ಸೋಮವಾರ, ಮೇ 10, 2021
25 °C

ಕನ್ನಡಮ್ಮನ ತೇರು; ಓಬವ್ವನ ಊರಲ್ಲಿ ಸಿದ್ಧತೆ ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ರಾಜರು, ಸಾಮಂತರು, ಪಾಳೇಗಾರರು ಆಳಿ ಹೋದ ಕೋಟೆ ನಾಡು ಚಿತ್ರದುರ್ಗ ನಗರ 11ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ. ಜೂನ್ 24ರಂದು ಸಮ್ಮೇಳನಕ್ಕೆ ಚಾಲನೆ ಸಿಗಲಿದೆ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಪ್ರಕ್ರಿಯೆಗೆ ಮೇಲ್ಪಂಕ್ತಿ ಹಾಕಿಕೊಟ್ಟ ಚಿತ್ರದುರ್ಗ, ಈಗ ಹನ್ನೊಂದನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ಒದಗಿಸಿಕೊಡುತ್ತಿದೆ.ಇದೇ ಮೊದಲ ಬಾರಿಗೆ ಚಿತ್ರದುರ್ಗ ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಜಿಲ್ಲೆಯ ಸಾಹಿತ್ಯ ಬಳಗದಲ್ಲಿ ಸಂಭ್ರಮ ಮೂಡಿಸಿದೆ.ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು, ಸಂವನದ ಕೊರತೆಯ ನಡುವೆಯೂ ಸಮ್ಮೇಳನ ಯಶಸ್ವಿಯಾಗಿ ನಡೆಯಬೇಕೆನ್ನುವುದು ಜಿಲ್ಲೆಯ ಸಾಹಿತ್ಯಾಸಕ್ತರ ಆಶಯವಾಗಿದೆ.ನಿಕಟಪೂರ್ವ ಅಧ್ಯಕ್ಷರು, ಸದಸ್ಯರೆಲ್ಲರೂ ಎಲ್ಲ ಭೇದ ಮರೆತು ಸಮ್ಮೇಳನದ ಯಶಸ್ಸಿಗೆ ಶ್ರಮಿಸಿ ಎಂದು ವಿನಂತಿಸಿದ್ದಾರೆ.

ಇವರೆಲ್ಲರ ಆಶಯ, ಮನವಿಗೆ ಇಂಬು ನೀಡುವಂತೆ, ನಗರದ ತುಂಬಾ ಸಾಹಿತ್ಯ ಸಮ್ಮೇಳನದ ಪೋಸ್ಟರ್, ಬ್ಯಾನರ್‌ಗಳು ರಾರಾಜಿಸುತ್ತಿವೆ. ಸಮ್ಮೇಳನ ನಡೆಯುವ ಎಸ್‌ಜೆಎಂ ಸಭಾಂಗಣ ನವ ವಧುವಿನಂತೆ ಸಿಂಗಾರಗೊಂಡಿದೆ.ಸಮ್ಮೇಳನದ ವೇದಿಕೆಯನ್ನು ಚಿತ್ರದುರ್ಗ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸದಸ್ಯರು ತುಂಬಾ ಆಸ್ತೆಯಿಂದ ವಿನ್ಯಾಸಗೊಳಿಸಿದ್ದಾರೆ.

ಸಮ್ಮೇಳನದ ಮಹಾದ್ವಾರಕ್ಕೆ ರಾಷ್ಟ್ರನಾಯಕ ದಿ.ಎಸ್.ನಿಜಲಿಂಗಪ್ಪ ಹೆಸರಿಡಲಾಗಿದೆ. ಸಭಾ ಮಂಟಪಕ್ಕೆ ಸಾಹಿತ್ಯ ದಿಗ್ಗಜ ಟಿ.ಎಸ್.ವೆಂಕಣ್ಣಯ್ಯ ಅವರ ಹೆಸರಿಡುವ ಮೂಲಕ ಇಬ್ಬರು ಮಹನೀಯರನ್ನೂ ಸ್ಮರಿಸಲಾಗಿದೆ. ವೇದಿಕೆಯ ಇಕ್ಕೆಲಗಳಲ್ಲಿ ದುರ್ಗದ ಬೆಟ್ಟದ ಪ್ರಮುಖ ದೇಗುಲಗಳ ಚಿತ್ರಗಳಿವೆ.ಚಿತ್ರದುರ್ಗದ ಇತಿಹಾಸವನ್ನು ಕಥೆ, ಕಾದಂಬರಿಗಳಲ್ಲಿ ಚಿತ್ರಿಸುತ್ತಾ, ನಾಡಿನ ಮನೆ ಮನೆಗೆ ತಲುಪಿಸಿದ ಖ್ಯಾತ ಕಾದಂಬರಿಕಾರ ಬಿ.ಎಲ್.ವೇಣು ಅವರು ಸಮ್ಮೇಳನಾಧ್ಯಕ್ಷರಾಗಿರುವುದು ಸಮ್ಮೇಳನದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಸಮ್ಮೇಳನ ಉದ್ಘಾಟಿಸಲಿದ್ದಾರೆ.ಒಂದು ಸಾವಿರ ಸಂಖ್ಯೆಯಲ್ಲಿ ಸಾಹಿತ್ಯ ಅಭಿಮಾನಿಗಳು ಸಮ್ಮೇಳನಕ್ಕೆ ಆಗಮಿಸುವ ನಿರೀಕ್ಷೆ ಇದೆ ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ.ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿದಿಗಳಿಗೆ ಊಟೋಪಚಾರದಲ್ಲಿ ಲೋಪವಾಗದಂತೆ ಎಚ್ಚರವಹಿಸಲು ಜಿಲ್ಲಾ ಉಸ್ತುವಾರಿ ಸಚಿವರೇ, ವ್ಯವಸ್ಥೆಯ ಜವಾಬ್ದಾರಿ ಹೊತ್ತಿದ್ದಾರೆ. ಸಮ್ಮೇಳನಕ್ಕೆ ಆಗಮಿಸುವ ಎಲ್ಲ ಸಾಹಿತ್ಯಾಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲು ಸಮಿತಿ ಸದಸ್ಯರಿಗೆ ಸೂಚಿಸಿದ್ದಾರೆ.ಒಟ್ಟಾರೆ ಅನೇಕ ಹಗ್ಗಜಗ್ಗಾಟಗಳು, ವಿವಾದಗಳು, ಮನಸ್ತಾಪಗಳು.. ಎಲ್ಲವುದರ ನಡುವೆ ಓಬವ್ವನ ನಾಡಿನ ಸಾಹಿತ್ಯ ಅಭಿಮಾನಿಗಳು ಕನ್ನಡಮ್ಮನ ತೇರು ಎಳೆಯಲು ಸಜ್ಜಾಗಿದ್ದಾರೆ.ತಾಲ್ಲೂಕು ಸಮ್ಮೇಳನದಲ್ಲಿ ಮೊದಲ ಅಧ್ಯಕ್ಷರಾಗಿದ್ದವರು ತಾವು. ನಗರದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಜಿಲ್ಲಾ ಸಮ್ಮೇಳನದ ಅಧ್ಯಕ್ಷರಾಗುವ ಅವಕಾಶವೂ ತಮಗೆ ಸಿಕ್ಕಿದೆ. ಏನನ್ನಿಸುತ್ತದೆ?

ತಾಲ್ಲೂಕು ಸಮ್ಮೇಳನದ ಅಧ್ಯಕ್ಷನಾದಾಗ ಇನ್ನೂ ಹುಡುಗಾಟಿಕೆಯಿತ್ತು. ಆದರೂ, ಆ ಗೌರವ ಬಹಳ ಖುಷಿ ಕೊಟ್ಟಿತ್ತು. ಅದೊಂದು ಜವಾಬ್ದಾರಿ ಅಂತ ಹೊಳೆದಿರಲಿಲ್ಲ. ಈಗ ಹಾಗಲ್ಲ. ನಾನೊಂದಿಷ್ಟು ಬರೆದಿದ್ದೇನೆ, ಸಾಧಿಸಿದ್ದೇನೆ. ಆ `ತೂಕ'ದ ಅರ್ಹತೆಯೇ ಜಿಲ್ಲಾ ಸಮ್ಮೇಳನದ ಅಧ್ಯಕ್ಷನನ್ನಾಗಿಸಿದೆ. ಈಗ ಜವಾಬ್ದಾರಿ ಹೆಚ್ಚಾಗಿದೆ. ಪ್ರೀತಿಯಿಂದ ಈ ಜವಾಬ್ದಾರಿ ವಹಿಸಿರುವ ಚಿತ್ರದುರ್ಗದ ಜನತೆಗೆ ನಾನು ಋಣಿಯಾಗಿದ್ದೇನೆ.ಸಾಹಿತ್ಯ ಸಮ್ಮೇಳನಗಳು ಕನ್ನಡದ ಬೆಳವಣಿಗೆಗೆ ಪೂರಕವೇ ?

ಅನುಮಾನವೇ ಇಲ್ಲ. ಹೆಚ್ಚು ಹೆಚ್ಚು ಕನ್ನಡ ಸಮ್ಮೇಳನಗಳು ನಡೆಯುವುದರಿಂದ `ಭಾಷಾ ಜಾಗೃತಿ' ಹೆಚ್ಚಾಗುತ್ತದೆ. ಕನ್ನಡ ಸಮ್ಮೇಳನವು ಹಬ್ಬ, ಜಾತ್ರೆ, ಪರಿಸೆಯಂತೆ ನಡೆಯಬೇಕು. ಭಾವನೆ, ಭಾಷೆ ಎರಡೂ ಬೆರೆಯುವುದೇ ಇಂಥ ಮೇಳಗಳಲ್ಲಿ. ನಿತ್ಯದ ಜಂಜಡದಲ್ಲಿ ಮರೆತಿದ್ದನ್ನು ಈ ಸಮ್ಮೇಳನಗಳು ನೆನಪಿಸುತ್ತವೆ. ಕನ್ನಡ ಜಾತ್ರೆಗೆ ಜನ ಬರಬೇಕು. ವಿಚಾರ ವಿನಿಮಯ ಮಾಡಿಕೊಳ್ಳಬೇಕು. ಸಮ್ಮೇಳನಗಳಿಗೆ ಈಗ ಹಣಕಾಸಿನ ಕೊರತೆಯೇನೂ ಇಲ್ಲ. ಸರ್ಕಾರ ಜಿಲ್ಲಾ ಸಮ್ಮೇಳನಕ್ಕೆ ರೂ 5 ಲಕ್ಷ, ತಾಲ್ಲೂಕು ಸಮ್ಮೇಳನಕ್ಕೆ ರೂ 1 ಲಕ್ಷ ಕೊಡುತ್ತಿದೆ.ಸಮ್ಮೇಳನದ ಆಶಯಗಳು ಹೇಗಿರಬೇಕು?

ಕನ್ನಡ, ಕನ್ನಡಿಗ ಕರ್ನಾಟಕ, ಭಾಷೆ, ಸಂಸ್ಕೃತಿ ರಕ್ಷಣೆ.. ಇವೆಲ್ಲ ಹಳೆಯ ಆಶಯಗಳಾಯಿತು. ಇವುಗಳನ್ನೂ ಒಳಗೊಂಡಂತೆ, ಕನ್ನಡದ ಅಭಿವೃದ್ಧಿ, ಕನ್ನಡಿಗರಿಗೆ ಆ ಜಿಲ್ಲೆಯಲ್ಲಿ ಏನು ಸೌಲಭ್ಯಬೇಕು ಎಂಬುದನ್ನು ಚರ್ಚಿಸುವಂತಿರಬೇಕು. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು, ಸಚಿವರು, ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಬೇಕು.ಅಕ್ಷರ ವಂಚಿತರಿಗೆ ಸಮ್ಮೇಳನ ತಲುಪುವ ಬಗೆ...?

ಸಮ್ಮೇಳನದ ಗೋಷ್ಠಿಗಳು, ಭಾಷಣಗಳು ಅಕ್ಷರ ಬಲ್ಲವರಿಗಾಗಿ. ನಾಟಕ, ನೃತ್ಯ, ಗೀತ ಗಾಯನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅಕ್ಷರ ವಂಚಿತರಿಗಾಗಿ. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಅಕ್ಷರ ವಂಚಿತರಲ್ಲಿ ಭಾಷಾ ಪ್ರೀತಿ ಹೆಚ್ಚಿಸುವ ಕೆಲಸಗಳಾಗುತ್ತಿವೆ.ಈ ಸಮ್ಮೇಳನದಲ್ಲಿ ಇಂಥವರಿಗೆ ಅವಕಾಶ ನೀಡಿದ್ದೀರಾ ?

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವಕಾಶ ನೀಡಿದ್ದೇವೆ. ಅಕ್ಷರ ವಂಚಿತರಿಗೆ, ಹಾಡು, ನಾಟಕ, ಅಭಿನಯಗಳೇ ಭಾಷೆ. ಅವರು ಹಾಡು, ನೃತ್ಯ ನಟನೆ ಮೂಲಕ ಕನ್ನಡ ಪ್ರೇಮವನ್ನು ಅಭಿವ್ಯಕ್ತಿಗೊಳಿಸುತ್ತಾರೆ.ಸಿನಿಮಾದಿಂದ ಭಾಷೆ ಬೆಳವಣಿಗೆ ಸಾಧ್ಯವೇ ?

ಕನ್ನಡ ಭಾಷೆಯ ಸ್ಪಷ್ಟತೆಗೆ ಡಾ.ರಾಜಕುಮಾರ್ ಅವರ ಮಾತುಗಳನ್ನು ಉದಾಹರಿಸುತ್ತೇನೆ... ರಾಜ್ ಅವರ ಮಾತುಗಳು, ಅದೆಷ್ಟೋ ಅನ್ಯ ಭಾಷಿಕರಿಗೆ ಕನ್ನಡ ಕಲಿಸಲು ಪ್ರೇರಣೆಯಾಗಿದೆ. ಅವರ ನಟನೆಯಿಂದ ಭಾಷೆ ಕರ್ನಾಟಕದ ಗಡಿ ದಾಟಿ ವಿಸ್ತಾರಗೊಂಡಿದೆ. ರಾಜ್‌ಕುಮಾರ್, ಅಶ್ವತ್ಥ್, ಶ್ರೀನಾಥ್ ಒಳಗೊಂಡಂತೆ ಖ್ಯಾತ ನಟರು ಕನ್ನಡ ಭಾಷೆಯನ್ನು ಬೆಳೆಸಿದ ಪರಿ ಅಪರಿಮಿತ.ಆಧುನಿಕ ಮಾಧ್ಯಮಗಳು ಮತ್ತು ಕನ್ನಡದ ಬೆಳವಣಿಗೆ...

ಫೇಸ್‌ಬುಕ್, ಟ್ವಿಟರ್, ಅಂತರ್ಜಾಲ... ಇವುಗಳ ಪರಿಕಲ್ಪನೆ, ವ್ಯಾಪ್ತಿ ನನ್ನಂಥವನಿಗೆ ತಿಳಿಯದಿರಬಹುದು. ಅವುಗಳಿಗೆ ಒಗ್ಗಿಕೊಳ್ಳುವುದು ಕಷ್ಟ. ಆದರೆ `ಇ-ಮಾಧ್ಯಮ'ಗಳ ಮೂಲಕ ಕನ್ನಡ ಕಲಿಕೆ ಹಾಗೂ ಓದುಗರ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿದೆ ಎನ್ನುವುದನ್ನು ನಾವು ಒಪ್ಪಬೇಕು. ಒಂದೊಂದು ಕನ್ನಡದ ಜಾಲತಾಣಗಳಿಗೆ ಲಕ್ಷಾಂತರ ಓದುಗರಿದ್ದಾರೆ. ಕಂಪ್ಯೂಟರ್‌ನಲ್ಲಿ ಕನ್ನಡ ಅಕ್ಷರಗಳು ಮೂಡುವಂತಾದ ಮೇಲಂತೂ, ಕನ್ನಡದ ಕಂಪು ಹೊರ ದೇಶಗಳಿಗೂ ಸೀಮೋಲಂಘನವಾಗುತ್ತಿದೆ.ಆಡಳಿತದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಅನಿವಾರ್ಯ..

ಜಿಲ್ಲಾಮಟ್ಟದ ಕಚೇರಿಗಳಲ್ಲಿ ಕನ್ನಡ ಹೆಚ್ಚಾಗಿ ಬಳಕೆಯಾಗುತ್ತಿದೆ. ನಾನು ಜಿಲ್ಲಾ ಆರೋಗ್ಯ ಘಟಕದಲ್ಲಿ ಕೆಲಸ ಮಾಡಿದವನು. ಅಲ್ಲಿ ಹಿರಿಯ ಅಧಿಕಾರಿಗಳು ಕನ್ನಡದಲ್ಲಿ ಬರೆದ ಕರಡು ಪ್ರತಿಗಳನ್ನು ಕನ್ನಡ ಬಲ್ಲವರಿಂದ ತಿದ್ದಿಸಿಕೊಳ್ಳುತ್ತಿದ್ದರು. ಆ ಮಟ್ಟಿಗೆ ಕನ್ನಡ ಜಾಗೃತಿ ಬೆಳೆಯುತ್ತಿದೆ.ಜಾಗತಿಕರಣದ ನಂತರ ನಾವೆಲ್ಲ ಐಟಿ-ಬಿಟಿ ಯುಗದಲ್ಲಿದ್ದೇವೆ. ಇಲ್ಲಿ ಕೆಲಸ ಮಾಡುವವರೆಲ್ಲ ಇಂಗ್ಲಿಷ್‌ನಲ್ಲೇ ವ್ಯವಹರಿಸಬೇಕು. ಹಾಗಾಗಿ, ಇಂಗ್ಲಿಷ್ ಕಲಿಯಬೇಕು. ಆದರೆ, ಕನ್ನಡವನ್ನು ಮರೆಯಬಾರದು.ಯಾವ ಭಾಷೆ ನಮಗೆ ಅನ್ನ ನೀಡುತ್ತದೆಯೋ ಆ ಭಾಷೆ ನಮಗೆ ಮುಖ್ಯ. ಹಾಗಾಗಿ  ಅದನ್ನು ಗೌರವಿಸಲೇಬೇಕು. ಆದರೆ ಮಾತೃಭಾಷೆಯನ್ನು ಪ್ರೀತಿಸಿಸಬೇಕು, ಬೆಳೆಸಬೇಕು.ಈ ನಿಟ್ಟಿನಲ್ಲಿ ಸರ್ಕಾರ ಏನು ಪ್ರಯತ್ನ ಮಾಡಬಹುದು ?

ಶಿಕ್ಷಣದಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ಓದಿದವರಿಗೆ ಉದ್ಯೋಗ ನೀಡುವುದಾಗಿ ಸರ್ಕಾರ ಘೋಷಿಸಬೇಕು. ಆಗ ಭಾಷಾಭಿಮಾನದ ಅಲೇಖ(ಗ್ರಾಫ್) ಬದಲಾಗುತ್ತದೆ.ಕನ್ನಡಮ್ಮ ಅನ್ನ ಕೊಡುವುದಾದರೆ, ಇಂಗ್ಲಿಷ್ ಅಮ್ಮನ ಬಳಿ ಹೋಗಿ ಯಾರು ಭಿಕ್ಷೆ ಬೇಡುತ್ತಾರೆ ?

ನೋಡಿ, ಸರ್ಕಾರಿ ಶಾಲೆಗಳಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಿದರೆ ಮಕ್ಕಳ ಸಂಖ್ಯೆ ಏಕೆ ಕಡಿಮೆಯಾಗುತ್ತದೆ. ಹಳ್ಳಿಗಳಲ್ಲಿರುವ ಪ್ರಾಥಮಿಕ ಶಾಲೆಯಲ್ಲೂ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸಿದರೆ ಸಾಕು. ಯಾಕೆ ಸರ್ಕಾರಿ ಶಾಲೆಗೆ ಮಕ್ಕಳು ಬರೋದಿಲ್ಲ ಹೇಳಿ ನೋಡೋಣ. ಇದು ಬಿಟ್ಟು ಕನ್ನಡ ಶಾಲೆ ಮುಚ್ಚಿದರೆ, ಎಲ್ಲರೂ ಕಾನ್ವೆಂಟ್‌ನಲ್ಲಿ ಕಲಿಯೋಕೆ ಸಾಧ್ಯವೇ?ದುರ್ಗದ ಪ್ರವಾಸೋದ್ಯಮ ಅಭಿವೃದ್ಧಿ...

ಚಿತ್ರದುರ್ಗವನ್ನು ಪ್ರವಾಸಿ ತಾಣವಾಗಿಸಬೇಕೆಂಬುದು 60 ವರ್ಷಗಳ ಕೂಗು. ಇದಕ್ಕಾಗಿ ಹಲವಾರು ಬಾರಿ `ಪತ್ರ ಸಮರ' ನಡೆಸಿದ್ದೇನೆ. ಏನೂ ಪ್ರಯೋಜನವಾಗಿಲ್ಲ. ಇದಕ್ಕೆ ಕಾರಣ, ನಮ್ಮ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಆಳ್ವಿಕೆ ನಡೆಸಿರುವ ರಾಜಕೀಯ ನಾಯಕರಲ್ಲಿರುವ ಇಚ್ಛಾಶಕ್ತಿ ಕೊರತೆ!ನಿತ್ಯ ಬೆಳಿಗ್ಗೆ ಸಾವಿರಾರು ಜನ ಬೆಟ್ಟಕ್ಕೆ ಬರುತ್ತಾರೆ. ಆ ಪ್ರವಾಸಿಗರ ಬಸ್ ನಿಲುಗಡೆಗೆ ಸ್ಥಳವಿಲ್ಲದಂತೆ ಜಾಗ ಆಕ್ರಮಿಸಿಕೊಳ್ಳಲಾಗಿದೆ. ಇನ್ನು, ಸರ್ಕಾರ ನೇಮಕಮಾಡಿದ ಗೈಡ್‌ಗಳಿಲ್ಲ. ಇರುವ ಗೈಡ್‌ಗಳಿಗೆ ಭಾವನಾತ್ಮಕವಾಗಿ ಬೆಟ್ಟವನ್ನು ತೋರಿಸಲು ಬರುವುದಿಲ್ಲ.ಪುರಾತತ್ವ ಇಲಾಖೆ ಬೆಟ್ಟ ಸ್ವಚ್ಚಗೊಳಿಸುವಂತಹ ಕೆಲಸ ಮಾಡಿದೆ. ಬೆಟ್ಟಕ್ಕೆ ಬೆಳಕು ನೀಡುವ ಪ್ರಯತ್ನ ನಡೆದಿದೆ. ಅದು ಯಾವಾಗ ಬೆಳಗುತ್ತದೋ ಗೊತ್ತಿಲ್ಲ. ಬೆಟ್ಟಕ್ಕೆ ಧ್ವನಿ ಮತ್ತು ಬೆಳಕು ಅಳವಡಿಸುವ ಕುರಿತು ಹಿಂದಿನ ಜಿಲ್ಲಾಧಿಕಾರಿಯೊಂದಿಗೆ ನಾನು ನಿರ್ದೇಶಕ ಟಿ.ಎಸ್.ನಾಗಾಭರಣ ಚರ್ಚಿಸಿದ್ದೆವು. ಆದರೆ, ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ನಮ್ಮ ಬೆಟ್ಟದ ಬೆಳಕು, ವಿಜಾಪುರದ ಗೋಲಗುಮ್ಮಟ, ಮೈಸೂರಿನ ಚಾಮುಂಡಿ ಬೆಟ್ಟ, ಬದಾಮಿ, ಐಹೊಳೆಯಯಲ್ಲಿ ಬೆಳಗುವಂತಾಗಿದೆ. ಮತ್ತೆ `ನಮ್ಮ ದುರ್ಗಕ್ಕೆ' ಮೋಸವಾಗಿದೆ.ಭದ್ರ ಮೇಲ್ದಂಡೆ ಕಥೆ ಏನು ?

ನಮ್ಮದು ಶಾಪಗ್ರಸ್ಥ ಜಿಲ್ಲೆ. ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರವಿದ್ದರೂ ಇಲ್ಲಿ ಗೆದ್ದವರು ಹೇಗೋ ಮಂತ್ರಿಗಳಾಗುತ್ತಾರೆ. ರಾಜ್ಯದಲ್ಲಿದ್ದ ಸರ್ಕಾರ, ಕೇಂದ್ರದಲ್ಲಿ ಇರುವುದಿಲ್ಲ. ಹೀಗಾಗಿ ಅಭಿವೃದ್ಧಿ, ಅನುದಾನಗಳು ನಮ್ಮ ಜಿಲ್ಲೆಗೆ ಮರೀಚಿಕೆ.ಚಿತ್ರದುರ್ಗದಲ್ಲಿ - ಸಾಹಿತ್ಯ ಚಟುವಟಿಕೆಗಳು ಹೇಗಿವೆ ?

ಹಿಂದೆ ನಾನೊಬ್ಬನೇ ಹೆಚ್ಚು ಬರೆಯುತ್ತಿದ್ದೆ. ಈಗ ಬೇರೆಯವರು ಬರೆಯುತ್ತಾರೆ. ಮೂರು ಜನ ಮಠಾಧೀಶರು ಸಾಹಿತಿಗಳಾಗಿದ್ದಾರೆ. ಇಲ್ಲಿ  ಬರೆಯುವವರನ್ನು ಪ್ರೀತಿಯಿಂದ ಕಾಣುತ್ತಾರೆ.ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಒಂದು ವೈಶಿಷ್ಟ್ಯ ಇದೆ. ಎಲ್ಲ ತಾಲ್ಲೂಕುಗಳಲ್ಲೂ ಸಾಹಿತಿಗಳಿದ್ದಾರೆ. ಅದು ಈ ನೆಲದ ಪುಣ್ಯ. ಬೇರೆ ಜಿಲ್ಲೆಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಿಗಾಗಿ ಹುಡುಕಾಟ ನಡೆಯುತ್ತದೆ. ಇಲ್ಲಿ ಅದಕ್ಕಾಗಿ `ಸ್ಪರ್ಧೆ' ಇದೆ. ಇದು ದುರ್ಗದ ಸಾಹಿತ್ಯದ ಸ್ಥಿತಿಯನ್ನು ತೆರೆದಿಡುತ್ತದೆ.ಸಮ್ಮೇಳನದ ಅಧ್ಯಕ್ಷರಾಗಿ ನಿಮ್ಮ ಆಶಯ..

ನನ್ನದೊಂದು ಕನಸಿತ್ತು... ಜೋಗಿಮಟ್ಟಿಯಿಂದ ಧವಳಗಿರಿಯವರೆಗೆ ರೋಪ್ ವೇ ಹಾಕಿಸಿ, ಆಕಾಶದಿಂದ ದುರ್ಗದ ಏಳು ಸುತ್ತಿನ ಕೋಟೆಯನ್ನು ನೋಡುವಂತಾದರೆ, ಎಷ್ಟು ಸುಂದರವಾಗಿರುತ್ತೆ.. ಅಂತ. ಆ ಕನಸಿನ ಜೊತೆಗೆ ನೀರಾವರಿ ಹಾಗೂ ಪ್ರವಾಸೋದ್ಯಮಗಳ ಅಭಿವೃದ್ಧಿ ಗುರಿಯೂ ಇದೆ. ಚಿತ್ರದುರ್ಗದ ನನ್ನ ಈ ಕನಸುಗಳಿಗೆ ಬಣ್ಣ ಹಚ್ಚಿ ಎಂದು ಕೇಳುತ್ತೇನೆ.ಜಿಲ್ಲಾ ಸಾಹಿತ್ಯ ಸಮ್ಮೇಳನ ಹೇಗಿರಬೇಕು ?

ಕೋಟೆ ನಾಡು ಚಿತ್ರದುರ್ಗ ಹನ್ನೊಂದನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ. ಈ ಹಿನ್ನಲೆಯಲ್ಲಿ `ಜಿಲ್ಲಾ ಸಮ್ಮೇಳನಗಳು ಹೇಗಿರಬೇಕು' ಎಂಬ ಪ್ರಶ್ನೆಯೊಂದಿಗೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಗಣ್ಯರಿಂದ ಪತ್ರಿಕೆ ಅಭಿಪ್ರಾಯ ಸಂಗ್ರಹಿಸಿ ಇಲ್ಲಿ ಪ್ರಸ್ತುತಪಡಿಸಿದೆ.

ಅಭಿವೃದ್ಧಿ ವಿಚಾರಗಳು ಚರ್ಚೆಯಾಗಲಿ

ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವಂಥ ವಿಷಯಗಳನ್ನು ಪ್ರಸ್ತುತಪಡಿಸುವ ವಿಚಾರ ಸಂಕಿರಣಗಳನ್ನು ಆಯೋಜಿಸಬೇಕು. ಎಲ್ಲ ಕ್ಷೇತ್ರದ ತಜ್ಞರಿಗೆ, ಪರಿಣತರಿಗೆ ಅವಕಾಶ ನೀಡಿ, ಆಯಾ ಕ್ಷೇತ್ರದ ವಿಚಾರಗಳು ಜನರಿಗೆ ತಲುಪುವಂತಾಗಬೇಕು. ಸ್ಥಳೀಯ ಸಮಸ್ಯೆಗಳ ಚರ್ಚೆಯಾಗಲು ಪ್ರತ್ಯೇಕ ಗೋಷ್ಠಿ ಇರಬೇಕು. ಸ್ಥಳೀಯ ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕು. ಯೋಗ್ಯ ವ್ಯಕ್ತಿಗಳನ್ನು ಸನ್ಮಾನಕ್ಕೆ ಆಯ್ಕೆ ಮಾಡಿ, ಅವರ ಸಾಧನೆಗಳನ್ನು ಜನರಿಗೆ ಪರಿಚಯ ಮಾಡಿಕೊಡಬೇಕು. ರಾಜಕಾರಣಿಗಳು ಹಾಗೂ ಜಿಲ್ಲಾ ವ್ಯಾಪ್ತಿಗೆ ಸೇರದ ಗಣ್ಯರನ್ನು ವೈಭವೀಕರಿಸುವ ಬದಲು ಅವರಿಗೆ ಕಾರ್ಯಕ್ರಮದಲ್ಲಿ ಸಾಂಕೇತಿಕ ಅವಕಾಶ ನೀಡಿ ಗೌರವಿಸಬೇಕು.

ಮುಂದಿನ ಸಮ್ಮೇಳನದ ಹೊತ್ತಿಗೆ ನಿರ್ಣಯಗಳು ಈಡೇರುವಂತೆ ನೋಡಿಕೊಳ್ಳಬೇಕು.

- ವೆಂಕಣ್ಣಾಚಾರ್, ಸಾಹಿತ್ಯ ಪರಿಚಾರಕರುಸಾಹಿತ್ಯವೇ ಪ್ರಧಾನವಾಗಲಿ

ಜಿಲ್ಲೆಯ ನಾನಾ ಭಾಗಗಳಿಂದ ಸಮ್ಮೇಳನಕ್ಕೆ ಬರುತ್ತಾರೆ. ಅಂಥವರಿಗೆ ಜಿಲ್ಲೆಯ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಹಾಗೆ ಸಮ್ಮೇಳನಗಳನ್ನು ಆಯೋಜಿಸಬೇಕು.ಸಾಹಿತ್ಯಕ್ಕೆ ಆದ್ಯತೆ ನೀಡುವ ವಿಚಾರಗಳನ್ನೊಳಗೊಂಡ ಗೋಷ್ಠಿಗಳೇ ಹೆಚ್ಚಾಗಿರಬೇಕು. ಸಮ್ಮೇಳನದ ಮೂರು ಗೋಷ್ಠಿಗಳಲ್ಲಿ, ಎರಡನ್ನು ಸಾಹಿತ್ಯಕ್ಕೆ ಮೀಸಲಿಟ್ಟು, ಮತ್ತೊಂದರಲ್ಲಿ ಸಾಹಿತ್ಯೇತರ ವಿಚಾರಗಳಿಗೆ ಅವಕಾಶ ನೀಡುವಂತಾಗಬೇಕು. ಸಾಹಿತ್ಯೇತರ ಗೋಷ್ಠಿಯಲ್ಲಿ ಜಿಲ್ಲೆಯ ಅಭಿವೃದ್ಧಿ, ಕೃಷಿ, ಪರಿಸರ.. ಹೀಗೆ ಯಾವುದೇ ವಿಚಾರಗಳ ಕುರಿತು ಚರ್ಚೆಯಾಗಬೇಕು. ಹೀಗಾದಾಗ ಅದು ಅರ್ಥಪೂರ್ಣವಾದ ಸಮ್ಮೇಳನವಾಗುತ್ತದೆ.

- ಪ್ರೊ. ಬಿ.ರಾಜಶೇಖರಪ್ಪ, ಸಂಶೋಧಕರುಸ್ಥಳೀಯ ಪ್ರತಿಭೆ ಗುರುತಿಸುವ ಕೆಲಸ ಆಗಬೇಕು

ಜಿಲ್ಲಾ ಸಾಹಿತ್ಯ ಸಮ್ಮೇಳನ ಕೇವಲ ಸಾಹಿತಿಗಳಿಗೆ ಮೀಸಲಾಗದೆ ಸ್ಥಳೀಯ ಕ್ಷೇತ್ರದ ಪ್ರತಿಭಾನ್ವಿತರನ್ನು ಗುರುತಿಸಲು ನೆರವಾಗಬೇಕು. ಅದು ರಾಜಕೀಯ ಸಮ್ಮೇಳನವಾಗದಂತೆ ಎಚ್ಚರವಹಿಸಬೇಕು. ಹಾಗಂದಾಕ್ಷಣ ರಾಜಕಾರಣಿಗಳನ್ನು ದೂರ ಇಡಬೇಕು ಎಂದಲ್ಲ.  ಪ್ರೇಕ್ಷಕರಾಗಿ, ಕೇಳುಗರಾಗಿ, ಪ್ರೋತ್ಸಾಹಕರಾಗಿ ಇರಬೇಕಷ್ಟೇ.ತಾಲ್ಲೂಕಿನ ಮತ್ತು ಜಿಲ್ಲೆಯ ಕವಿಗಳು, ಸಾಹಿತಿಗಳು, ಕಲಾವಿದರು ಮತ್ತಿತರ ಕ್ಷೇತ್ರದ ಪ್ರತಿಭಾವಂತರಿಗೆ ಸಮ್ಮೇಳನದಲ್ಲಿ ಆದ್ಯತೆ ನೀಡಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಜಿಲ್ಲಾ ಸಮ್ಮೇಳನಗಳಲ್ಲಾಗಬೇಕು. ಸ್ಥಳೀಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಅವುಗಳ ನಿವಾರಣೆಯತ್ತ ಗಮನಹರಿಸುವಂತೆ ರಾಜಕಾರಣಿಗಳ ಮೇಲೆ ಒತ್ತಡ ಹಾಕಬೇಕು.

- ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯುವಕರನ್ನು ಸೆಳೆಯುವಂತಹ ಸಮ್ಮೇಳನ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಜನಸಾಮಾನ್ಯರೂ ಕೂಡ ಭಾಗವಹಿಸಬೇಕು. ಇಡೀ ಸಮಾಜ ಕುರಿತು ಚಿಂತಿಸುವ, ಅಲೋಚಿಸುವ ಮತ್ತು ಜನರ ಆಳದ ಸಂಕಟಗಳಿಗೆ ಪರಿಹಾರ ಹುಡುಕುವ ದಿಸೆಯಲ್ಲಿ ಜರುಗಬೇಕು. ಸಾಹಿತ್ಯಾಸಕ್ತರ ಜತೆಗೆ ಯುವ ಪೀಳಿಗೆ ಆಸಕ್ತಿಯಿಂದ ಸಮ್ಮೇಳನಗಳಲ್ಲಿ ಭಾಗವಹಿಸುವಂತಾಗಬೇಕು. ಕನ್ನಡ ಭಾಷೆ ಉಳಿಸಿ ಬೆಳೆಸುವ ಗುರುತರ ಜವಾಬ್ಧಾರಿ ಯುವಕರ ಮೇಲೆ ಇರುವುದರಿಂದ ಇಂತಹವರನ್ನು ಹೆಚ್ಚು ಸೆಳೆಯುವಂತಾಗಬೇಕು.ಭಾಷೆ ಉಳಿವು, ರಕ್ಷಣೆ ಜತೆಗೆ ಜನರ ಬದುಕಿಗೆ ಹತ್ತಿರ ಇರುವಂತಹ ವಿಷಯಗಳ ಮೇಲೆ ಚರ್ಚೆಗಳು ಆಗಬೇಕು. ಸಮ್ಮೇಳನ ಮುಗಿದ ನಂತರ ಭಾಷಾಭಿಮಾನ ಎದೆಯಾಳದಲ್ಲಿ `ಕನ್ನಡ' ಎಂದು ಉಸಿರಾಡುವಂತಿರಬೇಕು.

- ಬಿ.ಕೆ. ರಾಜಶೇಖರಪ್ಪ, ಹಿರಿಯ ವಾಣಿಜ್ಯೋದ್ಯಮಿ, ಚಳ್ಳಕೆರೆಅನ್ನ ಕೊಡುವವರಿಗೂ ಆದ್ಯತೆ

ಸಾಹಿತ್ಯ ಸಮ್ಮೇಳನಗಳಲ್ಲಿ ಗ್ರಾಮೀಣ ಮತ್ತು ಕೃಷಿಗೆ ಸಂಬಂಧಿಸಿದ ವಿಚಾರಗಳು ಚರ್ಚೆಯಾಗಬೇಕು. ಸಾಹಿತ್ಯದ ವೇದಿಕೆಯಲ್ಲಿ ಕೃಷಿಗೇನು ಕೆಲಸ ಎನ್ನಬಹದು. ಸಮ್ಮೇಳನದಲ್ಲಿ ಉಣ್ಣುವ ಅನ್ನ ಕೃಷಿಯಿಂದಲೇ ಬಂದಿದ್ದಲ್ಲವೇ ? ಹಾಗಾಗಿ ಅನ್ನ ಬೆಳೆಯುವವನ ಬವಣೆ, ಬದುಕು, ನೋವು, ಕಷ್ಟಗಳ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಿ, ಬೇರೆಯವರಿಗೂ ಈ ಕಷ್ಟಗಳು ಗೊತ್ತಾಗಬೇಕು.

ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ಹಳ್ಳಿಗಳು ಖಾಲಿಯಾಗುತ್ತಿವೆ. ಭಾಷೆ-ಸಂಸ್ಕೃತಿಯ ಕೊಂಡಿಯೊಂದಿಗೆ ಹಳ್ಳಿಗರನ್ನು ಹಳ್ಳಿಯಲ್ಲೇ ಉಳಿಸುವ ನಿಟ್ಟಿನಲ್ಲಿ ಗೋಷ್ಠಿಗಳಿದ್ದರೆ ಉತ್ತಮ.

- ವೀರಭದ್ರಪ್ಪ, ಪ್ರಗತಿಪರ ಕೃಷಿಕರು, ಬಿ.ಜಿ.ಕೆರೆಜಾನಪದ ಕ್ಷೇತ್ರದ ಮಹಿಳೆಯರ ಪರಿಚಯವಾಗಲಿ

ಇತ್ತೀಚೆಗಿನ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಮಹಿಳೆ ಕುರಿತ ವಿಚಾರಗಳು ಪುನರಾವರ್ತನೆಯಾಗುತ್ತಿವೆ ಎನಿಸುತ್ತಿದೆ. ಜಿಲ್ಲಾ ಸಮ್ಮೇಳನಗಳಲ್ಲಾದರೂ ಆಯಾ ಜಿಲ್ಲೆಯ ಜಾನಪದ ಕ್ಷೇತ್ರದಲ್ಲಿರುವ ಮಹಿಳೆಯರ ಬಗ್ಗೆ ಚರ್ಚೆಯಾದರೆ, ಅಂಥ ಪುನರಾವರ್ತನೆ ತಪ್ಪಿಸಬಹುದು.ಪ್ರಾದೇಶಿಕತೆ ಹೆಚ್ಚು ಒತ್ತುಕೊಟ್ಟರೆ ಜಿಲ್ಲಾ ಸಮ್ಮೇಳನ ಹೆಚ್ಚು ಅರ್ಥಪೂರ್ಣವಾದೀತು. ನಮ್ಮ ಚಿತ್ರದುರ್ಗ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಹುಲ್ಲೂರು ಶ್ರೀನಿವಾಸ ಜೋಯಿಸರು, ಸಿದ್ದವ್ವನಹಳ್ಳಿ ಕೃಷ್ಣ ಶರ್ಮರು, ತರಾಸು, ತಳುಕಿನ ವೆಂಕಣ್ಣಯ್ಯನಂಥ ಖ್ಯಾತ ನಾಮರು ಬದುಕಿ ಬಾಳಿದ್ದಾರೆ. ಅಂಥ ಒಬ್ಬೊಬ್ಬ ಸಾಧಕರ ಬಗ್ಗೆ ಒಂದೊಂದು ಜಿಲ್ಲಾ ಸಮ್ಮೇಳನದಲ್ಲಿ ಪರಿಚಯವಾಗುವಂತಾದರೆ ಎಷ್ಟೋ ಸಾಹಿತ್ಯ ಅಭಿಮಾನಿಗಳಿಗೆ ಹೊಸ ವಿಚಾರ ದೊರೆತಂತಾಗುತ್ತದೆ.

- ತಾರಿಣಿ ಶುಭದಾಯಿನಿ, ಸಾಹಿತಿ, ವಿಮರ್ಶಕಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.