ಮಂಗಳವಾರ, ಮೇ 11, 2021
25 °C

ಕನ್ನಡ ಕತೆಯ ಹೊಸ ಆವೃತ್ತಿ (ಚಿತ್ರ: ಮರ್ಯಾದೆ ರಾಮಣ್ಣ)

ಸಂದೀಪ ನಾಯಕ Updated:

ಅಕ್ಷರ ಗಾತ್ರ : | |

ಕನ್ನಡ ಕತೆಯ ಹೊಸ ಆವೃತ್ತಿ (ಚಿತ್ರ: ಮರ್ಯಾದೆ ರಾಮಣ್ಣ)

ನಟ ಕೋಮಲ್ ನಾಯಕರಾಗುವ ಪ್ರಯತ್ನ ಮುಂದುವರಿದಿದೆ. ಅವರ ಹೊಸ ಪ್ರಯತ್ನವಾಗಿ `ಮರ್ಯಾದೆ ರಾಮಣ್ಣ~ ಮೂಡಿಬಂದಿದೆ.ಬೆಂಗಳೂರು ನಗರದಲ್ಲಿ ನಾಯಕ ಕೋಮಲ್ ಸೈಕಲ್ ಮೇಲೆ ಮೂಟೆ ಸಾಗಿಸುವ ಕೆಲಸವನ್ನು ಕಳೆದುಕೊಂಡು ಚಿಂತಾಕ್ರಾಂತನಾಗಿರುವಾಗ ಬರುವ ಪತ್ರ ಆತನ ಬದುಕಿನಲ್ಲಿ ಪುಟ್ಟ ತಿರುವು ಕೊಡುತ್ತದೆ. ಅದಕ್ಕಾಗಿ ಆತ ಬೀದರ್‌ಗೆ ಹೋಗುತ್ತಾನೆ.ಅಲ್ಲಿ ದಾಯಾದಿ ಮತ್ಸರ, ದ್ವೇಷ ಎದುರಿಸಬೇಕಾಗುತ್ತದೆ. ಈತನಿಗಾಗಿಯೇ ಕಾಯುತ್ತಿರುವಂತಿರುವ ಶತ್ರುಗಳು ಗೊತ್ತಿಲ್ಲದೆ ತಮ್ಮ ಮನೆಗೆ ಬಂದು ಸಿಕ್ಕಿ ಹಾಕಿಕೊಳ್ಳುವ ಬಲಿಯನ್ನು ತಮ್ಮ ಮನೆಯಲ್ಲಿ ಕೊಲ್ಲುವುದಿಲ್ಲ.

ಏಕೆಂದರೆ, ಯಾರನ್ನೇ ಆದರೂ ಮನೆಯಲ್ಲಿ ಕೊಲ್ಲುವುದು, ಅವರ ರಕ್ತ ಮನೆಯಲ್ಲಿ ಬೀಳುವುದು ಅವರು ನಂಬಿಕೊಂಡ ಸಂಪ್ರದಾಯಕ್ಕೆ ವಿರುದ್ಧ. ಈ ಎಲ್ಲ ವಿಷಯ ತಿಳಿದುಕೊಳ್ಳುವ ಕೋಮಲ್, ಅಲ್ಲಿಂದ ತಪ್ಪಿಸಿಕೊಂಡು ಹೋಗುತ್ತಾನೆಯೇ ಅಥವಾ ದ್ವೇಷದ ಕತ್ತಿ ಅಲುಗಿಗೆ ಬಲಿಯಾಗುತ್ತಾನೆಯೇ ಎಂಬ ಕುತೂಹಲದ ಎಳೆ ಚಿತ್ರದಲ್ಲಿದೆ.

`ಮರ್ಯಾದೆ ರಾಮಣ್ಣ~ ತೆಲುಗಿನಲ್ಲಿ ಸಾಕಷ್ಟು ಯಶಸ್ವಿಯಾದ `ಮರ್ಯಾದಾ ರಾಮನ್ನ~ದ ರೀಮೇಕ್. ಮಜಾ ಎಂದರೆ, ಕನ್ನಡದಲ್ಲೇ ದಿನೇಶ್‌ಬಾಬು ನಿರ್ದೇಶಿಸಿದ ಎಸ್.ನಾರಾಯಣ್, ಛಾಯಾಸಿಂಗ್ ನಟಿಸಿದ `ಬಲಗಾಲಿಟ್ಟು ಒಳಗೆ ಬಾ~ ಚಿತ್ರದ ಕತೆಯೂ ಇದೇ.

 

ಅದು ಕನ್ನಡದಿಂದ ತೆಲುಗಿಗೆ ಹೋಗಿ ಅದೇ ಶೈಲಿಯಲ್ಲಿ ಕನ್ನಡಕ್ಕೇ ಮರಳಿ ರೀಮೇಕ್ ಆಗಿದೆ. `ಕನ್ನಡ ಚಿತ್ರರಂಗಕ್ಕೆ ಜಯವಾಗಲಿ~ ಎಂದು ಪ್ರೇಕ್ಷಕರು ಸದ್ಯಕ್ಕೆ ನಿಟ್ಟುಸಿರು ಬಿಡಬಹುದು!ಕುತೂಹಲ, ಪ್ರೀತಿ, ತಮಾಷೆಯೊಂದಿಗೆ ವ್ಯಕ್ತಿಯೊಬ್ಬನ ಭಯವನ್ನು ಒಳಗೊಂಡ ಈ ಸಿನಿಮಾ ಕತೆ ಒಳ್ಳೆಯ ಚಿತ್ರಕತೆಯನ್ನು ಹೊಂದಿದೆ. ಉತ್ತಮ ನಿರ್ದೇಶಕನ ಕೈಗೆ ಸಿಕ್ಕಿದ್ದರೆ ಇದು ಇನ್ನಷ್ಟು ಚೆನ್ನಾಗಿರುವ ಸಿನಿಮಾ ಆಗುವುದರಲ್ಲಿ ಸಂದೇಹವಿರಲಿಲ್ಲ. ಆದರೆ, ಕನ್ನಡಕ್ಕೆ ಹೊಂದದ ತೆಲುಗು ಘಾಟಿನ ಸಿನಿಮಾ ಆಗಿದೆ.

 

ಕೋಮಲ್ ಇದ್ದುದರಲ್ಲೇ ಚೆನ್ನಾಗಿ ನಟಿಸಿದ್ದಾರೆ. ಅವರ ನಟನೆಯೇ ಸಿನಿಮಾದ ಪ್ರಧಾನ ಅಂಶ ಕೂಡ. ಅವರನ್ನು ತಮಾಷೆಯ ಪಾತ್ರಗಳಲ್ಲಿ ನೋಡಿರುವ ಪ್ರೇಕ್ಷಕರಲ್ಲಿ, ಅವರ ಗಂಭೀರ ನಟನೆ ಯಾವ ಸ್ಪಂದನವನ್ನು ಹುಟ್ಟಿಸುತ್ತದೆ ಎಂಬುದನ್ನು ಹೇಳುವುದು ಕಠಿಣ.ನಾಯಕನ ಸೈಕಲ್ ಸಿನಿಮಾದಲ್ಲೊಂದು ಪಾತ್ರ. ಅದಕ್ಕೆ ನಟ ಉಪೇಂದ್ರ ತಮ್ಮ `ಐ ಲೈಕ್ ಇಟ್~ ಎಂಬ ತಮ್ಮ ಹಳೆಯ ದನಿಯನ್ನು ಕೊಟ್ಟಿದ್ದಾರೆ. ಅದು ಅವರ ಎಂದಿನ ಕೋಡಂಗಿ ಅನುಕರಣೆಯಾಗಿ ಪ್ರೇಕ್ಷಕರಿಗೆ ಕಾಣುತ್ತದೆ.ನಿರ್ದೇಶಕ ಪತ್ತಿ ವಿ.ಎಸ್.ಗುರುಪ್ರಸಾದ್ ಕನ್ನಡದ್ದೇ ಕತೆಯನ್ನು ಕನ್ನಡದಲ್ಲೇ ಮಾಡುವ ತೊಂದರೆ ತೆಗೆದುಕೊಳ್ಳುವ ಬದಲಾಗಿ ಬೇರೊಂದು ಕತೆಗೆ ಪ್ರಯತ್ನಿಸಬಹುದಿತ್ತು. ಇದು ಕನ್ನಡಕ್ಕೆ ಅಂಥ `ಮರ್ಯಾದೆ~ಯ ಸಂಗತಿ ಏನಲ್ಲ.ಸಿನಿಮಾದ ಸಂಗೀತ (ಎಂ.ಎಂ. ಕೀರವಾಣಿ), ಗೀತೆಗಳು ಇವು ಯಾವುದೂ ಮನಸ್ಸನ್ನು ಮುಟ್ಟುವುದಿಲ್ಲ. ಆರ್.ಗಿರಿಯವರ ಛಾಯಾಗ್ರಹಣ ಮಾತ್ರ ಬೀದರ್‌ನ ಬಯಲು ಸೀಮೆಯನ್ನು ಹಿತವಾಗುವಂತೆ ಕಾಣಿಸಿದೆ. ಧರ್ಮ, ಮುಖೇಶ್, ದೊಡ್ಡಣ್ಣ ಅವರ ನಟನೆ ಎಂದಿನಂತಿದೆ. ರಾಜೇಶ್ ಮಾತ್ರ ಕೊಂಚ ಹಾಯ್ ಅನ್ನಿಸುವಂತಿದ್ದಾರೆ.ನಾಯಕನನ್ನು ಮುನ್ನೆಲೆಗೆ ತರುವ ಯತ್ನದಲ್ಲಿ ನಾಯಕಿ ನಿಶಾ ಷಾ ಎಂಬ ಬಿಳಿ-ತೆಳು ಸುಂದರಿಗೆ ಕೆಲಸ ಕೊಟ್ಟಿಲ್ಲ, ಅವರೂ ಅದನ್ನು ಬಳಿಸಿಕೊಂಡಿಲ್ಲ. ಹಾಗಾಗಿ ನಟನೆ ಎಂಬ ದೊಡ್ಡ ಸಂಗತಿಯನ್ನು ಅವರಲ್ಲಿ ಹುಡುಕುವ ತಪ್ಪನ್ನು ಯಾರೂ ಮಾಡಬಾರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.