`ಕನ್ನಡ ಕಾದಂಬರಿಗೆ ಪ್ರಾಧಾನ್ಯ ಸಿಗಲಿ'
ಬೆಂಗಳೂರು: ಅನ್ಯ ಭಾಷೆಗಳಲ್ಲಿ ಜನಪ್ರಿಯವಾಗಿರುವ ಸಾಹಿತ್ಯವನ್ನು ಕನ್ನಡ ಭಾಷೆಗೆ ಅನುವಾದ ಮಾಡಬೇಕಾದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ ಅಭಿಪ್ರಾಯಪಟ್ಟರು.
ಶಿವಮೊಗ್ಗದ ಯುನೈಟೆಡ್ ಆರ್ಟಿಸ್ಟ್ ಸಂಸ್ಥೆಯು ಸೋಮವಾರ ನಗರದಲ್ಲಿ ಆಯೋಜಿಸಿದ್ದ ಶೇಷಗಿರಿರಾವ್ ಅವರು ಅನುವಾದಿಸಿರುವ `ಹೃದಯಸ್ಪರ್ಶ' (ಮೂಲ- ಸುಹಾಸ್ ಶಿರವಳ್ಕರ್ ಅವರ ಮರಾಠಿ ಕಾದಂಬರಿ) ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಲಯಾಳಿ ಮತ್ತು ಬಂಗಾಳಿ ಕಾದಂಬರಿಗಳಿಗೆ ಸಿಗುತ್ತಿರುವ ಪ್ರಾಮುಖ್ಯತೆಯನ್ನು ಗಮನಿಸಿದರೆ, ಕನ್ನಡ ಕಾದಂಬರಿಗಳಿಗೆ ಅಷ್ಟೊಂದು ಪ್ರಾಧಾನ್ಯತೆ ಸಿಗುತ್ತಿಲ್ಲ. ಆದ್ದರಿಂದ ಕಾದಂಬರಿಗಳನ್ನು ಹೆಚ್ಚಾಗಿ ಬರೆಯಬೇಕಾದ ಅನಿವಾರ್ಯತೆ ಹಾಗೂ ಬೇರೆ ಭಾಷೆಯ ಕಾದಂಬರಿಗಳನ್ನು ಕನ್ನಡ ಭಾಷೆಗೆ ಭಾಷಾಂತರಿಸುವ ಅವಶ್ಯಕತೆ ಇದೆ ಎಂದರು.
ಶಿವರಾಮ ಕಾರಂತರ ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ್ದರೆ ನೊಬೆಲ್ ಪ್ರಶಸ್ತಿ ದೊರೆಯುತ್ತಿತ್ತು. ಆ ನಿಟ್ಟಿನಲ್ಲಿ ಕನ್ನಡ ಭಾಷೆಗೆ ಅನುವಾದ ಸಾಹಿತ್ಯ ಅಗತ್ಯವಾಗಿದೆ. ಸಂಸ್ಕೃತಿಯ ನೆಲೆಯಾದ ಶಿವಮೊಗ್ಗದಲ್ಲಿ ಎಂಟು ವರ್ಷಗಳು ನೆಲೆಸಿದ್ದ ನನ್ನನ್ನು ಶಿವಮೊಗ್ಗ ಉತ್ತಮ ಮನುಷ್ಯನನ್ನಾಗಿ ಮಾರ್ಪಡಿಸಿತು ಎಂದು ಹೇಳಿದರು.
ಲೇಖಕ ಅ.ರಾ.ಸೇ. ಮಾತನಾಡಿ, ಭಾಷಾಂತರ ಮಾಡುವುದು ಎಷ್ಟು ಕಠಿಣವೋ ಹಾಸ್ಯ ಮಾಡುವುದೂ ಅಷ್ಟೇ ಕಠಿಣ. ಭಾಷಾಂತರವನ್ನು ಎಲ್ಲರೂ ಮಾಡಲು ಆಗುವುದಿಲ್ಲ, ಭಾಷಾಂತರ ಮಾಡುವಾಗ ಮೂಲ ಕೃತಿಗೆ ದಕ್ಕೆಯಾಗದಂತೆ ಭಾಷಾಂತರಿಸಬೇಕು.
`ಹೃದಯ ಸ್ಫರ್ಶಿ' ಕಾದಂಬರಿ ಮರಾಠಿಯ `ಸಮಾಂತರ' ಕಾದಂಬರಿಯ ಮೂಲವಾಗಿರುವುದರಿಂದ ಶೇಷಗಿರಿ ರಾವ್ ಅವರು ಮೂಲ ಕೃತಿಗೆ ದಕ್ಕೆಯಾಗದಂತೆ ಭಾಷಾಂತರಿಸಿದ್ದಾರೆ. ಈ ಹಿಂದೆ ಕೆಲವರು ಮಾಡಿರುವ ಭಾಷಾಂತರಗಳು ಮೂಲ ಕೃತಿಗೆ ಹೊಂದಾಣಿಕೆ ಇಲ್ಲದೆ ಪುಸ್ತಕಗಳು ಮೂಲೆಗುಂಪಾಗಿವೆ ಎಂದರು.
ನಿವೃತ್ತ ಉಪನ್ಯಾಸಕ ಸಿದ್ದಪ್ಪ, ಗಾಯಕ ಶಿವಮೊಗ್ಗ ಸುಬ್ಬಣ್ಣ, ಲೇಖಕ ಡಾ.ಓಂಪ್ರಕಾಶ್, ಅನುವಾದಕ ಶೇಷಗಿರಿ ರಾವ್, ವಿಕ್ರಂ ಪ್ರಕಾಶನದ ಹರಿ ಪ್ರಕಾಶ್ ಅವರು ಉಪಸ್ಥಿತಿರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.