ಬುಧವಾರ, ಅಕ್ಟೋಬರ್ 16, 2019
21 °C

ಕನ್ನಡಿಗರಿಗೆ ಉದ್ಯೋಗ: ಕರವೇ ಪ್ರತಿಭಟನೆ

Published:
Updated:
ಕನ್ನಡಿಗರಿಗೆ ಉದ್ಯೋಗ: ಕರವೇ ಪ್ರತಿಭಟನೆ

ಕೊಪ್ಪಳ: ಜಿಲ್ಲೆಯಲ್ಲಿರುವ ಕಾರ್ಖಾನೆಗಳು ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ಸದಸ್ಯರು ನಗರದಲ್ಲಿ ಗುರುವಾರ ಜಿಲ್ಲಾಡಳಿತ ಭವನದ ಮುಂದೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಪ್ರತಿಭಟನೆ ನಡೆಸಿದರು.ಹೆದ್ದಾರಿ ತಡೆಯಿಂದ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಪೊಲೀಸ್‌ಪಾಟೀಲ, ಜಿಲ್ಲೆಯಲ್ಲಿರುವ 25ಕ್ಕೂ ಅಧಿಕ ಕಾರ್ಖಾನೆಗಳು ಕಾರ್ಯಾರಂಭ ಮಾಡುವ ಸಂದರ್ಭದಲ್ಲಿ  ನೀಡಿರುವ ಮುಚ್ಚಳಿಕೆಯಂತೆ ನಡೆದುಕೊಳ್ಳುತ್ತಿಲ್ಲ ಎಂದು ದೂರಿದರು.ಡಾ.ಸರೋಜಿನಿ ಮಹಿಷಿ ವರದಿ ಅನ್ವಯ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಇತರ ರಾಜ್ಯಗಳ ಜನರಿಗೆ  ಉದ್ಯೋಗ ನೀಡಿ ಸ್ಥಳೀಯರಿಗೆ ಅನ್ಯಾಯ ಮಾಡುತ್ತಿವೆ. ಕಾರ್ಖಾನೆಗಳಿಗಾಗಿ ಭೂಮಿ ಕಳೆದುಕೊಂಡಿರುವ ಕುಟುಂಬಗಳ ಸದಸ್ಯರಿಗೂ ಉದ್ಯೋಗ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾರ್ಖಾನೆಗಳ ಬಳಿ ಇರುವ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸುವುದಾಗಿ ಮುಚ್ಚಳಿಕೆ ಬರೆದು ಕೊಟ್ಟಿರುವ ಸದರಿ ಕಾರ್ಖಾನೆಗಳ ಆಡಳಿತ ಮಂಡಳಿಗಳು ಈವರೆಗೂ ಅಂತಹ ಸೌಲಭ್ಯಗಳನ್ನು ನೀಡಿಲ್ಲ. ಕಾರ್ಖಾನೆಗಳ ತ್ಯಾಜ್ಯದಿಂದ ಪರಿಸರ ಹಾಗೂ ಭೂಮಿಯ ಫಲವತ್ತತೆ ಹಾಳಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಂತರ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತ ಎಂ.ಶರಣಬಸಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.ತಾಲ್ಲೂಕು ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ. ನಗರ ಅಧ್ಯಕ್ಷ ಶಿವಶರಣಪ್ಪ ಚಂದನಕಟ್ಟಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಗೀರಿಶಾನಂದ ಜ್ಞಾನಸುಂದರ, ಗವಿಸಿದ್ದಪ್ಪ ಕರ್ಕಿಹಳ್ಳಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

Post Comments (+)