ಶನಿವಾರ, ಮೇ 21, 2022
22 °C

ಕನ್ನಡಿಗರಿಗೆ ಮುಜುಗರದ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದಿಂದ ಹಿಂದಿಯ ಖ್ಯಾತ ಹಿರಿಯ ನಟಿ ಹೇಮಾಮಾಲಿನಿಯವರನ್ನು ರಾಜ್ಯಸಭೆಗೆ ಕಳುಹಿಸುತ್ತಿರುವುದು ಖಂಡಿತಾ ಕನ್ನಡಿಗರಿಗೆ ಮುಜುಗರ. ಹೇಮಾಮಾಲಿನಿಯವರು ಈ ಹಿಂದೆಯೂ ರಾಜ್ಯಸಭೆ ಸದಸ್ಯರಾಗಿದ್ದು ಭಾರತಿಯ ಜನತಾ ಪಕ್ಷಕ್ಕೆ ತಾರಾ ಮೆರುಗನ್ನು ನೀಡಿದ್ದು ನಿಜ. ಆದರೆ ರಾಜ್ಯ ಸಭೆಗೆ ಆಯ್ಕೆಯಾಗಿ ಅವರು ಸಂಸದೀಯ ವ್ಯವಸ್ಥೆಗೆ ಮತ್ತು ದೇಶದ ಅಭಿವೃದ್ಧಿಯ ವಿಷಯದಲ್ಲಿ ಅವರ ಕೊಡುಗೆ ಹೇಳಿಕೊಳ್ಳುವಂತಹದ್ದೇನೂ ಇಲ್ಲ.ದೇಶದ ಜನ, ಮತ್ತು ಇಲ್ಲಿ ಕಾಡುವ ಸಮಸ್ಯೆಗಳ ಬಗ್ಗೆ ಅವರಿಗೆ ನಿಜವಾದ ಕಳಕಳಿ ಮತ್ತು ಜ್ಞಾನ ಇರುವ ಬಗೆಗೆ  ಸಂದೇಹವಿದೆ. ಈಗ ಹೇಮಾಮಾಲಿನಿಯವರನ್ನು ಬಿಜೆಪಿಯು ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದರಿಂದ ಕನ್ನಡಕ್ಕೆ ಅನ್ಯಾಯವಾಗಿದೆಯೆಂದೂ, ಕರ್ನಾಟಕದ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆಯೆಂದೂ ಕೆಲವರು ಗುಲ್ಲೆಬ್ಬಿಸುತ್ತಿದ್ದಾರೆ. ಕರ್ನಾಟಕದ ಅನೇಕ ರಾಜಕಾರಣಿಗಳು ಬೇರೆ ಬೇರೆ ರಾಜ್ಯಗಳಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದನ್ನು ಮರೆಯಬಾರದು.ಜಾರ್ಜ್ ಫರ್ನಾಂಡಿಸ್, ಮೇಬಲ್ ರೆಬೆಲ್ಲೋ, ಈಗ ಮಂತ್ರಿಯಾಗಿರುವ ಜೈರಾಂ ರಮೇಶ್ ಮುಂತಾದ ಅನೇಕರು ಈ ಸಾಲಿಗೆ ಸೇರುತ್ತಾರೆ. ಕರ್ನಾಟಕದಿಂದ ಈ ಹಿಂದೆ ರಾಜ್ಯಸಭೆಗೆ ಆಯ್ಕೆಯಾದವರೆಲ್ಲರೂ ಕನ್ನಡಿಗರೆ ಆಗಿರಲಿಲ್ಲ. ವೆಂಕಯ್ಯ ನಾಯ್ಡು ಕರ್ನಾಟಕದಿಂದ ಆಯ್ಕೆಯಾದವರು. ತಮ್ಮ ಕಾರ್ಪೊರೇಟ್ ಹಿತಾಸಕ್ತಿಗಳಿಗಾಗಿ ಮಾತ್ರವೇ ಮಿಡಿಯುತ್ತಿದ್ದ ಉದ್ಯಮಿಗಳಿಗೆ ಕೂಡ ಕರ್ನಾಟಕದ ರಾಜ್ಯಸಭಾ ಸೀಟುಗಳು ಮಾರಾಟವಾಗಿವೆ. ಕನ್ನಡ ಪರ ಸಂಘಟನೆಗಳು, ಸಾಹಿತಿಗಳು ಮತ್ತು ಜನರು ಹೀಗೆ ಟೀಕಿಸುತ್ತಿರುವುದು ಅನಗತ್ಯ. ಬದಲಾಗಿ ಈಗಾಗಲೇ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಪ್ರಚಾರ, ಪ್ರಸಿದ್ಧಿಯಲ್ಲಿ ಮುಳುಗಿ ಈ ರಾಜ್ಯದ ಜನರನ್ನು ಮರೆತು ನೆಮ್ಮದಿಯಿಂದ ನಿದ್ರೆ ಮಾಡುತ್ತಿರುವ ಕನ್ನಡಿಗರಾದ ಆಸ್ಕರ್ ಫರ್ನಾಂಡಿಸ್, ಕೆ. ರೆಹಮಾನ್ ಖಾನ್, ಉದ್ಯಮಿ ರಾಜೀವ್ ಚಂದ್ರಶೇಖರ್ ಇವರೆಲ್ಲ ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ಕೇಳಬೇಕಾಗಿದೆ.ನಿಜ, ಹೇಮಾ ಮಾಲಿನಿಯವರನ್ನು ಖಂಡಿತವಾಗಿ ರಾಜ್ಯಸಭೆಗೆ ಆಯ್ಕೆ ಮಾಡಬಾರದು. ಆದರೆ ಅದಕ್ಕೂ ಮತ್ತು ಕನ್ನಡಿಗರ ಸ್ವಾಭಿಮಾನಕ್ಕೂ ತಳಕು ಹಾಕಬೇಕಾದ ಅಗತ್ಯವಿಲ್ಲ. ಕನ್ನಡಿಗರ ಆತ್ಮಾಭಿಮಾನ ಅಷ್ಟು ಸಣ್ಣದಲ್ಲ. ಯಾವುದೇ ರೀತಿಯಿಂದ ಕಂಡರೂ ಮರುಳಸಿದ್ದಪ್ಪ ಉತ್ತಮ ಆಯ್ಕೆ. ಆದರೆ ಅವರನ್ನು ಗೆಲ್ಲಿಸಬಲ್ಲ ತಾಕತ್ತು ಕನ್ನಡಿಗ ಶಾಸಕರಿಗಿದೆಯೆ?


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.