ಕನ್ನಡ ಕಾವ್ಯಗುಚ್ಛದ ಪುಷ್ಪಮಾಲಿಕೆ

7

ಕನ್ನಡ ಕಾವ್ಯಗುಚ್ಛದ ಪುಷ್ಪಮಾಲಿಕೆ

Published:
Updated:

`ಕರ್ನಾಟಕ ಪ್ರಾಕ್ಕಾವ್ಯ ಮಾಲಿಕೆ~ (Canarese Poetical Anthology) ನಡುಗನ್ನಡದ ಎರಡನೇ ಮಜಲಿನ ಕಾಲಘಟ್ಟದ ಕಾವ್ಯಭಾಗಗಳ ಸಂಕಲನ.

 

ಈ ಕೃತಿಯ ಹೆಸರಿನ ಪೂರ್ತಿ ಒಕ್ಕಣೆ ಇಂತಿದೆ : Canarese Poetical Anthology on selections from the Standard Poetical Works of Ancient Canarese literature with Introduction and footnotes. ಪುಸ್ತಕದ ಕೊನೆಯಲ್ಲಿ ಕೊಟ್ಟಿರುವ ಪರಿವಿಡಿಗೆ `ಪುಷ್ಪಮಾಲಿಕೆ~ಯ ಅನುಕ್ರಮಣಿಕೆ ಎಂದು ಶೀರ್ಷಿಕೆ ನೀಡಿರುವುದು ಹಾಗೂ ಈ ಕೃತಿಯ ಶಬ್ದಕೋಶವನ್ನು `ಪುಷ್ಪಮಾಲಿಕಾ ಶಬ್ದಕೋಶ~ (ಅಂದರೆ ಈ ಪುಸ್ತಕದಲ್ಲಿರುವಂಥಾ ಈಗ ರೂಢಿಯಲ್ಲಿಲ್ಲದಂಥಾ ಶಬ್ದಗಳ ವಿವರ) ಎಂದು ನಿರ್ದೇಶಿಸಿರುವುದನ್ನು ನೋಡಿದರೆ, ಈ ಕೃತಿಯ ಇನ್ನೊಂದು ಹೆಸರು `ಪುಷ್ಪಮಾಲಿಕೆ~ ಎಂದು ಭಾವಿಸಬಹುದು.ಸಾರ್ವಜನಿಕ ಶಿಕ್ಷಣ ಇಲಾಖೆ, ಮದ್ರಾಸ್ ಪ್ರಕಟಿಸಿರುವ ಈ ಕೃತಿ 1868ರಲ್ಲಿ ಮೈಸೂರು ಗವರ್ನಮೆಂಟ್ ಪ್ರೆಸ್ಸಿನಲ್ಲಿ ಮುದ್ರಿತವಾಗಿದೆ. ಬಾಸೆಲ್ ಮಿಷನ್ ಸಂಸ್ಥೆಯ ರೆವರೆಂಡ್ ಜಿ.ವೂರ್ತ್‌ರವರು ಈ ಕೃತಿಯನ್ನು ಮೊದಲ ಬಾರಿಗೆ ಪರಿಚಯ ಮತ್ತು ಟಿಪ್ಪಣಿಗಳೊಂದಿಗೆ ಸಿದ್ಧಪಡಿಸಿದರು.

 

ಅನಾರೋಗ್ಯದಿಂದ ಅವರು ಯೂರೋಪಿಗೆ ಹಿಂದಿರುಗಿದ ಮೇಲೆ ಮೈಸೂರು ಸರ್ಕಾರದ ಸಾರ್ವಜನಿಕ ಇಲಾಖೆಯ ನಿರ್ದೇಶಕರಾದ ಜೆ. ಗ್ಯಾರೆಟ್ (J.Garrett) ಪುಸ್ತಕವನ್ನು ಪೂರ್ಣಗೊಳಿಸಿದರು. ಆ ಕಾಲಘಟ್ಟದ ಕನ್ನಡ ಸಾಹಿತ್ಯವನ್ನು ಸಂಕಲನಕಾರರು- ಬ್ರಾಹ್ಮಣ, ಲಿಂಗಾಯತ, ಜೈನ ಹಾಗೂ ಮೂಲ ಕ್ರಿಶ್ಚಿಯನ್ನರ ಸಾಹಿತ್ಯ ಎಂದು ವರ್ಗೀಕರಿಸಿ, ಅಲ್ಲಿನ ಕಾವ್ಯಭಾಗಗಳನ್ನು ಸಂಕಲಿಸಿದ್ದಾರೆ.ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ ಕ್ರಿ.ಶ. 1250ರಲ್ಲಿ ಮಲ್ಲಿಕಾರ್ಜುನನು ರಚಿಸಿದ `ಸೂಕ್ತಿ ಸುಧಾರ್ಣವ~. ಇದರಲ್ಲಿ ಅಷ್ಟಾದಶ ವರ್ಣನೆಗಳಿಗೆ ಸಂಬಂಧಿಸಿದ ಸಾವಿರಾರು ಪದ್ಯಗಳನ್ನು ಮಾರ್ಗ ಕಾವ್ಯಗಳಿಂದ ಆಯ್ಕೆ ಮಾಡಿ ಸಂಕಲಿಸಿದ್ದಾನೆ. ನಂತರ 1550ರಲ್ಲಿ ಅಭಿನವವಾದಿ ವಿದ್ಯಾನಂದನು `ಕಾವ್ಯಸಾರ~ ಎಂಬ ಸಂಕಲಿತ ಕೃತಿಯನ್ನು ರಚಿಸಿರುತ್ತಾನೆ.ಒಂದು ರೀತಿಯಲ್ಲಿ ಶಿವಗಣ ಪ್ರಸಾದಿ ಮಹದೇವಯ್ಯ, ಕೆಂಚವೀರಣ್ಣೊಡೆಯ, ಹಲಗೆಯಾರ್ಯ, ಗೂಳೂರು ಸಿದ್ಧವೀರಣ್ಣೊಡೆಯ ಹಾಗೂ ಗುಮ್ಮಳಾಪುರದ ಸಿದ್ಧಲಿಂಗಯತಿ ಇವರುಗಳು ಬೇರೆಬೇರೆ ಕಾಲಘಟ್ಟದಲ್ಲಿ ಸಿದ್ಧಪಡಿಸಿದ ಶೂನ್ಯಸಂಪಾದನೆಗಳೂ ಕೂಡ ಸಂವಾದ ರೂಪದಲ್ಲಿರುವ ವಿವಿಧ ಶಿವಶರಣರ ವಚನ ಸಂಕಲನಗಳೇ ಎನ್ನಬಹುದು.ನಿರ್ದಿಷ್ಟ ಕಾಲಮಾನದ, ನಿರ್ದಿಷ್ಟ ಪರಂಪರೆಯ ಕಾವ್ಯಭಾಗಗಳ ಸಂಕಲನ (Anthology) ರೂಪಿಸುವುದು ಬಹು ಕಷ್ಟದ ಕೆಲಸವೇ ಸರಿ. ಆಯ್ಕೆ ಮಾಡುವಲ್ಲಿ ಸಂಕಲನಕಾರನ ಬಹುಶ್ರುತತ್ವ ಒರೆಗೆ ಹಚ್ಚಲ್ಪಡುತ್ತದೆ. ತೌಲನಿಕ ವಿಮರ್ಶೆಗೆ ಸಂಕಲಿತ ಕೃತಿಗಳು ಬಹು ಉಪಯುಕ್ತ. ಸಂಕಲನಕಾರನ ರಸಾಭಿರುಚಿಗೂ ದ್ಯೋತಕ.

 

ಈ ದೃಷ್ಟಿಯಿಂದ ಮಲ್ಲಿಕಾರ್ಜುನನೇ ಹೇಳಿಕೊಂಡಿರುವಂತೆ ಅವನ `ಸೂಕ್ತಿ ಸುಧಾರ್ಣವ~ವು `ಚದುರರ ಮೆಚ್ಚು, ಭಾವುಕರ ಕೈಪಿಡಿ, ಅಕ್ಕರಿಗರ ಆಭರಣಂ~ ಆಗಿದೆ. ಸದರಿ `ಕರ್ನಾಟಕ ಪ್ರಾಕ್ಕಾವ್ಯ ಮಾಲಿಕೆ~ಯು `ಸೂಕ್ತಿ ಸುಧಾರ್ಣವ~ ಹಾಗೂ `ಕಾವ್ಯಸಾರ~ದ ಮುಂದುವರೆದ ಸಂಕಲನದಂತಿದೆ.

 

ಅಷ್ಟೇ ಅಲ್ಲದೆ, ಮುಂದೆ ಬಂದಂತಹ ಬಿ.ಎಲ್.ರೈಸ್, ಆರ್.ನರಸಿಂಹಾಚಾರ್, ಎಸ್.ಜಿ.ನರಸಿಂಹಾಚಾರ್ ಮುಂತಾದವರು ಸಂಪಾದಿಸಿದ `ಪದ್ಯಸಾರ~, ವಿ.ಕೆ.ಗೋಕಾಕರು ಸಂಕಲಿಸಿದ `ನವ್ಯಧ್ವನಿ~ (1956), ದ.ರಾ.ಬೇಂದ್ರೆಯವರು ಸಂಕಲಿಸಿದ `ಹೊಸಗನ್ನಡ ಕಾವ್ಯ ಶ್ರಿ~ (1957- ಐದು ಸಾವಿರ ಪ್ರತಿಗಳು),

 

ಚಂದ್ರಶೇಖರ ಪಾಟೀಲರ ನೇತೃತ್ವದಲ್ಲಿ ಪ್ರಕಟವಾದ `ಸಂಕ್ರಮಣ ಕಾವ್ಯ~ (1965), 1970ರಲ್ಲಿ ಪಿ.ಲಂಕೇಶ್ ಪ್ರಕಟಿಸಿದ `ಅಕ್ಷರ ಹೊಸ ಕಾವ್ಯ~ (1993ರಲ್ಲಿ ಪರಿಷ್ಕೃತ ಮುದ್ರಣ) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ `ಸುವರ್ಣ ಸಂಪುಟ~ (1980)- ಈ ಮುಂತಾದ ಐತಿಹಾಸಿಕ ಆಂಥಾಲಜಿಗಳ ಮಾಲೆಯೊಂದಿಗೆ ಕೊಂಡಿಯಂತಿದೆ.ಕೃತಿಯ ಪ್ರಸ್ತಾವನೆಯಲ್ಲಿ ಸಂಕಲನಕಾರರು ಕನ್ನಡಭಾಷೆಯನ್ನು ಮಾತನಾಡುವ ಜನಗಳು ವಾಸಿಸುವ ಪ್ರದೇಶದ ವಿವರ ಹಾಗೂ ಆ ಕಾಲಘಟ್ಟದ ಕವಿಗಳ ಒಟ್ಟು ಕೃತಿಗಳ ಸ್ಥೂಲ ಪರಿಚಯವನ್ನು ಮಾಡಿಕೊಡುತ್ತಾರೆ. ಇದರಲ್ಲಿ ಸಂಕಲನಕಾರರ ವಿವರಗಳು, ಮುನ್ನುಡಿ, ಆಯ್ದ ಕಾವ್ಯಭಾಗಗಳು ಹಾಗೂ ಪುಷ್ಪಮಾಲಿಕಾ ನಿಘಂಟು ಮತ್ತು ಪುಷ್ಪಮಾಲಿಕೆಯ ಅನುಕ್ರಮಣಿಕೆ ಎಂಬ ಐದು ಭಾಗಗಳಿವೆ.`ಬ್ರಾಹ್ಮಣ ಸಾಹಿತ್ಯ~ ವಿಭಾಗದಲ್ಲಿ ಜೈಮಿನಿ ಭಾರತ, ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಚಾಟುವಿಟ್ಠಲನ ಭಾಗವತ, ಮಹಲಿಂಗರಂಗನ ಅನುಭವಾಮೃತ ಕಾವ್ಯದಿಂದಾರಿಸಿದ ಭಾಗಗಳು ಇವೆ.

 

ಲಿಂಗಾಯತ ಸಾಹಿತ್ಯ ಭಾಗದಲ್ಲಿ ಭೀಮಕವಿಯ ಬಸವ ಪುರಾಣ, ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣ, ಸರ್ವಜ್ಞನ ತ್ರಿಪದಿಗಳು, ಹಾಗೂ ಷಡಕ್ಷರಿಯ ರಾಜಶೇಖರ ವಿಳಾಸದಿಂದ ಸಂಗ್ರಹಿಸಿದ ಭಾಗಗಳಿವೆ.

 

ಜೈನ ಸಾಹಿತ್ಯ ವಿಭಾಗದಲ್ಲಿ ಶಾಸ್ತ್ರಸಾರ ಹಾಗೂ ಧರ್ಮಪರೀಕ್ಷೆ ಕೃತಿಗಳಿಂದ ಆರಿಸಿದ ಪದ್ಯಗಳಿವೆ. ನೇಟಿವ್ ಕ್ರಿಶ್ಚಿಯನ್ ಶೀರ್ಷಿಕೆಯ ಅಡಿಯಲ್ಲಿ ಕ್ರಿಸ್ತ ಗೀತೆಗಳಿಂದ ದೇವಸ್ತೋತ್ರ, ಇಹಪರಬೇಧ ಹಾಗೂ ಸಾಯಂಕಾಲ ಗೀತಗಳನ್ನು ಆರಿಸಲಾಗಿದೆ.

 

ಕೃತಿಯಲ್ಲಿ ಒಟ್ಟು 1701 ಪದ್ಯಗಳನ್ನು ಸಂಕಲಿಸಲಾಗಿದೆ. ಆಯ್ದ ಭಾಗದ ಪ್ರತಿಯೊಂದರ ಆರಂಭದಲ್ಲಿಯೂ ಸಂಗ್ರಹವಾಗಿ ಕವಿಕಾವ್ಯಗಳ ಪರಿಚಯವಿದೆ. ಪ್ರತಿಪದ್ಯಗಳ ಬದಿಯಲ್ಲಿ ಆ ಪದ್ಯದ ಸಂಕ್ಷಿಪ್ತ ಸಾರಾಂಶವನ್ನು ಇಂಗ್ಲಿಷ್‌ನಲ್ಲಿ ನೀಡಲಾಗಿದೆ.

 

ಅಡಿಟಿಪ್ಪಣಿಗಳಾಗಿ ಕ್ಲಿಷ್ಟ ಪದಗಳ ಅರ್ಥಗಳನ್ನೂ ಅಗತ್ಯವಿರುವೆಡೆ ವಿಶೇಷ ವಿವರಣೆಗಳನ್ನೂ ಕೊಡಲಾಗಿದೆ. ಕೃತಿಯ ಕೊನೆಯಲ್ಲಿರುವ `ಪುಷ್ಪಮಾಲಿಕಾ ಶಬ್ದಕೋಶ~ 40 ಪುಟಗಳಷ್ಟಿದ್ದು ಅತ್ಯಂತ ಉಪಯುಕ್ತವಾಗಿದೆ.19ನೇ ಶತಮಾನದ ಮಧ್ಯಭಾಗದಿಂದ ಸುಮಾರು ಮೂರ್ನಾಲ್ಕು ದಶಕಗಳ ಕಾಲ ಪಠ್ಯವಾಗಿದ್ದ `ಕರ್ನಾಟಕ ಪ್ರಾಕ್ಕಾವ್ಯ ಮಾಲಿಕೆ~ ಗ್ರಂಥವು ಆ ಕಾಲದ ಒಂದು ಸದಭಿರುಚಿಯ ಸಂಕಲನವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry