ಕನ್ನಡ ಕ್ರೈಸ್ತರ ಬೇಡಿಕೆ: ಸ್ಥಳೀಯ ಸಂಸ್ಕೃತಿಗೆ ಪೂರಕ

ಗುರುವಾರ , ಜೂಲೈ 18, 2019
28 °C

ಕನ್ನಡ ಕ್ರೈಸ್ತರ ಬೇಡಿಕೆ: ಸ್ಥಳೀಯ ಸಂಸ್ಕೃತಿಗೆ ಪೂರಕ

Published:
Updated:

ಬೆಂಗಳೂರಿನ ಚರ್ಚುಗಳಲ್ಲಿ ಕನ್ನಡ ಪ್ರಾರ್ಥನೆಗೆ ಅವಕಾಶ ಕೋರಿ ಕನ್ನಡ ಭಾಷಿಕರು ಚಳವಳಿ ನಡೆಸಿದ್ದು ಇಂದು ಹಲವರಿಗೆ ಮರೆತು ಹೋಗಿರಬಹುದು. ಸುಮಾರು ಎರಡೂವರೆ ದಶಕಗಳ ಕಾಲ ನಡೆದ ಆ ಚಳವಳಿಯು ಅಂದಿನ ದಿನಪತ್ರಿಕೆಗಳಲ್ಲಿ ಪ್ರತಿದಿನದ ಸುದ್ದಿಯಾಗಿತ್ತು. ಅಂದು ಸುದ್ದಿಯಲ್ಲಿದ್ದ ಸಾಹಿತಿ ಕಲಾವಿದರ ಬಳಗ, ಕನ್ನಡ ಗೆಳೆಯರ ಬಳಗ, ಕನ್ನಡ ಸಂಘರ್ಷ ಸಮಿತಿ, ಕನ್ನಡ ಶಕ್ತಿಕೇಂದ್ರ, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ ಮುಂತಾದವುಗಳು ಸಹಾ ಕನ್ನಡ ಕ್ರೈಸ್ತರೊಂದಿಗೆ ಹೆಜ್ಜೆ ಹಾಕುತ್ತಾ ಗೋಕಾಕ್ ಚಳವಳಿಯೊಂದಿಗೂ ಮೇಳವಿಸಿಕೊಂಡು ಹಲವು ಕನ್ನಡಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದವು. ಕನ್ನಡ ಸಾಹಿತ್ಯ ಪರಿಷತ್ತು ಮೊದಲ್ಗೊಂಡು ಹಲವಾರು ಸಾಹಿತಿಗಳೂ ಚಿಂತಕರೂ ಕನ್ನಡ ಕ್ರೈಸ್ತರ ನ್ಯಾಯಯುತ ಬೇಡಿಕೆಯನ್ನು ಬೆಂಬಲಿಸಿ ಸರ್ಕಾರಕ್ಕೆ ಒತ್ತಡ ತಂದಿದ್ದರು.ಅಂದಹಾಗೇ ಈ ಕನ್ನಡ ಕ್ರೈಸ್ತರ ಚಳವಳಿ ನೇಪಥ್ಯಕ್ಕೆ ಸರಿದಿದೆಯೇ, ಅವರ ಬೇಡಿಕೆಗಳು ಈಡೇರಿವೆಯೇ ಎಂಬುದನ್ನು ಅವಲೋಕಿಸಿದಾಗ ಆ ಚಳವಳಿಯ ಬಿಸಿಯು ಬೂದಿ ಮುಚ್ಚಿದ ಕೆಂಡದಂತಿರುವುದು ಅರಿವಾಗುತ್ತದೆ. ಚಳವಳಿಯ ಫಲವಾಗಿ ಇಂದು ಕನ್ನಡ ಭಾಷೆಯಲ್ಲಿ  ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ, ಅವರ ಚಳವಳಿಯು ಕೇವಲ ಪೂಜಾರ್ಪಣೆಯಲ್ಲಿ ಮಾತ್ರವೇ ಕನ್ನಡಕ್ಕೆ ಅವಕಾಶ ಎಂಬುದಾಗಿರಲಿಲ್ಲ. ಅದು ಚರ್ಚುಗಳಲ್ಲಿನ ಎಲ್ಲ ಸವಲತ್ತುಗಳಿಗೂ ತಾವು ಸಮಾನವಾಗಿ ಭಾಜನರಾಗಬೇಕೆನ್ನುವ ಹಂಬಲವಾಗಿತ್ತು. ಅಂದರೆ ಜೀವನದ ವಿವಿಧ ಆಯಾಮಗಳಾದ ಶೈಕ್ಷಣಿಕ ಸವಲತ್ತು, ಔದ್ಯೋಗಿಕ ಸವಲತ್ತು, ಅಧಿಕಾರದ ಹಂಚಿಕೆ, ಕನ್ನಡ ಸಂಸ್ಕೃತಿಯ ಉಳಿವು, ಕನ್ನಡಕ್ಕೆ ಪ್ರಧಾನಸ್ಥಾನ, ಹಬ್ಬದಂಥ ಸಂದರ್ಭಗಳಲ್ಲಿ  ಸ್ಥಳೀಯರಿಗೆ ಮನ್ನಣೆ ಮುಂತಾದ ವಿಸ್ತೃತ ಅಂಗಗಳನ್ನು ಒಳಗೊಂಡಿತ್ತು.ಸ್ಥಳೀಯ ಭಾವನೆಗಳಿಗೆ ದೂರದ ರೋಮ್ ಸ್ಪಂದಿಸಿ, ಇಲ್ಲಿನ ಅಧಿಕಾರ ವರ್ಗವೂ ಸಮ್ಮತ ತೋರಿ, ಜನ ಸಾಮಾನ್ಯರೂ ಕೈ ಜೋಡಿಸಿದ್ದರಿಂದ, ಕನ್ನಡಿಗರು ಆಯಕಟ್ಟಿನ ಜಾಗಗಳನ್ನು ಪಡೆಯುವಂತಾಗಿದೆ, ಹಳ್ಳಿಗರಿಗೂ ಅವಕಾಶಗಳು ಲಭ್ಯವಾಗುತ್ತಿವೆ ಮಾತ್ರವಲ್ಲ ಧರ್ಮಪ್ರಾಂತ್ಯದ ಆಡಳಿತವೂ ಪಾರದರ್ಶಕವಾಗಿದೆ.ಆದರೆ ಕನ್ನಡಿಗರ ಬಹುದಿನಗಳ ಬೇಡಿಕೆಯಾದ ಗುರುಗಳ ಪ್ರಾದೇಶಿಕ ತರಬೇತಿ ಕೇಂದ್ರವನ್ನು ಹೊಂದಬೇಕೆನ್ನುವ ಕೂಗು ಮಾತ್ರ ಸಫಲವಾಗಿಲ್ಲ. ಏಕೆಂದರೆ ಮಲ್ಲೇಶ್ವರದಲ್ಲಿರುವ ಸೇಂಟ್ ಪೀಟರ್ ಪೊಂಟಿಫಿಕಲ್ ಸೆಮಿನರಿ ಎಂಬ ಗುರು ತರಬೇತಿ ಸಂಸ್ಥೆಯು ಕರ್ನಾಟಕ ಮತ್ತು ತಮಿಳುನಾಡುಗಳ ಜಂಟಿ ಆಡಳಿತದಲ್ಲಿದ್ದು  ಸಹಜವಾಗಿ ತಮಿಳರ ಹಿಡಿತದಲ್ಲಿದೆ. ಅಂದು ಮಹಾರಾಜರು ದಾನವಾಗಿ ನೀಡಿದ ಹಲವು ಎಕರೆಗಳ ಈ ವಿಶಾಲ ಜಮೀನಿನಲ್ಲಿ  ಶಾಲೆ, ಬ್ಯಾಂಕು, ಅಂಗಡಿಸಾಲು, ಅಂಚೆಕಚೇರಿಗಳಲ್ಲದೆ ಇತರ ಉಪ ಗುರುಮಠಗಳಿಗೂ ಸ್ಥಳ ಕಲ್ಪಿಸಲಾಗಿದೆ. ಆದರೆ ಕನ್ನಡಿಗರು ತಮ್ಮದೇ ನೆಲದಲ್ಲಿ  ತಮಗೊಂದು ತರಬೇತಿ ಸ್ಥಳ ಬೇಕೆನ್ನುವ ಬೇಡಿಕೆಗೆ ಮಾತ್ರ ತಕ್ಕ ಸ್ಪಂದನವಿಲ್ಲವಾಗಿದೆ.ಇತ್ತೀಚೆಗೆ ಈ ಸಂತ ರಾಯಪ್ಪರ ಗುರುಮಠದ ಆಡಳಿತಮಂಡಲಿಯ ವಾರ್ಷಿಕ ಸಭೆಯಲ್ಲಿ ಕನ್ನಡ ಕ್ರೈಸ್ತರ ಅಹವಾಲುಗಳನ್ನು ಮಂಡಿಸಲು ಆರ್ಚ್ ಬಿಷಪ್ ಬೆರ್ನಾಡ್ ಮೊರಾಸ್ ಅವರು ಅವಕಾಶ ಕಲ್ಪಿಸಿದರು. ತಮ್ಮ ಬೇಡಿಕೆ ಎಷ್ಟು ನ್ಯಾಯಯುತ ಹಾಗೂ ಎಷ್ಟು ಅತ್ಯಗತ್ಯ ಎಂಬುದರ ಕುರಿತು ಕನ್ನಡ ಕ್ರೈಸ್ತರ ಸಂಘದ ಪದಾಧಿಕಾರಿಗಳು ಎಲ್ಲ ಬಿಷಪರುಗಳ ಮುಂದೆ ಬಿನ್ನವಿಸಿಕೊಂಡರು. ಅದರ ಫಲವಾಗಿ ಇನ್ನೇನು ಸಂತ ರಾಯಪ್ಪರ ಗುರುಮಠದ ಆವರಣದಲ್ಲಿ ಪ್ರಾದೇಶಿಕ ಗುರುಮಠಕ್ಕಾಗಿ ಕಟ್ಟಡ ಮಂಜೂರಾಗುತ್ತದೆನ್ನುವಾಗ ಬೆಂಗಳೂರಿನ ಸುಮಾರು 45 ತಮಿಳು ಗುರುಗಳು ಅಪಸ್ವರ ಎತ್ತಿದರು. ಇರುವ ಗುರುಮಠವೇ ಸಾಕು, ಪ್ರಾದೇಶಿಕ ಗುರುಮಠ ಬೇಡ, ಹಾಗೇನಾದರೂ ಆದಲ್ಲಿ  ತಮಿಳರಿಗೆ ಅವಕಾಶಗಳು ಇಲ್ಲವಾಗುತ್ತದೆನ್ನುವ ವಾದ ಮುಂದಿಟ್ಟು ರೋಮಿನವರೆಗೆ ದೂರು ಕೊಂಡೊಯ್ದರು. (ಇಂತದ್ದೇ ಮನಸ್ಥಿತಿಯ ಕೆಲವರು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡಬೇಕೆನ್ನುವ ಬೇಡಿಕೆಯಿಟ್ಟಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು). ಇದೀಗ ಈ ವ್ಯಾಜ್ಯವನ್ನು ಪರಿಶೀಲಿಸಿ ವರದಿ ನೀಡಲು ವ್ಯಾಟಿಕನ್ನಿನ ಸರ್ವೋಚ್ಛ ಪೀಠವು ಮೂರು ಬಿಷಪರುಗಳ ಒಂದು ಸಮಿತಿ ನೇಮಿಸಿದೆ. ಆ ಸಮಿತಿಯು ಇದೇ ಜುಲೈ 16, 17, 18ರಂದು ಆಸಕ್ತರ ಅಹವಾಲುಗಳನ್ನು ಆಲಿಸಿ ವರದಿ ತಯಾರಿಸಲಿದೆ.ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ ಹಲವಾರು ವರ್ಷಗಳಿಂದ ಇಲ್ಲೇ ನೆಲೆನಿಂತಿರುವ ತಮಿಳು ಜನಸಾಮಾನ್ಯರು ಭಾಷೆ, ಜನ, ಸಂಸ್ಕೃತಿಯ ಮುಖ್ಯವಾಹಿನಿಯೊಂದಿಗೆ ಬೆರೆತಿರುವಾಗ ಕೆಲ ಪಟ್ಟಭದ್ರ ಗುರುಗಳು ಯಾವ ತೆವಲಿಗಾಗಿ ಈ ರೀತಿಯ ವ್ಯತಿರಿಕ್ತ ನಿಲುವು ತಳೆದಿದ್ದಾರೆ ಎಂಬುದೇ. ಹಾಗೂ ಕನ್ನಡಿಗರಿಗೆ ನ್ಯಾಯಯುತವಾಗಿ ಸಲ್ಲಬೇಕಿರುವ ಪಾಲನ್ನು ತಾವೇ ಅನುಭವಿಸಿಕೊಂಡು ಬಂದಿದ್ದಲ್ಲದೆ ಅವರಿಗೊದಗಿದ ಕಿಂಚಿತ್ ಪಾಲನ್ನೂ ಕಿತ್ತುಕೊಳ್ಳುವ ಹಾದಿ ತುಳಿದಿದ್ದಾರಲ್ಲ ಏಕೆ ಎಂಬುದಾಗಿದೆ. ಇನ್ನೆಷ್ಟು ವರ್ಷಗಳ ಕಾಲ ಅವರು