ಕನ್ನಡ ಕಾವ್ಯದ ಚಾರ್ಲಿ ಚಾಪ್ಲಿನ್‌: ವಿ.ಜಿ. ಭಟ್ಟ

7
ವಿಮರ್ಶೆ

ಕನ್ನಡ ಕಾವ್ಯದ ಚಾರ್ಲಿ ಚಾಪ್ಲಿನ್‌: ವಿ.ಜಿ. ಭಟ್ಟ

Published:
Updated:

ರುವ ಕಂಬನಿಯೆಲ್ಲ ಈಗಲೇ ಹರಿಸದಿರು

ನಾಲ್ಕು ಹನಿಗಳು ಇರಲಿ ಕಣ್ಣಿನಲ್ಲಿ

ನಾ ಸತ್ತ ಮೇಲೆ ಉದುರಿಸಲು ಬೇಡವೆ ಅಷ್ಟು

ಹತ್ತು ಮಂದಿಯೆದುರು ಮಣ್ಣಿನಲ್ಲಿ?

(ಕಣ್ಣೀರು)ಅದರ ಅಪ್ಪ ಬಹಳ ದಪ್ಪ

ಪುಸ್ತಕವನು ಬರೆಯಿತು

ಅದನು ಏರಿ ಕೆಳಗೆ ಹಾರಿ

ಅದರ ಕಾಲು ಮುರಿಯಿತು.

(ಮಂಗನ ಅಪ್ಪನ ಮಹಾಗ್ರಂಥ)ಇಂಥ ಅಪ್ಪಟ ಅನುಭವಜನ್ಯ ವಕ್ರೋಕ್ತಿಯ, ಸರಳ ಸಹಜ ವಿವೇಕದ ಸಾಲುಗಳು ವಿ.ಜಿ. ಭಟ್ಟ (1923 – 1991) ಅವರದಲ್ಲದೆ ಇನ್ನಾರದಾಗಲು ಸಾಧ್ಯ? ನಮ್ಮ ಕೋಲ್ಮಿಂಚಿನಂಥ ಪ್ರಖರ, ನಿಖರ ಪ್ರತಿಭೆಯಿಂದ ಕನ್ನಡ ಸಂವೇದನೆಯನ್ನು ಹಿಗ್ಗಿಸಿದ ಅಪರೂಪದ ಕವಿ ವಿ.ಜಿ. ಭಟ್ಟರಿಗೆ ಅವರೇ ಹೋಲಿಕೆ. ಉತ್ತರ ಕನ್ನಡದ ಶರಾವತಿ ಸೆರಗಿನ ಕಡತೋಕಾದಲ್ಲಿ ಹುಟ್ಟಿದ ವಿ.ಜಿ. ಭಟ್ಟರು, ಹೊನ್ನಾವರ, ವಿಜಾಪುರ, ಸಾಂಗ್ಲಿ, ಕೊಲ್ಹಾಪುರಗಳಲ್ಲಿ ಓದಿ ನಂತರ, ಮುಂಬಯಿಯಲ್ಲಿ ಖಾದೀ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಬದುಕನ್ನು ಪೂರೈಸಿದವರು.

ಕಡು ಬಡತನದ ಎಳವೆಯ ದಿನಗಳ ನೆನಪುಗಳನ್ನೆಂದೂ ನಂಜಾಗಿಸಿಕೊಳ್ಳದೆ, ಸೂಕ್ಷ್ಮವಾದ ವಿನೋದದಿಂದ ಆತ್ಮ ಲೇವಡಿಯಿಂದ ಮಾಗುತ್ತಾ ತಮ್ಮದೇ ಹದದಲ್ಲಿ ಹರಿತಗೊಂಡವರು. ಅವರ ‘ಕಾವ್ಯವೇದನೆ’ (1951) ಕನ್ನಡಕ್ಕೆ ಆಧುನಿಕ ಮನೋಧರ್ಮದ ಆಗಮನ ಸಾರಿದ ಮೊದಲ ಸಂಕಲನ ಎಂದು ಹೇಳಬಹುದು. ತಮ್ಮ ಸೂಕ್ಷ್ಮ ವಿಡಂಬನೆಯ ಸೂಜಿಮಲ್ಲಿಗೆಯಿಂದ ನಿತ್ಯದ ಪೊಳ್ಳು ಬಲೂನುಗಳನ್ನು, ಮುಖವಾಡಗಳನ್ನು, ವೇಷಗಳನ್ನು ಚುಚ್ಚುತ್ತಲೇ ಸರಳ ಸಂಸಾರಿಯ ಪಾತ್ರಗಳ ಮೂಲಕವೇ ಅನುಭಾವಿಯಾಗಿ ಬೆಳಕನ್ನು ಬೆಂಬತ್ತಿ ‘ಅರಿಯುತೇನೆ ನಡೆ’ದ ವಿ.ಜಿ. ಭಟ್ಟರ ಸಾವಿರಾರು ಕವಿತೆಗಳು 23 ಸಂಕಲನಗಳಲ್ಲಿ ಪ್ರಕಟಗೊಂಡವು.

ಆದರೆ, ಮುಖ್ಯ ಆಖ್ಯಾನದಿಂದ ಆಚೆಗೇ ಉಳಿದ ಯಕ್ಷಗಾನದ ಕೋಡಂಗಿಯಂತೆ, ಮುಂಬಯಿಯಲ್ಲಿ ಒಂದು ಬಗೆಯ ಅಜ್ಞಾತವಾಸದಲ್ಲಿಯೇ ಮುಗುಳು ನಗುತ್ತ ಬರೆದುಕೊಂಡಿದ್ದ ವಿ.ಜಿ. ಭಟ್ಟರ ಬಗ್ಗೆ ನಮ್ಮ ಸಾಹಿತ್ಯಕ ಜಾಯಮಾನ ಅಂಥ ಎಚ್ಚರ, ಸ್ಪಂದನ ತೋರಿಸಿದಂತಿಲ್ಲ! ದಿನಕರ ದೇಸಾಯಿಯಂತೆ ವಿಡಂಬನೆಯ ಮೂಲಕವೇ ಮೂರ್ತಿಭಂಜನೆಯ ಮೂಲಕವೇ ಸಾಮಾಜಿಕ ಅಸಮಾನತೆಯ ಕುರಿತು ಎಂದೋ ಬಂಡಾಯವೆದ್ದ ಈ ಕವಿಯ ಕುರಿತು ಬಂಡಾಯ ಚಳವಳಿಯ ಹೆಚ್ಚಿನ ಬರಹಗಾರರಿಗೂ ಗೊತ್ತಿದ್ದಂತಿಲ್ಲ.

ಲಂಕೇಶರು ತಮ್ಮ ‘ಅಕ್ಷರ ಹೊಸ ಕಾವ್ಯ’ದಲ್ಲಿ ವಿ.ಜಿ. ಭಟ್ಟರನ್ನು ಸೇರಿಸಿ, ಉತ್ಸಾಹದ ಮಾತುಗಳನ್ನಾಡಿದ್ದರಿಂದ, ಅವರ ‘ಆತ್ಮಶೋಧನೆ’ಯೆಂಥ ರಚನೆ ಕೆಲವರ ಮನಸ್ಸಿನಲ್ಲಿ ಉಳಿಯುವಂತಾಯಿತು. (ಆತ್ಮವನ್ನು ಅಲ್ಲಿ ಇಲ್ಲಿ, ಹೂವಲ್ಲಿ, ಮಕ್ಕಳ ಕಂಗಳಲ್ಲಿ ಅರಸುತ್ತ ಅದು ಎಲ್ಲೂ ಸಿಗದೆ ಕೊನೆಗೆ ‘ಕಿಟೆಲ್‌ ಕೋಶದ ನೂರಾ ಐವತ್‌ ಮೂರನೇ ಪುಟದಲ್ಲಿ’ ಸಿಗುವ ವ್ಯಂಗ್ಯ ಈ ಕವಿತೆಯಲ್ಲಿದೆ). ಅವರ ‘ಗಂಡಿಗೆ’ ಪದ್ಯಕ್ಕೆ ಮಿಗಿಲಾದ ಸ್ತ್ರೀವಾದಿ ಪದ್ಯ ಬೇರಿಲ್ಲ. ವಿವಾಹಬಾಹೀರ ಆಕರ್ಷಣೆಯ ಕುರಿತೂ ಸೂಕ್ಷ್ಮ ತುಂಟತನದಿಂದ ಬರೆದ ಮೊದಲ ಕವಿಯೂ ಇವರೇ! (‘ಉತ್ತರಕಾಂಡ’ ಸಂಕಲನ).ಭಟ್ಟರ ಬಂಡಾಯ ಗುಣದಿಂದಾಗಿಯೇ, ಬಹುಶಃ ಪ್ರಗತಿಶೀಲರ ಬಂಧುವಾಗಿದ್ದ ನಿರಂಜನರಿಗೆ ಅವರ ಬಗ್ಗೆ ವಿಶೇಷ ಒಲವಿತ್ತು. ಮುಂಬಯಿಗೆ ಬಂದಾಗೆಲ್ಲ ನಿರಂಜನ ಮತ್ತು ಅನುಪಮಾ ಭಟ್ಟರಲ್ಲಿಯೇ ಇರುತ್ತಿದ್ದರು. ಇದಕ್ಕೂ ಮುನ್ನ ಧಾರವಾಡದಲ್ಲಿದ್ದಾಗಲೂ ಬೇಂದ್ರೆಯವರ ಗಂಭೀರ ಕಾವ್ಯ ಭಂಗಿಯ ಕುರಿತು ಆರೋಗ್ಯಕರ ವಿನೋದ ಮಾಡುವ ಧೈರ್ಯ ತೋರಿದ ಮೊದಲಿಗ ಈ ಭಟ್ಟರೇ.

ಅವರದೊಂದು ಚುಟುಕದಲ್ಲಿ, ಯಾರೋ, ಕವಿಯೊಬ್ಬರ ಬಳಿ ಬಂದು ಕವಿತೆಯ ಅರ್ಥ ಕೇಳ್ತಾನೆ, ಆಗ ‘ಕವಿ ಕೂಡಲೇ ನೋಡಿದನು ಕೀರ್ತಿಯತ್ತ!’ ಅಂತ ಭಟ್ಟರು ಬರೀತಾರೆ. ಇಲ್ಲಿ ಕವಿ ‘ಕೀರ್ತಿ’ ಯಾರು ಅಂತ ಊಹಿಸುವಷ್ಟಾದರೂ ಧೈರ್ಯವನ್ನು ಅವರು ಓದುಗರಿಗೆ ಬಿಟ್ಟಿದ್ದರು. ತವರಿಂದ ಮಡದಿಗೆ ಬೇಗ ಮರಳಲು ವಿನಂತಿಸಿದ ಗೃಹಸ್ಥನೊಬ್ಬನ ಕವಿತೆಯೂ ತುಂಬಾ ಜನಪ್ರಿಯವಾಗಿತ್ತು. ಅವನು ಹೇಳುತ್ತಾನೆ–ಚಳಿಗಾಲವಾದರೂ ನಮಗೇನು? ರಗ್ಗುಂಟು

ಬೆಚ್ಚಗಿದೆ ನಿನಗಿಂತ ನೂರು ಪಟ್ಟು

ಪಾಪ ಬೆಕ್ಕಿನ ಮರಿಯು ಕೂಗಿ ಸಾಯಲು ಬಿತ್ತು

ಒಲೆ ಬೆಚ್ಚಗಿಲ್ಲದೆಯೆ ದಿಕ್ಕುಗೆಟ್ಟುಎದೆ ಬೆಚ್ಚಗಾಗಿಸುವ ಇಂಥ ಅಸಂಖ್ಯ ಸಾಲುಗಳು ಭಟ್ಟರ ಕಾವ್ಯದ ಕೈತೋಟದಲ್ಲಿ ಸಿಗುತ್ತವೆ. ಅವರ ‘ಪಲಾಯನ’, ‘ತುಂಟನ ಪದಗಳು’, ‘ಕಾವ್ಯ ವೇದನೆ’, ‘ಕಿಷ್ಕಿಂದೆ’, ‘ಆತ್ಮಗೀತೆ’, ‘ಲಹರಿ’, ‘ಉತ್ತರಕಾಂಡ’, ಮರಳಿ ಬಂದ ಕವಿತೆ’ – ಇಂಥ  23 ಸಂಗ್ರಹಗಳ ಸಾವಿರಾರು ಕವಿತೆಗಳಿಂದ, 400 ಕವಿತೆಗಳನ್ನು ಆಯ್ದು ಶಿರಸಿಯ ಕುಮುದಾ ಜಿ.ಎಂ. ಒಂದು ಅಮೂಲ್ಯ ಸಂಕಲನವನ್ನು ಈಗ ಸಂಪಾದಿಸಿದ್ದಾರೆ. ಭಟ್ಟರ ಸೊಸೆ ಡಾ. ಲಲಿತಾ ರಘುವೀರ ಭಟ್ಟ ಅದನ್ನು ಪ್ರಕಟಿಸಿದ್ದಾರೆ. ಇವರಿಬ್ಬರನ್ನೂ ಈ ವಾತ್ಸಲ್ಯಪೂರ್ಣ ಅಷ್ಟೇ ಅರ್ಥಪೂರ್ಣ ಸಕಾಲಿಕ ಸಾಹಸಕ್ಕಾಗಿ ಎಷ್ಟು ಅಭಿನಂದಿಸಿದರೂ ಸಾಲದು.ಕವಿತಾ ಬಂದಾಗ ಬರೇತೇನೆ

ಬರದಿದ್ರೆ ಗೊರೇತೇನೆ

ಇವನ ಗುರ್ತಿದೆ ಅಂತ ಬರ್ತದೇ!

ಅಂತಾರೆ ಭಟ್ಟರು. ಕವಿತೆಗೆ ಭಟ್ಟರ ಗುರ್ತಿದೆಯಂತೆ. ಆದರೆ ನಮಗೇ ಅವರ ಗುರ್ತಿರದೆ ಹೋದರೆ ಹೇಗೆ? ಈ ಪುಸ್ತಕ ನಮಗೆಲ್ಲ ತುರ್ತಾಗಿ ಬೇಕಾಗಿರುವ ಅಂಥ ಗುರ್ತಿಗೆಂದೇ ಬಂದಿರುವ ಕೊಡುಗೆ. ಅವರ ಯಾನದ ಅದೃಶ್ಯ ಗ್ರಾಫ್‌ ಒಂದನ್ನು ಈ ಸಂಕಲನದಲ್ಲಿ ನಾವು ಮನಗಾಣಬಹುದಾಗಿದೆ.

‘ಈಗ ನಿನಗೆ ಕೊಟ್ಟ ಮುದ್ದು ಹೋಯಿತೆಲ್ಲಿಗೆ?’ ಎಂದು ಮೊದಲ ಸಂಕಲನದಲ್ಲಿ ನಲ್ಲೆಯನ್ನು ಕೇಳುವ ಈ ‘ತುಂಟ’ ಕ್ರಮೇಣ ತನ್ನ ಯಾನದಲ್ಲಿ ‘ಈ ಗಾಳಿಯ ಬೆನ್ನ ಮೇಲೆ, ಮೂರ್ತಿಯೊಂದ ಕೆತ್ತಬೇಕು’ ಎನ್ನುವ, ಶೂನ್ಯದ ‘ನೆಂಟ’ನಾಗುತ್ತಾನೆ. ಪೂರ್ಣಮಾನವನ ನಿರ್ಮಾಣದಲ್ಲಿ ‘ಅವಿರತ ಸುರತನು, ಸೃಜನದಿ ನಿರತನು’ ಆಗಿರುವ ಪರಮಾತ್ಮನು ತನ್ನ ಕಾರ್ಖಾನೆಯ ಅರೆ ಬರೆ ಅಪೂರ್ಣ ಮಾನವರನ್ನು (rejections) ಭೂಮಿಗೆಸೆಯುತ್ತಾನಂತೆ! ಪರಮಾತ್ಮನ ಪಾಡು ಅದಾದರೆ ಕವಿಯೆಂಬ ಸೃಷ್ಟಿಶೀಲನ ಪಾಡೇನು?:ಗೊಮ್ಮಟನಂತಹ ಆಕೃತಿ ಕಟೆಯಲು

ಇಲ್ಲವು ಈತ ಸಮರ್ಥ

ಚಿಣ್ಣರಾಡಲಿಕೆ ಮಣ್ಣಿನ ಗೊಂಬೆಯ

ರಚಿಸಿಯೆ ಆದ ಕೃತಾರ್ಥಹೇಗೂ ತನ್ನ ಕಿಸೆಗೆ ಬಂದ ‘ಖೊಟ್ಟಿ’ ನಾಣ್ಯವೊಂದನ್ನು ಚಲಾಯಿಸಲಾಗದೆ, ಕುರುಡನ ಕೈಗೂ ಕೊಡಲಾಗದೆ, ಕೊನೆಗೆ, ದೇವರ ಡಬ್ಬಿಗೆ ಹಾಕುವ  ಪ್ರಸಂಗವು ಮಾರ್ಮಿಕವಾಗಿದೆ. ದೇವರು, ಮಂತ್ರಗಳು, ಸ್ವಾಮಿಗಳು ಪದೇ ಪದೇ ಭಟ್ಟರ ಕಿಡಿ ನೋಟಕ್ಕೆ ತುತ್ತಾಗುತ್ತಾರೆ. (ಇವೆಲ್ಲಾ 1950–1970ರ ನಡುವಿನ ರಚನೆಗಳು ಎಂಬುದನ್ನು ಗಮನಿಸಬೇಕು. ಆಗ ರಮ್ಯ ಮತ್ತು ನವ್ಯದ ಉಲ್ಬಣದ ಕಾಲ) ವಿಮರ್ಶಕ ಎಚ್.ಆರ್. ಅಮರನಾಥ್ ವಿ.ಜಿ. ಭಟ್ಟರ ಬಗ್ಗೆ ‘ವಿದೂಷಕ ಅವಧೂತವಾದ ಬಗೆ’– ಎಂದು ಬರೆದಿದ್ದರು. ಬಹುಶಃ ಭಟ್ಟರ ಕಾವ್ಯಕ್ಕೆ ಇದಕ್ಕಿಂತ ಸೂಕ್ತ ವ್ಯಾಖ್ಯೆ ಬೇರಿಲ್ಲ.

ಇಲ್ಲಿಯ ಕವಿತೆಗಳಲ್ಲಿ ಒಂದೋ ಅವಧೂತ ವಿದೂಷಕನ ವೇಷದಲ್ಲಿರುತ್ತಾನೆ. ಅಥವಾ ವಿದೂಷಕನ ಅಂಗಿಯಲ್ಲಿರುತ್ತಾನೆ. ಇನ್ನೇನು ಕವಿತೆ ದಾರ್ಶನಿಕ ಭಂಗಿ ತಾಳುತ್ತದೆ ಅನ್ನುವಷ್ಟರಲ್ಲಿ ಯಾವುದೋ ಸಾಲಿನಲ್ಲಿ ಭಟ್ಟರು ಚಾಪ್ಲಿನ್‌ನಂತೆ ಕಣ್ಣು ಹೊಡೆದುಬಿಡುತ್ತಾರೆ. ಆಗ ಉಂಟಾಗುವ ಬಿಡುಗಡೆಯೇ ಇವರ ರಚನೆಗಳ ಜೀವಾಳವಾಗಿದೆ. ಭಟ್ಟರ ಕಾವ್ಯ ಜೀವನದ ಉತ್ತರಾರ್ಧದಲ್ಲಿ ಅವಧೂತನೇ ಹೆಚ್ಚು ದಾದಾಗಿರಿ ನಡೆಸಿದಂತಿದೆ. ನನಗಂತೂ ಅವರ ವಿದೂಷಕ ಪಾತ್ರವೇ ಹೆಚ್ಚು ಆಪ್ತ.

‘Sublime ಮತ್ತು  redculousಗಳ ‘ಕಲೆ’ಬೆರಕೆಯ ಆಕಸ್ಮಿಕ ವಿಸ್ಮಯವೇ ವಿ.ಜಿ  ಭಟ್ಟರ ವೈಖರಿ’ ಎಂದು ಗೌರೀಶ ಕಾಯ್ಕಿಣಿ ಮೂವತ್ತು ವರ್ಷಗಳ ಹಿಂದೆ ಹೇಳಿದ್ದು ಖಂಡಿತ ಉತ್ಪ್ರೇಕ್ಷೆಯಲ್ಲ ಅಂತ ಈಗ ಭಟ್ಟರನ್ನು ಓದುವಾಗ ಹೆಚ್ಚು ಮನವರಿಕೆ ಆಗುತ್ತಿದೆ. ಇದೇ ಭಟ್ಟರು ಮನಸ್ಸನ್ನು ಸದ್ದಿರದೆ ಸಂತೈಸಬಲ್ಲಂಥ ಪ್ರಶಾಂತ ಕವಿತೆಗಳನ್ನು ಬರೆಯುತ್ತಾರೆ. ಉದಾಹರಣೆಗೆ:ಗೂಡು ಕಟ್ಟುವ ಕಾಗೆ ಕಂಡೆ

ಗುಟುಕು ನೀಡುವ ಗುಬ್ಬಿ ಕಂಡೆ

ತೊಟ್ಟಿಲಲಿ ನಿದ್ರಿಸಿದ ಹಸುಳೆಯು

ನಸು ನಗುವುದನು ಕಂಡೆನು

ಧಾರೆಯೆರೆಯುವ ಕೈಯ ಕಂಡೆ

ಸತ್ಯ ನುಡಿಯುವ ಮುಖವ ಕಂಡೆ

ಅಮರ ಲೋಕದ ಕಿಡಕಿಯಂತಹ

ಕಂಗಳನು ಸಹ ಕಂಡೆನು.(ಕಂಡೆ)

ಶಬ್ದಗಳಲ್ಲೇ ಅರ್ಥವ ಹುಡುಕುವ

ಶ್ರಮವೆಲ್ಲಾ ತಿಳಿ ವ್ಯರ್ಥ

ನಿನ್ನೊಳಗೇನೇ ಸುಪ್ತವಾಗಿಹುದು

ಎಲ್ಲದಕೂನೂ ಅರ್ಥ

ನಿದ್ದೆ ಹೋದ ಅರ್ಥಗಳನ್ನು ಎಚ್ಚರ

ಗೊಳಿಸಲು ಬರುವವು ಶಬ್ದ

ಅರ್ಥಗಳಿಗೆ ಸಹ ಸಮಾಧಿ ಹತ್ತಿರೆ

ಶಬ್ದ ಬಂದರೂ ಸ್ತಬ್ಧ(ಶಬ್ದ, ಅರ್ಥ)

ಹಳೆಯ ಕಟ್ಟಿಗೆಯೆ ಲೇಸು ಉರಿಯಲಿಕೆ

ಹಳೇ ಗ್ರಂಥಗಳು ಅರಿಯಲಿಕೆ

ಹಳೆಯ ಮಿತ್ರರೇ ಲೇಸು ಬೆರೆಯಲಿಕೆ

ವಿಶ್ವಾಸದಿ ಎದೆ ತೆರೆಯಲಿಕೆ(ಲೇಸು)

ಕನ್ನಡದ ಹೊಸ ಮನಸ್ಸುಗಳು ಅವಶ್ಯವಾಗಿ ವಿ.ಜಿ . ಭಟ್ಟರನ್ನು ಓದಬೇಕು. ಯಾವ ಸಾಮಯಿಕ ಚಳವಳಿಗೂ, ಮೇಲ್ಪದರಿನ ಆಮಿಷಗಳಿಗೂ ಒಳಗಾಗದೇ, ತನ್ನದೇ ಸಾಕ್ಷಿಪ್ರಜ್ಞೆಯ ಸೊಲ್ಲುಗಳ ಮೂಲಕವೇ, ತನ್ನದೇ ಆದ ಕಾವ್ಯಮಾನವನ್ನು ಅತ್ಯಂತ ಲವಲವಿಕೆ, ಎಚ್ಚರ ಮತ್ತು ನಿರಹಂಕಾರದಿಂದ ನಡೆಸಿದ ಭಟ್ಟರ ಕಾವ್ಯ ವೈಖರಿಯನ್ನು ಮತ್ತೆ ಮತ್ತೆ ಆಸ್ವಾದಿಸುವುದು ನನ್ನ ಪಾಲಿಗಂತೂ ಒಂದು ಚಿಕಿತ್ಸಕ ಸಂಗತಿಯಾಗಿದೆ. ಈ ಪುಸ್ತಕ ಬಂದಲಾಗಾಯ್ತಿನಿಂದ ನನ್ನ ಕೈಗಳು ಮತ್ತೆ ಮತ್ತೆ ಈ ಪುಸ್ತಕವನ್ನು ತೆರೆಯುತ್ತಿವೆ. ಕೊನೆತನಕವೂ ತನ್ನ ಹುರಿಯನ್ನೂ ಕಿಡಿಯನ್ನೂ ಹಾಗೇ ಇಟ್ಟುಕೊಂಡ ವಿ.ಜಿ. ಭಟ್ಟರ ಕೊಟ್ಟ ಕೊನೆಯ ಪದ್ಯದ ಕೆಲ ಸಾಲುಗಳೊಂದಿಗೆ ಈ ಟಿಪ್ಪಣಿ ಮುಗಿಸುತ್ತೇನೆ.ಪ್ರಾರ್ಥನೆ (ಅಂತಿಮ)

ಒಂದೇ ಪ್ರಾರ್ಥನೆ ಪ್ರಭುವೇ ಲಾಲಿಸು

ಲಾಲಿಸಿದರೆ ಮಾತ್ರಾ ಸಾಲದು, ಪರಿಪಾಲಿಸು

ಒಂದೇ ತುತ್ತನು ಸರೀ ಜಗಿದು ನುಂಗುವ ಮುಂಚೇ

ಇನ್ನೊಂದನು ನಾ ಬಾಯಿಗೆ ತುರುಕಿಸದಂತೇ

ನೋಡಿಕೋ, ಕಾಪಾಡಿಕೋಒಂದೇ ದಿನ ಎರಡು ಮನೆಯಿಂದಾಮಂತ್ರಣ

ಊಟಕೆ ಬರದಂತೆ ಇಡು ನಿಯಂತ್ರಣ

ಸಂಜೆ ಮಲಗಿದವ ಮರುದಿನ ಏಳದಂತೇ

ಒಯ್ದುಕೋ, ಹಾರಿದ ಶ್ವಾಸ ಯಾರೂ ಕೇಳದಂತೇ

ಜಗದೋದ್ಧಾರಕಾ ಜಾಣಾ

ಮುಂದೆಂದೂ ಕರುಣಿಸದಿರು ಪ್ರಾಣಾ.

–ಜಯಂತ ಕಾಯ್ಕಿಣಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry