ಶನಿವಾರ, ಮೇ 8, 2021
20 °C

ಕನ್ನಡನಾಡಿನ ಚಿಂತಕರಿಗೆ ಅನುಯಾಯಿಗಳ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಕನ್ನಡ ಸಂಸ್ಕೃತಿಯ ದೊಡ್ಡ ದೊಡ್ಡ ಚಿಂತಕರಿಗೆ ಅನುಯಾಯಿಗಳೇ ಇಲ್ಲದಿರುವುದು ವಿಷಾದನೀಯ ಎಂದು ವಿಮರ್ಶಕ ಡಾ.ಕೆ.ವಿ.ನಾರಾಯಣ್ ವಿಷಾದಿಸಿದರು.ನಗರದ ಎಂಎಬಿಎಲ್ ಸಭಾಂಗಣದಲ್ಲಿ ಅನಿಕೇತನ ಸಂಸ್ಥೆ ಆಯೋಜಿಸಿದ್ದ ಡಾ.ಡಿ.ಆರ್.ನಾಗರಾಜ್ ಕೃತಿಗಳ ಮರು ಓದು-ಚರ್ಚಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಚಿಂತಕರಿಗೆ ಹಿಂಬಾಲಕರು, ಜೈಕಾರ ಹಾಕುವವರು ಇರುತ್ತಾರೆ. ಆದರೆ ಕನ್ನಡ ಸಾರಸ್ವತ ಲೋಕದ ಅನನ್ಯ ಚಿಂತಕರಾದ ಡಿ.ಆರ್.ನಾಗರಾಜ್, ಅನಂತಮೂರ್ತಿ, ಕುರ್ತುಕೋಟಿ, ತೇಜಸ್ವಿಯಂತಹ ಸಾಹಿತಿಗಳಿಗೆ ನಿರ್ದಿಷ್ಟ ಅನುಯಾಯಿಗಳೇ ಇಲ್ಲದಂತಾಗಿದೆ ಎಂದರು.ಡಿ.ಆರ್.ನಾಗರಾಜ್ ತಮ್ಮ ಸಂಸ್ಕೃತಿ ಚಿಂತನೆಯ ವಿನ್ಯಾಸಗಳಿಗೆ ರೂಪಕಗಳನ್ನು ಸಾಹಿತ್ಯದಿಂದ ಪಡೆದರೆ ತಾತ್ವಿಕ ಚೌಕಟ್ಟುಗಳನ್ನು ಜಾಗತಿಕವಾಗಿ ಪಡೆದುಕೊಂಡಂತಹ ಅಪರೂಪದ ಸಾಹಿತಿಯಾಗಿದ್ದರು ಎಂದು ವಿಶ್ಲೇಷಿಸಿದ ನಾರಾಯಣ್, ಕನ್ನಡ ಮನಸುಗಳ ಜೊತೆ ಮಾತಾಡುವುದಕ್ಕೆ ಮುಂಚೆ ಅನ್ಯಭಾಷಿಕರ ಜೊತೆ ಮಾತನಾಡಬೇಕು. ಕನ್ನಡ ಸಂಸ್ಕೃತಿ, ಅದರ ಒಳಸುಳಿ, ಸಂಘರ್ಷಗಳನ್ನು ಕನ್ನಡಿಗರಲ್ಲದವರಿಗೆ ಅದರಲ್ಲೂ ಇಂಗ್ಲಿಷ್ ಜಗತ್ತಿಗೆ ತಿಳಿಸಬೇಕು ಎಂಬ ಅದಮ್ಯ ಆಯ್ಕೆಯನ್ನು ಮಾಡಿಕೊಂಡಿದ್ದ ಡಿ.ಆರ್.ನಾಗರಾಜ್ ತಮ್ಮ ಜೀವಿತಾವಧಿಯಲ್ಲಿ ಅದನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದ ವ್ಯಕ್ತಿಯಾಗಿದ್ದರು ಎಂದು ಹೇಳಿದರು.`ನಮ್ಮ ನೆಲದ ವಿಷಯಗಳನ್ನು ಹೊರ ಜಗತ್ತಿಗೆ ನಿರಂತರವಾಗಿ ತಿಳಿಸುತ್ತಲೇ ಹೋದ ನಾಗರಾಜ್ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನೆಲ್ಲಾ ಅಗಲಿದರು. ಅವರು ತಮ್ಮ ಕಡೆಯ ದಿನಗಳಲ್ಲಿ ಕನ್ನಡಿಗ ಮನಸ್ಸುಗಳ ಜೊತೆಗಿನ ಸಂವಾದವನ್ನು ಕಡಿಮೆ ಮಾಡಿಕೊಳ್ಳುತ್ತಲೇ ಹೊರಜಗತ್ತಿನ ಸಂವಾದಕ್ಕೆ ಆಳವಾಗಿ ತೆರೆದುಕೊಂಡಿದ್ದರು~ ಎಂದರು.ನನ್ನ ಇಡೀ ಅಧ್ಯಾಪನದ ವೃತ್ತಿ ಜೀವನದಲ್ಲಿ ಪಾಠ ಮಾಡುವಾಗ ನನ್ನನ್ನು ಆತಂಕ ಮತ್ತು ತುದಿಗಾಲ ಮೇಲೆ ನಿಲ್ಲಿಸಿದ ಏಕೈಕ ವಿದ್ಯಾರ್ಥಿ ಡಿ.ಆರ್. ನಾಗರಾಜ್ ಅವರಾಗಿದ್ದರು ಎಂದು ನಾರಾಯಣ ಸ್ಮರಿಸಿಕೊಂಡರು.ಅಧ್ಯಾಪಕ ಕೆ.ವೆಂಕಟೇಶ್ ಮಾತನಾಡಿ, `ಕನ್ನಡದ ಬಹುಮುಖ ಸಾಂಸ್ಕೃತಿಕ ಕಥನಲೋಕವನ್ನು ತಮ್ಮದೇ ವಿಧಾನದಲ್ಲಿ ಕಟ್ಟಿದ ಡಿ.ಆರ್.ನಾಗರಾಜ್ ತಮ್ಮ ಗುರು ಕೆವಿಎನ್ ಅವರಿಗಿಂತ ಭಿನ್ನ. ತಾತ್ವಿಕ ಚೌಕಟ್ಟುಗಳು ಕೃತಿಯ ಒಳಗಡೆಯೇ ಇರಬೇಕು ಎಂಬ ನಂಬಿಕೆ ಹೊಂದಿದ್ದ ಅವರು ಮೂರನೇ ಬೌದ್ಧಿಕ ಹಂತಕ್ಕೆ ಜಿಗಿಯುವಾಗ ತಮ್ಮ ಗುರುಗಳ ಜೊತೆಗೆ ಚಿಂತನೆಯ ಏಕಲಯವನ್ನು ಕಂಡುಕೊಂಡಿದ್ದರು ಎಂದು ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.