ಕನ್ನಡವ ಕಟ್ಟಿದ ಮಹನೀಯರ ನೆನೆಯಿರಿ

7

ಕನ್ನಡವ ಕಟ್ಟಿದ ಮಹನೀಯರ ನೆನೆಯಿರಿ

Published:
Updated:
ಕನ್ನಡವ ಕಟ್ಟಿದ ಮಹನೀಯರ ನೆನೆಯಿರಿ

ಬೆಂಗಳೂರು: `ಕನ್ನಡವನ್ನು ಕಟ್ಟಿ ಬೆಳೆಸಿದ ಮಹನೀಯರ ಜೀವನ ಚರಿತ್ರೆಯನ್ನು ಅರ್ಥೈಸಿಕೊಳ್ಳುವ ಮೂಲಕ ನಿಜವಾದ ಕನ್ನಡ ಕೆಲಸ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪುಸ್ತಕಗಳು ಪೂರಕವಾಗಿವೆ~ ಎಂದು ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದರು.ಕನ್ನಡ ಪುಸ್ತಕ ಪ್ರಾಧಿಕಾರವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಕಟ್ಟಿದವರು ಮಾಲೆಯ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. `ಪ್ರಾಧಿಕಾರವು ಕನ್ನಡ ಸಾಹಿತ್ಯ ಲೋಕದಲ್ಲಿರುವ ಮಹೋನ್ನತ ಕೃತಿಗಳನ್ನು ಅಂಧರ ಲಿಪಿಗೆ ಪರಿವರ್ತಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿದ್ದು, ಸದ್ಯದಲ್ಲೇ ಅಂಧರಿಗೆ ಉತ್ತಮ ಕೃತಿಗಳು ದೊರೆಯಲಿವೆ~ ಎಂದು ಹೇಳಿದರು.`ಕನ್ನಡ ಸಾಹಿತ್ಯದಲ್ಲಿ ಬಸವಣ್ಣ ಒಬ್ಬ ಶ್ರೇಷ್ಠ ಸಾಹಿತಿ. ಆತನ ವಚನಗಳು ಮತ್ತು ಜೀವಾನುಭವವು ಸಾರ್ವಕಾಲಿಕವಾಗಿದೆ. ಇದನ್ನು ವಿಶ್ವದಾದ್ಯಂತ ಪಸರಿಸುವ ನಿಟ್ಟಿನಲ್ಲಿ ವಚನಗಳನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡುವ ಕಾರ್ಯವನ್ನು ಪ್ರಾಧಿಕಾರ ಕೈಗೆತ್ತಿಕೊಳ್ಳಲಿದೆ~ ಎಂದು ಭರವಸೆ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಡಾ.ಮನು ಬಳಿಗಾರ್, `ಪ್ರಾಧಿಕಾರ ಆರಂಭಗೊಂಡು ಈವರೆಗೆ 200 ಪುಸ್ತಕಗಳು ಪ್ರಕಟಗೊಂಡಿರಬಹುದು. ಆದರೆ ಸಿದ್ದಲಿಂಗಯ್ಯ ಅವರು ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಈ ನಾಲ್ಕು ವರ್ಷಗಳಲ್ಲಿ 200ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಗೊಂಡಿರುವುದು ಅವರ ಕಾರ್ಯವೈಖರಿಯನ್ನು ಸೂಚಿಸುತ್ತದೆ~ ಎಂದರು.ಈ ಮಾಲೆಯಲ್ಲಿ  ಕೊತ್ತಲ ಮಹಾದೇವಪ್ಪ ಅವರ `ಬಸವರಾಜ ಕಟ್ಟೀಮನಿ~ , ಡಾ. ವಸಂತಕುಮಾರ ಪೆರ್ಲ ಅವರ `ಕೋಟ ರಾಮಕೃಷ್ಣ ಕಾರಂತ~, ಶ್ರೀಶ ಅವರ `ಖಾದ್ರಿ ಶಾಮಣ್ಣ~  ಡಾ.ಶಂಭು ಬಳಿಗಾರ ಅವರ `ಜೋಳದರಾಶಿ ದೊಡ್ಡನಗೌಡ~, ಟಿ.ಎಸ್.ದಕ್ಷಿಣಾಮೂರ್ತಿ ಅವರ `ಬಿ.ಎಂ.ಶ್ರೀಕಂಠಯ್ಯ~, ಡಾ.ಗೋವಿಂದರಾಜು ಅವರ `ಮ.ರಾಮಮೂರ್ತಿ~, ಡಾ.ಮಲ್ಲಿಕಾರ್ಜುನ ಕುಂಬಾರ ಅವರ `ಪ್ರೊ.ಎಸ್.ಎಸ್.ಭೂಸನೂರಮಠ~ ಸೇರಿದಂತೆ 35 ಪುಸ್ತಕಗಳು ಬಿಡುಗಡೆಗೊಂಡವು.ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು, ಪ್ರಾಧಿಕಾರದ ಆಡಳಿತಾಧಿಕಾರಿ ಬಿ.ಎಚ್.ಮಲ್ಲಿಕಾರ್ಜುನ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry