ಗುರುವಾರ , ಮೇ 26, 2022
23 °C

ಕನ್ನಡಿಗರಿಗೆ ಉದ್ಯೋಗ ಸೃಷ್ಟಿಸಿ

ಪ್ರಜಾವಾಣಿ ವಾರ್ತೆ/ಶಾಂತೂ ಹಿರೇಮಠ Updated:

ಅಕ್ಷರ ಗಾತ್ರ : | |

ಸಿಂದಗಿ: ರಾಜ್ಯ ಸರ್ಕಾರ ಕನ್ನಡಿಗರಿಗಾಗಿ ಉದ್ಯೋಗ ಸೃಷ್ಟಿಸಬೇಕು. ಈ ಬಗ್ಗೆ ಜನಪ್ರತಿನಿಧಿಗಳು ಪ್ರಬಲವಾದ ಇಚ್ಛಾಶಕ್ತಿ ತೋರಿಸಬೇಕು ಎಂದು ಗದಗ-ಡಂಬಳ ತೋಂಟದಾರ್ಯಮಠದ ಡಾ.ಸಿದ್ದಲಿಂಗ ಸ್ವಾಮಿಗಳವರು ಸಲಹೆ ನೀಡಿದರು.ಬುಧವಾರ ರಾತ್ರಿ ಪಟ್ಟಣದ ಸಾರಂಗಮಠದ ಆವರಣದಲ್ಲಿ ಹೈದ್ರಾಬಾದ ಕರ್ನಾಟಕ ಗಾಂಧಿ ರರಾಮಾನಂದತೀರ್ಥರ ಭವ್ಯ ಮಹಾಮಂಟಪದ ಕಲಾ ಸಾರ್ವಭೌಮ ಹಂದಿಗನೂರ ಸಿದ್ರಾಮಪ್ಪ ಮಹಾವೇದಿಕೆಯಲ್ಲಿ ಜರುಗಿದ 12ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.‘ಮಂತ್ರಿಗಳಿಗೆ, ಅಧಿಕಾರಿಗಳಿಗೆ ಕನ್ನಡದಲ್ಲಿ ಅಧಿಕಾರ ಮಾಡಲು ಬರುತ್ತಿಲ್ಲ ಎಂಬ ಕಾರಣಕ್ಕಾಗಿ ಏನೇನೊ ಸಬೂಬು ಹೇಳುತ್ತಾರೆ. ಭಾಷೆ ದೇವರು, ಧರ್ಮಕ್ಕಿಂತ ದೊಡ್ಡದು. ಹೀಗಾಗಿ ಕನ್ನಡ ಕಟ್ಟುವ ಕೆಲಸಕ್ಕಾಗಿ ಇಂಥ ಸಮ್ಮೇಳನಗಳು ಹೆಚ್ಚು, ಹೆಚ್ಚು ನಡೆಯಬೇಕು’ ಎಂದು ತಿಳಿಸಿದರು.ಸಿಂದಗಿಯ ಮಹಾನ್ ಕಲಾವಿದ ಹಂದಿಗನೂರ ಸಿದ್ರಾಮಪ್ಪನವರ ಹೆಸರಿನಲ್ಲಿ ಸ್ಮಾರಕ ಭವನಗಳು ಇಲ್ಲದಿರುವುದು ನಿಜಕ್ಕೂ ವಿಷಾದಕರ ಸಂಗತಿ. ಈ ಭಾಗದ ಕನ್ನಡಿಗರು ಇಂಥ ಕಲಾವಿದನನ್ನು ಮರೆಯದೇ ಶೀಘ್ರದಲ್ಲಿಯೇ ಅವರ ಸ್ಮಾರಕ ಭವನ ನಿರ್ಮಾಣ ಮಾಡಬೇಕು ಎಂದು ಸಲಹೆ ಮಾಡಿದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ 30 ಗಣ್ಯರನ್ನು ಸನ್ಮಾನಿಸಲಾಯಿತು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷೀಯ ಭಾಷಣ ಮಾಡಿ, ಮುಂದಿನ 13ನೇ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಒಬ್ಬ ನೇಗಿಲಯೋಗಿ ವಹಿಸಲಿದ್ದಾರೆ ಎಂದು ಹೇಳಿದರು.ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ  ಮಹಾಂತ ಗುಲಗಂಜಿ, ಗೋಲಗೇರಿ ವಿರಕ್ತಮಠದ ಸಿದ್ದಲಿಂಗ ಸ್ವಾಮಿಗಳು, ದೇವರಹಿಪ್ಪರಗಿ ಗದ್ದುಗೆಮಠದ ಮಡಿವಾಳ ಸ್ವಾಮಿಗಳು, ಶಾಸಕ ರಮೇಶ ಭೂಸನೂರ, ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎನ್. ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಯು.ಐ. ಶೇಖ್ ಉಪಸ್ಥಿತರಿದ್ದರು.ಚಂದ್ರಶೇಖರ ದೇವರೆಡ್ಡಿ ಸ್ವಾಗತಿಸಿದರು. ರವಿ. ಗೋಲಾ, ಎಸ್.ಬಿ.ಚೌಧರಿ ನಿರೂಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.