ಸ್ಥಳೀಯರ ಮೇಲೆ ಸವಾರಿ ಮಾಡುತ್ತಾ ಪ್ರತ್ಯೇಕವಾಗಿ ಉಳಿಯಲು ಬಯಸಿದ್ದಾರೆ? ಕ್ರೈಸ್ತಧರ್ಮದ ತತ್ವವು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುತ್ತದಲ್ಲವೇ? ಆದರೆ ಈ ಸಂಕುಚಿತ ಮನೋಭಾವದ ಮಂದಿ ಕ್ರೈಸ್ತ ತತ್ವಗಳನ್ನು ಗಾಳಿಗೆ ತೂರಿ ಎಲ್ಲ ಅವಕಾಶಗಳನ್ನೂ ತಾವೇ ಬಾಚಿಕೊಳ್ಳುವ ಪರಿ ಸರಿಯೇ? ಇದರಿಂದ ಕ್ರೈಸ್ತ ಧರ್ಮಕ್ಕೇ ಅಪಚಾರವಲ್ಲವೇ?ತಮಿಳರು, ಮಲಯಾಳಿಗರು ಕನ್ನಡ ಜನ ಮತ್ತು ಪ್ರಾದೇಶಿಕ ಸಂಸ್ಕೃತಿಯೊಂದಿಗೆ ಒಗ್ಗಿಕೊಳ್ಳುವುದು ಕಷ್ಟದ ಮಾತೇನಲ್ಲ ಎಂದು ಈಗಾಗಲೇ ತೋರಿಸಿಕೊಟ್ಟಾಗಿದೆ. ಆದರೆ ಈ ರೀತಿಯಾಗುವುದು ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಇಷ್ಟವಿಲ್ಲ.ಇತ್ತ ತಾವೂ ಮುಖ್ಯ ವಾಹಿನಿಯಲ್ಲಿ ಬೆರೆಯದೆ ಜನಸಾಮಾನ್ಯರನ್ನೂ ಬೆರೆಯಲು ಬಿಡದೆ ಮಾಡುತ್ತಿರುವ ಕುತಂತ್ರಗಳಿಗೆ ಪ್ರಾದೇಶಿಕ ಗುರು ತರಬೇತಿ ಮಂದಿರಕ್ಕೆ ವ್ಯಕ್ತಪಡಿಸುತ್ತಿರುವ ವಿರೋಧವೇ ಉದಾಹರಣೆಯಾಗಿದೆ. ಇಂಥ ಕೆಲವೇ ಕೆಲವು ರೋಗಗ್ರಸ್ಥ ಮನಸ್ಸುಗಳು ಜನರ ಹಾದಿ ತಪ್ಪಿಸುತ್ತಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿಯಾಗಿದೆ. ಸ್ಥಳೀಯರಿಗೆ ನೆರವಾಗುವ, ಸ್ಥಳೀಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಕನ್ನಡ ಕ್ರೈಸ್ತರ ಬೇಡಿಕೆ ಇವರಿಗೆ ಸಂಕುಚಿತವಾಗಿ ಕಂಡರೆ,  ದಶಕಗಳ ಕಾಲ ಇವರು ತೋರಿದ ವರ್ತನೆ ಇದಕ್ಕಿಂತಲೂ ಘೋರ. ಇಂದು ಬೆಂಗಳೂರು ಮತ್ತಷ್ಟು ಪರಭಾಷಿಕರಿಂದ ತುಂಬಿಹೋಗಿದೆಯಾದರೂ ವಲಸೆ ಬಂದ ಜನ ಇಂಥ ಸಂಕುಚಿತ ಮನದವರ ಬಣ್ಣದ ಮಾತುಗಳಿಗೆ ಸೊಪ್ಪು ಹಾಕದೆ ಇಲಿನ ನೆಲ, ಭಾಷೆ, ಸಂಸ್ಕೃತಿಯ ಜೊತೆಗೆ ಬಾಳುವುದೇ ಸರಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry