ಕನ್ನಡ ಅನ್ನ ನೀಡುವ ಭಾಷೆಯಾಗಲಿ

ಶನಿವಾರ, ಮೇ 25, 2019
27 °C

ಕನ್ನಡ ಅನ್ನ ನೀಡುವ ಭಾಷೆಯಾಗಲಿ

Published:
Updated:

ತುಮಕೂರು: ಕನ್ನಡ ಭಾಷೆಗೆ ಇದುವರೆಗೂ ಸಿಗಬೇಕಾದ ಸ್ಥಾನಮಾನ ದೊರೆತಿಲ್ಲ. ಅದಕ್ಕೆ ಕಾರಣ ಕನ್ನಡಿಗರಲ್ಲಿನ ಇಚ್ಛಾಶಕ್ತಿ ಹಾಗೂ ಬದ್ಧತೆ ಕೊರತೆ ಎಂದು ಸಾಹಿತಿ ಪ್ರೊ.ಎಚ್.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.ನಗರದ ರವೀಂದ್ರ ಕಲಾನಿಕೇತನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಾಪೂಜಿ ವಿದ್ಯಾಸಂಸ್ಥೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕನ್ನಡ ಭಾಷಾ ಕಮ್ಮಟದಲ್ಲಿ ಮಾತನಾಡಿದರು.ರಾಜ್ಯದ ನ್ಯಾಯಾಲಯಗಳಲ್ಲಿಯೇ ಕನ್ನಡ ಬಳಕೆಯಾಗುತ್ತಿಲ್ಲ. ಇನ್ನು ಹಳ್ಳಿಯಲ್ಲಿ ಬದುಕುತ್ತಿರುವ ಸಾಮಾನ್ಯ ರೈತ ಯಾವ ರೀತಿ ಕನ್ನಡದ ಬಗ್ಗೆ ನಂಬಿಕೆ ಇಟ್ಟುಕೊಂಡು ಮಗುವನ್ನು ಕನ್ನಡ ಶಾಲೆಗೆ ಕಳುಹಿಸುತ್ತಾನೆ ಎಂದು ಪ್ರಶಿಸಿದ ಅವರು, ಕನ್ನಡ ಅನ್ನ ನೀಡುವ ಭಾಷೆಯಾಗಬೇಕಾದರೆ ಸರ್ಕಾರ ಹಾಗೂ ರಾಜ್ಯದ ಪ್ರತಿಯೊಬ್ಬ ವ್ಯಕ್ತಿ ಶ್ರಮಿಸಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ತಮಿಳು ಹಾಗೂ ತೆಲುಗು ಭಾಷಿಕರಿಗೆ ಇರುವ ಅಭಿಮಾನ ಕನ್ನಡಿಗರಿಗೆ ಇಲ್ಲವಾಗಿದೆ ಎಂದು ಹೇಳಿದರು.ತಮಿಳು ಹಾಗೂ ತೆಲುಗು ಭಾಷಿಕರಿಗೆ ದುರುಭಿಮಾನ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಆದರೆ ಪ್ರಾಂತೀಯತೆಗೆ ಅದು ಅತ್ಯಗತ್ಯವಾಗಿದೆ ಎಂದು ಒತ್ತಿ ಹೇಳಿದರು.ರಾಜ್ಯದಲ್ಲಿ 2002ರಿಂದ ಇಲ್ಲಿಯ ವರೆಗೆ 10364 ಕನ್ನಡ ಶಾಲೆಗಳು ಮುಚ್ಚಿವೆ. ಇದಕ್ಕೆ ಎಲ್ಲೆಂದರಲ್ಲಿ ಆಂಗ್ಲ ಭಾಷೆಯ ಹೆಸರಿನಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳ ದಂಧೆ  ಕಾರಣ. ಪ್ರಸ್ತುತ ಶಿಕ್ಷಣವನ್ನು ಕೇವಲ ಉಳ್ಳವರು ಹಾಗೂ ಶ್ರೀಮಂತರು ಮಾತ್ರ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಡವರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ರಾಜ್ಯದ ಕೆಲವು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಕ್ಕಳು ಕನ್ನಡ ಪದಗಳನ್ನು ಬಳಸಿದರೆ ದಂಡ ವಿಧಿಸುವ ಕೆಟ್ಟ ಪದ್ಧತಿ ಇದೆ. ದಕ್ಷಿಣದ ಯಾವುದೇ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಮಕ್ಕಳಲ್ಲಿ ಬಳಸುವ ಭಾಷೆಯಲ್ಲಿ ಪದಗಳ ಕೊರತೆ ಇದೆ. ಅದಕ್ಕೆ ಕಾರಣ ನಮ್ಮಲ್ಲಿನ ಮನೋಭಾವ. ಕೇವಲ ಕನ್ನಡ ನಮ್ಮ ಮಾತೃಭಾಷೆ ಎಂದು ಅದ್ದೂರಿ ಸಮಾರಂಭಗಳನ್ನು ಹಮ್ಮಿಕೊಳ್ಳುವುದ ರಿಂದ ಕನ್ನಡ ಉದ್ಧಾರವಾಗುವುದಿಲ್ಲ ಎಂದರು. ಕನ್ನಡದ ಅಧ್ಯಯನ ವಿಭಾಗಗಳಿಗೆ ಹಾಗೂ ಪ್ರಾಧಿಕಾರಗಳಿಗೆ ಕನ್ನಡ ಭಾಷಾಭಿವೃದ್ಧಿ ಜವಾಬ್ದಾರಿ ನೀಡಿ ನಾವು ಕೈಕೊಡುವುದು ಸಲ್ಲದು ಎಂದು ಹೇಳಿದರು.ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಸವಯ್ಯ ಮಾತನಾಡಿ, ಕೇವಲ ಅಂಕಗಳಿಕೆ ಗುರಿ ಇಟ್ಟುಕೊಂಡು ಪದವಿ ಪಡೆಯುವ ಮನೋಭಾವ ವಿದ್ಯಾರ್ಥಿ ಗಳಲ್ಲಿ ನಿಲ್ಲಬೇಕಾಗಿದೆ. ಶ್ರೇಷ್ಠ ಲೇಖಕರ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.ನಂತರ ನಡೆದ ಗೋಷ್ಠಿಯಲ್ಲಿ `ಕನ್ನಡ ಅಭಿವೃದ್ಧಿ ಹಾಗೂ ಶಾಸ್ತ್ರೀಯ ಭಾಷೆ ಸ್ಥಾನಮಾನ~ದ ಕುರಿತು ಪ್ರೊ. ಸುಬ್ರಹ್ಮಣ್ಯ, `ಪ್ರಾಚೀನ ಸಾಹಿತ್ಯ ಹಾಗೂ ಜನಪರ ಗ್ರಹಿಕೆ ನೆಲೆಗಳು~ ಕುರಿತು ಪ್ರೊ. ಎಚ್.ಜಿ.ಸಿದ್ಧರಾಮಯ್ಯ,  `ಪ್ರಾಚೀನ ಸಾಹಿತ್ಯದಲ್ಲಿ ಭಾಷಿಕ ಸಂರಚನೆ~ ಕುರಿತು ಡಾ.ಎಸ್.ನಟರಾಜ ಬೂದಾಳು ವಿಷಯ ಮಂಡಿಸಿದರು.ಪ್ರಾಂಶುಪಾಲ ಎನ್.ನಾಗಪ್ಪ, ಉಪನ್ಯಾಸಕ ಡಾ.ಸೋ.ಮು. ಭಾಸ್ಕರಾ ಚಾರ್, ಸಿ.ಎನ್.ಸುಗುಣಾದೇವಿ ಹಾಗೂ ಡಾ.ನಿ.ಹಾ.ರವಿಕುಮಾರ್ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry