ಮಂಗಳವಾರ, ಮೇ 18, 2021
31 °C

`ಕನ್ನಡ ಕಲಿಯುವವರಿಗೆ ಆಕರ್ಷಣೆ ಹೆಚ್ಚಬೇಕು'

ಪ್ರಜಾವಾಣಿ ವಾರ್ತೆ/ ಗಣೇಶ ಅಮೀನಗಡ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಪ್ರೊ.ಮಲೆಯೂರು ಗುರುಸ್ವಾಮಿ. ಚಾಮರಾಜನಗರ ಜಿಲ್ಲೆಯ ಮಲೆಯೂರಿನ ಅವರು 25 ವರ್ಷಗಳವರೆಗೆ ನಂಜನಗೂಡಿನಲ್ಲಿ ನೆಲೆಸಿದ್ದರು. ಅಲ್ಲಿಯೇ 20 ವರ್ಷಗಳವರೆಗೆ ಜೆಎಸ್‌ಎಸ್ ಕಾಲೇಜಿನಲ್ಲಿ ಕನ್ನಡ ಪಾಠ ಮಾಡಿದ್ದಾರೆ. ಅನೇಕ ಸೃಜನಶೀಲ ಹಾಗೂ ಸೃಜನೇತರ ಕೃತಿಗಳನ್ನು ರಚಿಸಿರುವ ಅವರು, 3 ಅವಧಿಗೆ ಚಾಮರಾಜನಗರ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಹಿನ್ನೆಲೆಯಲ್ಲಿ `ಪ್ರಜಾವಾಣಿ'ಗೆ ನೀಡಿದ ಸಂದರ್ಶನದ ಆಯ್ದಭಾಗ ಇಲ್ಲಿದೆ.* ನಂಜನಗೂಡಿನಲ್ಲಿ 25 ವರ್ಷ ಇದ್ದವರು. ಅಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದಾಗ ಏನು ಅನ್ನಿಸಿತು?

ನಂಜನಗೂಡು ತುಂಬ ಪ್ರಿಯವಾದ ತಾಣ. ಸಾಹಿತಿಗಳು ಹಾಗೂ ಸಾಂಸ್ಕೃತಿಕ ದಿಗ್ಗಜರು ಇದ್ದ ಊರು ಅದು. ಅಲ್ಲಿಯ ಮಹಾತ್ಮ ಗಾಂಧಿ ಶತಾಬ್ದಿ ರಸ್ತೆ (ಎಂಜಿಎಸ್ ರಸ್ತೆ) ಹಾಗೂ ರಾಷ್ಟ್ರಪತಿ ರಸ್ತೆ ಮುಖ್ಯವಾದವು. 1934ರಲ್ಲಿ ಮಹಾತ್ಮ ಗಾಂಧಿ ನಡೆದಾಡಿದರೆಂದು ರಸ್ತೆಗೆ ಅವರು ಹೆಸರು ಇಡಲಾಯಿತು.ರಾಷ್ಟ್ರಪತಿ ರಸ್ತೆಯಲ್ಲಿ ಅನೇಕ ಸಾಂಸ್ಕೃತಿಕ ಹಾಗೂ ಸಾಹಿತಿಗಳ ಮನೆಗಳಿವೆ. ಇದರೊಂದಿಗೆ ಶ್ರೀಕಂಠೇಶ್ವರ ದೇವಸ್ಥಾನವಂತೂ ಪ್ರಸಿದ್ಧ. ಹೀಗಾಗಿ, ದಕ್ಷಿಣ ಕಾಶಿಯೆಂದು ಹೆಸರಾದ ನಂಜನಗೂಡಿನಲ್ಲಿ ಬದುಕಿನ 25 ವರ್ಷಗಳನ್ನು ಕಳೆದೆ. ಅಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷನಾಗಿದ್ದಕ್ಕೆ ಸಾರ್ಥಕ ಅನ್ನಿಸುತ್ತಿದೆ.* ಈಗಿನ ನಂಜನಗೂಡಿನ ಕುರಿತು ಹೇಳಿ?

ನಂಜನಗೂಡು ಬದಲಾಗಿದೆ. ಕಾರ್ಖಾನೆಗಳಿಂದಾಗಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಈ ಕುರಿತು ಚರ್ಚೆಯಾಗಬೇಕು.* ಈ ಸಮ್ಮೇಳನದಿಂದ ಹೊಸದನ್ನು ನಿರೀಕ್ಷಿಸಬಹುದೇ?

ಪ್ರತಿ ಸಾಹಿತ್ಯ ಸಮ್ಮೇಳನ ಎಂದರೆ ಉತ್ಸವವೇ. ಅಧ್ಯಕ್ಷರ ಭಾಷಣ ಇರುತ್ತದೆ. ನಿರ್ಣಯಗಳಿರುತ್ತವೆ. ನಾಡು-ನುಡಿ ಕುರಿತು ಮಾತನಾಡುತ್ತೇವೆ. ಹೀಗೆ ಕಳೆದ ಅನೇಕ ವರ್ಷಗಳಿಂದ ಮಾತನಾಡುತ್ತಲೇ ಇದ್ದೇವೆ.ಆದರೆ, ಕನ್ನಡ ಮಾಧ್ಯಮ ವಿಷಯ ಭಾವನಾತ್ಮಕವಾದುದಲ್ಲ. ಭಾವನಾತ್ಮಕ ವಿಷಯಗಳ ಬದುಕು ಮೇಲೆ ನಿಂತಿರುವುದಿಲ್ಲ. ಇಂಗ್ಲಿಷ್ ಕಲಿತರೆ ಅವಕಾಶಗಳು ಹೆಚ್ಚು ತೆರೆದುಕೊಳ್ಳುತ್ತವೆ ಎನ್ನುವ ಮಾತಿದೆ. ಸತ್ಯ ಕೂಡ. ಇದಕ್ಕೆ ತಕ್ಕ ಹಾಗೆ ಕಾರ್ಯಕ್ರಮ ರೂಪಿಸಿಕೊಂಡರೆ ಕನ್ನಡ ಭಾಷೆ ಉಳಿಸಿಕೊಳ್ಳಬಹುದು.ಹೇಗೆಂದರೆ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳನ್ನು ಕೊಡಬೇಕು. ಆಗ ಸಹಜವಾಗಿ ಆಕರ್ಷಿತರಾಗುತ್ತಾರೆ. ಪತ್ರಿಕೋದ್ಯಮದಲ್ಲಿ ಇಂಗ್ಲಿಷ್ ಪತ್ರಕರ್ತರಿಗೆ ಹೆಚ್ಚು ಸಂಬಳ ಇರುತ್ತದೆ. ಆದರೆ, ಕನ್ನಡ ಪತ್ರಕರ್ತರಿಗೆ ಕಡಿಮೆ ಸಂಬಳ ಇರುತ್ತದೆ. ಇಂಗ್ಲಿಷ್ ಓದಿದ್ದರೆ ಹೆಚ್ಚು ಸಂಬಳ ಪಡೆಯಬಹುದಿತ್ತು ಎಂದು ಕನ್ನಡ ಪತ್ರಕರ್ತರಿಗೆ ಅನ್ನಿಸುವುದು ಸಹಜ.ಇದು ತಪ್ಪು-ಸರಿ ಪ್ರಶ್ನೆಗಿಂತ ಬದುಕಿನ ಪ್ರಶ್ನೆ. ಇದಕ್ಕಾಗಿ ಕನ್ನಡ ಕಲಿಯುವವರಿಗೆ ಆಕರ್ಷಣೆ ಹೆಚ್ಚಬೇಕು. ದೇಜಗೌ ಅವರು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಅವಧಿಯಲ್ಲಿ ಎಲ್ಲ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಅಧ್ಯಯನಕ್ಕೆ ಒತ್ತು ಕೊಟ್ಟರು. ಇದು ಮುಂದುವರಿಯಬೇಕು.* ಕನ್ನಡ ಭಾಷೆ ಕುರಿತು ಹೇಳಿ...

ಮುಖ್ಯವಾಗಿ ಟಿವಿಯ ಚಾನಲ್‌ಗಳಲ್ಲಿ ಬಳಸುತ್ತಿರುವ ಕನ್ನಡ ಭಾಷೆ ಕುರಿತು ನಿಯಂತ್ರಿಸುವ ಸಂಸ್ಥೆಯೊಂದರ ಅಗತ್ಯವಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆ. ಆದರೆ, ಅದಕ್ಕೆ ಅಧಿಕೃತ ಹಕ್ಕಿಲ್ಲ. ಸುಮ್ಮನೆ ಹೇಳಬಹುದು ಅಷ್ಟೆ. ಆದರೆ, ಭಾಷಾ ಶುದ್ಧಿ ಕುರಿತು ಕ್ರಮ ಕೈಗೊಳ್ಳಲು ಅಧಿಕೃತ ಸಂಸ್ಥೆ ಬೇಕಿದೆ.* ಇಂಗ್ಲಿಷ್ ಶಾಲೆಗಳಲ್ಲಿಯ ಕನ್ನಡ ಸ್ಥಿತಿ?

ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಪರವಾನಗಿ ಕೊಡುತ್ತಿಲ್ಲ. ಆದರೆ, ಸಿಬಿಎಸ್‌ಇ ಶಾಲೆಗಳನ್ನು ಆರಂಭಿಸಿ ಕನ್ನಡ ಭಾಷೆಯನ್ನು ಹತ್ತಿಕ್ಕಲಾಗುತ್ತಿದೆ. ಸಮಾಜದಲ್ಲಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಲ್ಲಿ ಕಲಿಸಬೇಕು ಎನ್ನುವ ಪಾಲಕರೇ ಹೆಚ್ಚು. ಆಟೋ ಚಾಲಕ ಮತ್ತು ಅವರ ಪತ್ನಿ ನಡುವೆ ವಿಚ್ಛೇದನಕ್ಕೆ ಸಂಬಂಧಿಸಿ ಕೋರ್ಟ್‌ನಲ್ಲಿ ಚರ್ಚೆ ನಡೆಯುತ್ತಿತ್ತು.ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಲಿಯಲು ಹಾಕದೆ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಹಾಕಿದ ಎನ್ನುವ ಆಕ್ಷೇಪಣೆ ಪತ್ನಿಯದು. ಹೀಗೆ ಬದುಕಿನ ಚಿಂತನ ಕ್ರಮ ಇರುವಾಗ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು.ಅಂದರೆ, ಭಾಷೆಯ ವಿಷಯದಲ್ಲಿ ಕೀಳರಿಮೆ ಇರಬಾರದು. ಮೈಸೂರಿನ ಕಾನ್ವೆಂಟ್‌ನಲ್ಲಿ ಓದುವ ಹುಡುಗನಿಗೂ ಹಳ್ಳಿಯಲ್ಲಿ ಓದುವ ಹುಡುಗನಿಗೂ ಕಲಿಸುವ ಶಿಕ್ಷಣ ಒಂದೇ ಬಗೆಯಾಗಿರಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.