ಕನ್ನಡಿಯಲ್ಲಿ ಮುಖ ನೋಡಿಕೊಳ್ಳಿ

7

ಕನ್ನಡಿಯಲ್ಲಿ ಮುಖ ನೋಡಿಕೊಳ್ಳಿ

Published:
Updated:

ಆತ್ಮವಂಚನೆಗೆ ನಮ್ಮ ರಾಜಕಾರಣಿಗಳು ಕುಖ್ಯಾತರು. ಅವರು ಹೇಳುವ ವಿಚಾರಕ್ಕೂ ಪಾಲಿಸುವ ಆಚಾರಕ್ಕೂ ಸಂಬಂಧವೇ ಇರುವುದಿಲ್ಲ. ಪ್ರಧಾನಮಂತ್ರಿಗಳು ಆಗಾಗ ಸಚಿವರು ಪಾಲಿಸಬೇಕಾಗಿರುವ ಮಿತವ್ಯಯದ ಪಾಠವನ್ನು ಮಾಡುತ್ತಲೇ ಇರುತ್ತಾರೆ.ಅದರ ನಂತರ ಕೆಲವು ದಿನ ಸಚಿವರು ಆ ಪಾಠವನ್ನು ಅನುಸರಿಸುವಂತೆ ನಾಟಕವನ್ನೂ ಮಾಡುತ್ತಾರೆ. ಆದರೆ ವಾಸ್ತವ ಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯಾಗಿರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ  ದಿನಕ್ಕೆ ಇಪ್ಪತ್ತೆರಡೂವರೆ ರೂಪಾಯಿ ಖರ್ಚು ಮಾಡುವ ವ್ಯಕ್ತಿ ಬಡವನಲ್ಲ ಎಂದು ನಮ್ಮ ಯೋಜನಾ ಆಯೋಗವೇ ಹೇಳಿಬಿಟ್ಟಿದೆ.

ಇಂತಹ ನಾಡಿನಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾದ ಒಬ್ಬ ವ್ಯಕ್ತಿಗೆ ಸಂಬಳ, ಭತ್ಯೆ ಮತ್ತಿತರ ಸೌಲಭ್ಯಗಳು ಸೇರಿದಂತೆ ಅಂದಾಜು ಎರಡೂವರೆಯಿಂದ ಮೂರು ಲಕ್ಷ ರೂಪಾಯಿಗಳಷ್ಟು ಮಾಸಿಕ ಆದಾಯವಿದೆ. ಇವರು ವಾಸಿಸುತ್ತಿರುವ ಬಂಗಲೆಗಳು, ಓಡಾಡುವ ಕಾರುಗಳು, ಧರಿಸುವ ದಿರಿಸುಗಳು ಸೇರಿದಂತೆ ಒಟ್ಟು ಜೀವನಶೈಲಿಯನ್ನು ನೋಡಿದರೆ ಇವರೆಲ್ಲ ಬಡ ಭಾರತೀಯರ ಪ್ರತಿನಿಧಿಗಳೆಂದು ನಂಬುವುದು ಕಷ್ಟ.ಇಂತಹವರು ಸಾಮಾನ್ಯ ಜನರಿಗೆ ಮಾತ್ರ ತಪ್ಪದೆ ಸರಳ ಬದುಕು ಮತ್ತು ಮಿತವ್ಯಯದ ಉಪದೇಶ ಮಾಡುತ್ತಲೇ ಇರುತ್ತಾರೆ. ಆರ್ಥಿಕ ಸಂಪಾದಕರ ಸಮ್ಮೇಳನದಲ್ಲಿ ಪೆಟ್ರೋಲಿಯಂ ಸಚಿವ ಜೈಪಾಲ್ ರೆಡ್ಡಿ ಅವರು ಇಂತಹದ್ದೇ ಆತ್ಮವಂಚನೆಯ ಮಾತುಗಳನ್ನು ಆಡಿದ್ದಾರೆ.

ಒಂದು ಕುಟುಂಬಕ್ಕೆ ಸಬ್ಸಿಡಿ ದರದಲ್ಲಿ ವಿತರಿಸಲಾಗುವ ಅಡುಗೆ ಅನಿಲ ಸಿಲಿಂಡರ್‌ಗಳ ಸಂಖ್ಯೆಯನ್ನು ವರ್ಷಕ್ಕೆ ಆರಕ್ಕೆ ಮಿತಿಗೊಳಿಸುವ ಸರ್ಕಾರದ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.ಜೈಪಾಲ್ ರೆಡ್ಡಿ ಅವರ ಸಚಿವಾಲಯವೇ ಪ್ರಕಟಿಸಿದ ಅಧಿಕೃತ ಮಾಹಿತಿ ಸಚಿವರ ಬಣ್ಣ ಬಯಲು ಮಾಡಿದೆ. ಒಂದು ಕುಟುಂಬಕ್ಕೆ ವರ್ಷಕ್ಕೆ ಆರು ಅನಿಲ ಸಿಲಿಂಡರ್‌ಗಳು ಸಾಕು ಎಂದು ಹೇಳಿರುವ ಜೈಪಾಲ್ ರೆಡ್ಡಿಯವರೇ 2011ರ ಜೂನ್‌ನಿಂದ 2012ರ ಮಾರ್ಚ್ ವರೆಗಿನ ಹತ್ತು ತಿಂಗಳ ಅವಧಿಯಲ್ಲಿ 26 ಸಿಲಿಂಡರ್‌ಗಳನ್ನು ಬಳಸಿದ್ದಾರೆ ಎಂದು ಈ ಮಾಹಿತಿ ಹೇಳಿದೆ.

ಈ ಅವಧಿಯಲ್ಲಿ ಉಪರಾಷ್ಟ್ರಪತಿಗಳು ಸೇರಿದಂತೆ ಸಚಿವರು, ಸಂಸದರು ನೂರಾರು ಸಿಲಿಂಡರ್‌ಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಸಂಸದರಾಗಿರುವ ಉದ್ಯಮಿ ನವೀನ್ ಜಿಂದಾಲ್ ಹತ್ತು ತಿಂಗಳ ಅವಧಿಯಲ್ಲಿ 369 ಸಿಲಿಂಡರ್‌ಗಳನ್ನು ಬಳಸಿರುವುದು ನಿಜಕ್ಕೂ ಆಘಾತಕಾರಿ. ಸರ್ಕಾರಿ ಸೌಲಭ್ಯವನ್ನು ಲೂಟಿ ಹೊಡೆಯುವ ಜನದ್ರೋಹದ ಕೆಲಸದಲ್ಲಿ ಎಲ್ಲ ಪಕ್ಷಗಳು ಭಾಗಿಯಾಗಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಿಂದಾಗಿ ತೈಲ ಉತ್ಪನ್ನಗಳನ್ನು ಸಬ್ಸಿಡಿದರದಲ್ಲಿ ಪೂರೈಸುವುದು ಖಜಾನೆಗೆ ಹೊರೆಯಾಗುತ್ತಿದೆ, ತೈಲಕಂಪೆನಿಗಳು ನಷ್ಟ ಅನುಭವಿಸುತ್ತಿವೆ.

ಇದರಿಂದಾಗಿ ಗೃಹಬಳಕೆಗಾಗಿ ಸಬ್ಸಿಡಿದರದಲ್ಲಿ ಪೂರೈಸಲಾಗುವ ಅಡುಗೆ ಅನಿಲ ಸಿಲಿಂಡರ್‌ಗಳ ಸಂಖ್ಯೆಯನ್ನು  ಮಿತಿಗೊಳಿಸಲೇಬೇಕಾಗಿದೆ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದೆ.

ದೇಶದ ಹಿತಕ್ಕಾಗಿ ಸಾಮಾನ್ಯ ಜನತೆಯಿಂದ ತ್ಯಾಗವನ್ನು ನಿರೀಕ್ಷಿಸುವ ಸರ್ಕಾರ ಮೊದಲು ಸಚಿವರು ಮತ್ತು ಸಂಸದರು ಕೇವಲ ಸಬ್ಸಿಡಿ ದರದ ಅನಿಲ ಸಿಲಿಂಡರ್‌ಗಳನ್ನು ಮಾತ್ರವಲ್ಲ ಒಂದಷ್ಟು ಸಂಬಳ-ಸೌಲಭ್ಯಗಳನ್ನೂ ತ್ಯಾಗ ಮಾಡುವಂತೆ ಸೂಚಿಸಬೇಕು.ಆಗ ಮಾತ್ರ ಉಳಿದವರಿಗೆ ಬೋಧನೆ ಮಾಡುವ ನೈತಿಕ ಅಧಿಕಾರ ಇರುತ್ತದೆ, ಇಲ್ಲದಿದ್ದರೆ ಬರೀ ಬೂಟಾಟಿಕೆಯಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry