ಕನ್ನಡ ಉಳಿದಿರುವುದೇ ಸಂಘಟನೆಗಳಿಂದ

7

ಕನ್ನಡ ಉಳಿದಿರುವುದೇ ಸಂಘಟನೆಗಳಿಂದ

Published:
Updated:
ಕನ್ನಡ ಉಳಿದಿರುವುದೇ ಸಂಘಟನೆಗಳಿಂದ

ಬೆಂಗಳೂರು: `ರಾಜ್ಯದಲ್ಲಿ ಕನ್ನಡ ಭಾಷೆಯ ಪರವಾಗಿ ಉತ್ತಮ ಕೆಲಸ ನಡೆದಿದ್ದರೆ ಅದು ಸರ್ಕಾರದ ಅಂತಃಪ್ರೇರಣೆಯಿಂದಲ್ಲ, ಬದಲಿಗೆ ಕನ್ನಡಪರ ಸಂಘಟನೆಗಳ ಇಚ್ಛಾಶಕ್ತಿಯಿಂದ ಪ್ರಸ್ತುತ ಸಂದರ್ಭದಲ್ಲಿ ಕನ್ನಡ ಭಾಷೆ ಉಳಿದಿದೆ~ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.ಕನ್ನಡ ಸಾಹಿತ್ಯ ಪರಿಷತ್ತು ಪಂಪ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಚಂದ್ರಶೇಖರ ಪಾಟೀಲ ಅವರಿಗೆ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.`ವಿಧಾನಸಭೆಯಲ್ಲಿ ಕನ್ನಡಭಾಷೆಯ ಪರ ಮಾತನಾಡಲು ಯಾರೊಬ್ಬ ಶಾಸಕರು ದೊರೆಯುವುದಿಲ್ಲ. ಅಷ್ಟೇಕೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕದಿಂದ ಆಯ್ಕೆಯಾಗುವ ವಿಧಾನ ಪರಿಷತ್ ಸದಸ್ಯರು ಸಹ ಕನ್ನಡದ ಬಗ್ಗೆ ದನಿ ಎತ್ತದೆ ಸುಮ್ಮನಿರುತ್ತಾರೆ~ ಎಂದು ಖೇದ ವ್ಯಕ್ತಪಡಿಸಿದರು.`ವಿಡಂಬನೆ ವಿಷಯಾಧಾರಿತವಾಗಿರಬೇಕೆ ಹೊರತು ವೈಯಕ್ತಿವಾದುದ್ದಲ್ಲ. ಸ್ಪಷ್ಟ ತಿಳಿವಳಿಕೆ ಮತ್ತು ಆಳವಾದ ಅಧ್ಯಯನದಿಂದ ಮಾತ್ರ ಉತ್ತಮ ವಿಡಂಬನೆಯ ಪ್ರಕಾರವನ್ನು ಸೃಷ್ಟಿಸಲು ಸಾಧ್ಯ~ ಎಂದು ಹೇಳಿದರು.`ಒಂದು ಹಂತದಲ್ಲಿ ಬಂಡಾಯ ಹೋರಾಟಗಾರರಾಗಿದ್ದವರೆಲ್ಲ ವ್ಯವಸ್ಥೆಯೊಂದಿಗೆ ರಾಜಿಯಾದರು~ ಎಂಬ ಡಾ.ಬೈರಮಂಗಲ ರಾಮೇಗೌಡರ ಮಾತಿಗೆ, `ಬಂಡಾಯ ಹೋರಾಟದ ಮತ್ತೊಂದು ಭಾಗವಾಗಿ ಕನ್ನಡ ಚಳವಳಿಗಳು ರೂಪುಗೊಂಡಿದ್ದು. ಈ ಬಗ್ಗೆ ಹೆಚ್ಚು ಒಲವು ತೋರಿಸಿದೇ  ಹೊರತು ವ್ಯವಸ್ಥೆಯೊಂದಿಗೆ ರಾಜಿಯಾಗಿಲ್ಲ~ ಎಂದು ಪ್ರತಿಯಾಡಿದರು.ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ, `ಅನ್ಯಾಯದ ವಿರುದ್ದ ಬೀದಿಗಿಳಿದು ಹೋರಾಟ ನಡೆಸಿದ ಸಾಹಿತಿಗಳಲ್ಲಿ ಪಾಟೀಲರು ಒಬ್ಬರು. ಅವರ ವಿಡಂಬನೆಯಲ್ಲಿ ವಿಷಾದ, ಪ್ರಶ್ನೆ ಹಾಗೂ ಬೆರುಗು ಮನೋಭಾವ ಪ್ರಧಾನವಾಗಿದೆ. ಸಮಾಜಮುಖಿ ಚಳವಳಿಯಲ್ಲಿ ಸದಾ ತೊಡಗಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ~ ಎಂದು ಶ್ಲಾಘಿಸಿದರು.ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ, `ಒಂದು ಕಾಲಘಟ್ಟದಲ್ಲಿ ಭಾವ ನಿಷ್ಠವಾಗಿದ್ದ ಸಾಹಿತ್ಯ ರಚನೆಯನ್ನು ಸಮಾಜ ನಿಷ್ಠವಾಗಿ ಬರೆಯಲು ಪ್ರಯತ್ನಿಸಿದವರಲ್ಲಿ ಚಂಪಾ ಪ್ರಮುಖರು. ಅನಿಸಿದ್ದನ್ನು ನೇರವಾಗಿ ಹೇಳುವ ಅವರ ದಿಟ್ಟ ವ್ಯಕ್ತಿತ್ವ ಮತ್ತು ಮೊನಚು ಬರಹದಿಂದಲೇ ಪ್ರಸಿದ್ಧಿ ಪಡೆದರು~ ಎಂದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry