅದನ್ನು ಉಳಿಸಿ ಬೆಳೆಸುವುದರಿಂದ. ಪ್ರಪಂಚದ ಯಾವುದೇ ಭಾಷೆಯಿಂದ ಜ್ಞಾನ ದೊರೆತರೂ ಅದನ್ನು ಕನ್ನಡಕ್ಕೆ ಬಳಸಿಕೊಂಡು ಸರ್ವತೋಮುಖವಾಗಿ ಬೆಳೆಸುವುದು ಬಹುಮುಖ್ಯ. ‘ಥಿಂಕ್ ಗ್ಲೋಬಲಿ ವರ್ಕ್ ಲೋಕಲಿ’ ಎನ್ನುವ ಇಂಗ್ಲಿಷ್‌ನ ಪ್ರಸಿದ್ಧ ಹೇಳಿಕೆಯಂತೆ ಕನ್ನಡವನ್ನು ಕಟ್ಟುವ ಬೆಳೆಸುವ ಕರ್ತವ್ಯ ಕನ್ನಡಿಗರದ್ದೇ ಆಗಿದೆ.ಒಂದು ಭಾಷೆಯನ್ನು ಹಾಳು ಮಾಡಿದರೆ ಸಂಸ್ಕೃತಿ-ಪರಂಪರೆಯನ್ನು ಹಾಳು ಮಾಡುವುದೆಂದೇ ಅರ್ಥ. ಭಾಷೆ ಆ ಜನಾಂಗದ ಎಲ್ಲಾ ರೀತಿಯ ಭಾವನೆಗಳನ್ನು ಅಭಿವ್ಯಕ್ತಗೊಳಿಸುವಲ್ಲಿ ಬಹಳ ಮುಖ್ಯವಾದದ್ದು. ಭಾಷೆಯ ಜತೆಯಲ್ಲಿಯೇ ಇತಿಹಾಸ, ಪರಂಪರೆ, ಸಂಸ್ಕೃತಿ ಹಾಗೂ ಆ ಜನಾಂಗದ ಜೀವನ ಪ್ರತಿಬಿಂಬವಾಗುತ್ತದೆ. ಆದುದರಿಂದ ಕನ್ನಡ- ಕನ್ನಡಿಗ- ಕರ್ನಾಟಕ ಇವು ಒಂದೇ ಭಾವನೆಯ ಮೂರು ಮುಖಗಳು ಎಂಬುದನ್ನು ಮನಗಾಣಬೇಕು.ಈ ಬಾರಿಯ ಸಾಹಿತ್ಯ ಸಮ್ಮೇಳನ ಈ ನಿಟ್ಟಿನಲ್ಲಿ ಹೆಚ್ಚು ಪ್ರಯೋಜನಕಾರಿಯಾದ ನಿಲುವು ತಳೆಯಲಿ.

-ಡಾ. ಕಮಲಾ ಹಂಪನಾ

ಮೂಡಬಿದರೆ, ಸಾಹಿತ್ಯ ಸಮ್ಮೇಳನ(2004) ಅಧ್ಯಕ್ಷೆಎಲ್ಲಾ ಹಂತಗಳಲ್ಲಿ ಕಲಿಕೆ ಹಾಗೂ ಬೋಧನೆ ಕನ್ನಡದಲ್ಲೇ ಆಗಬೇಕು. ಜರ್ಮನಿ, ಫ್ರಾನ್ಸ್ ಮುಂತಾದ ದೇಶಗಳಲ್ಲಿ ಆಗುವಂತೆ ಸಂಶೋಧನೆ, ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರದಲ್ಲಿ ಪರಿಭಾಷೆಗಳು ಕನ್ನಡದಲ್ಲಿ ಬೆಳೆಯಬೇಕು (ಮಾತೃಭಾಷೆಯಲ್ಲಿ ಶಾಸ್ತ್ರೀಯ ಸಾಮಗ್ರಿ ದೊರೆಯುವುದರಿಂದಲೇ ಜಪಾನ್‌ನಲ್ಲಿ ಬಹುದೊಡ್ಡ ಪ್ರಗತಿ ಸಾಧ್ಯವಾಗಿದೆ). ಆಗ ತಂತ್ರಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳ ಸರ್ವತೋಮುಖ ಏಳಿಗೆಯನ್ನು ನಿರೀಕ್ಷಿಸಬಹುದು.ಮತ್ತೊಂದೆಡೆ ಕನ್ನಡ ಸಾಹಿತ್ಯ ಎಷ್ಟರ ಮಟ್ಟಿಗೆ ಬೇರೆ ಬೇರೆ ಭಾಷೆಗೆ ಅನುವಾದಗೊಳ್ಳಬೇಕಿದೆ ಎಂದರೆ- ಟಾಲ್‌ಸ್ಟಾಯ್, ಬ್ರೆಕ್ಟ್ ಕುರಿತು ಕನ್ನಡಿಗರು ಮಾತನಾಡುವಂತೆ ಕುವೆಂಪು, ಕಾರಂತ, ಬೇಂದ್ರೆ ಜಗತ್ತಿನ ಮೂಲೆ ಮೂಲೆಯ ಜನರ ಮನಸ್ಸಿನಲ್ಲಿ ಅಚ್ಚೊತ್ತಬೇಕು. ಜಗತ್ತಿನ ಪ್ರಮುಖ ಗ್ರಂಥಾಲಯಗಳಲ್ಲಿ ಪ್ರತ್ಯೇಕ ಕನ್ನಡ ವಿಭಾಗವೊಂದು ಸೃಷ್ಟಿಯಾಗಬೇಕು.ಇಪ್ಪತ್ತೊಂದನೇ ಶತಮಾನದ ಅಂತ್ಯದ ವೇಳೆಗೆ ನೂರು ಭಾಷೆಗಳು ಉಳಿಯುವುದೂ ಕಷ್ಟ ಎಂದು ಭಾಷಾ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಆಯಾ ಭಾಷೆಗಳು ಪ್ರಸ್ತುತ ಪ್ರಪಂಚಕ್ಕೆ ತಕ್ಕಂತೆ ರೂಪಾಂತರಗೊಳ್ಳಲು ಸಾಧ್ಯವಾಗದೇ ಇರುವುದು. ಆದ್ದರಿಂದ ಕಲಿಕೆಯ ಹಂತದಲ್ಲಿಯೇ ಮಕ್ಕಳಿಗೆ ಕನ್ನಡವನ್ನು ಪರಿಪೂರ್ಣವಾಗಿ ಒದಗಿಸಬೇಕಿದೆ.

-ಪ್ರೊ. ಎಲ್.ಎಸ್. ಶೇಷಗಿರಿ ರಾವ್

ಉಡುಪಿಸಾಹಿತ್ಯ ಸಮ್ಮೇಳನ (2007) ಅಧ್ಯಕ್ಷರು
ಕನ್ನಡಕ್ಕೆ ನಾಳೆ ಇರಬೇಕಾದರೆ ಎಲ್ಲಾ ಮಕ್ಕಳಿಗೂ ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣ ಸಿಗಬೇಕು. ಆತ್ಮದ ಅಗತ್ಯವೆಂದು ಅವರು ಕನ್ನಡ ಕಲಿತಿರಬೇಕು, ಅನುಕೂಲಕ್ಕಾಗಿ ಇಂಗ್ಲಿಷನ್ನೂ ಬಲ್ಲವರಾಗಿರಬೇಕು. ಪ್ರಾಥಮಿಕ ಹಂತದಲ್ಲಿ ವಿಚಾರದ ತುತ್ತು ಬಾಯಿಗೆ ರುಚಿಕರವಾಗಿರಬೇಕಾಗಿದ್ದರೆ ಅದು ಕನ್ನಡದಲ್ಲೇ ಅಗಿದು ಜೀರ್ಣಿಸಿಕೊಂಡದ್ದಾಗಿರಬೇಕು. ಇದು ಗಾಂಧಿ ಮತ್ತು ಟ್ಯಾಗೋರರು ಇಬ್ಬರೂ ಬಯಸಿದ್ದು.ಕೇವಲ ಮಾರುಕಟ್ಟೆಯ ಸಂಸ್ಕೃತಿಯಲ್ಲಿ ಕನ್ನಡ ಕಳಪೆಯಾಗುತ್ತಾ ಹೋಗುತ್ತಿದ್ದು, ನಮ್ಮ ಭಾಷೆಗಳು ಉಳಿಯಬೇಕಾದರೆ ಮಾರುಕಟ್ಟೆ ಸಂಸ್ಕೃತಿಯನ್ನು ವಿರೋಧಿಸಿ ಬದುಕಬೇಕು.

-ಯು.ಆರ್.ಅನಂತಮೂರ್ತಿ

ತುಮಕೂರು ಸಾಹಿತ್ಯ ಸಮ್ಮೇಳನ (2002) ಅಧ್ಯಕ್ಷರು

ಪ್ರತಿಕ್ರಿಯಿಸಿ (+)