ಮಂಗಳವಾರ, ಜನವರಿ 28, 2020
29 °C

ಕನ್ನಡದ ವಿಶಿಷ್ಟ ಪ್ರತಿಭೆ ಇನಾಂದಾರ್‌

ಡಾ. ವಿಜಯಾ ಸುಬ್ಬರಾಜ್‌ Updated:

ಅಕ್ಷರ ಗಾತ್ರ : | |

ನಲವತ್ತರ ದಶಕದಿಂದಲೇ ಜನಪ್ರಿಯವೂ ಕಲಾತ್ಮಕವೂ ಆದ ಕಾದಂಬರಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ವಿ.ಎಂ. ಇನಾಂದಾರ್‌ ಕಾದಂಬರಿಕಾರರಾಗಿ ಮಾತ್ರವಲ್ಲದೆ ಅತ್ಯುತ್ತಮ ಇಂಗ್ಲಿಷ್‌ ಪ್ರಾಧ್ಯಾಪಕರೂ ವಿಮರ್ಶಕರೂ ನಾಟಕಕಾರರೂ ಹೌದು. ಭಾರತೀಯ ಸನಾತನ ಮೌಲ್ಯಗಳ ಚಿಂತಕರಾಗಿಯೂ ಗುರ್ತಿಸಿಕೊಂಡಿದ್ದ ಅವರು ತಮ್ಮ ಸಮಕಾಲೀನ ಹಿರಿಯ ಸಾಹಿತಿಗಳಾದ ಶಿವರಾಮಕಾರಂತ, ವಿ.ಸೀ. ಮಾಸ್ತಿ ಮೊದಲಾದವರಿಂದ ಮೆಚ್ಚುಗೆ ಗಳಿಸಿಕೊಂಡಿದ್ದವರು.

ಇನಾಂದಾರ್ ಜನಿಸಿದ್ದು 1912ರ ಅಕ್ಟೋಬರ್‌ 1ರಂದು, ಮಧ್ವರಾಯ ಕಮಲಮ್ಮ ದಂಪತಿಗೆ. ಬೆಳಗಾವಿ ಜಿಲ್ಲೆಯ ಹುದಲಿಯಲ್ಲಿ ಜನಿಸಿದ ಅವರ ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲು ವಿದ್ಯಾಭ್ಯಾಸ ಕ್ರಮವಾಗಿ ಹುದಲಿ, ಬೆಳಗಾವಿ, ಅಥಣಿ, ಬಿಜಾಪುರಗಳಲ್ಲಿ ನಡೆಯಿತು.1930ರಲ್ಲಿ ಮೆಟ್ರಿಕ್‌ ಪಾಸಾದ ನಂತರ, ತಮ್ಮ ಮಾಸ್ತರರಾಗಿದ್ದ ಶಿವಣಗಿ ಅವರ ಪ್ರಭಾವದಿಂದ ಸಂಸ್ಕೃತ–ಇಂಗ್ಲಿಷ್‌ ಸಾಹಿತ್ಯಗಳತ್ತ ಆಕರ್ಷಿತರಾದರು. ಮುಂದೆ ಧಾರವಾಡದ ಕರ್ನಾಟಕ ಕಾಲೇಜು ಮತ್ತು ಮುಂಬಯಿಯ ಎಲ್ಫಿನ್‌ಸ್ಟನ್‌ ಕಾಲೇಜುಗಳಲ್ಲಿ ಓದಿ 1934ರಲ್ಲಿ ಐಚ್ಛಿಕ ಇಂಗ್ಲಿಷ್‌ನೊಂದಿಗೆ ಬಿ.ಎ. ಆನರ್ಸ್‌ ಪದವಿಯನ್ನು ಚಿನ್ನದ ಪದಕದೊಂದಿಗೆ ಗಳಿಸಿದರು. ಆ ವೇಳೆಗಾಗಲೇ ಕನ್ನಡ ರಂಗಭೂಮಿಗೆ ಹೊಸ ಆಯಾಮವನ್ನು ತಮ್ಮ ನಾಟಕಗಳ ಮೂಲಕ ಕೊಟ್ಟ ಶ್ರೀರಂಗರ ಪ್ರಭಾವ ವಲಯಕ್ಕೆ ಸೇರ್ಪಡೆಯಾಗಿ ಅವರ ನಾಟಕಗಳಲ್ಲಿಯೂ ಪಾತ್ರ ವಹಿಸಿದ್ದರು. ಸಂಸ್ಕೃತದ ಅಧ್ಯಾಪಕರಾಗಿದ್ದ ಶ್ರೀರಂಗರು, ಜೀವನೋಪಾಯಕ್ಕೆ ಸಂಸ್ಕೃತಕ್ಕಿಂತ ಇಂಗ್ಲಿಷನ್ನೇ ಅವಲಂಬಿಸುವುದರ ಮೂಲಕ ನೌಕರಿ ಸುಲಭ ಸಾಧ್ಯವೆಂದು ತಿಳಿಸಿ ಇನಾಂದಾರ್ ಅವರನ್ನು ಹುರಿದುಂಬಿಸಿದರು.1935ರ ಸುಮಾರಿಗೆ, ಅಲ್ಪಕಾಲದ ನಿರುದ್ಯೋಗ ಸಮಸ್ಯೆ ನಂತರ ಬಿಜಾಪುರದ ಸಿವಿಲ್‌ ಕೋರ್ಟಿನಲ್ಲಿ ಎ.ಜಿ. ವೇಲ್‌್ಸ ಎಂಬ ಆಂಗ್ಲ ನ್ಯಾಯಾಧೀಶನ ಕೈಕೆಳಗೆ ದುಭಾಷಿಯಾಗಿ ಕೆಲಸ ಮಾಡಿದರು. ಆದರೆ ಈ ಕೆಲಸ ಬೇಸರವೆನಿಸಿ, 1940ರಲ್ಲಿ ಕೆಲಸಕ್ಕೆ ರಾಜಿನಾಮೆ ಕೊಟ್ಟರು. ಅಲ್ಲಿಂದ ಮುಂದೆ ಅವರ ಬದುಕಿನ ದಿಕ್ಕೇ ಬದಲಾಯಿತು.1941ರಲ್ಲಿ ಮತ್ತೆ ಎಲ್ಫಿನ್‌ಸ್ಟನ್‌ ಕಾಲೇಜಿನಲ್ಲಿ ಇಂಗ್ಲಿಷ್‌ ಎಂ.ಎ. ಮುಗಿಸಿದರು. ಪದವಿ ಮುಗಿಸುವ ಪೂರ್ವದಲ್ಲಿಯೇ ತಮ್ಮ ಆಸಕ್ತಿಯ ಸಾಹಿತ್ಯ ರಚನೆಗೆ ತೊಡಗಿದ್ದರು. Heroines in Sanskrit Drama (1936) ಎನ್ನುವುದು ಅವರ ಚೊಚ್ಚಿಲ ಕೃತಿ. ಈ ಪುಸ್ತಕಕ್ಕೆ ಮುಂಬಯಿ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಬಹುಮಾನ ದೊರೆಯಿತು. ಅವರ ವಿದ್ವತ್ತು, ಬರವಣಿಗೆಯ ಒತ್ತಡಗಳು ಮುಂದೆ ಅವರಿಂದ The Moral Problem in Shakuntala ಎನ್ನುವ ಮಹತ್ವದ, ವಿದ್ವತ್ಪೂರ್ಣವಾದ ಲೇಖನವನ್ನು ಬರೆಸಿದವು.ಬರವಣಿಗೆ ಅವರ ಸಹಜ ಪ್ರವೃತ್ತಿಯಾದರೂ ಜೀವನೋಪಾಯಕ್ಕೆ ಅಧ್ಯಾಪಕ ವೃತ್ತಿಯಲ್ಲಿ ತೊಡಗಿಸಿಕೊಂಡರು. 1943–1947ರವರೆಗೆ ಮುಂಬಯಿಯ ಸಿಡೇನ್‌ಹ್ಯಾಂ ಕಾಲೇಜಿನಲ್ಲಿಯೂ 1947–50ರವರೆಗೆ ಕರ್ನಾಟಕ ಕಾಲೇಜು, ಧಾರವಾಡದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದರು.ಮುಂದೆ 1950–52ರವರೆಗೆ ಅಹಮದಾಬಾದಿನ ಗುಜರಾತ ಕಾಲೇಜಿನಲ್ಲಿ ಮತ್ತು ಕರ್ನಾಟಕ ಕಾಲೇಜು, ಧಾರವಾಡದಲ್ಲಿ ಉಪ ಪ್ರಾಧ್ಯಾಪಕರಾಗಿಯೂ, ಮಂಗಳೂರಿನ ಸರಕಾರಿ ಕಾಲೇಜಿನ ವೈಸ್‌ ಪ್ರಿನ್ಸಿಪಾಲರಾಗಿ, ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲೇ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿ, ವಿದ್ಯಾರ್ಥಿಗಳಿಂದ, ಸಹೋದ್ಯೋಗಿ ಮಿತ್ರ ಬಳಗದಿಂದ ಮೆಚ್ಚುಗೆಯನ್ನು ಪಡೆದರು.ಹೆಚ್ಚು ಕಡಿಮೆ 30 ವರ್ಷಗಳ ಕಾಲ ನಿಷ್ಠಾವಂತ ಅಧ್ಯಾಪಕರೂ ಪ್ರಾಧ್ಯಾಪಕರೂ ಆಗಿ ಕೆಲಸ ನಿರ್ವಹಿಸಿದ ಅವರು 1968ರಲ್ಲಿ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಿಂದ ನಿವೃತ್ತಿ ಪಡೆದು, ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲೂ ಯುಜಿಸಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇದು ಅವರ ಅಧ್ಯಾಪಕ ಬದುಕಿನ ಮಜಲುಗಳಾದರೆ ಅವರ ಪ್ರತಿಭೆಯ ಮತ್ತೊಂದು ಧಾರೆಯಾಗಿ ಅವರ ಬರವಣಿಗೆ ಮುಂದುವರೆಯಿತು.ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದ ಅವರಿಗೆ ಆ ಭಾಷೆಯಲ್ಲಿ ಬೋಧನೆ–ಬರವಣಿಗೆ ಸುಲಲಿತವಾಗಿತ್ತು. ಇಂಗ್ಲಿಷಿನ ಬಗ್ಗೆ ಅತಿಯಾದ ಪ್ರೀತಿಯೂ ಅವರಿಗಿತ್ತು. ಕನ್ನಡದಲ್ಲಿ ಬರೆಯಲು ಏನಿದೆ? ಎನ್ನುವುದು ಇವರ ಧೋರಣೆಯಾಗಿರುವುದರ ಜೊತೆಗೆ, ಅದು ಅವರ ಸಮಕಾಲೀನ ಅಧ್ಯಾಪಕರ ವಿದ್ವಾಂಸರ ಧೋರಣೆಯೂ ಆಗಿತ್ತು. ಇಂಥ ಸಂದರ್ಭದಲ್ಲಿ, ‘ಪ್ರಬುದ್ಧ ಕರ್ನಾಟಕ’ ಪತ್ರಿಕೆ ಅವರಲ್ಲಿ ಕನ್ನಡ ಆಸಕ್ತಿ ಮೂಡಲು ಕಾರಣವಾಯಿತು. ಬರೆದರೆ ತನ್ನ ಭಾಷೆಯಲ್ಲಿಯೇ ಬರೆಯಬೇಕೆಂಬ ವಾಸ್ತವ ಸತ್ಯದ ಅರಿವಿನೊಂದಿಗೆ ಮತ್ತು ಶ್ರೀರಂಗ, ಮಾಸ್ತಿ, ವಿ.ಸೀ. ಮುಂತಾದ ಕನ್ನಡದ ಹಿರಿಯ ಚೇತನಗಳ ಸ್ನೇಹ ಪ್ರೀತಿಗಳು ಅವರನ್ನು ಕನ್ನಡಕ್ಕೆ ಕಟ್ಟಿಹಾಕಿತೆಂದರೆ ಆಶ್ಚರ್ಯಪಡಬೇಕಿಲ್ಲ.ಮೊದಲಿಗೆ ಅನುವಾದಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದರು. ಇಂಗ್ಲಿಷ್‌–ಕನ್ನಡಗಳೆರಡರಲ್ಲಿಯೂ ಸಮಾನ ಪ್ರಭುತ್ವದ ಜೊತೆಗೆ ಮರಾಠಿಯೂ ತಾಯಿಯ ಕಡೆಯಿಂದ ಮಾತೃಭಾಷೆಯಷ್ಟೇ ಸಹಜವಾಗಿ ಒಲಿದಿತ್ತು. ಮರಾಠಿಯ ಖ್ಯಾತ ಬರಹಗಾರ ವಿ.ಎಸ್‌. ಖಾಂಡೇಕರ್‌ ಅವರ ಸಣ್ಣ ಕತೆಗಳನ್ನು ‘ದೃಷ್ಟಿ ಲಾಭ’ ಶೀರ್ಷಿಕೆಯಲ್ಲಿ ಪ್ರಕಟಿಸಿದರು. ಮಾಸ್ತಿಯವರ ‘ಹೇಮಕೂಟದಿಂದ’, ಕ್ಷೀರಸಾಗರರ ‘ನಮ್ಮೂರಿನ ಪಶ್ಚಿಮಕ್ಕೆ’ ಮೊದಲಾದವನ್ನು ಇಂಗ್ಲಿಷಿಗೆ ಅನುವಾದಿಸಿದರು. ನಂತರ ಇದೇ ಖಾಂಡೇಕರರ ‘ಎರಡು ಧ್ರುವ’ ಕಾದಂಬರಿಯನ್ನೂ ಅನುವಾದಿಸಿದರು.ಬರವಣಿಗೆಯ ಜೊತೆಗೆ ‘ಜಯಂತಿ’ ‘ಆರ್ಯನ್‌ ಸಾಥ್‌’ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿ, ಉಪಸಂಪಾದಕರಾಗಿ, ಪುಸ್ತಕ ವಿಮರ್ಶಕರಾಗಿ ಪತ್ರಿಕೋದ್ಯಮದ ಅನುಭವವನ್ನೂ ಪಡೆದರು. ಇಷ್ಟೆಲ್ಲ ರೀತಿಯಲ್ಲಿ ಅವರ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿದ್ದರೂ ಪೂರ್ಣ ಪ್ರಮಾಣದ ಕಾದಂಬರಿಕಾರರಾಗಿ ರೂಪಾಂತರಗೊಳ್ಳಲು ಜಿ.ಬಿ. ಜೋಶಿಯವರ, ಒಂದು ಸನ್ನಿವೇಶದಲ್ಲಿನ ಸ್ನೇಹದ ಮೂದಲಿಕೆ ಕಾರಣವಾಯಿತು. ‘ಟೀಕೆ ಮಾಡುವುದು ಸುಲಭ, ಸ್ವತಃ ಬರೆದಾಗಲೇ ಕಷ್ಟದ ಅರಿವಾಗುತ್ತದೆ’ ಎಂಬ ಜೋಶಿಯವರ ಮಾತು ಅವರನ್ನು ಕೆಣಕಿ, ಅದನ್ನು ಸವಾಲಾಗಿ ಸ್ವೀಕರಿಸಿ.‘ಎರಡು–ಧ್ರುವ’ ಅನುವಾದದ ಮೂಲಕ ಕಾದಂಬರಿಯ ವಸ್ತು, ತಂತ್ರ, ನಿರ್ವಹಣೆಯ ಸ್ವರೂಪವನ್ನು ಕರಗತ ಮಾಡಿಕೊಂಡರು. 1946 ರಲ್ಲಿ ‘ಮೂರಾಬಟ್ಟೆ’ ಎಂಬ ಸ್ವತಂತ್ರ ಕಾದಂಬರಿಯ ಮೂಲಕ ಮುಂದಿನ ತಮ್ಮ ನಡೆಯನ್ನು ಗುರುತಿಸಿಕೊಂಡರು. ಅಲ್ಲಿಂದ ಪ್ರಾರಂಭವಾದ ಅವರ ಕಾದಂಬರಿ ರಚನೆ 1980ರ ‘ತ್ರಿಶಂಕು’ವರೆಗೆ ಮುಂದುವರೆಯಿತು. ಒಟ್ಟು 18 ಕಾದಂಬರಿಗಳನ್ನು ಬರೆದರಲ್ಲದೆ, ಶಿವರಾಮಕಾರಂತ, ಕುವೆಂಪು, ಮಾಸ್ತಿ ಮೊದಲಾದವರ ಕೃತಿಗಳ ಕುರಿತು ಸಮಗ್ರ ವಿಮರ್ಶೆಯನ್ನು ಬರೆದರು. ‘ಕನಸಿನ ಮನೆ’, ‘ವಿಜಯಯಾತ್ರೆ’, ‘ಶಾಪ’ (‘ಮುಕ್ತಿ’ ಹೆಸರಿನಲ್ಲಿ ಖ್ಯಾತ ನಿರ್ದೇಶಕ ಎನ್. ಲಕ್ಷ್ಮೀನಾರಾಯಣರ ನಿರ್ದೇಶನದಲ್ಲಿ ಚಲನಚಿತ್ರವಾಯಿತು), ‘ಸ್ವರ್ಗದ ಬಾಗಿಲು’, ‘ಕಟ್ಟಿದ ಮನೆ’, ‘ಮುಗಿಯದ ಕಥೆ’ ಅವರ ಕೆಲವು ಪ್ರಮುಖ ಕಾದಂಬರಿಗಳು.1971ರಲ್ಲಿ ಕೆನಡಾ, ಅಮೆರಿಕಾ, ಇಂಗ್ಲೆಂಡ್‌ಗಳ ಮುಗಿಸಿ ಬಂದು ‘ಯಾತ್ರಿಕರು’ ಕಾದಂಬರಿಯನ್ನು Death of Ahasuerus ಎನ್ನುವ ಕಥೆಯ ಪ್ರೇರಣೆಯಿಂದ ಬರೆದರು. ಹಾಗೆಯೇ ‘ಮೋಹಿನಿ’ ಕಾದಂಬರಿಯ ಉಳಿದೆರಡು ಭಾಗಗಳಾಗಿ ‘ಬಾಡಿದ ಹೂ’, ‘ಕತ್ತಲೆಯ ಕಡಲು’ಗಳನ್ನು ಬರೆದರು.ಸೃಜನಶೀಲ ಪ್ರತಿಭೆಯಷ್ಟೇ ತೀಕ್ಷ್ಣವಾದದ್ದು ಇನಾಂದಾರ್‌ ಅವರ ವಿಮರ್ಶನ ಪ್ರತಿಭೆ. 1978ರಲ್ಲಿ ಅವರ ಆಚಾರ್ಯ ಕೃತಿ ಎಂದು ವಿದ್ವಾಂಸರ ಮೆಚ್ಚುಗೆ ಪಡೆದ ‘ಪಾಶ್ಚಾತ್ಯ ಕಾವ್ಯ ಮೀಮಾಂಸೆ’ಯ ಮೊದಲ ಭಾಗವಾದ ಪಾಶ್ಚಾತ್ಯ ವಿಮರ್ಶೆಯ ‘ಪ್ರಾಚೀನ ಪರಂಪರೆ, 1976ರಲ್ಲಿ ವಿಮರ್ಶೆಯ ‘ಮಧ್ಯಯುಗ’ 1978 ರಲ್ಲಿ ‘ಸಂಪ್ರದಾಯ ಯುಗ’ ಪ್ರಕಟವಾದವು. 1982ರಲ್ಲಿ ಪಾಶ್ಚಾತ್ಯ ವಿಮರ್ಶೆಯ (ವಿಶೇಷವಾಗಿ ಕಾದಂಬರಿ ಪ್ರಕಾರಕ್ಕೆ ಸಂಬಂಧಪಟ್ಟಂತೆ) ‘ರೊಮ್ಯಾಂಟಿಕ್‌ ಯುಗ’, ‘ಆಧುನಿಕಯುಗ’ಗಳು ಪ್ರಕಟವಾದವು.ನಂತರ ಈ ಎಲ್ಲಾ ಸಂಪುಟಗಳ ಸಮಗ್ರ ಸಂಕಲನವಾಗಿ 625 ಪುಟಗಳುಳ್ಳ ‘ಪಾಶ್ಚಾತ್ಯ ಕಾವ್ಯಮೀಮಾಂಸೆ’ ಹೆಸರಿನಲ್ಲಿ ಬೃಹತ್‌ ಗ್ರಂಥವೊಂದು ಅಚ್ಚಾಗಿ ಸಾಹಿತ್ಯಾಸಕ್ತರಿಗೆ ಮಹತ್ವದ ಆಕರಗ್ರಂಥವೆಂದು ವಿದ್ವತ್‌ಲೋಕದಿಂದ ಮೆಚ್ಚುಗೆ ಗಳಿಸಿತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರದ ಗರಿಯನ್ನು ಅಲಂಕರಿಸಿಕೊಂಡಿತು. ‘ಎರಡು – ಧ್ರುವ’ದ ಸಮರ್ಥ ಅನುವಾದವನ್ನು ಮೆಚ್ಚಿಕೊಂಡಿದ್ದ ಖಾಂಡೇಕರರ ಒತ್ತಾಯದ ಮೇರೆಗೆ ಜ್ಞಾನಪೀಠ ಪುರಸ್ಕಾರವನ್ನು ಅವರಿಗೆ ತಂದುಕೊಟ್ಟ ‘ಯಯಾತಿ’ಯನ್ನು ಅನುವಾದಿಸಿದರು.1980ರ ನಂತರ ಅವರು ಅನಾರೋಗ್ಯ ಪೀಡಿತರಾಗಿದ್ದರೂ ಕನ್ನಡದ ಕಣ್ವ ಬಿ.ಎಂ.ಶ್ರೀ ಶತಮಾನೋತ್ಸವ ಸಂದರ್ಭದಲ್ಲಿ ತಮ್ಮ ಭಕ್ತಿ ಗೌರವದ ಕಾಣಿಕೆಯಾಗಿ 1983ರಲ್ಲಿ ‘ಬಿ.ಎಂ.ಶ್ರೀ ಬದುಕು ಬರಹ’ ಎಂಬ ಕೃತಿಯನ್ನು ಬರೆದು ಹಿರಿಯರಿಗೆ ತಮ್ಮ ಋಣ ತೀರಿಸಿದರು.

ಇನಾಂದಾರ್ ಅವರು ಬರೆಯುತ್ತಿದ್ದಾಗ ಕನ್ನಡದಲ್ಲಿ ಕಾದಂಬರಿಗಳ ರಚನೆ ಅಷ್ಟಾಗಿ ಇರಲಿಲ್ಲ. ಕಾದಂಬರಿ ಮಾದರಿಗಳೂ ಅವರಿಗೆ ಲಭ್ಯವಾಗಲಿಲ್ಲ. ಪ್ರಗತಿಶೀಲ ಲೇಖಕರೊಂದಷ್ಟು ಮಂದಿ ಕಾದಂಬರಿ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ಆಂಗ್ಲ ಕಾದಂಬರಿಕಾರರೇ ಅವರಿಗೆ ದೊಡ್ಡ ಪ್ರೇರಣೆಯಾಗಿದ್ದರು. ಅದರೊಂದಿಗೆ ಇನಾಂದಾರರ ಕಾದಂಬರಿ ರಚನೆಯ ಸಾಹಸಯಾತ್ರೆ ಪ್ರಾರಂಭವಾಗಿ, ಅದ್ಭುತ ಯಶಸ್ಸನ್ನು, ಜನಪ್ರಿಯತೆಯನ್ನು ಗಳಿಸಿಕೊಂಡಿತು.ಇನಾಂದಾರರಿಗೆ ಭಾರತೀಯ ಸನಾತನ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ಧಾರ್ಮಿಕ ನಂಬಿಕೆಗಳಲ್ಲಿ , ಕರ್ಮ ಸಿದ್ಧಾಂತಗಳಲ್ಲಿ ಅಪಾರ ಶ್ರದ್ಧೆಯಿತ್ತು. ತಮ್ಮ ಈ ನಂಬಿಕೆಗಳನ್ನು, ಜೀವನಶ್ರದ್ಧೆಯನ್ನು ಅಭಿವ್ಯಕ್ತಿಯ ಸಮರ್ಥ ಮಾಧ್ಯಮವೆಂದು ಅವರು ಭಾವಿಸಿದ್ದು, ಅವುಗಳನ್ನು ಕಾದಂಬರಿಗಳಲ್ಲಿ ಬಿಂಬಿಸುವ ಪ್ರಯತ್ನ ಮಾಡಿದರು. ಕನ್ನಡ ಸಾಹಿತ್ಯದಲ್ಲಿನ ಎಲ್ಲ ಚಳವಳಿಗಳಿಗೂ ಪ್ರತ್ಯೇಕ ಸಾಕ್ಷಿಯಾದರೂ ಯಾವುದೇ ಒಂದು ಚಳವಳಿಯ ಸಿದ್ಧಾಂತಕ್ಕೆ ಬದ್ಧರಾಗದೆ ತಮ್ಮ ಸ್ವತಂತ್ರ ವಿಚಾರ, ಆಲೋಚನೆ, ನಂಬಿದ ಮೌಲ್ಯಗಳ ನಿರ್ದೇಶನದೊಂದಿಗೆ ಸೃಜನಶೀಲ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋದರು. ಕೆಲವರು ವಿಮರ್ಶಕರ ದೃಷ್ಟಿಯಲ್ಲಿ ಇನಾಂದಾರರ ಕಾದಂಬರಿಗಳು ವೈಚಾರಿಕೆ ನೆಲೆಯಲ್ಲಿ ಸೋಲುತ್ತವೆ ಎನ್ನುವ ಅಪವಾದವಿದೆ. ವೈಚಾರಿಕತೆಯ ಅಗತ್ಯವನ್ನು ಲೇಖಕರು ಒಪ್ಪುತ್ತಾರಾದರೂ, ವೈಚಾರಿಕತೆಯೇ ವಿಜೃಂಭಿಸುವುದನ್ನು ಒಪ್ಪುವುದಿಲ್ಲ. ಅದು ಅತಿಯಾಗಿ ಕಾಣುವಂತೆ ಇರಬಾರದೆಂಬುದೇ ಅವರ ನಿಲುವು. ಇನಾಂದಾರರಿಗೆ ಕಾದಂಬರಿಯ ಸ್ವರೂಪ, ಅದರ ರಚನೆಯ ರೀತಿ ಎಲ್ಲದರ ಬಗ್ಗೆ ಸ್ಪಷ್ಟವಾದ ಕಲ್ಪನೆಯಿತ್ತು.ಒಂದು ಸಂದರ್ಶನದಲ್ಲಿ ‘ಕಾದಂಬರಿ ಹೇಗೆ ಬರೆಯುತ್ತೀರಿ’ ಎಂಬ ಪ್ರಶ್ನೆಗೆ, ಇನಾಂದಾರರು ಹೀಗೆ ವಿವರಿಸಿದ್ದಾರೆ. ‘ಕಾದಂಬರಿ ಹೇಗೆ ಮೂಡುತ್ತದೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಎಷ್ಟೋ ಸಲ ಎಲ್ಲೋ ಒಂದು ನೋಡಿದ್ದು ಮನಸ್ಸಿನಲ್ಲಿರುತ್ತದೆ, ಅದು ಬಹಳ ಅರ್ಥಪೂರ್ಣವಾಗಿ ಕಾಣಬಹುದು.ಸಾಮಾನ್ಯವಾಗಿ ಘಟನೆಯ ದೃಷ್ಟಿಯಿಂದಲ್ಲದಿದ್ದರೂ ಅರ್ಥದ ದೃಷ್ಟಿಯಿಂದ ಮುಖ್ಯ ಅಂತ ಅನ್ನಿಸುತ್ತದೆ. ಸನ್ನಿವೇಶಗಳನ್ನು ಕುರಿತು ಆಲೋಚನೆ ಮಾಡುತ್ತಿದ್ದ ಹಾಗೆ ಉಳಿದ ಪಾತ್ರಗಳೂ ಅದರೊಡನೆ ಬೆಳೆದುಕೊಂಡು ಬರುತ್ತವೆ. ಎಷ್ಟೋ ಸಲ ಒಂದು ಪಾತ್ರವನ್ನು ಎಲ್ಲೋ ನೋಡ್ತೇವೆ. ಅದರ ಹಿನ್ನೆಲೆಯಲ್ಲಿ ಈ  ಮನುಷ್ಯ ಎಂಥವನಿರಬಹುದು, ಇವನ ಮನೆ, ಸಂಸಾರ ಹೇಗಿರಬೇಕು, ಜೀವನ ಹೇಗಿರಬಹುದು ಅಂತನ್ನೋದನ್ನು ಒಂದು ಪಾತ್ರ ನೋಡಿಯೇ ಊಹಿಸಬೇಕಾಗುತ್ತದೆ’ ಎಂದೆಲ್ಲ ವಿವರಿಸಿ ಕಾದಂಬರಿ ಹುಟ್ಟು ಪಡೆಯಬಹುದಾದಕ್ಕೆ ಹಿನ್ನೆಲೆಯ ಕಾರಣಗಳನ್ನು ಸ್ಪಷ್ಟಪಡಿಸುತ್ತಾರೆ.ಬರವಣಿಗೆಯ ಮೂಲಕ ಅಪಾರ ಜನಮನ್ನಣೆಗಳಿಸಿದ್ದರೂ ಜನಸಂಪರ್ಕ, ಸ್ನೇಹ ಸಂಬಂಧಗಳ ವಿಚಾರದಲ್ಲಿ ಅವರದು ಒಂದು ಬಗೆಯ ಗಾಂಭೀರ್ಯ. ಮಾತಿಗಿಂತ ಮೌನವೇ ಅವರಿಗೆ ಪ್ರಿಯವೆನಿಸಿತ್ತು. ಮಾತಾಡಲೇ ಬೇಕಾದ ಅನಿವಾರ್ಯತೆ ಉಂಟಾದಾಗ ಹಿತಮಿತವಾದ ಮಾತಷ್ಟೇ ಅವರಿಂದ ನಿರೀಕ್ಷಿಸಬಹುದಾಗಿತ್ತು. ಅವರು ಬಹಳ ಶಿಸ್ತಿನ ಮನುಷ್ಯ. ಸುತ್ತಲಿನವರಿಂದಲೂ ಅದೇ ಬಗೆಯ ಶಿಸ್ತನ್ನು ನಿರೀಕ್ಷಿಸುತ್ತಿದ್ದರು.ಇನಾಂದಾರ್ ನಿಧನರಾದುದು 26ನೇ ಜನವರಿ 1986ರಲ್ಲಿ. ಇನಾಂದಾರ್‌ ಅವರು ಜನಿಸಿ ನೂರು ವರ್ಷಗಳಾದವು. ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಅವರ ಸಾಹಿತ್ಯ–ಸಾಧನೆ ನೆನಪಿಸಿಕೊಳ್ಳಬೇಕಿದೆ. ಅವರ ಸಾಹಿತ್ಯಾವಲೋಕನ, ವಿಮರ್ಶೆ, ವಿಶ್ಲೇಷಣೆ, ಪುನರ್‌ ಮೌಲ್ಯೀಕರಣ, ಚರ್ಚೆಗಳ ಅಗತ್ಯವಿದೆ.

ಪ್ರತಿಕ್ರಿಯಿಸಿ (+)