ಕನ್ನಡ ಕೃತಿಗೆ ಪ್ರತ್ಯೇಕ ಮಳಿಗೆ: ಸಲಹೆ

7

ಕನ್ನಡ ಕೃತಿಗೆ ಪ್ರತ್ಯೇಕ ಮಳಿಗೆ: ಸಲಹೆ

Published:
Updated:
ಕನ್ನಡ ಕೃತಿಗೆ ಪ್ರತ್ಯೇಕ ಮಳಿಗೆ: ಸಲಹೆ

ಬೆಂಗಳೂರು: `ಊರಿಗೆ ಶೋಭೆ ನೀಡುವಂತಹುದು ಪುಸ್ತಕದ ಮಳಿಗೆ. ಬೆಂಗಳೂರಿಗೆ ಶೋಭೆ ತಂದುಕೊಟ್ಟ ಮಳಿಗೆ ಸಪ್ನ ಪುಸ್ತಕ ಮಳಿಗೆ~ ಎಂದು ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಬಣ್ಣಿಸಿದರು.ನಗರದ ರೆಸಿಡೆನ್ಸಿ ರಸ್ತೆಯಲ್ಲಿ ಬುಧವಾರ ನಡೆದ `ಸಪ್ನ ಬುಕ್ ಹೌಸ್~ನ ಎಂಟನೇ ಮಳಿಗೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ಇಲ್ಲಿನ ಮಳಿಗೆಯಲ್ಲಿ 7,500 ಚದರ ಅಡಿ ಜಾಗವನ್ನು ಕನ್ನಡ ಪುಸ್ತಕಗಳಿಗಾಗಿ ಮೀಸಲಿಟ್ಟಿರುವುದು ಶ್ಲಾಘನೀಯ. ಸಪ್ನ ಸಂಸ್ಥೆ ಕನ್ನಡದ ಪುಸ್ತಕಗಳಿಗೆ ಮೀಸಲಾದ ಮಳಿಗೆಯೊಂದನ್ನು ತೆರೆಯಬೇಕು~ ಎಂದು ಸಲಹೆ ನೀಡಿದರು. `ಸಾಹಿತಿಗಳಿಗೆ ಹಾಗೂ ಕಲಾವಿದರಿಗೆ ಪ್ರಿಯವಾದ ಊರು ಕೋಲ್ಕತ್ತ. ಅಲ್ಲಿಗೆ ಹೋದರೆ ಒಂದು ದಿನ ಪುಸ್ತಕಗಳನ್ನು ನೋಡಲು ಮೀಸಲಿಡಬೇಕಿದೆ~ ಎಂದರು. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ನೀಡಿ, `ಪುಸ್ತಕ ಮಳಿಗೆಗಳ ಸಂಖ್ಯೆ ಹೆಚ್ಚಿದಲ್ಲಿ ಸಮಾಜ ಹೆಚ್ಚು ಸುಸಂಸ್ಕೃತ ಆಗುತ್ತದೆ. ಪುಸ್ತಕ ಒಂದು ಯುಗದಿಂದ ಮತ್ತೊಂದು ಯುಗಕ್ಕೆ ಜ್ಞಾನ ಹಸ್ತಾಂತರಿಸುತ್ತದೆ~ ಎಂದು ಹೇಳಿದರು.ಹಿರಿಯ ಇತಿಹಾಸತಜ್ಞ ಡಾ.ರಾಮಚಂದ್ರ ಗುಹಾ ಮಾತನಾಡಿ, `ಭಾರತದ ಭಾಷಾ ಸಂಸ್ಕೃತಿ ಅದ್ಭುತವಾದುದು. ನಮ್ಮ ಭಾಷಾ ಸಂಸ್ಕೃತಿ ರಾಜ್ಯ ಭಾಷೆ, ರಾಷ್ಟ್ರ ಭಾಷೆ ಹಾಗೂ ವಿಶ್ವ ಭಾಷೆ ಪರಿಕಲ್ಪನೆಯಿಂದ ಕೂಡಿದೆ~ ಎಂದರು. `ಸಪ್ನ ಬುಕ್ ಹೌಸ್~ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಮಾತನಾಡಿ, `ಬೆಂಗಳೂರಿನಲ್ಲಿ ಐದು, ಮಂಗಳೂರು ಹಾಗೂ ಮೈಸೂರಿನಲ್ಲಿ ತಲಾ ಒಂದು ಸಪ್ನ ಮಳಿಗೆಗಳಿದ್ದವು. ಈಗ ಮಳಿಗೆ ಸಂಖ್ಯೆ 8ಕ್ಕೆ ಏರಿದೆ~ ಎಂದರು.`ಸಂಸ್ಥೆಯು ಈವರೆಗೆ 3,600ಕ್ಕೂ ಅಧಿಕ ಕೃತಿಗಳು, 500ಕ್ಕೂ ಹೆಚ್ಚು ಪಠ್ಯಪುಸ್ತಕಗಳನ್ನು ಪ್ರಕಟಿಸಿದೆ. ಪ್ರತಿ ಮಳಿಗೆಯಲ್ಲೂ ಕನ್ನಡ ಪುಸ್ತಕಗಳಿಗೆ ಪ್ರತ್ಯೇಕ ವಿಭಾಗ ಇದೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಹಾಗೂ ಹೊರರಾಜ್ಯಗಳಲ್ಲೂ ಮಳಿಗೆ ತೆರೆಯಲಾಗುವುದು~ ಎಂದು ಅವರು ಘೋಷಿಸಿದರು.ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಳಿಗೆ ಉದ್ಘಾಟಿಸಿ ಶುಭ ಹಾರೈಸಿದರು. ಸಂಸದ ಪಿ.ಸಿ. ಮೋಹನ್, ಮಾಜಿ ಸಚಿವ ಮುಮ್ತಾಜ್ ಅಲಿ ಖಾನ್, `ಸಪ್ನ ಬುಕ್ ಹೌಸ್~ ಅಧ್ಯಕ್ಷ ಸುರೇಶ್ ಷಾ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry