ಗುರುವಾರ , ಮೇ 6, 2021
33 °C

ಕನ್ನಡ ಅಮ್ಮನ ಮಗಳು

ಕೆ.ಎಂ.ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಪುಳ್ಳ ಕೂದಲು. ಕಿರಿದಾದ ಕಣ್ಣು. ನಡಿಗೆಯಲ್ಲಿ ಎದ್ದುಕಾಣುವ ಠೀವಿ. ಒಟ್ಟಾರೆ ಗಮನ ಸೆಳೆಯುವ ಚೆಲುವು. ಅರೇಬಿಯನ್ ಕುದುರೆಯ ಗುಣಲಕ್ಷಣಗಳಿವು. ಆ ಚೆಲುವಿಗೆ ಸಾಟಿ ಎನ್ನುವಂತೆ ಕಂಡವರು ಸಮೀರಾ ರೆಡ್ಡಿ.ಚಿತ್ರರಂಗಕ್ಕೆ ಕಾಲಿಟ್ಟಾಗ ಸಮೀರಾ ಅಭಿಮಾನಿಗಳು ಅವರನ್ನು `ಅರೇಬಿಯನ್ ಹಾರ್ಸ್ ಬ್ಯೂಟಿ~ ಎಂದೇ ಕರೆದಿದ್ದರು. ಹಿಂದಿ ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿ, ತನ್ನ ಸೌಂದರ್ಯದಿಂದ ಪ್ರೇಕ್ಷಕರ ಮನಗೆದ್ದ ಇವರು ಕನ್ನಡದ `ವರದನಾಯಕ~ನಿಗೆ ಜತೆಯಾಗಿದ್ದಾರೆ.ಭರದಿಂದ ಸಾಗುತ್ತಿರುವ `ವರದನಾಯಕ~ ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಅವರು ಸಮಾರಂಭವೊಂದಕ್ಕೆ ಆಗಮಿಸಿದ್ದರು. `ಮೆಟ್ರೊ~ ಜೊತೆ ಮುಕ್ತವಾಗಿ ಮಾತನಾಡಿದರು.`ನನಗೆ ಕನ್ನಡ ಚಿತ್ರಗಳಲ್ಲಿ ನಟಿಸಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿತು. ಸಿಸಿಎಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್) ನಡೆದ ವೇಳೆ ನನಗೆ ಸುದೀಪ್ ಪರಿಚಯವಾಯ್ತು. ಆಗ ನಾವಿಬ್ಬರು ಹರಟುತ್ತಿರುವಾಗ ಮಾತಿನ ನಡುವೆ ನನಗೆ ಕನ್ನಡ ಚಿತ್ರಗಳಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿಕೊಂಡೆ.

 

ಆ ಆಸೆ ಇಷ್ಟು ಬೇಗ ಈಡೇರುತ್ತದೆ ಅಂತ ಗೊತ್ತಿರಲಿಲ್ಲ. ಅದೂ ಅಲ್ಲದೆ ಸುದೀಪ್ ಅವರ ಜತೆಯಲ್ಲೇ ನಟಿಸುವ ಅವಕಾಶ ಸಿಕ್ಕಿದ್ದು ಇನ್ನೂ ಹೆಚ್ಚಿನ ಖುಷಿ ತಂದಿತು. ಸುದೀಪ್ ಈಸ್ ಎ ಜಂಟಲ್‌ಮನ್.~`ವರದನಾಯಕ~ ಚಿತ್ರ ತೆಲುಗಿನ `ಲಕ್ಷ್ಯಂ~ನ ರಿಮೇಕ್. ಈ ಚಿತ್ರದಲ್ಲಿ ಸಮೀರಾ ರೆಡ್ಡಿಯವರದ್ದು ಸುದೀಪ್ ಪತ್ನಿಯ ಪಾತ್ರ. `ನಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ. ಸುದೀಪ್ ನಿಜಕ್ಕೂ ಅತ್ಯುತ್ತಮ ನಟ.

 

ಅವರೊಂದಿಗೆ ನಟಿಸುವಾಗ ಸಿಗುವ ಥ್ರಿಲ್ ಮಾತಿಗೆ ಸಿಗುವಂಥದ್ದಲ್ಲ. ವರದನಾಯಕನ ಪತ್ನಿಯಾದ್ದರಿಂದ ನಾನು ಈ ಚಿತ್ರದಲ್ಲಿ ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ, ಹಾಡುಗಳಲ್ಲಿ ಮಾತ್ರ ತುಂಬಾ ಗ್ಲಾಮರಸ್. ಈ ಹಾಡುಗಳಲ್ಲಿ ನನ್ನ ಅಂದ ಪ್ರೇಕ್ಷಕರಿಗೆ ಫುಲ್ ಡೋಸ್ ನೀಡಲಿದೆ~ ಎನ್ನುತ್ತಾ ಕಣ್ಣು ಹೊಡೆದರು ಸಮೀರಾ.`ದಕ್ಷಿಣ ಭಾರತದ ಸಿನಿಮಾಕ್ಕೂ ಉತ್ತರ ಭಾರತದ ಸಿನಿಮಾಕ್ಕೂ ತುಂಬಾ ಅಂತರವಿದೆ. ಇಲ್ಲಿನ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರ ಬಗ್ಗೆ ತುಂಬಾ ಅಭಿಮಾನವಿಟ್ಟುಕೊಂಡಿರುತ್ತಾರೆ.ಒಂದು ಬಾರಿ ಒಬ್ಬ ನಟ ಅಥವಾ ನಟಿ ಅವರಿಗೆ ಇಷ್ಟವಾದರೆ ಕೊನೆವರೆಗೂ ಅವರನ್ನು ಅಭಿಮಾನದಿಂದ ಆರಾಧಿಸುತ್ತಾರೆ. ದಕ್ಷಿಣ ಭಾರತದ ಪ್ರೇಕ್ಷಕರ ಈ ಗುಣ ನನಗೆ ಅಚ್ಚುಮೆಚ್ಚು. ಉತ್ತರ ಭಾರತದಲ್ಲಿ ಹೀಗಿಲ್ಲ.ಬಾಲಿವುಡ್ ಸಮುದ್ರವಿದ್ದಂತೆ. ಇಲ್ಲಿ ನಿತ್ಯ ನೂರಾರು ಜನರ ಆಗಮನ, ನಿರ್ಗಮನ ಆಗುತ್ತಲೇ ಇರುತ್ತದೆ. ನನ್ನ ತಾಯಿ ಅಪ್ಪಟ ಕನ್ನಡತಿ; ಕೊಡಗಿನವರು. ಅವರು ಕನ್ನಡ ಮತ್ತು ಕೊಂಕಣಿಯನ್ನು ತುಂಬಾ ಚೆನ್ನಾಗಿ ಮಾತನಾಡುತ್ತಾರೆ.ಈಗಲೂ ಅಮ್ಮ ಮನೆಯಲ್ಲಿ ಒಮ್ಮಮ್ಮೆ ಕನ್ನಡ ಮಾತನಾಡುತ್ತಿರುತ್ತಾರೆ. ಆದರೆ ನನಗೆ ಕನ್ನಡ ಬರುವುದಿಲ್ಲ. ಕನ್ನಡದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದರಿಂದ ಈಗ ನಾನು ಕೂಡ ಕಲಿಯುವ ಪ್ರಯತ್ನ ಮಾಡುತ್ತಿದ್ದೇನೆ~ ಎಂದು ಮಾತು ಮುಗಿಸಿದರು ಸಮೀರಾ.ಸಮೀರಾ ರೆಡ್ಡಿಗೆ ಬಿಳಿ ಕುಂಬಳಕಾಯಿ ಜ್ಯೂಸ್ ತುಂಬಾ ಇಷ್ಟವಂತೆ. ಜಗತ್ತಿನಲ್ಲಿ ಸಿಗುವ ಎಲ್ಲ ಬಗೆಯ ಪೇಯಕ್ಕಿಂತ ಇದು ಶ್ರೇಷ್ಠ ಎಂಬುದು ಅವರ ಅನುಭವದ ಮಾತು. ಮುಕ್ತವಾಗಿ ಮಾತನಾಡುತ್ತಾ ಹೋದ ಸಮೀರಾ `ವರದನಾಯಕ~ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿದ್ದೀರಿ ಎಂದಾಗ, ಸುಮ್ಮನೆ ನಕ್ಕು ಮಾತು ಬದಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.