ಭಾನುವಾರ, ಜನವರಿ 19, 2020
27 °C
ನೂರು ಕಣ್ಣು ಸಾಲದು, ಭಾಗ – 3.

ಕನ್ನಡದ ರವಿ ಮೂಡಿ ಬಂದ

– ನೇಸರ. Updated:

ಅಕ್ಷರ ಗಾತ್ರ : | |

ಕತಾನತೆಯಿಂದ ಸಾಗುತ್ತಿದ್ದ ಕನ್ನಡ ಚಿತ್ರರಂಗಕ್ಕೆ 1970ರ ದಶಕ ವಿಭಿನ್ನ ಬಗೆಯ ಚಿತ್ರಗಳನ್ನು ಮತ್ತು ಪ್ರತಿಭಾವಂತ ತಂತ್ರಜ್ಞರು ಹಾಗೂ ಕಲಾವಿದರನ್ನು ನೀಡಿದ ದಶಕ. ಹೊಸ ಅಲೆ ಚಿತ್ರಗಳೊಂದಿಗೆ ಮನರಂಜನಾ ಚಿತ್ರಗಳೂ ಕನ್ನಡಕ್ಕೆ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ತಂದುಕೊಟ್ಟ ಅವಧಿ ಇದು.ಮೂರು ಚಿತ್ರಗಳಿಗೆ ಸ್ವರ್ಣಕಮಲ (ಸಂಸ್ಕಾರ, ಚೋಮನದುಡಿ ಹಾಗೂ ಘಟಶ್ರಾದ್ಧ) ಲಭಿಸಿದ್ದು ಇದೇ ಸಮಯದೊಳಗೆ. ಪಿ.ವಿ. ನಂಜರಾಜ ಅರಸು (ಸಂಕಲ್ಪ) ಪಿ. ಲಂಕೇಶ್‌ (ಪಲ್ಲವಿ) ಎಂ.ಎಸ್‌. ಸತ್ಯು (ಕನ್ಯೇಶ್ವರರಾಮ) ಕೆ.ಎಂ. ಶಂಕರಪ್ಪ (ಮಾಡಿ ಮಡಿದವರು) ಸಿ.ಆರ್‌.ಸಿಂಹ (ಕಾಕನಕೋಟೆ) ಟಿ.ಎಸ್‌. ರಂಗ (ಗೀಜಗನ ಗೂಡು) ಟಿ.ಎಸ್‌. ನಾಗಾಭರಣ (ಗ್ರಹಣ) ಕಟ್ಟೆ ರಾಮಚಂದ್ರ (ಅರಿವು) ಮೊದಲಾದವರು ಚಿತ್ರ ಭೂಮಿಯಲ್ಲಿ ಹೆಜ್ಜೆಗಳನ್ನಿಟ್ಟರು. ಹೊಸ ಅಲೆಯ ಚಿತ್ರಗಳು ಪೈಪೋಟಿಯ ಮೇಲೆ ತೆರೆಗೆ ಬಂದವು. ಗಿರೀಶ್‌ ಕಾರ್ನಾಡ್‌, ಬಿ.ವಿ. ಕಾರಂತ್‌, ಪಿ. ಲಂಕೇಶ್‌, ಎಂ.ಎಸ್‌. ಸತ್ಯು, ಟಿ.ಎಸ್‌. ರಂಗ, ಗಿರೀಶ್‌ ಕಾಸರವಳ್ಳಿ ತಮ್ಮನ್ನು ಸಕ್ರಿಯವಾಗಿ ಚಿತ್ರ ತಯಾರಿಕೆಯಲ್ಲಿ ತೊಡಗಿಸಿಕೊಂಡರು.ಮದ್ರಾಸ್‌ನಲ್ಲಿ ನೆಲೆನಿಂತಿದ್ದ ಕನ್ನಡ ಚಿತ್ರೋದ್ಯಮ, ಕರ್ನಾಟಕಕ್ಕೆ ಸ್ಥಳಾಂತರವಾಗುವ ಪ್ರಕ್ರಿಯೆ ಜೊತೆಗೆ ಮೈಸೂರು, ಬೆಂಗಳೂರುಗಳಲ್ಲಿ ಸ್ಟುಡಿಯೊ ಚಟುವಟಿಕೆಗಳು ಹೆಚ್ಚಿದ್ದು ಈ ಸಂದರ್ಭದಲ್ಲಿ. ಪರ್‍ಯಾಯ ಸಿನಿಮಾಗಳು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳಲ್ಲಿ ಸಿಂಹಪಾಲು ಪಡೆದರೆ ಪ್ರೇಕ್ಷಕ ವೃಂದಕ್ಕೆ ರಂಜನೆ ಒದಗಿಸುವಲ್ಲಿ ನಿರ್ದೇಶಕರ ದಂಡು ಹಿಂದೆ ಬೀಳಲಿಲ್ಲ.ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ನೋಡಬಹುದಾದ ಆರೋಗ್ಯಕರ ವಸ್ತುಗಳಿದ್ದ ಸಾಲು ಸಾಲು ವಾಣಿಜ್ಯ ಚಿತ್ರಗಳು ಕನ್ನಡದಲ್ಲಿ ಹರಿದು ಬಂದವು. ಗೀತಪ್ರಿಯ, ದೊರೆ ಭಗವಾನ್‌, ಕೆ.ಎಸ್‌.ಎಲ್‌. ಸ್ವಾಮಿ, ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ಮೊದಲಾದವರು ಮನರಂಜನಾ ಚಿತ್ರಗಳಲ್ಲಿ ಗುಣಮಟ್ಟ ತಂದುಕೊಡುವಲ್ಲಿ ಯಶಸ್ವಿಯಾದರು.ಗಿರೀಶ್‌ ಕಾರ್ನಾಡ್‌ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಮುಖೇನ ಜಪಾನ್‌ ಸಮುರಾಯ್‌ ಮಾದರಿ ಚಿತ್ರವೊಂದನ್ನು ಕನ್ನಡಕ್ಕಿತ್ತರು. ಅದೇ ಚಿತ್ರದ ಮೂಲಕ ಶಂಕರ್‌ನಾಗ್‌ ಎಂಬ ಪ್ರತಿಭಾವಂತನ ಪ್ರವೇಶವೂ ಆಯಿತು. ವೃತ್ತಿರಂಗ ಭೂಮಿಯಲ್ಲಿ ಜರುಗುತ್ತಿದ್ದ ಏರಿಳಿತಗಳನ್ನು ಪುಟ್ಟಣ್ಣ ಕಣಗಾಲ್‌ ತಮ್ಮ ‘ರಂಗನಾಯಕಿ’ಯಲ್ಲಿ ಹಿಡಿದಿಟ್ಟರು.ರಾಜಕೀಯ ಚಿತ್ರಗಳ ಪರಂಪರೆ ಅಷ್ಟೊತ್ತಿಗಾಗಲೇ ಕನ್ನಡಕ್ಕೆ ಪ್ರವೇಶವಾಗಿದ್ದರೂ ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ‘ಅಂತ’ ಮೂಲಕ ರಾಜಕೀಯ ಚಿತ್ರಗಳ ಹೊಸ ಟ್ರೆಂಡ್‌ ಶುರುವಿಟ್ಟರು. ಸೆನ್ಸಾರ್‌ ಸಮಸ್ಯೆಯೂ ಸೇರಿದಂತೆ ಅನೇಕ ಸಂಕಷ್ಟಗಳಿಗೆ ‘ಅಂತ’ ಸಿಕ್ಕಿ ಬಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿತು. ಕರ್ನಾಟಕವೇಕೆ, ರಾಷ್ಟ್ರಮಟ್ಟದಲ್ಲೂ ಸಂಚಲನ ಉಂಟುಮಾಡಿತು.ಗುಣಮಟ್ಟದ ದೃಷ್ಠಿಯಿಂದ ಎರಡೂ ಬಗೆಯ ಚಿತ್ರಧಾರೆಗಳು ಉತ್ತಮವಾಗಿದೆ ಎಂಬುದು ಎಪ್ಪತ್ತರ ದಶಕದ ಕೊನೆ ಮತ್ತು ಎಂಬತ್ತರ ದಶಕದ ಆರಂಭದಲ್ಲಿ ಹುಸಿಯಾಯಿತು. ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡರೂ ವ್ಯಾಪಾರಿ ಮಾರುಕಟ್ಟೆಯಲ್ಲಿ ಹೊಸ ಅಲೆ ಚಿತ್ರಗಳು ನಿಲ್ಲಲಿಲ್ಲ. ಸಂಖ್ಯಾ ದೃಷ್ಟಿಯಿಂದ ಹೆಚ್ಚಿದರೂ ಮನರಂಜನಾ ಚಿತ್ರಗಳು ಗಲ್ಲಾಪೆಟ್ಟಿಗೆ ಗಳಿಕೆಯಲ್ಲಿ ಹೆಚ್ಚಿನದೇನನ್ನೂ ಮಾಡದೇ ಹೋದವು.1980ರ ದಶಕದ ಆರಂಭ ಕರ್ನಾಟಕದಲ್ಲಿ ಚಿತ್ರೋತ್ಸವ ಪರಂಪರೆಗೆ ನಾಂದಿ ಹಾಡಿತು. ಬೆಂಗಳೂರಿನಲ್ಲಿಯೇ ಸೆನ್ಸಾರ್‌ ಮಂಡಲಿಯ ಘಟಕವೂ ಕಾರ್ಯಾರಂಭ ಮಾಡಿತು. 1984ರಲ್ಲಿ ಕನ್ನಡ ವಾಕ್ಷಿತ್ರ ಸ್ವರ್ಣ ಮಹೋತ್ಸವವೂ ಜರುಗಿತು. ಕರ್ನಾಟಕದಲ್ಲಿ ಚಿತ್ರ ಸಮಾಜ ಚಳವಳಿಯೂ ಶುರುವಾಯಿತು.ಚಿತ್ರಗಳ ಸಂಖ್ಯೆ ಏರುಗತಿಯಲ್ಲಿದ್ದರೂ ಗುಣಮಟ್ಟ ಕುಸಿಯುತ್ತಿತ್ತು. ಎಂ.ಎಸ್‌. ಸತ್ಯು, ಟಿ.ಎಸ್‌. ರಂಗ, ಗಿರೀಶ್‌ ಕಾಸರವಳ್ಳಿ ಹೊಸ ಅಲೆ ಹಾದಿಯಲ್ಲಿ ಮುಂದುವರೆದರು. ಬರಹಗಾರ ಬರಗೂರು ರಾಮಚಂದ್ರಪ್ಪ ‘ಬೆಂಕಿ’ ಚಿತ್ರದ ಮೂಲಕ ಭಿನ್ನ ಬಗೆಯ ಜಾಡು ಹಿಡಿದು ನಡೆದರು. ನಾಗಾಭರಣ ಸಮನ್ವಯ ಸಿನಿಮಾದತ್ತ ವಾಲಿದರು. ಅನ್ವೇಷಣೆ, ಬ್ಯಾಂಕರ್‌ ಮಾರ್ಗಯ್ಯ, ಸಂತ ಶಿಶುನಾಳ ಶರೀಫ, ಆಸ್ಫೋಟ ಚಿತ್ರಗಳನ್ನು ಭರಣ ನಿರ್ದೇಶಿಸಿದರು.ದೊರೆ ಭಗವಾನ್‌, ಕೆ.ವಿ. ಜಯರಾಂ, ಕಾಶಿನಾಥ್‌ ಸುರೇಶ್‌ ಹೆಬ್ಳೀಕರ್‌, ಸಿಂಗೀತಂ ಶ್ರೀನಿವಾಸರಾವ್‌, ಶಂಕರ್‌ನಾಗ್‌, ಕೃಷ್ಣಮಾಸಡಿ, ಪ್ರೇಮಾಕಾರಂತ್‌ ಮೊದಲಾದವರು ಗುಣಮಟ್ಟ ಹಾಗೂ ಜನಪ್ರಿಯತೆ ಕಾಯ್ದುಕೊಂಡರೆ ಹಿಂಸೆ, ದ್ವಂದ್ವಾರ್ಥ, ಅಶ್ಲೀಲ ಚಿತ್ರಗಳಿಗೇನೂ ಕನ್ನಡದಲ್ಲಿ ಕೊರತೆ ಇರಲಿಲ್ಲ.ಈ ಮಧ್ಯೆ ಕನ್ನಡ ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುವುದು ನಡದೇ ಇತ್ತು. ಎನ್‌. ಲಕ್ಷ್ಮೀನಾರಾಯಣ್‌ ಅವರ ಅಬಚೂರಿನ ಪೋಸ್‌್ಟ ಆಫೀಸ್‌ ರಾಷ್ಟ್ರಪ್ರಶಸ್ತಿ ಗಳಿಸಿತು. ಹೊಸ ಮಾದರಿ ಚಿತ್ರಗಳನ್ನು ಕೊಟ್ಟ ಎನ್ನೆಲ್‌ ಅವರ ನಾಂದಿ, ಉಯ್ಯಾಲೆ, ಮುಯ್ಯಿ, ಮುಕ್ತಿ, ಬೆಟ್ಟದ ಹೂವು ಗಮನಾರ್ಹವಾದವು.ಜಿ.ವಿ. ಅಯ್ಯರ್‌ ಮಧ್ವಾಚಾರ್ಯ, ಶಂಕರಾಚಾರ್ಯ, ಭಗವದ್ಗೀತೆ, ಹೀಗೆ ಅಧ್ಯಾತ್ಮ ಚಿತ್ರಗಳತ್ತ ತಿರುಗಿದರು. ಎಂ.ಪಿ. ಶಂಕರ್‌ ಅರಣ್ಯ, ವನ್ಯಪ್ರಾಣಿ ಆಧರಿಸಿದ ಚಿತ್ರಗಳ ತಯಾರಿಕೆಗೆ ಇಳಿದರು. ರಂಗಭೂಮಿಯಿಂದ ಚಿತ್ರರಂಗಕ್ಕೆ ಹೊಸಅಲೆ ಚಿತ್ರಗಳ ಮೂಲಕ ಪ್ರವೇಶ ಮಾಡಿದರೂ ಶಂಕರ್‌ನಾಗ್‌ ಮನರಂಜನಾ ಚಿತ್ರಗಳಲ್ಲೂ ಜನಪ್ರಿಯರಾದರು. ಅಭಿನಯದ ಜೊತೆಗೆ ಉದ್ಯಮ ಪ್ರವೇಶಿಸಿದ್ದು ಶಂಕರ್‌ ಅವರ ಇನ್ನೊಂದು ಹೆಗ್ಗಳಿಕೆ. ಹೊಸ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳಲು ಸಂಕೇತ್‌ ಸ್ಟುಡಿಯೊವನ್ನು ಶಂಕರ್‌ ಶುರು ಮಾಡಿದರು. ಅದೇ ಸಂದರ್ಭಕ್ಕೆ ಪ್ರಸಾದ್‌ ಸಂಸ್ಕರಣಾ ಘಟಕವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿತು.ಕಪ್ಪು ಬಿಳುಪು ಚಿತ್ರಗಳು ನಿಧಾನಕ್ಕೆ ಮರೆಯಾದರೆ ವರ್ಣ ಚಿತ್ರಗಳ ಸಂಖ್ಯೆ ಹೆಚ್ಚಾಯಿತು. ನಾಗರಹಾವು ಮೂಲಕ ನಾಯಕರಾಗಿ ಕಾಣಿಸಿಕೊಂಡ ವಿಷ್ಣುವರ್ಧನ್‌ ಮನರಂಜನಾ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು. ನಟರಾಗಿ ಬೆಳ್ಳಿ ತೆರೆಗೆ ಕಾಲಿಟ್ಟ ದ್ವಾರಕೀಶ್‌ ಜನಪ್ರಿಯ ಹಾಸ್ಯ ನಟರೆನ್ನಿಸಿಕೊಳ್ಳುವುದರ ಜೊತೆಗೆ ಮೇಯರ್‌ ಮುತ್ತಣ್ಣ ಮೂಲಕ ಚಿತ್ರ ನಿರ್ಮಾಣಕ್ಕೂ ಇಳಿದರು. ಹೊಸ ಹೊಸ ಕಲಾವಿದರು, ತಂತ್ರಜ್ಞರೊಂದಿಗೆ ವಿನೂತನ ದಾಖಲೆಗಳನ್ನು ಬರೆದ ದ್ವಾರಕೀಶ್‌ ಯಶಸ್ವಿ ಉದ್ಯಮಿಯಾದರು.ಅಂತದ ಅಂಬರೀಶ್‌ ಅವರಿಗೆ ಹೊಸ ಇಮೇಜ್‌ ತಂದುಕೊಟ್ಟ ರಾಜೇಂದ್ರಸಿಂಗ್‌ ಬಾಬು ‘ಬಂಧನ’ದ ಮೂಲಕ ವಿಷ್ಣುವರ್ಧನ್‌ ಅಭಿನಯ ಪ್ರತಿಭೆಯನ್ನು ಹೊರಗಳೆದರು. ಅನಂತ್‌ನಾಗ್‌–ಶಂಕರ್‌ನಾಗ್‌ ಮಾದಕ ಪದಾರ್ಥಗಳ ದುಷ್ಪರಿಣಾಮವನ್ನು ಬಿಂಬಿಸುವ ‘ಆಕ್ಸಿಡೆಂಟ್‌’ ನಿರ್ಮಿಸಿ ಹೆಸರು ಮಾಡಿದರು.‘ಪ್ರೇಮ ಲೋಕ’ ಕನ್ನಡದಲ್ಲಿ ಹೊಸ ಟ್ರೆಂಡ್‌ ಹುಟ್ಟು ಹಾಕಿದ ಚಿತ್ರ. ರವಿಚಂದ್ರನ್‌ ತನ್ನ ನವೀನ ಕನಸುಗಳನ್ನು ಪ್ರೇಮ ಲೋಕದ ಮೂಲಕ ಸಾಕಾರ ಮಾಡಿದರು. ಹಂಸಲೇಖರ ಹೊಸ ಬಗೆಯ ಸಂಗೀತ ಸ್ಪರ್ಶ ಪ್ರೇಮಲೋಕಕ್ಕೆ ಸಿಕ್ಕಿತು. ಯುವಸಮುದಾಯವನ್ನು ಸೆಳೆಯುವಲ್ಲಿ ಸಫಲವಾದ ‘ಪ್ರೇಮ ಲೋಕ’ ರಂಜನೆಯ ಚಿತ್ರಗಳಲ್ಲಿ ದಾಖಲೆ ಬರೆಯಿತು. ಗಳಿಕೆ ಹಾಗೂ ಮಾರುಕಟ್ಟೆ ದೃಷ್ಟಿಯಿಂದಲೂ ಕನ್ನಡ ಚಿತ್ರಂಗವನ್ನು ಹಿಗ್ಗಿಸಿದ ಚಿತ್ರ ಇದು.ಕನ್ನಡ ಚಿತ್ರೋದ್ಯಮಕ್ಕೆ ಭದ್ರ ಬುನಾದಿ ನೀಡಿದ ಡಾ. ರಾಜ್‌ಕುಮಾರ್‌ ಅವರ ಹಿರಿಯ ಮಗ ಶಿವರಾಜ್‌ಕುಮಾರ್‌ ‘ಆನಂದ್‌’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಪುಷ್ಪಕ ವಿಮಾನದಂತಹ ಮಾತಿಲ್ಲದ ಚಿತ್ರ ನಿರ್ದೇಶಿಸಿ ಪ್ರಶಂಸೆ ಪಡೆದಿದ್ದ ಸಿಂಗೀತಂ ಶಿವರಾಜ್‌ಕುಮಾರ್‌ ಮೊದಲ ಚಿತ್ರವನ್ನು ನಿರ್ದೇಶಿಸಿದರು. ಸುರೇಶ್‌ ಹೆಬ್ಲೀಕರ್‌ ಮನೋವಿಶ್ಲೇಷಣಾ ಕಥಾವಸ್ತುಗಳನ್ನಿಟ್ಟುಕೊಂಡು ಚಿತ್ರ ತಯಾರಿಸಿದರೆ ಪಿ.ಎಚ್‌. ವಿಶ್ವನಾಥ್‌ ಮಾನವೀಯ ಸಂಬಂಧ ಚಿತ್ರಗಳನ್ನು ತೆರೆಗಿತ್ತರು.ಫಣಿರಾಮಚಂದ್ರ ಹಾಸ್ಯ ಚಿತ್ರಗಳ ನಿರ್ದೇಶನಕ್ಕೆ ತಿರುಗಿದರೆ ಕೋಡ್ಲು ರಾಮಕೃಷ್ಣ ಕಥೆ – ಕಾದಂಬರಿ ಆಧರಿಸಿ ದಿಗ್ಧರ್ಶನಕ್ಕಿಳಿದರು. ಬಾಬು ‘ಮುತ್ತಿನ ಹಾರ’ದಲ್ಲಿ ಸೈನಿಕರ ನೋವು ನಲಿವುಗಳನ್ನು ತೆರೆಗೆ ತಂದರು. ಮೊದಲ ಚಿತ್ರಕ್ಕೆ ಸ್ವರ್ಣ ಕಮಲ ಪ್ರಶಸ್ತಿಗೆ ಪಾತ್ರವಾಗಿದ್ದ ಗಿರೀಶ್‌ ಕಾಸರವಳ್ಳಿ ನೆಲಸೊಗಡಿನ ಕಥೆ ಕಾದಂಬರಿಗಳನ್ನು ಆಯ್ದ ಚಿತ್ರ ತಯಾರಿಸುವುದನ್ನು ಮುಂದುವರಿಸಿದರು. ಪೂರ್ಣಚಂದ್ರ ತೇಜಸ್ವಿ ಅವರ ‘ತಬರನ ಕಥೆ’ ಗಿರೀಶ್‌ ನಿರ್ದೇಶನದಲ್ಲಿ ಮೂಡಿ ಬಂದು ಕನ್ನಡಕ್ಕೆ ಮತ್ತೊಮ್ಮೆ  ಸ್ವರ್ಣ ಕಮಲ ತಂದಿತು.ಮನೆ, ದ್ವೀಪ, ತಾಯಿ ಸಾಹೇಬ, ಕನಸೆಂಬ ಕುದುರೆಯನೇರಿ, ಕ್ರೌರ್ಯ, ಕೂರ್ಮಾವತಾರ, ಗುಲಾಬಿ ಟಾಕೀಸ್‌, ಹಸೀನಾ ಹೀಗೆ ವಿಭಿನ್ನ ಬಗೆಯ ಜಾಡು ಗಿರೀಶರಿಂದ ನಡೆಯಿತು. ಇವರ ಕಲಾತ್ಮಕ ಚಿತ್ರಗಳ ಪರಂಪರೆಯಿಂದ ಕನ್ನಡಕ್ಕೆ ಅನೇಕ ದೇಶ ವಿದೇಶಗಳ ಪ್ರಶಸ್ತಿ ಪುರಸ್ಕಾರಗಳು ಲಭಿಸಿದವು. ‘ಫಣಿಯಮ್ಮ’ ನಿರ್ದೇಶನದ ಮೂಲಕ ರಾಷ್ಟ್ರಮಟ್ಟದ ಗಮನ ಸೆಳೆದಿದ್ದ ಪ್ರೇಮಾಕಾರಂತ್‌ ಮುಂದೆ ‘ನಕ್ಕಳಾ ರಾಜಕುಮಾರಿ’ಯನ್ನು ನಿರ್ದೇಶಿಸಿದರು.

ಕವಿತಾ ಲಂಕೇಶ್‌ ‘ದೇವೇರಿ’ ಜೊತೆಗೆ ನಿರ್ದೇಶನಕ್ಕೆ ಕಾಲಿಟ್ಟು ಪ್ರೀತಿ ಪ್ರೇಮ ಪ್ರಣಯ ಮೂಲಕ ಮುಂದುವರೆದರೆ ಸುಮನಾ ಕಿತ್ತೂರು ನಿರ್ದೇಶಕಿಯರ ಸಾಲಿಗೆ ಸೇರಿದರು. ನಟಿ ವಿಜಯಲಕ್ಷ್ಮೀಸಿಂಗ್ ಅವರು ನಿರ್ದೇಶನದ ಬೂಟಿನೊಳಕ್ಕೆ ಕಾಲಿಟ್ಟರು. ನಿಗದಿತ ಮಧ್ಯಂತರಗಳ ನಡುವೆ ಟಿ.ಎಸ್‌. ನಾಗಾಭರಣ, ಕೋಡ್ಲು ರಾಮಕೃಷ್ಣ, ಕೆ.ಎಸ್‌.ಎಲ್‌. ಸ್ವಾಮಿ, ಸುನೀಲ್‌ ಕುಮಾರ್‌ ದೇಸಾಯಿ, ರಾಮದಾಸನಾಯ್ಡು, ಕೆ.ವಿ. ಜಯರಾಂ, ಪಿ.ಎಚ್‌. ವಿಶ್ವನಾಥ್‌, ವಿ. ಸೋಮಶೇಖರ್‌, ಚಿತ್ರ ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡರು.ನಾಗತಿಹಳ್ಳಿ ಚಂದ್ರಶೇಖರ್‌, ಸುನೀಲ್‌ ಕುಮಾರ್‌ ದೇಸಾಯಿ, ಎಸ್‌. ನಾರಾಯಣ್‌ ಅವರುಗಳೊಂದಿಗೆ ಲೋಕೇಶ್‌ (ಭುಜಂಗಯ್ಯನ ದಶಾವತಾರ), ಸುಂದರಕೃಷ್ಣ ಅರಸ್‌ (ಸಂಗ್ಯಾ ಬಾಳ್ಯ), ಸದಾನಂದ ಸುವರ್ಣ (ಕುಬಿಯ ಮತ್ತು ಇಯಾಲ) ನಿರ್ದೇಶಕರ ಟೊಪ್ಪಿ ಧರಿಸಿದರು. ರವಿಚಂದ್ರನ್‌ – ಹಂಸಲೇಖ ಜೋಡಿ ತಮ್ಮ ಟ್ರೆಂಡ್‌ ನಿಲ್ಲಿಸಲಿಲ್ಲ. ನಾಗಾಭರಣರ ಜನುಮದ ಜೋಡಿ ಹಾಗೂ ಸುನೀಲ್‌ ಕುಮಾರ್‌ ದೇಸಾಯಿ ಅವರ ಬೆಳದಿಂಗಲ ಬಾಲೆ ಕನ್ನಡ ಚಿತ್ರೋದ್ಯಮದಲ್ಲಿ ಮೈಲಿಗಲ್ಲುಗಳನ್ನಿಸಿಕೊಂಡವು.‘ಕಾಡು’ ಚಿತ್ರದಿಂದ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಂದಿನಿ ಭಕ್ತವತ್ಸಲ ಕನ್ನಡಕ್ಕೆ ತಂದುಕೊಟ್ಟದ್ದರು. ಇದನ್ನು ಜಯಮಾಲ, ತಾರಾ, ಉಮಾಶ್ರೀ (ತಾಯಿ ಸಾಹೇಬ, ಹಸೀನಾ, ಗುಲಾಬಿ ಟಾಕೀಸ್‌) ಮುನ್ನಡೆಸಿದರು. ನಿರ್ದೆಶನ ಮಾಡಿ ಪ್ರಸಿದ್ಧಿಗೆ ಬಂದ ಉಪೇಂದ್ರ ನಟನೆಯಲ್ಲೂ ಜನ ಮನ್ನಣೆ ಪಡೆದರು.

ಪುನೀತ್‌ ರಾಜ್‌ಕುಮಾರ್‌, ದರ್ಶನ್‌ ಅಭಿನಯದಲ್ಲಿ ತೊಡಗಿಕೊಂಡರೆ ನಟ ಸುದೀಪ್‌ ನಿರ್ದೇಶನದಲ್ಲೂ ಗುರುತು ಮೂಡಿಸಿದರು. ಕನ್ನಡದಲ್ಲಿ ಅಭಿನಯಿಸುತ್ತ ನಂತರ ತೆಲುಗು– ತಮಿಳು ಚಿತ್ರಗಳಲ್ಲಿ ಖ್ಯಾತಿ ಪಡೆದ ನಟರು ಅಗಿರುವ ಪ್ರಕಾಶ್‌ ರೈ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದು ನಿರ್ದೇಶನಕ್ಕೂ ಮೊದಲಿಟ್ಟಿದ್ದಾರೆ. ನಟ ರಮೇಶ್‌ ಅರವಿಂದ್‌ ಅವರೂ ನಿರ್ದೇಶನಕ್ಕೆ ಕೈ ಇಟ್ಟರು.ಮುನ್ನುಡಿಯಿಂದ ಚಿತ್ರರಂಗಕ್ಕೆ ಸ್ವತಂತ್ರ, ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಪಿ. ಶೇಷಾದ್ರಿ ತಾವು ತೆಗೆದ ಎಲ್ಲಾ ಚಿತ್ರಗಳಿಗೂ ಒಂದಲ್ಲ ಒಂದು ಪ್ರಶಸ್ತಿ ಪಡೆದಿದ್ದೊಂದು ಉಲ್ಲೇಖನಾರ್ಹ ವಿಷಯ. ಶಿವರಾಜ್‌ಕುಮಾರ್‌ ಅಭಿನಯದ ‘ಜೋಗಿ’ ನಿರ್ದೇಶಕ ಪ್ರೇಮ್‌ಗೆ ಹೆಸರು ತಂದುಕೊಟ್ಟ ಚಿತ್ರ. ಯೋಗರಾಜ್‌ ಭಟ್‌ರ ‘ಮುಂಗಾರು ಮಳೆ’ ಚಿತ್ರ ಗಳಿಕೆಯಲ್ಲಿ ಹೊಸ ದಾಖಲೆ ಬರೆಯಿತು.

ಸೂರಿ ನಿರ್ದೇಶನದ ‘ದುನಿಯಾ’ ವಿಭಿನ್ನ ಅನುಭವ ನೀಡಿ ವಿಜಯ್‌ರನ್ನು ಬೆಳಕಿಗೆ ತಂದಿತು. ನಾಗಣ್ಣನವರ ‘ಸಂಗೊಳ್ಳಿ ರಾಯಣ್ಣ’ ಚಾರಿತ್ರಿಕ ಚಿತ್ರವಾಗಿ ಪ್ರೇಕ್ಷಕರನ್ನು ಸೆಳೆಯಿತು. ಗುರುಪ್ರಸಾದ್‌ರ ಹೊಸತನ ನೋಡುಗರಿಗೆ ಇಷ್ಟವಾಗಿದೆ. ವಿಷ್ಣುವರ್ಧನ್‌ – ದ್ವಾರಕೀಶ್‌ ಜೋಡಿಯ ‘ಆಪ್ತಮಿತ್ರ’ ಜನಪ್ರಿಯತೆ ಮತ್ತು ಹಣಗಳಿಕೆಯಲ್ಲಿ ವಿಕ್ರಮ ಸಾಧಿಸಿದರೆ ಹೊಸ ನಿರ್ದೆಶಕರ ಹಾಗೂ ಕಲಾವಿದರ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಹೊಸ ಮಾರ್ಗ ತೋರುತ್ತಿವೆ.ನೂರು ವರ್ಷಗಳ ಭಾರತೀಯ ಚಿತ್ರ ಚರಿತ್ರೆಯಲ್ಲಿ ಕನ್ನಡದ ಗುರುತುಗಳು ಕಾಣಿಸಿಕೊಂಡಿದ್ದು 1970ರ ದಶಕದಲ್ಲಿ. ಅದು ಹೊಸ ಅಲೆಯ ಚಿತ್ರಗಳ ಮೂಲಕ. ನಂತರ ಜನಪ್ರಿಯ ಚಿತ್ರಗಳು ರಾಷ್ಟ್ರಪ್ರಶಸ್ತಿ ಗೆಲ್ಲುವುದರೊಂದಿಗೆ ದಾಖಲಾದವು. ಜಂಬೂಸವಾರಿ (ರವಿ), ಚಿನ್ನಾರಿ ಮುತ್ತ (ನಾಗಾಭರಣ), ಕೊಟ್ರೇಶಿ ಕನಸು (ನಾಗತಿಹಳ್ಳಿ ಚಂದ್ರಶೇಖರ್‌), ತುತ್ತೂರಿ (ವಿ. ಶೇಷಾದ್ರಿ) ಸೇರಿದಂತೆ ಹಲವು ಮಕ್ಕಳ ಚಿತ್ರಗಳು ರಾಷ್ಟ್ರ ಮಾನ್ಯತೆ ಪಡೆದವು.ಹಿನ್ನೆಲೆ ಗಾಯನ (ಡಾ. ರಾಜ್‌ಕುಮಾರ್‌ – ಶಿವಮೊಗ್ಗ ಸುಬ್ಬಣ್ಣ), ಛಾಯಾಗ್ರಹಣ, ಸಂಗೀತ, ನಿರ್ದೇಶನ, ಅಭಿನಯ, ನಿರ್ದೇಶನದ ಜೊತೆಗೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಗಳಲ್ಲಿ ಕನ್ನಡ ಚಿತ್ರರಂಗ ಹಿಂದೆ ಬಿದ್ದಿಲ್ಲ. ಎಂ.ಕೆ. ರಾಘವೇಂದ್ರ, ಡಾ. ಕೆ. ಪುಟ್ಟಸ್ವಾಮಿ, ಪ್ರೊ. ಮನುಚಕ್ರವರ್ತಿ ಅವರ ಸಿನಿಮಾ ಕುರಿತ ಕೃತಿಗಳಿಗೂ ರಾಷ್ಟ್ರೀಯ ಗೌರವ ದೊರೆತಿದೆ.ಪನೋರಮಾ ವಿಭಾಗದಲ್ಲಿ ಕನ್ನಡ ಚಿತ್ರಗಳ ನಿರಂತರವಾಗಿ ಸ್ಥಾನ ಪಡೆದುಕೊಳ್ಳುತ್ತಿದ್ದು ಕರ್ನಾಟಕದ ಪ್ರಾದೇಶಿಕ ಭಾಷೆಗಳಾದ ತುಳು, ಕೊಂಕಣಿ, ಕೊಡವ ಭಾಷೆಯ ಚಿತ್ರಗಳೂ ರಾಷ್ಟ್ರಪ್ರಶಸ್ತಿ ತಮ್ಮದಾಗಿಸಿಕೊಂಡಿವೆ. ಬ್ಯಾರಿ ಭಾಷೆಯ ‘ಬ್ಯಾರಿ’ ಸ್ವರ್ಣ ಕಮಲ ಪಡೆದಿದ್ದು ಕನ್ನಡ ಉಪಭಾಷೆಗಳ ಪಾಲಿನ ಇನ್ನೊಂದು ದಾಖಲೆ.

ಗುಣಮಟ್ಟದ ಚಿತ್ರಗಳ ತಯಾರಿಕೆಯಲ್ಲಿ ತುಸು ಹಿನ್ನಡೆ ಸಾಧಿಸಿರುವ ಕನ್ನಡ ಚಿತ್ರರಂಗ ಹೊಡಿ ಬಡಿ, ಅಶ್ಲೀಲ ಹಾಗೂ ಹೆಕ್ಕಿ ತಂದ ಚಿತ್ರಗಳ ಕಾರಣದಿಂದ ಸೊರಗಿದೆ ಎನ್ನುವುದರಲ್ಲಿ ಸತ್ಯವಿದೆ. ಎಂಬತ್ತರ ಹೊಸ್ತಿಲಲ್ಲಿರುವ ಕನ್ನಡ ಚಿತ್ರೋದ್ಯಮ ನವೀನ ಬಗೆಯ ಕಥಾ ವಸ್ತುಗಳಿಗೆ ತನ್ನನ್ನು ತೆರೆದುಕೊಳ್ಳುತ್ತದೆ. ಆಧುನಿಕ ತಂತ್ರಜ್ಞಾನವೂ ಪ್ರವೇಶ ಪಡೆಯುತ್ತಿದೆ. ಹಾಗೆಯೇ ನವಪ್ರಯೋಗಗಳು ಕೂಡ.

– ನೇಸರ.

ಪ್ರತಿಕ್ರಿಯಿಸಿ (+)