ಕನ್ನಡ ಕಥನದ ವಿಸ್ತರಣೆಯ ಮಾದರಿ

7

ಕನ್ನಡ ಕಥನದ ವಿಸ್ತರಣೆಯ ಮಾದರಿ

Published:
Updated:
ಕನ್ನಡ ಕಥನದ ವಿಸ್ತರಣೆಯ ಮಾದರಿ

ಘಾಚರ್ ಘೋಚರ್

ಲೇ: ವಿವೇಕ ಶಾನಭಾಗ

ಪು: 124, ಬೆ: ರೂ. 95

ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆಒಂದು ಕಲಾಕೃತಿಯ ಯಶಸ್ಸಿನ ಮೂಲ ಮಾನದಂಡವೆಂದರೆ, ಹೊಚ್ಚ ಹೊಸದೆನಿಸುವ ನುಡಿಗಟ್ಟನ್ನು ಪ್ರಯೋಗಿಸುತ್ತಲೇ ಅದು ಕಲೆಯ ಆದಿಮ ಅಥವಾ ಸಾರ್ವಕಾಲಿಕವಾದ ಕ್ರಮ ಎನಿಸುವ ಅನುಭವವನ್ನು ಓದುಗರಿಗೆ ಕೊಡಬೇಕು ಎನ್ನುವುದು.ಇತರ ಜ್ಞಾನ ಶಿಸ್ತುಗಳಿಗೂ ಕಲೆಗೂ ಅಭಿವ್ಯಕ್ತಿ ಮತ್ತು ಸಂವಹನ ಕ್ರಮದಲ್ಲಿರುವ ಮೂಲಭೂತ ವ್ಯತ್ಯಾಸವೇ ಕಲೆಯು ಇತರರಿಗೆ ತಿಳಿಯಪಡಿಸುವ ಉದ್ದೇಶದ್ದಲ್ಲ ಅನ್ನುವುದರಲ್ಲಿ. ಮಾತ್ರವಲ್ಲ ಅದು ಇತರರಿಗೆ ತಿಳಿಯದ್ದನ್ನು ತಾನು ಹೇಳುತ್ತಿದ್ದೇನೆ ಎನ್ನುವ ಆತ್ಮಪ್ರತ್ಯಯವನ್ನು ದಾಟಲೂ ನಿರಂತರವಾಗಿ ಹಂಬಲಿಸುತ್ತಿರುತ್ತದೆ.ಬರವಣಿಗೆಯೂ ಸೇರಿದಂತೆ ಎಲ್ಲಾ ಕಲಾಪ್ರಕಾರಗಳೂ ಸ್ವಾಭಿವ್ಯಕ್ತಿಯಾಗುತ್ತಲೇ ತನ್ನನ್ನು ತಾನು ಚೌಕಟ್ಟುಗಳಿಂದ, ಬಂಧನಗಳಿಂದ ಬಿಡಿಸಿಕೊಳ್ಳಲು ನಡೆಸುವ ಪ್ರಯತ್ನಗಳೂ ಆಗುವುದು ಈ ಕಾರಣಕ್ಕಾಗಿಯೇ. ಕಲೆಯ ಜೊತೆಗಿನ ಒಡನಾಟವೆಂದರೆ ಅಹಂಕಾರವನ್ನು ಕಳೆದುಕೊಳ್ಳುವ, ಅನಂತದೊಂದಿಗಿನ ಸಖ್ಯ ಪಡೆಯುವ ಕ್ರಿಯೆಯಾಗುವುದು ಈ ಇಂಥ ಕಾರಣಗಳಿಗಾಗಿ.ವಿವೇಕ ಶಾನಭಾಗರ ಹೊಸ ಕಥಾಸಂಕಲನ `ಘಾಚರ್ ಘೋಚರ್' ಓದಿದಾಗ ಈ ಮಾತುಗಳು ನೆನಪಾಗುವುದಕ್ಕೆ ಕಾರಣಗಳಿವೆ. ದುರ್ದಮ್ಯತೆಯ ತೀವ್ರತೆಯಲ್ಲಿ `ಹುಟ್ಟಿರುವ' ಇಲ್ಲಿನ ಕಥೆಗಳು ವಿವೇಕರ ಬರವಣಿಗೆಯ ಹೊಸ ಮಜಲನ್ನೂ ಕಾಣಿಸುತ್ತವೆ.`ಹುಲಿ ಸವಾರಿ'ಯೂ ಸೇರಿದಂತೆ ಈ ತನಕದ ಇವರ ಕಥೆಗಳಲ್ಲಿ ವ್ಯಕ್ತಿ ಮತ್ತು ಬದುಕನ್ನು ಅರಿಯುವ ಕುತೂಹಲ ಉದ್ವಿಗ್ನತೆ ಎಂದೂ ಕರೆಯಬಹುದಾದ ಉತ್ಕಟತೆಯಲ್ಲಿ, ಕಂಡೂ ಕಾಣದ ಅವಸರದಲ್ಲಿ ಅಭಿವ್ಯಕ್ತಗೊಂಡರೆ ಇಲ್ಲಿ `ಅಹಹ ನೋವೆ ಅಹಹ ಸಾವೆ ವಿಫಲ ಸಫಲ ಜೀವಾ' ಎನ್ನುವ ಸಾಕ್ಷಾತ್ಕಾರದ ನೆಲೆಯನ್ನು ತಲುಪಲು ಪ್ರಯತ್ನಿಸುತ್ತಿರುವಂತೆ ಕಾಣಿಸುತ್ತದೆ.ಬದುಕಿನ ಕೊನೆಯಿರದ ಅನಿರೀಕ್ಷಿತತೆಯನ್ನು ಪ್ರತಿಗಳಿಗೆಯಲ್ಲೂ ಎಂಬಂತೆ ಎದುರಾಗಬೇಕಾದ ಮನುಷ್ಯನ ಪಾಡು ಇಲ್ಲಿನ ಬಹುತೇಕ ಕಥೆಗಳ ಕೇಂದ್ರ. ಒಳಹೊಕ್ಕಷ್ಟೂ ಅನಾವರಣಗೊಳ್ಳುತ್ತಲೇ ಹೋಗುವ, ಆದರೆ ಕಾಣದ್ದರ ಅರಿವು ಮತ್ತೆ ಮತ್ತೆ ನಮ್ಮನ್ನು ಕಂಗಾಲುಗೊಳಿಸುವ ಭಿತ್ತಿಯೊಂದು ಈ ಸಂಕಲನದ ಕಥೆಗಳನ್ನು ರೂಪಿಸಿದೆ.ಮೊದಲ ಕಥೆ `ಘಾಚರ್ ಘೋಚರ್' ಈ ಸಂಕಲನದ ಮಾತ್ರವಲ್ಲ ಕನ್ನಡದ ಅತ್ಯುತ್ತಮ ಕಥೆಗಳ ಸಾಲಿನಲ್ಲಿ ನಿಲ್ಲಬಹುದಾದ ಕಥೆ. ಕುಟುಂಬದ ಸಾತತ್ಯದೊಂದಿಗೆ ಬದಲಾಗುತ್ತಲೇ ಹೋಗುವ ವ್ಯಕ್ತಿಗತ ಸಂಬಂಧಗಳ ಸ್ವರೂಪಗಳು ಮತ್ತು ಸಮೀಕರಣಗಳ ಶೋಧದಂತೆ ಈ ಕಥೆ ಕಾಣುತ್ತದೆ. ವಿಘಟನೆ ವ್ಯಕ್ತಿಗಳ ಸ್ವಭಾವ, ನಿರೀಕ್ಷೆ ಮತ್ತು ಸಂದರ್ಭಗಳಿಂದ ಹುಟ್ಟುವುದೋ ಅಥವಾ ಸಂಬಂಧಗಳ ಮೂಲಗುಣವೇ ಆಗಿದೆಯೋ ಎನ್ನುವುದು ಕೊನೆಗೂ ಬಗೆಹರಿಯುವುದಿಲ್ಲ.ಇದಕ್ಕೆ ಸಾಧ್ಯವಿರುವ ಎಲ್ಲಾ ಕಾರಣಗಳನ್ನು ಹುಡುಕಲೂ ಈ ಕಥೆ ಪ್ರಯತ್ನಿಸುತ್ತದೆ. ಕಷ್ಟದ ಗಳಿಗೆಗಳಲ್ಲಿ ಒಂದಾಗಿದ್ದ ಕುಟುಂಬವೊಂದು ಸುಖದಲ್ಲೂ (ಇಷ್ಟಕ್ಕೂ ಸುಖವೆನ್ನುವುದಕ್ಕೆ ವ್ಯಾಖ್ಯಾನವೇನು? ಆಧಾರವೇನು? ಎನ್ನುವ ಪ್ರಶ್ನೆಯೂ ಈ ಕಥೆಯಲ್ಲಿ ಢಾಳಾಗಿಯೇ ಇದೆ) ಅದನ್ನು ಉಳಿಸಿಕೊಳ್ಳಲು ನಡೆಸುವ ಸತತ ಯತ್ನವೆನ್ನುವ ಸರಳ ಆಯಾಮದಿಂದ ಹಿಡಿದು ಅಕಾರಣವಾಗಿ ಎನ್ನುವಂತೆ ಸಂಬಂಧಗಳು ಎಂಥ ಪ್ರಯತ್ನಗಳ ಆಚೆಗೂ ಕೈಜಾರಿ ಹೋಗುವ ಸಂಕೀರ್ಣ ಆಯಾಮದ ತನಕ ಈ ಕಥೆಯ ಹುಡುಕಾಟವಿದೆ. ಉಸಿರಿನಷ್ಟು ಅಭಿನ್ನವಾಗಿದ್ದವರು ಸ್ಪರ್ಧಿಗಳಾಗಿಬಿಡುವುದು, ಬೇಡವಾಗಿಬಿಡುವುದು ಹೇಗೆ ಎನ್ನುವ ದುರಂತ ಒಂದು ಕಡೆಗಿದ್ದರೆ, ಕೊಡುವುದರಲ್ಲೇ ಸುಖ ಕಾಣುತ್ತ್ದ್ದಿದವರು ಪಡೆಯುವ ದಂದುಗದಲ್ಲೇ ಆಸಕ್ತರಾಗಿ ಲೋಲುಪರಾಗಿ ಬಿಡುವ ದುರಂತ ಇನ್ನೊಂದು ಕಡೆ.ವಿದ್ಯೆಯ ಆತ್ಯಂತಿಕ ಉದ್ದೇಶವೇ ಕುಟುಂಬಕ್ಕೆ ಆರ್ಥಿಕ ಬಿಡುಗಡೆಯನ್ನು, ಸವಲತ್ತನ್ನು ಒದಗಿಸಿ ಕೊಡುವುದು ಎನ್ನುವ ಮಹತ್ವಾಕಾಂಕ್ಷೆಯೇ ಲಯವಾಗಿ ಭರವಸೆಯ ಕುಡಿಯಾಗಿದ್ದವನು ಪರಾವಲಂಬಿ ನಿರುಪಯುಕ್ತ ಜೀವಿಯಾಗಿಬಿಡುವ ದಾರುಣತೆಯನ್ನು ಕಥೆ ಅಪೂರ್ವವಾಗಿ ಚಿತ್ರಿಸುತ್ತದೆ. ಆರ್ಥಿಕ ಸವಲತ್ತೆನ್ನುವುದು ಕಷ್ಟಗಳಿಂದ ಮಾತ್ರವಲ್ಲ ಬದುಕಿನ ಅರ್ಥಪೂರ್ಣತೆಯ ಹುಡುಕಾಟದಿಂದಲೂ ಬಿಡಿಸಿ ಬಿಡುತ್ತದೆಯೇ ಎನ್ನುವ ಅನುಮಾನ ಎಲ್ಲ ಪಾತ್ರಗಳನ್ನೂ ಒಂದಲ್ಲ ಒಂದು ಪಾತಳಿಯಲ್ಲಿ ಕಾಡುತ್ತಲೇ ಹೋಗುತ್ತದೆ. ಅವಿವಾಹಿತ ಚಿಕ್ಕಪ್ಪನನ್ನು ಸದಾ ಮದುವೆಯಿಂದ ಹೊರಗಿಡುವುದರಲ್ಲಿಯೋ, ಅವನ ಗೆಳತಿಯೊಬ್ಬಳನ್ನು ಶಕ್ತವಾಗಿ ಅವನಿಂದ ದೂರ ಮಾಡುವುದರಲ್ಲಿಯೋ ಪಡೆಯುವ ಯಶಸ್ಸು ಹುಟ್ಟಿಸುವ ಕಸಿವಿಸಿಯನ್ನು ಎದುರಿಸಲಾಗದೆ ಅವರು ಚಡಪಡಿಸುವ ಪರಿ ಈ ಕಥೆಯ ಸಾರ್ಥಕ ಕೇಂದ್ರಗಳಲ್ಲೊಂದು.ಇಡೀ ಕಥೆಯ ಪ್ರತಿ ಕೇಂದ್ರದಂತಿರುವ ಅನಿತಾ ಇತರೆಲ್ಲರನ್ನೂ ಪಾಟಿಸವಾಲಿಗೆ ಒಳಪಡಿಸುತ್ತಲೇ ಅವರನ್ನು ಮತ್ತು ತನ್ನನ್ನು ಒಳಗೊಳ್ಳುವ ಆವರಣವೊಂದನ್ನು ಸೃಷ್ಟಿಸಲು ಪ್ರಯತ್ನಿಸುತ್ತಾಳೆ. ಸತ್ಯದ ಮುಖಾಮುಖಿಗೆ ಅವರನ್ನು ಸಜ್ಜುಗೊಳಿಸುವ ಅವಳ ಪ್ರಯತ್ನದ್ಲ್ಲಲಿ ಅವರೆಲ್ಲರಿಗೂ ಅವಳೇ ಅಪ್ರಿಯ ಸತ್ಯದ ಸಾಕಾರ ರೂಪವಾಗಿ ಕಾಣಿಸುವ ವಿಪರ್ಯಾಸವನ್ನೂ ಕಥೆ ನಿರೂಪಿಸುತ್ತದೆ. ಇಷ್ಟಾಗಿ ಈ ಕಥೆಯ ಬಗ್ಗೆ ಹೇಳಬೇಕಾದ ಮಾತೊಂದಿದೆ, ಕಥೆಯ ಅಂತ್ಯ ಇನ್ನು ಇದರ ಸಹವಾಸ ಸಾಕು ಎನ್ನುವ ಅಸಹನೆಯ ಆತುರದಲ್ಲಿ ಮುಗಿಸಿದಂತೆ ಕಾಣುತ್ತದೆ.`ಸುಧೀರನ ತಾಯಿ' ಈ ಸಂಕಲನದ ಮತ್ತೊಂದು ಒಳ್ಳೆಯ ಕಥೆ. ಸಂಬಂಧಗಳ ಸುಳ್ಳು ಮತ್ತು ನಿಜ ಎರಡೂ ಮನುಷ್ಯರ ಬದುಕನ್ನು ನಿಯಂತ್ರಿಸುವ ವಿಲಕ್ಷಣತೆ ಇಲ್ಲಿದೆ. ಮಿಕ್ಕವರ ಬದುಕಿನ ವಾಸ್ತವಗಳು ಅಸಹನೀಯ ಎನ್ನಿಸುತ್ತಿರುವಾಗಲೇ ನಮ್ಮ ಬದುಕಿನ ವಿಚಿತ್ರಗಳು ಮಾತ್ರ ಸಹಜ ಎನಿಸುವುದು ಮತ್ತು ಎಂಥ ಸನ್ನಿವೇಶಗಳಲ್ಲೂ ಅದನ್ನು ಮುಖಾಮುಖಿಯಾಗಲು ಬೇಕಾದ ತಯಾರಿಯೊಂದು ನಮ್ಮ ಮನೋವಿನ್ಯಾಸದಲ್ಲೇ ಇರುವ ಸತ್ಯವೊಂದನ್ನು ಈ ಕಥೆ ಹೇಳುತ್ತದೆ.ನಾಟಕ, ಕಾದಂಬರಿಗಳನ್ನೂ ಬರೆದಿರುವ ವಿವೇಕರ ಮೂಲ ಮಾಧ್ಯಮ ಮಾತ್ರ ಸಣ್ಣಕಥೆಯೇ ಎನ್ನುವುದನ್ನು ಈ ಸಂಕಲನ ಮತ್ತೊಮ್ಮೆ ರುಜುವಾತುಗೊಳಿಸಿದೆ. ಸಣ್ಣಕಥೆಗಳಿಗೇ ಅನನ್ಯವಾದ ವಸ್ತು ವಿನ್ಯಾಸ ಮತ್ತು ಭಾಷಿಕ ಶರೀರ ಎರಡೂ ಇವರಿಗೆ ಒಲಿದಿವೆ ಮತ್ತು ಸಿದ್ಧಿಸಿವೆ. ಉತ್ತರಕನ್ನಡದ ದಟ್ಟ, ದೃಶ್ಯಾತ್ಮಕ ಪರಿಸರ, ಬಾಲ್ಯದ ನಿಬ್ಬೆರಗಿನ, ನಿಗೂಢ ಲೋಕದ ಮೂಲದ್ರವ್ಯವು ಕಾರ್ಪೊರೇಟ್ ಜಗತ್ತು ಮತ್ತು ಜಗತ್ತಿನ ವಿಸ್ತಾರದೊಂದಿಗಿನ ಅನುಸಂಧಾನದಲ್ಲಿ ಕನ್ನಡದ ಕಥಾಲೋಕವನ್ನು ವಿಸ್ತರಿಸುತ್ತಿರುವ ಮಾದರಿಯೊಂದು ವಿವೇಕರ ಕಥೆಗಳಲ್ಲಿ ಮೈದಾಳಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry