ಬುಧವಾರ, ಏಪ್ರಿಲ್ 14, 2021
29 °C

ಕನ್ನಡ ಕೋಗಿಲೆಗಳ ಹಾಡುಪಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ತಾವು ಹಾಡಿದ ಟ್ರ್ಯಾಕ್ ಗೀತೆಯ ಪ್ರತಿ ಹಿಡಿದುಕೊಂಡು ತಾವೇ ವಿಮಾನ ಹತ್ತಿ ಮುಂಬೈಗೆ ಹೋಗಿ, ಶ್ರೇಯಾ ಘೋಷಾಲ್ ಕೈಲಿ ಆ ಹಾಡನ್ನು ಹಾಡಿಸಿಕೊಂಡು ಬಂದ ಕನ್ನಡದ ಗಾಯಕಿಯ ಪರಿಸ್ಥಿತಿ, ಮನಸ್ಥಿತಿ ಹೇಗಿರಬೇಡ?~ ಲಹರಿ ಆಡಿಯೋ ಕಂಪೆನಿಯ ವೇಲು ಆ ದಿನ ವಿಷಾದ ಬೆರೆಸಿದ ಭಾವದಲ್ಲಿ ಹೀಗೆ ಹೇಳಿಕೊಂಡರು. ಹಾಗೆ ಮುಂಬೈಗೆ ಹೋಗಿಬಂದ ಕನ್ನಡದ ಗಾಯಕಿ ಅನುರಾಧಾ ಭಟ್.ಟ್ರ್ಯಾಕ್‌ಗೆ ಹಾಡುತ್ತಲೇ ದಶಕಗಳನ್ನು ಸವೆಸಿರುವ ಕನ್ನಡದ ಗಾಯಕ-ಗಾಯಕಿಯರು ನಮ್ಮಲ್ಲಿದ್ದಾರೆ. ಇನ್ನು ಕೆಲವರು ತಪ್ಪದೇ ರಿಯಾಜ್ ಮಾಡುತ್ತಾ ಸಂಗೀತ ಧ್ಯಾನದಲ್ಲಿ ನಿರತರು. ಆಗೀಗ ಅವರಿಗೆ ಸಿನಿಮಾದಲ್ಲಿ ತಮ್ಮದೇ ಹಾಡು ಉಳಿಯುತ್ತದೆ ಎಂದೆನಿಸಿದಾಗ ಸಣ್ಣ ನಿರೀಕ್ಷೆಯ ಮಿಂಚು.ಆಮೇಲೆ ಮಾರುಕಟ್ಟೆಯ ತಂತ್ರದ ಕಾರಣಕ್ಕೋ ನಿರ್ಮಾಪಕರ ಬೇಡಿಕೆಯಿಂದಲೋ ಅದೇ ಹಾಡಿಗೆ ಪರಭಾಷಾ ಗಾಯಕ, ಗಾಯಕಿಯರ ಕಂಠ ಬಂದಾಗ ಒಳಗೊಳಗೇ ನೊಂದುಕೊಳ್ಳುತ್ತಾರೆ.ಈಗ ಇರುವ ಸಮಸ್ಯೆ ಇದೊಂದೇ ಅಲ್ಲ. ದೊಡ್ಡ ಪಿಚ್‌ನಲ್ಲಿ ಹಾಡುವ ಪಿಚ್ಚಳ್ಳಿ ಶ್ರೀನಿವಾಸ್ ಅವರ ಗೀತೆಯೊಂದನ್ನು ಉಪೇಂದ್ರ ಅವರಿಂದ ಹಾಡಿಸಿ, ಮಾರುಕಟ್ಟೆಯಲ್ಲಿ ಪ್ರಚಾರಕ್ಕೆ ಅದನ್ನು ಬಳಸಿಕೊಳ್ಳಲಾಗುತ್ತಿದೆ. ಪಿ.ಬಿ.ಶ್ರೀನಿವಾಸ್ ನಡೆದು ಬರುತ್ತಿದ್ದರೆ, `ಶರೀರ ಇಲ್ಲಿ, ಶಾರೀರ ಅಲ್ಲಿ~ ಎನ್ನುತ್ತಿದ್ದ ರಾಜ್‌ಕುಮಾರ್ ಆಮೇಲೆ ತಾವೇ ಗಾಯಕರಾದರು. ಅವರ ಕಂಠದ ಶಕ್ತಿಯನ್ನು ಖುದ್ದು ಪಿ.ಬಿ.ಎಸ್ ಅನುಮೋದಿಸಿ ಬೆನ್ನುತಟ್ಟಿದರು.ಪರಭಾಷೆಯವರಾದರೂ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕನ್ನಡದ ನಾಯಕ ನಟರ ಕಂಠಕ್ಕೆ ತಕ್ಕಂತೆ ತಮ್ಮ ಕಂಠ ಬದಲಿಸಿಕೊಂಡು ದಶಕಗಟ್ಟಲೆ ಹಾಡಿದ್ದಿದೆ.ಈಗ ಮಾರುಕಟ್ಟೆ ಬದಲಾಗಿದೆ ಎಂಬ ನೆಪದಲ್ಲಿ ನಿರ್ಮಾಪಕರು ಗಾಯಕರನ್ನು ಲಕ್ಷ್ಯಕ್ಕೇ ತೆಗೆದುಕೊಳ್ಳದೆ ಪ್ರಚಾರ ತಂತ್ರ ಬಳಸತೊಡಗಿದ್ದಾರೆ. }ಕೆಲವೇ ವರ್ಷಗಳ ಹಿಂದೆ ಗಾಯಕಿ ನಂದಿತಾ ಈ ಬಗ್ಗೆ ದುಃಖ ತೋಡಿಕೊಂಡಿದ್ದರು. ತಾವು ಹಾಡಿ ಸಂಭಾವನೆ ಪಡೆದ ಎರಡು ಗೀತೆಗಳು- ಸೀಡಿ ಮಾರುಕಟ್ಟೆಗೆ ಬರುವ ಹೊತ್ತಿಗೆ- ಶ್ರೇಯಾ ಘೋಷಾಲ್ ಕಂಠಕ್ಕೆ ಪರಿವರ್ತನೆಯಾದ್ದ್ದದು ಹೇಗೆಂದು ಪ್ರಶ್ನಿಸಿದ್ದರು. ಒಂದು- `ಮಿಲನ~ ಚಿತ್ರದ `ಮದರಂಗಿಯಲ್ಲಿ...~ ಹಾಡು. ಮತ್ತೊಂದು- `ಮಾತಾಡ್ ಮಾತಾಡ್ ಮಲ್ಲಿಗೆ~ ಚಿತ್ರದ ಗೀತೆ.ಎರಡೂ ಚಿತ್ರದ ಸಂಗೀತ ನಿರ್ದೇಶಕ ಮನೋಮೂರ್ತಿ. ತಮ್ಮ ಕಂಠದ ಜಾಗದಲ್ಲಿ ಶ್ರೇಯಾ ಕಂಠ ಬಂದದ್ದು ಹೇಗೆ ಎಂದು ನಂದಿತಾ ಪ್ರಶ್ನಿಸಿದಾಗ ಮನೋಮೂರ್ತಿ ಹೇಳಿದ್ದು: ನಿರ್ಮಾಪಕ ಹಾಗೂ ನಿರ್ದೇಶಕರ ಬಯಕೆಯ ಕಾರಣಕ್ಕೆ ಧ್ವನಿ ಬದಲಾಯಿತು.ಸ್ಥಳೀಯ ಗಾಯಕ-ಗಾಯಕಿಯರ ಈ ದುಃಸ್ಥಿತಿ ಕಾಲದಿಂದ ಕಾಲಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಕನ್ನಡದ ಕೆಲವು ಸಿನಿಮಾ ಹಾಡುಗಾರರು ಇದಕ್ಕೆ ಹೀಗಂತಾರೆ:`ಒಪ್ಪಿತ ಸತ್ಯಗಳು~

ಪರಭಾಷಾ ಗಾಯಕರ ಹಾವಳಿ, ಮಾರುಕಟ್ಟೆ ತಂತ್ರಗಳು, ನಿರ್ಮಾಪಕರ ಧೋರಣೆ, ಸಂಗೀತ ನಿರ್ದೇಶಕರ ನಿರ್ಧಾರ ಇವೆಲ್ಲವುಗಳ ಬಗ್ಗೆ ಚರ್ಚೆ ನಡೆಸಿ ಸಾಕಾಗಿಹೋಗಿದೆ. ಆದರೂ ಈ ಚರ್ಚೆ ಮುಖ್ಯವಂತೂ ಹೌದು. ಜನರ ಆಂತರಿಕ ಅಭಿರುಚಿ ಹೇಗೆ ಎಂದು ತಿಳಿದುಕೊಳ್ಳುವುದೇ ಕಷ್ಟವಾಗಿರುವ ದಿನಗಳಿವು.ನಾನು ಕೂಡ ಮೊನ್ನೆ ಮಲಯಾಳದಲ್ಲಿ ಒಂದು ಹಾಡನ್ನು ಹಾಡಿ ಬಂದೆ. ರಷ್ಯಾ, ಅಂಟಾರ್ಟಿಕ, ಆಫ್ಘಾನಿಸ್ತಾನ ಎಲ್ಲಿಂದ ಬೇಕಾದರೂ ಗಾಯಕರನ್ನು ಕರೆಸಿ ಹಾಡಿಸಲಿ; ನನ್ನದೇನೂ ಅಭ್ಯಂತರವಿಲ್ಲ. ಆದರೆ, ಹಾಡುವವರು ಇಲ್ಲಿನ ಸಂಸ್ಕೃತಿ, ಭಾಷೆಯ ಔಚಿತ್ಯ ಅರಿತುಕೊಂಡೇ ಹಾಡಬೇಕು.

 

ನೇಟಿವಿಟಿ, ಉಚ್ಚಾರ ಇವೆಲ್ಲವೂ ಗೌಣವಾಗುತ್ತಿದೆಯೇನೋ ಎಂಬಷ್ಟು ವಿಶಾಲ ಹೃದಯ ನಮ್ಮ ಕನ್ನಡಿಗರದ್ದಾಗಿಬಿಟ್ಟಿದೆ. ತಪ್ಪುಗಳನ್ನು ಮಾಫಿ ಮಾಡಿಯೋ ಅಥವಾ ಹಾಗೆಯೇ ಸ್ವೀಕರಿಸಿಯೋ ಕೇಳುತ್ತಿರುವುದು ಯಾಕೆಂಬುದೇ ತಿಳಿಯುತ್ತಿಲ್ಲ. ಈಗ ಎಲ್ಲಾ ರೀತಿಯ `ರೆಂಡರಿಂಗ್ಸ್~ ಮುಕ್ತವಾಗಿ ಸ್ವೀಕೃತವಾಗುತ್ತಿದೆ.

 

ಅದಕ್ಕೇ ಒಬ್ಬ ಗಾಯಕನಾಗಿ ನಾನೊಂದು ತೀರ್ಮಾನಕ್ಕೆ ಬಂದಿದ್ದೇನೆ- ನನ್ನ ಪಾಡಿಗೆ ಯಥಾಶಕ್ತಿ ಹಾಡಬೇಕು, ನನ್ನದೆಷ್ಟು ಸಂಭಾವನೆ ಇದೆಯೋ ಅಷ್ಟನ್ನು ಪಡೆಯಬೇಕು, ಶ್ರದ್ಧೆ ಬಿಡಬಾರದು, ಹಾಡಿದ ಮೇಲೆ ಆ ಬಗ್ಗೆ ಚಿಂತಿಸಬಾರದು. ನಾವು ಹಾಡಿದ ಮೇಲೆ ದಿಢೀರನೆ ಯಾವುದೋ ಬಾಹ್ಯ ಶಕ್ತಿ- ಆಡಿಯೊ ಕಂಪೆನಿ ಆಗಿರಬಹುದು, ನಿರ್ಮಾಪಕ ಆಗಿರಬಹುದು, ನಾಯಕ ಆಗಿರಬಹುದು- ಇನ್ನೊಬ್ಬ ಗಾಯಕ ಅದೇ ಹಾಡನ್ನು ಹಾಡಲು ಕಾರಣವಾಗುತ್ತದೆ.

 

ಇದು ಕನ್ನಡದ್ದಷ್ಟೇ ಸಮಸ್ಯೆಯಲ್ಲ. ಸೋನು ನಿಗಂ ಸೇರಿದಂತೆ ಎಲ್ಲಾ ಗಾಯಕರು ಒಂದಲ್ಲ ಒಂದು ಸಂದರ್ಭದಲ್ಲಿ ಇಂಥ ಪರಿಸ್ಥಿತಿಯನ್ನು ಎದುರಿಸಿರುತ್ತಾರೆ. ಈ ಸಮಸ್ಯೆಗಳೆಲ್ಲಾ ಚರ್ಚೆಯ ಮಟ್ಟದಿಂದ ಮೇಲೆದ್ದು ಚಳವಳಿಯಾಗುವುದು ಯಾವಾಗ ಎಂಬುದೇ ನನ್ನ ಯೋಚನೆ. ಸದ್ಯಕ್ಕೆ ನಾವೆಲ್ಲಾ ಒಪ್ಪಿತ ಸತ್ಯಗಳ ನಡುವೆ ಬದುಕುತ್ತಿದ್ದೇವಷ್ಟೆ.

ರಾಜೇಶ್ ಕೃಷ್ಣನ್

`ಇಲ್ಲಿ ಮಾತೇ ನಂಬಿಕೆ `

ಸಿನಿಮಾದಲ್ಲಿ ಮಾತಿನ ನಂಬಿಕೆಯ ಮೇಲೆಯೇ ಅನೇಕ ಗಾಯಕ, ಗಾಯಕಿಯರು ಹಾಡುತ್ತಾರೆ. ಅಧಿಕೃತ ಒಪ್ಪಂದ ಮಾಡಿಕೊಂಡೇ ಎಲ್ಲರೂ ಹಾಡುವುದಿಲ್ಲ. ಅಧಿಕೃತ ಕರಾರು ಇದ್ದು, ಅದಕ್ಕೆ ಒಳಪಟ್ಟಲ್ಲಿ ಒಬ್ಬರಿಂದ ಹಾಡಿಸಿದ ಗೀತೆಯನ್ನು ಮತ್ತೊಬ್ಬರಿಂದ ಹಾಡಿಸುವುದನ್ನು ತಪ್ಪಿಸಬಹುದು.ಬೇರೆಯವರಿಗೆ ಸಿನಿಮಾ ಹಾಡಿನ ವಿಷಯದಲ್ಲಿ ಆಗಿರಬಹುದಾದ ಸಮಸ್ಯೆಯ ಬಗ್ಗೆ ನಾನು ಮಾತನಾಡುವುದು ಕಷ್ಟ. ನಾನು ಚಿತ್ರಗೀತೆಗಳ ವಿಷಯದಲ್ಲಿ ಹೆಚ್ಚು ಮಹತ್ವಾಕಾಂಕ್ಷೆಯನ್ನೇನೂ ಇಟ್ಟುಕೊಂಡಿಲ್ಲ. ಹಾಗಾಗಿ ಇಂಥ ಸಂಗತಿಗಳ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳುವುದಿಲ್ಲ. ಅವಕಾಶ ಬಂದರೆ ಹಾಡುತ್ತೇನಷ್ಟೆ.

ಎಂ.ಡಿ.ಪಲ್ಲವಿ`ನಮಗೂ ಟೈಮ್ ಕೊಡಿ~

ನನ್ನ ಆತಂಕ ಇರುವುದು ನಾನು ಸರಿಯಾಗಿ ಹಾಡಲಿಲ್ಲವೇ ಎಂಬುದರಲ್ಲಿ. ಹೊರಗಿನ ಗಾಯಕ-ಗಾಯಕಿಯರಿಗೆ ಭಾಷೆಯ ಸಮಸ್ಯೆ ಇದೆ ಎಂಬ ಕಾರಣಕ್ಕೆ ಹೆಚ್ಚು ಸಮಯ ಕೊಟ್ಟು ಹಾಡಿಸಿಕೊಂಡು ಬರುತ್ತಾರೆ.ನಮಗಾದರೆ ಅರ್ಧ ಅಥವಾ ಒಂದು ಗಂಟೆಯಲ್ಲೇ ಹಾಡಿ ಮುಗಿಸಬೇಕು ಎಂಬಂಥ ಧೋರಣೆಯಿಂದ ವರ್ತಿಸುತ್ತಾರೆ. ಕೆಲವು ಸಂಗೀತ ನಿರ್ದೇಶಕರು ಇದಕ್ಕೆ ಅಪವಾದ ಹೌದಾದರೂ ಬಹುತೇಕರು ನಾವು ಬೇಗ ಹಾಡಿಬಿಡಬೇಕೆಂದು ಬಯಸುತ್ತಾರೆ.ಒಂದು ವೇಳೆ ಸಂಗೀತ ನಿರ್ದೇಶಕರಿಗೆ ನಾವು ಒಮ್ಮೆ ಹಾಡಿದ್ದು ಸರಿ ಕಾಣದೇ ಇದ್ದರೆ ಇನ್ನಷ್ಟು ಸುಧಾರಿಸಿ ಹಾಡುವ ಅವಕಾಶ ಕೊಡಲಿ. ಇದು ನನ್ನ ಕಳಕಳಿಯ ಬೇಡಿಕೆ. ಸೀಡಿ ಇನ್‌ಲೇ ಕಾರ್ಡಿನಲ್ಲಿ ಖ್ಯಾತ ಗಾಯಕರ ಹೆಸರಿದ್ದರೆ ಹಾಡು ಹಿಟ್ ಆಗುತ್ತದೆ ಎಂಬುದು ಭ್ರಮೆ.ಕನ್ನಡದ ಗಾಯಕ, ಗಾಯಕಿಯರೂ ಹಿಟ್ ಹಾಡುಗಳನ್ನು ಕೊಟ್ಟಿದ್ದೇವೆ. ನಾನು ಹಾಡಿರುವ ಗೀತೆಗಳೂ ಹಿಟ್ ಆಗಿವೆ. ಅದಕ್ಕೆ ಸಂಗೀತ ಸಂಯೋಜನೆ ಕಾರಣವಾಗಿರುತ್ತದೆ. ಅದರ ಕ್ರೆಡಿಟ್ ಸಂಗೀತ ನಿರ್ದೇಶಕರಿಗೆ ಸಲ್ಲಬೇಕು. ನಮಗೆ ಕಡಿಮೆ ಕಾಲಾವಕಾಶ ಕೊಟ್ಟಾಗ, ಹಾಡು ನಿರೀಕ್ಷಿತ ಮಟ್ಟಕ್ಕೆ ಬರದೇಇದ್ದಲ್ಲಿ ನಾವೂ ಮೀಡಿಯೋಕರ್ ಸಿಂಗರ್ಸ್‌ ಆಗುತ್ತಿದ್ದೇವೇನೋ ಎಂಬ ಆತಂಕ ಉಂಟಾಗುತ್ತದೆ.ಉಳಿದ ಮಾರುಕಟ್ಟೆ ಸಮಸ್ಯೆ, ನಿರ್ಮಾಪಕ- ಸಂಗೀತ ನಿರ್ದೇಶಕ- ಆಡಿಯೊ ಕಂಪೆನಿಗಳ ತಂತ್ರಗಳು ಎಲ್ಲಕ್ಕೂ ಯಾರು ಕಾರಣ ಎಂಬುದೇ ನಮ್ಮ ಅರಿವಿಗೆ ಬರುವುದಿಲ್ಲ. ಒಬ್ಬರತ್ತ ಒಬ್ಬರು ಬೆಟ್ಟು ಮಾಡಿ ನಿಲ್ಲುತ್ತಾರೆ. ಸಮಸ್ಯೆಗಳಂತೂ ಇದ್ದೇಇವೆ.

ಲಕ್ಷ್ಮೀ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.