ಕನ್ನಡಿಗರನ್ನು ಪರಕೀಯರನ್ನಾಗಿಸುವ ಸ್ಥಿತಿ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಕನ್ನಡಿಗರನ್ನು ಪರಕೀಯರನ್ನಾಗಿಸುವ ಸ್ಥಿತಿ

Published:
Updated:

ಬೆಂಗಳೂರು: `ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಸರ್ಕಾರವು ಕನ್ನಡಿಗರನ್ನು ನಾಡಿನಲ್ಲೇ ಪರಕೀಯರನ್ನಾಗಿಸುವ ಸ್ಥಿತಿ ನಿರ್ಮಾಣ ಮಾಡುತ್ತಿದೆ~ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಬೇಸರ ವ್ಯಕ್ತಪಡಿಸಿದರು.ಭಾರತೀಯ ವಿದ್ಯಾಭವನದಲ್ಲಿ ಬುಧವಾರ ನಡೆದ `ಸ್ವಾತಂತ್ರ್ಯೋತ್ಸವ ಶುಭಾಶಯ-2012~ ಸಮಾರಂಭದಲ್ಲಿ `ಮಹಾತ್ಮ ಗಾಂಧಿ ಕೃತಿ ಸಂಚಯ (ಕನ್ನಡ)-ಭಾಗ 24~ ಪುಸ್ತಕದ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.`ಮಾತೃಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಮಹಾತ್ಮ ಗಾಂಧೀಜಿ ಆಶಿಸಿದ್ದರು. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಕಷ್ಟವಾದರೂ ರಾಜ್ಯಭಾಷೆಯಲ್ಲಿ ಶಿಕ್ಷಣ ನೀಡಲು ಸರ್ಕಾರ ಮುಂದಾಗಬೇಕಿತ್ತು. ಆದರೆ, ಇಂದು ಆಂಗ್ಲ ಶಿಕ್ಷಣದ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಂಗ್ಲಿಷರನ್ನು ಓಡಿಸಿದ್ದರೂ ಇಂಗ್ಲಿಷ್‌ನ್ನು ಉಳಿಸಿಕೊಂಡಿದ್ದೇವೆ. ಆಂಗ್ಲ ಭಾಷಾ ವ್ಯಾಮೋಹ ಅತಿಯಾಗಿದೆ. ಕನ್ನಡ ಶಾಲೆಗಳ ಸ್ಥಿತಿ ದಯನೀಯವಾಗಿದೆ~ ಎಂದು ಕಳವಳ ವ್ಯಕ್ತಪಡಿಸಿದರು.`ತಾಂತ್ರಿಕ ಶಿಕ್ಷಣವನ್ನೂ ಮಾತೃಭಾಷೆಯಲ್ಲೇ ಕಲಿಸಬೇಕು ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ಹೈದರಾಬಾದ್ ನಿಜಾಮರೊಬ್ಬರು ಮಾತ್ರ ಈ ಪ್ರಯೋಗ ಮಾಡಿದ್ದರು. ಪ್ರಾಥಮಿಕದಿಂದ ಸ್ನಾತಕೋತ್ತರ ಹಂತದ ವರೆಗೂ ಮಾತೃಭಾಷೆಯಲ್ಲೇ ಶಿಕ್ಷಣ ವ್ಯವಸ್ಥೆ ಜಾರಿಗೆ ತಂದಿದ್ದರು. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಅಸಾಧ್ಯ ಎಂಬುದಾಗಿ ಸರ್ಕಾರ ಹಾಗೂ ಶಿಕ್ಷಕರು ಹೇಳಿದರೆ ಅದಕ್ಕೆ ಕ್ಷಮೆ ಇಲ್ಲ~ ಎಂದು  ಅಭಿಪ್ರಾಯಪಟ್ಟರು.`ಜನರಲ್ಲೇ ಯೋಜನೆ, ಪರಿಕಲ್ಪನೆಗಳು ಹುಟ್ಟಿ ಆ ಆಶಯದಲ್ಲೇ ಆಡಳಿತ ನಡೆಸುವವರು ನೀತಿಗಳನ್ನು ಜಾರಿಗೊಳಿಸುವುದು ಪ್ರಜಾಪ್ರಭುತ್ವದ ಮುಖ್ಯ ಲಕ್ಷಣ. ಈಗ ಸರ್ಕಾರವೇ ಮೌಢ್ಯಗಳನ್ನು ಹಾಗೂ ಹೊಸ ಶಬ್ದಗಳನ್ನು ಹುಟ್ಟು ಹಾಕುತ್ತಿದೆ. ಅಕ್ರಮ ಸಂಪಾದನೆಯನ್ನು ಜನರು ಭ್ರಷ್ಟಾಚಾರ ಎಂದರೆ, ಆಡಳಿತ ನಡೆಸುವವರು ಶಿಷ್ಟಾಚಾರ ಎನ್ನುತ್ತಿದ್ದಾರೆ. ಸ್ವಾತಂತ್ರ್ಯ ಸಿಕ್ಕ ಅಲ್ಪಾವಧಿಯಲ್ಲೇ ಗಾಂಧೀಜಿ ಅವರನ್ನು ಮರೆತಿದ್ದೇವೆ. ಈ ನಿಟ್ಟಿನಲ್ಲಿ ಗಾಂಧೀಜಿ ಸಂದೇಶಗಳ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು~ ಎಂದು ಅವರು ಸಲಹೆ ನೀಡಿದರು.ಹಿರಿಯ ಸಾಹಿತಿ ಪ್ರೊ.ಎಲ್.ಎಸ್.ಶೇಷಗಿರಿ ರಾವ್, `ಪ್ರಾಮಾಣಿಕ ಹಾಗೂ ಅರ್ಹರಾಗಿರುವ ಕೃಷಿಕರೊಬ್ಬರು ದೇಶದ ಪ್ರಧಾನಿಯಾಗಬೇಕು ಹಾಗೂ ಪ್ರಧಾನಿ ಕಾರ್ಯದರ್ಶಿಯಾಗಿ ಜವಹರ್‌ಲಾಲ್ ನೆಹರೂ ಕಾರ್ಯನಿರ್ವಹಿಸಬೇಕು ಎಂಬುದಾಗಿ ಮಹಾತ್ಮ ಗಾಂಧೀಜಿ ಬರೆದ ಪತ್ರವೊಂದರಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇಂದು ಆಡಳಿತ ನಡೆಸುವವರು ಬಂಗಲೆಗಳಲ್ಲಿ ವಾಸಿಸುತ್ತಿದ್ದಾರೆ~ ಎಂದು ವಿಷಾದಿಸಿದರು. ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ ಅಧ್ಯಕ್ಷತೆ ವಹಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಹಾತ್ಮ ಗಾಂಧಿ ಕೃತಿ ಸಂಚಯದ ಗೌರವ ಸಂಪಾದಕಿ ಡಾ.ಮೀನಾ ದೇಶಪಾಂಡೆ, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎಸ್. ಸುರೇಶ್, ಭಾಷಾಂತರಕಾರ ಡಾ.ಡಿ.ವಿ.ಜೋಷಿ ಮತ್ತಿತರರು ಉಪಸ್ಥಿತರಿದ್ದರು. ಪುಸ್ತಕದಲ್ಲಿ 792 ಪುಟಗಳಿದ್ದು, ಬೆಲೆ 200 ರೂಪಾಯಿ.

ಜವಾಬ್ದಾರಿ ಮರೆತ ಪ್ರಜೆಗಳು-ವಿಷಾದ

`ಭಾರತಕ್ಕೆ ಬಿಟ್ಟಿಯಾಗಿ ಸ್ವಾತಂತ್ರ್ಯ ಸಿಕ್ಕಿಲ್ಲ. ಸಹಸ್ರಾರು ಮಂದಿಯ ತ್ಯಾಗ ಬಲಿದಾನದ ಫಲವಾಗಿ ಸ್ವಾತಂತ್ರ್ಯ ದೊರಕಿದೆ. ಆದರೆ, ಇಂದು ಪ್ರಜೆಗಳು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಈಗಿನದ್ದು ಕುಂಭಕರ್ಣ ಪ್ರಜಾಪ್ರಭುತ್ವ~ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದರು.ಸಮಾರಂಭದಲ್ಲಿ ಮಾತನಾಡಿದ ಅವರು, `ಸ್ವಾತಂತ್ರ್ಯ ಸಿಕ್ಕ ಬಳಿಕ ದೇಶದಲ್ಲಿ ಸಾಕಷ್ಟು ಸಾಧನೆ ಆಗಿದೆ. ನಮ್ಮವರು ಚಂದ್ರನಲ್ಲಿಗೆ ಹಾಗೂ ಮಂಗಳ ಗ್ರಹಕ್ಕೆ ಹೋಗಲು ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ ಅಸಮಾನತೆ ವ್ಯಾಪಕವಾಗುತ್ತಿದೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ, ಬಡವರು ಕಡು ಬಡವರಾಗುತ್ತಿದ್ದಾರೆ. ಎಲ್ಲರಿಗೂ ಸಮಾನ ಸ್ವಾತಂತ್ರ್ಯ ದೊರಕಬೇಕಿದೆ~ ಎಂದು ಆಶಿಸಿದರು.`ವಿದೇಶಿ ಕಂಪೆನಿಯೊಂದು ನಮ್ಮನ್ನು 200-300 ವರ್ಷಗಳ ಕಾಲ ಗುಲಾಮರನ್ನಾಗಿ ಮಾಡಿತು. ಈಗ 10 ಸಾವಿರ ವಿದೇಶಿ ಕಂಪೆನಿಗಳಿಗೆ ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿದ್ದೇವೆ. ಅವರಿಗೆ ನೀರು, ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ನಾವು ಆ ಸಂಸ್ಥೆಗಳಿಗೆ ಪೋಷಕರಾಗಿದ್ದೇವೆ. ವಿದೇಶಿ ವಸ್ತುಗಳು ಮನೆಯಲ್ಲಿ ತುಂಬಿ ತುಳುಕುತ್ತಿವೆ~ ಎಂದು ಅವರು ಕಿಡಿಕಾರಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry